ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯದತ್ತ ಸ್ಯಾಂಡಲ್‌ವುಡ್‌ ವಾರೆನೋಟ

Last Updated 11 ಏಪ್ರಿಲ್ 2019, 19:30 IST
ಅಕ್ಷರ ಗಾತ್ರ

ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ರಾಜಕೀಯ ಮತ್ತು ಸಿನಿಮಾ ಬೆರಕೆಯಾಗಿದೆ. ಪರಸ್ಪರ ಪಕ್ಷಗಳ ವಾಗ್ಯುದ್ಧಗಳೂ ಥೇಟ್‌ ಸಿನಿಮಾ ಶೈಲಿಯಲ್ಲಿ ನಡೆಯುತ್ತಿವೆ. ನಿರ್ಮಾಪಕ ಮುನಿರತ್ನ ಅವರ ‘ಕುರುಕ್ಷೇತ್ರ’ ಸಿನಿಮಾ ಇನ್ನೂ ಬಿಡುಗಡೆಯಾಗಿಲ್ಲ. ಆದರೆ ಆ ಸಿನಿಮಾದ ಪಾತ್ರಗಳೆಲ್ಲ ಮಂಡ್ಯದ ಕಣದಲ್ಲಿ ತಳುಕು ಹಾಕಿಕೊಂಡು ಘನಘೋರ ವಾಗ್ಯುದ್ಧದಲ್ಲಿ ತೊಡಗಿವೆ.

ರನ್ನನ ‘ಗದಾಯುದ್ಧ’ ಆಧರಿಸಿದ ಸಿನಿಮಾ ‘ಕುರುಕ್ಷೇತ್ರ’. ಸಿನಿಮಾದಲ್ಲಿ ಸುಯೋಧನನ ಪಾತ್ರಧಾರಿ ದರ್ಶನ್‌ ಒಂದು ಕಡೆ ಇದ್ದರೆ, ಅಭಿಮನ್ಯು ಪಾತ್ರಧಾರಿ ನಿಖಿಲ್‌ ಗೌಡ ಇನ್ನೊಂದೆಡೆ ಇದ್ದಾರೆ. (ಸಿನಿಮಾದಲ್ಲಿ ನಿಖಿಲ್‌ ಗೌಡ ಎಂಬ ಹೆಸರೇ ಇದೆ; ಚುನಾವಣೆಯಲ್ಲಿ ನಿಖಿಲ್‌ ಕುಮಾರಸ್ವಾಮಿ ಹೆಸರೇ ಹೆಚ್ಚು ಬಳಕೆಯಲ್ಲಿದೆ.) ಈ ಸಿನಿಮಾದಲ್ಲಿ ಅಂಬರೀಷ್‌ ಅವರು ವಹಿಸಿದ್ದು ಭೀಷ್ಮನ ಪಾತ್ರ. ಅವರ ಹಠಾತ್‌ ನಿಧನದ ಬಳಿಕ ಬದಲಾದ ಪರಿಸ್ಥಿತಿಯಲ್ಲಿ ಅವರ ತಾರಾಪತ್ನಿ ಸುಮಲತಾ ಚುನಾವಣೆಗೆ ನಿಂತಿದ್ದಾರೆ. ಸಿನಿಮಾದ ನಿರ್ಮಾಪಕ ಮುನಿರತ್ನ ನಿಖಿಲ್‌ ಜಯಕ್ಕಾಗಿ ಓಡಾಡುತ್ತಿದ್ದರೆ, ಅವರ ಬೀಗರೂ ಆಗಿರುವ ವಿತರಕ ರಾಕ್‌ಲೈನ್‌ ವೆಂಕಟೇಶ್‌ ಸುಮಲತಾ ಗೆಲುವಿಗಾಗಿ ಟೊಂಕಕಟ್ಟಿದ್ದಾರೆ.

‘ಕುರುಕ್ಷೇತ್ರ’ ಸಿನಿಮಾ ಬಿಡುಗಡೆಯಾಗುವುದಕ್ಕಿಂತ ಮುಂಚೆಯೇ ಮಂಡ್ಯದಲ್ಲಿ ಹೊಸರೀತಿಯ ಚುನಾವಣಾ ಕುರುಕ್ಷೇತ್ರ ಸಮರ ನಡೆದಿದೆ. ಕನ್ನಡದ ಇಬ್ಬರು ಸೂಪರ್‌ಸ್ಟಾರ್‌ಗಳಾದ ದರ್ಶನ್‌ ಮತ್ತು ಯಶ್‌ ಸುಮಲತಾ ಅವರ ಪರವಾಗಿ ಪ್ರಚಾರ ನಡೆಸುತ್ತಿರುವುದು ನೋಡಿದರೆ, ಇದೇನು ‘ಫಿಲಂ ಚೇಂಬರ್‌’ ಚುನಾವಣೆ ಇರಬಹುದೆ ಎನ್ನುವ ಅನುಮಾನವೂ ಬರಬಹುದು! ಅದಕ್ಕೆ ತಕ್ಕಂತೆ ಮಗ ನಿಖಿಲ್‌ರನ್ನು ಗೆಲ್ಲಿಸಿಕೊಳ್ಳಲು ಪಣ ತೊಟ್ಟಿರುವ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಈಗಾಗಲೆ ಚಿತ್ರ ನಿರ್ಮಾಪಕರಾಗಿ ಹೆಸರು ಗಳಿಸಿದವರು. ಒಟ್ಟಾರೆ ಮಂಡ್ಯದ ಚುನಾವಣೆ ಒಂದು ಸಿನಿಮಾದಂತೆಯೇ ನಡೆದಿದೆ.

ಮಂಡ್ಯದಲ್ಲಿ ಸುಮಲತಾ ಅವರು ಗೆದ್ದರೆ, ಸ್ಯಾಂಡಲ್‌ವುಡ್‌ನಲ್ಲಿ ಇನ್ನಷ್ಟು ನಟ– ನಟಿಯರಿಗೆ ರಾಜಕೀಯ ಪ್ರವೇಶಿಸುವ ಹುಮ್ಮಸ್ಸು ಹೆಚ್ಚಾಗಬಹುದೆ.. ಎನ್ನುವುದೊಂದು ಪ್ರಶ್ನೆ. ಈ ಪ್ರಶ್ನೆಯನ್ನು ಗಾಂಧಿನಗರದ ಪ್ರಮುಖರ ಮುಂದೆ ಇಟ್ಟಾಗ ಬಂದ ಉತ್ತರ ಮಾತ್ರ ಒಂದೇ. ‘ಏನೂ ವ್ಯತ್ಯಾಸವಾಗಲ್ಲ. ಹಿಂದೆಯೂ ಕನ್ನಡದ ಹಲವು ಸಿನಿಮಾನಟ ನಟಿಯರು ರಾಜಕೀಯಕ್ಕೆ ಬಂದಿದ್ದಾರೆ. ಸ್ವಲ್ಪ ದಿನ ಇರ್ತಾರೆ, ದೊಡ್ಡ ವ್ಯತ್ಯಾಸವೇನೂ ಆಗುವಂತೆ ಕಾಣುವುದಿಲ್ಲ’ ಎನ್ನುವುದು ಒಟ್ಟಭಿಪ್ರಾಯ.

ಹಿರಿಯ ನಟ, ಪಟೇಲ್‌ ಸಂಪುಟದಲ್ಲಿ ಸಚಿವರೂ ಆಗಿದ್ದ ಅನಂತನಾಗ್‌ ಈ ಕುರಿತು ಹೇಳುವುದು ಹೀಗೆ: ‘ಸಿನಿಮಾದವರಿಂದ ರಾಜಕೀಯದಲ್ಲಿ ದೊಡ್ಡ ಬದಲಾವಣೆ ಏನೂ ಆಗುವುದಿಲ್ಲ. ಒಂದು ಕಾಲದಲ್ಲಿ ನನಗೂ ಭ್ರಮೆ ಇತ್ತು– ಪಾಲಿಟಿಕಲ್‌ ಸಿನಿಮಾ ಮಾಡಿದರೆ ಏನೋ ಆಗುತ್ತೆ ಅಂತ. ಏನೂ ಇಲ್ಲ, ಸೊನ್ನೆ ಪ್ರಭಾವ. ಜನ ನಮ್ಮನ್ನು ನೋಡಿ ರಾಜಕೀಯ ಕಲಿತುಕೊಳ್ಳಲ್ಲ’ ಎನ್ನುತ್ತಾರೆ ಅವರು.

ಅನಂತನಾಗ್‌ ಪ್ರಕಾರ, ಕರ್ನಾಟಕದ ರಾಜಕೀಯದಲ್ಲಿ ಸಿನಿಮಾದವರು ಅಪ್ರಸ್ತುತ. ‘ಉಪೇಂದ್ರ ಅವರನ್ನೇ ನೋಡಿ. ನಿಜಕ್ಕೂ ರಾಜಕೀಯವನ್ನು ಅವರು ಗಂಭೀರವಾಗಿ ತೆಗೆದುಕೊಂಡಿದ್ದಾರೆ. ಆದರೆ ಅವರ ಪಕ್ಷವನ್ನು ಜನರು ಗಂಭೀರವಾಗಿ ತೆಗೆದುಕೊಂಡಿದ್ದಾರಾ? ಆಂಧ್ರದಲ್ಲಿ ಚಿರಂಜೀವಿ ಅವರು ಅಷ್ಟೆಲ್ಲ ಪ್ರಯತ್ನ ಪಟ್ಟು ಕೊನೆಗೆ ಏನಾಯಿತು? ಹಿಂದೆ ರಾಜ್‌ಕುಮಾರ್‌ ಅವರನ್ನು ಇಂದಿರಾಗಾಂಧಿಯವರ ವಿರುದ್ಧ ಚುನಾವಣೆಗೆ ನಿಲ್ಲಿಸಲು ಪ್ರಯತ್ನ ನಡೆಯಿತು. ಅವರು ನಿಂತಿದ್ದರೆ ಗೆಲ್ಲುತ್ತಿದ್ದರೋ ಏನೋ? ಆದರೆ ಅವರು ಪಕ್ಷ ಮಾಡಿದ್ದರೆ ಮಾತ್ರ ಏನೂ ಆಗುತ್ತಿರಲಿಲ್ಲ’ ಎನ್ನುತ್ತಾರೆ ಅನಂತನಾಗ್.

ಸಿನಿಮೋದ್ಯಮದ ಪ್ರಮುಖ ಕೆ.ಸಿ.ಎನ್‌. ಚಂದ್ರಶೇಖರ್‌ ಅವರದ್ದೂ ಇದೇ ಅಭಿಪ್ರಾಯ. ‘ಚುನಾವಣೆ ಬಂದಾಗ ಸಿನಿಮಾದ ಕೆಲವರು ಓಡಾಡುವುದು ಹಿಂದಿನಿಂದಲೂ ಇದೆ. ಮಂಡ್ಯದ ಚುನಾವಣೆ ಮುಗಿದ ಬಳಿಕ ದರ್ಶನ್‌ ಆಗಲೀ, ಯಶ್‌ ಆಗಲೀ ನೇರ ರಾಜಕೀಯಕ್ಕೆ ಬರುತ್ತಾರೆ ಎಂದು ನನಗನ್ನಿಸುತ್ತಿಲ್ಲ. ಅವರಿಬ್ಬರಿಗೂ ಸಿನಿಮಾ ಅಲ್ಲದೆ ಅವರದ್ದೇ ಆದ ಸೇವಾಕ್ಷೇತ್ರಗಳಿವೆ. ಯಶ್‌ ಅಂತೂ ರಾಜಕೀಯದ ಯಾವುದೇ ಆಸೆಯಿಲ್ಲದೆ ಈ ಹಿಂದೆಯೇ ಕೆರೆ ಹೂಳೆತ್ತುವುದು, ಹಳ್ಳಿಗಳಿಗೆ ನೀರು ಒದಗಿಸುವುದು ಮುಂತಾದ ಕೆಲಸಗಳನ್ನು ಮಾಡಿದ್ದಾರೆ. ಈಗ ಅಂಬರೀಷ್ ಕುಟುಂಬದ ಒಡನಾಟದಿಂದಷ್ಟೇ ಪ್ರಚಾರಕ್ಕೆ ಇಳಿದಿದ್ದಾರೆ.ದರ್ಶನ್‌ ಅವರಿಗೂ ಶಾಸಕರಾಗಬೇಕು ಎನ್ನುವ ಆಸೆ ಇಲ್ಲ. ಸುದೀಪ್‌ ಅವರಿಗೆ ಹಿಂದೊಮ್ಮೆ ರಾಜಕೀಯಕ್ಕೆ ಹೋಗುವ ಮನಸ್ಸಿದ್ದರೂ ಅವರೂ ಈತ ತಟಸ್ಥವಾಗಿದ್ದಾರೆ’ ಎನ್ನುತ್ತಾರೆ ಕೆಸಿಎನ್‌ ಚಂದ್ರು.

‘ರಾಜ್‌ಕುಮಾರ್‌ ಅವರಿದ್ದಾಗ ಒಂದು ಮಾತು ಹೇಳುತ್ತಿದ್ದರು. ಯಾವ ಪಕ್ಷದ್ದೇ ಸರ್ಕಾರ ಬರಲಿ, ಅದು ನಮ್ಮ ಸರ್ಕಾರ ಎಂದು. ಅವರು ಹೇಳಿದ್ದು ನಿಜ. ನಮಗೆ ಕನ್ನಡ ಚಿತ್ರೋದ್ಯಮದ ಹಿತಾಸಕ್ತಿ ಕಾಪಾಡಬೇಕಾದರೆ, ಯಾವ ಪಕ್ಷದ ಸರ್ಕಾರ ಬಂದರೂ ನಾವು ಅವರ ಜೊತೆಗೆ ಇರಬೇಕಾಗುತ್ತದೆ’ ಎನ್ನುವುದು ಚಂದ್ರು ನೇರನುಡಿ.

‘ಕುರುಕ್ಷೇತ್ರ’ ಸಿನಿಮಾದಲ್ಲಿ ವಿ.ರವಿಚಂದ್ರನ್‌ ಅವರದ್ದು ಶ್ರೀಕೃಷ್ಣನ ಪಾತ್ರ. ‘ಮಂಡ್ಯದಲ್ಲಿ ಅಭಿಮನ್ಯು ಮತ್ತು ಸುಯೋಧನನ ಪಾತ್ರಧಾರಿಗಳು ಖಡಾಖಡಿ ಹೋರಾಟದಲ್ಲಿ ತೊಡಗಿದ್ದಾರೆ. ನೀವು ತಣ್ಣಗೆ ಮನೆಯಲ್ಲಿ ಕುಳಿತಿದ್ದೀರಲ್ಲಾ?’ ಎಂದು ರವಿಚಂದ್ರನ್‌ ಅವರನ್ನು ಕೆಣಕಿದರೆ, ‘ಅಯ್ಯೋ ನನಗೆ ರಾಜಕೀಯ ಏನೂ ಗೊತ್ತಾಗಲ್ಲ ಸ್ವಾಮಿ. ಭಾಷಣ ಮಾಡೋದಕ್ಕೂ ಬರೋದಿಲ್ಲ’ ಎಂದರು. ‘ಹಿಂದೆ ಅಂಬರೀಷ್‌ ಚುನಾವಣೆಗೆ ನಿಂತಾಗ ನಾಮಪತ್ರ ಸಲ್ಲಿಸಲು ಜೊತೆಗೆ ಹೋಗಿದ್ದೆ. ಪ್ರಚಾರಕ್ಕೆ ಹೋಗಿಲ್ಲ. ಇತ್ತೀಚೆಗೆ ನನ್ನ ಒಂದಿಬ್ಬರು ಗೆಳೆಯರು ಚುನಾವಣೆಗೆ ನಿಂತಾಗ ಜೊತೆಗೆ ಹೋಗಿದ್ದೆ, ಆದರೆ ಭಾಷಣ, ಪ್ರಚಾರ ಎಲ್ಲೂ ಇಲ್ಲ. ನಾನು ಗಾಂಧಿನಗರಕ್ಕೆ ಹೋಗದೆಯೇ ಬಹಳ ವರ್ಷಗಳಾದವು, ನನ್ನದೇನಿದ್ದರೂ ರಾಜಾಜಿನಗರ’ ಎಂದು ನಕ್ಕರು ರವಿಚಂದ್ರನ್‌.

ಕಳೆದ ಒಂದು ವಾರದಿಂದ ಮಂಡ್ಯದಲ್ಲೇ ವಾಸ್ತವ್ಯ ಹೂಡಿರುವ ರಾಕ್‌ಲೈನ್‌ ವೆಂಕಟೇಶ್‌ ಮುಗುಮ್ಮಾಗಿ ಹೇಳಿದ್ದು– ‘ಚಿತ್ರರಂಗದ ಭೀಷ್ಮ ಶರಶಯ್ಯೆಯಲ್ಲಿ ಮಲಗಿದ್ದು ಅಲ್ಲವಾಗಿದ್ದಲ್ಲಿ ಈ ಮಂಡ್ಯದ ಕುರುಕ್ಷೇತ್ರ ಪ್ರಸಂಗವೇ ನಡೆಯುತ್ತಿರಲಿಲ್ಲ ಸ್ವಾಮೀ!’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT