ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳ್ಳಿತೆರೆಯಲ್ಲಿಂದು ಹೊಸ–ಹಳೆ ಮುಖಗಳು

Last Updated 6 ಏಪ್ರಿಲ್ 2023, 19:31 IST
ಅಕ್ಷರ ಗಾತ್ರ

ಬೆಳ್ಳಿ ತೆರೆಗೆ ಕೆಲವು ದಿನಗಳ ನಂತರ ಶುಭಶುಕ್ರವಾರ ಬಂದಿದೆ. ಇಂದು (ಏ. 7) ನಾಲ್ಕು ಚಿತ್ರಗಳು ಬಿಡುಗಡೆಯಾಗಿವೆ. ಆ ಚಿತ್ರಗಳ ಕಿರುನೋಟ ಇಲ್ಲಿದೆ.

ವೀರಂ: ಶಶಿಧರ್ ಸ್ಟುಡಿಯೋಸ್ ಪ್ರೊಡಕ್ಷನ್ ಮೂಲಕ ಕೆ.ಎಂ. ಶಶಿಧರ್ ನಿರ್ಮಿಸಿರುವ ಆ್ಯಕ್ಷನ್, ಥ್ರಿಲ್ಲರ್ ಚಿತ್ರ ‘ವೀರಂ‌’ ಇಂದು ರಾಜ್ಯದಾದ್ಯಂತ ತೆರೆಕಾಣುತ್ತಿದೆ. ಚಿತ್ರಕ್ಕೆ ಖದರ್ ಕುಮಾರ್ ಕಥೆ, ಚಿತ್ರಕಥೆ ಬರೆದು ಆ್ಯಕ್ಷನ್ ಕಟ್ ಹೇಳಿದ್ದಾರೆ. ಒಂದು ಕುಟುಂಬಕ್ಕೆ ತೊಂದರೆ ಬಂದಾಗ ಎಲ್ಲರೂ ಹೇಗೆ ಜೊತೆಗೆ ನಿಲ್ಲುತ್ತಾರೆ ಎನ್ನುವುದು ಚಿತ್ರದ ಕಥೆ. ಈ ಚಿತ್ರದಲ್ಲಿ ಪ್ರಜ್ವಲ್ ದೇವರಾಜ್, ರಚಿತಾರಾಮ್‌, ಶ್ರುತಿ, ಶ್ರೀನಗರ ಕಿಟ್ಟಿ ನಟಿಸಿದ್ದಾರೆ. ಚಿತ್ರಕ್ಕೆ ಯು/ಎ ಸರ್ಟಿಫಿಕೇಟ್ ಸಿಕ್ಕಿದ್ದು, ಅನೂಪ್ ಸೀಳಿನ್ ಅವರ ಸಂಗೀತ, ಲವಿತ್ ಅವರ ಕ್ಯಾಮೆರಾವರ್ಕ್ ಇದೆ.

ಪೆಂಟಗನ್: ಐದು ಬೇರೆ ಬೇರೆ ನಮೂನೆಯ ಕಥೆಗಳನ್ನು ಇಟ್ಟುಕೊಂಡು ಮಾಡಿರುವ ‘ಆಂಥಾಲಜಿ’ ಸಿನಿಮಾ ‘ಪೆಂಟಗನ್’ ಇಂದು ರಾಜ್ಯದಾದ್ಯಂತ ತೆರೆಕಾಣುತ್ತಿದೆ. ಈ ಚಿತ್ರವನ್ನು ನಿರ್ದೇಶಕ ಹಾಗೂ ನಿರ್ಮಾಪಕ ಗುರು ದೇಶಪಾಂಡೆ ತಮ್ಮ ಜಿ.ಅಕಾಡೆಮಿ ಅಡಿಯಲ್ಲಿ ನಿರ್ಮಿಸಿದ್ದಾರೆ. ಚಿತ್ರದಲ್ಲಿ 5 ಕಥೆಗಳಿದ್ದು, ಆಕಾಶ್ ಶ್ರೀವತ್ಸ, ಚಂದ್ರಮೋಹನ್, ರಾಘು ಶಿವಮೊಗ್ಗ, ಕಿರಣ್ ಕುಮಾರ್ ಹಾಗೂ ಗುರು ದೇಶಪಾಂಡೆ ಆ್ಯಕ್ಷನ್-ಕಟ್ ಹೇಳಿದ್ದಾರೆ. ಮಣಿಕಾಂತ್ ಕದ್ರಿ ಅವರ ಸಂಗೀತ, ಕಿರಣ್ ಹಂಪಾಪುರ, ಅಭಿಲಾಶ್ ಕಲ್ಲತ್ತಿ, ಗುರುಪ್ರಸಾದ್ ಅವರ ಛಾಯಾಗ್ರಹಣ ಇದೆ. ಈ ಚಿತ್ರದಲ್ಲಿ ಪ್ರಕಾಶ್ ಬೆಳವಾಡಿ, ಪ್ರಮೋದ್ ಶೆಟ್ಟಿ, ರವಿಶಂಕರ್, ಕಿಶೋರ್, ಪೃಥ್ವಿ ಅಂಬಾರ್ ಮೊದಲಾದವರು ಅಭಿನಯಿಸಿದ್ದಾರೆ.

ರಾಮಾಚಾರಿ 2.0: ನಟ ಮತ್ತು ನಿರ್ದೇಶಕ ತೇಜ್‌ ಅಭಿನಯದ ‘ರಾಮಾಚಾರಿ 2.0’ ಚಿತ್ರ ಇಂದು ತೆರೆ ಕಾಣುತ್ತಿದೆ. ‘ಶ್ರೀರಸ್ತು ಶುಭಮಸ್ತು’ ಧಾರಾವಾಹಿ ನಟಿ ಚಂದನಾ ಹಾಗೂ ‘ನನ್ನರಸಿ ರಾಧೆ’ ಧಾರಾವಾಹಿ ನಟಿ ಕೌಸ್ತುಭಮಣಿ ನಾಯಕಿಯರಾಗಿದ್ದಾರೆ. ತೇಜ್‌ ನಿರ್ದೇಶನ ಮತ್ತು ನಿರ್ಮಾಣದ ಚಿತ್ರವಿದು.

ನಮ್ ನಾಣಿ ಮದುವೆ ಪ್ರಸಂಗ: ಕಿರುತೆರೆ ಮತ್ತು ಹಿರಿತೆರೆ ಜನಪ್ರಿಯ ನಟ, ನಿರ್ದೇಶಕ ಹೇಮಂತ್ ಹೆಗಡೆ ನಿರ್ದೇಶನದ ‘ನಮ್ ನಾಣಿ ಮದುವೆ ಪ್ರಸಂಗ’ ಇಂದು ತೆರೆ ಕಾಣುತ್ತಿದೆ. ಉತ್ತರಕನ್ನಡದ ರೈತಾಪಿ ಹುಡುಗನೊಬ್ಬನ ಕಷ್ಟ–ಸುಖಗಳ ಕುರಿತು ಮಾತನಾಡುವ ಚಿತ್ರದಲ್ಲಿ ರಾಜೇಶ್ ನಟರಂಗ, ಸುಚೇಂದ್ರ ಪ್ರಸಾದ್, ಕೆ.ಎಂ.ಚೈತನ್ಯ, ಸಾಕ್ಷಿ ಮೇಘನ, ರಕ್ಷಿಕಾ ಮುಂತಾದವರು ನಟಿಸುತ್ತಿದ್ದಾರೆ.

‘ಉತ್ತರ ಕನ್ನಡದ ಭಾಷೆ, ಸಂಸ್ಕೃತಿಯನ್ನು ಹೊಂದಿರುವ ಚಿತ್ರವಿದು. ಅಲ್ಲಿನ ಬೇರೆ, ಬೇರೆ ಸಮುದಾಯಗಳ ಜೀವನಶೈಲಿಯನ್ನು ಚಿತ್ರದಲ್ಲಿ ತೋರಿಸಲಾಗಿದೆ. ಕುಟುಂಬ ಸಮೇತ ವೀಕ್ಷಿಸಬಹುದಾದ ಸಂಪೂರ್ಣ ಹಾಸ್ಯಮಯ ಚಿತ್ರವಿದು’ ಎಂದು ನಿರ್ದೇಶಕ ಹೇಮಂತ್‌ ಹೆಗಡೆ ಹೇಳಿದ್ದಾರೆ.

‘ಕನ್ನಡದಲ್ಲಿ ಉತ್ತಮ ಕಂಟೆಂಟ್‌ ಹೊಂದಿರುವ ಚಿತ್ರಗಳು ಬರುವುದಿಲ್ಲ ಎಂಬ ದೂರು ಯಾವಾಗಲೂ ಕೇಳಿಬರುತ್ತದೆ. ಆದರೆ ಆ ದೂರನ್ನು ದೂರ ಮಾಡುವ ಚಿತ್ರ ನಾಣಿ ಮದುವೆ ಪ್ರಸಂಗ. ಚಿತ್ರ ಪ್ರಾರಂಭಿಸಿದಾಗ ಹಳ್ಳಿ ಹುಡುಗರಿಗೆ ಮದುವೆಯಾಗದಿರುವುದು ಉತ್ತರ ಕನ್ನಡದ ಸಮಸ್ಯೆ ಎಂದುಕೊಂಡಿದ್ದೆ. ಆದರೆ ನಂತರ ಇದು ರಾಜ್ಯದ ಎಲ್ಲ ಕಡೆಯ ಸಮಸ್ಯೆ ಎಂಬುದು ತಿಳಿಯಿತು. ಇತ್ತೀಚೆಗೆ ಮಂಡ್ಯದಲ್ಲಿ ನಡೆದ ವಧುವರರ ಸಮಾವೇಶದಲ್ಲಿ ಈ ಸಂಗತಿ ಬೆಳಕಿಗೆ ಬಂದಿದೆ. ಹೀಗಾಗಿ ರಾಜ್ಯದ ಎಲ್ಲ ಭಾಗಗಳಿಗೂ ಅನ್ವಯವಾಗುವ ಕಥೆ ಇದಾಗಿದೆ’ ಎಂದು ಹೆಗಡೆ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT