ಭಾನುವಾರ, ಮೇ 31, 2020
27 °C

ಜನ್ಮ ಜನ್ಮಗಳ ಸಂಘರ್ಷ

ವಿದ್ಯಾಶ್ರೀ ಎಸ್. Updated:

ಅಕ್ಷರ ಗಾತ್ರ : | |

Prajavani

ಬದಲಾದ ಸನ್ನಿವೇಶದಲ್ಲಿ ಹಿರಿತೆರೆಯೂ ಕಿರುತೆರೆಯಷ್ಟೇ ಶ್ರೀಮಂತವಾಗಿದೆ. ವಿನೂತನ ಕಥೆ, ನಿರೂಪಣೆಯ ಜೊತೆಗೆ ಅದ್ದೂರಿ ನಿರ್ಮಾಣಕ್ಕೂ ಆದ್ಯತೆ ನೀಡಲಾಗುತ್ತದೆ. ಹೀಗಾಗಿ ಸಾಲು, ಸಾಲು ವೈಭವೋಪೇತ ಧಾರಾವಾಹಿಗಳು ಕಿರುತೆರೆಯನ್ನು ಆವರಿಸಿಕೊಳ್ಳುತ್ತಿವೆ. ಇವುಗಳ ಸಾಲಿಗೆ ಹೊಸ ಸೇರ್ಪಡೆ ‘ಚಂದ್ರಕುಮಾರಿ’. 

ಅಮ್ಮ ಮತ್ತು ಮಗಳ ನಡುವಿನ ಶತಮಾನಗಳ ಹಿಂದಿನ ಸಂಘರ್ಷಕ್ಕೆ ಮರು ಜೀವ ಸಿಕ್ಕರೆ ಸಂಭವಿಸಬಹುದಾದ ಘಟನೆಗಳೇ ಈ ಧಾರಾವಾಹಿಯ ಜೀವಾಳ.

ಧರ್ಮ, ದೇವರುಗಳ ವಿಷಯಗಳನ್ನು ಮುಖ್ಯವಾಗಿ ಇಟ್ಟುಕೊಂಡ ಕಥಾಹಂದರ ಎಂದಿಗೂ ಕುತೂಹಲ ಮೂಡಿಸುತ್ತದೆ. ಈ ಗೆಲುವಿನ ಸೂತ್ರವನ್ನು ಇಲ್ಲಿಯೂ ಪ್ರಯೋಗಿಸಲಾಗಿದೆ. ಇದು ಪುರ್ನಜನ್ಮದ ಕಥೆ ಮಾತ್ರವಲ್ಲ. ಇಲ್ಲಿ ದುಷ್ಟ ಮತ್ತು ದೈವ ಶಕ್ತಿಯ ದರ್ಶನವೂ ಆಗಲಿದೆ. ಆದರೆ ಪ್ರತಿ ಜನ್ಮದಲ್ಲಿಯೂ ಗೆಲ್ಲುವುದು ದೈವ ಶಕ್ತಿ.

‘ಕಠಾರಿ ವೀರ ಸುರಸುಂದರಾಂಗಿ’, ‘ಜೇಷ್ಠ’, ‘ಕದಂಬ’... ಹೀಗೆ ಕನ್ನಡ ಸೇರಿದಂತೆ ತಮಿಳು, ತೆಲುಗು, ಮಲಯಾಳಂಗಳಲ್ಲಿ 30 ಕ್ಕೂ ಹೆಚ್ಚು ಸಿನಿಮಾ ನಿರ್ದೇಶಿಸಿರುವ ಸುರೇಶ್‌ ಕೃಷ್ಣ ಈ ಧಾರಾವಾಹಿ ನಿರ್ದೇಶಕರು. 

‘ಒಂದೇ ರೀತಿಯ ಕಥೆಗಳಿರುವ ಧಾರಾವಾಹಿ ನೋಡಿ ಬೇಸರವಾದ ಜನರಿಗೆ, ಗ್ರಾಫಿಕ್‌, ವಸ್ತ್ರವಿನ್ಯಾಸ, ಬೆಳಕು, ಛಾಯಾಗ್ರಹಣ, ಸಂಭಾಷಣೆ, ಅಭಿನಯ ಹೀಗೆ ಪ್ರತಿ ವಿಭಾಗದಲ್ಲಿಯೂ ಹೊಸತನದ ಮೂಲಕ ರಸದೌತಣ ನೀಡಲು ಅಣಿಯಾಗಿದ್ದೇವೆ. ರೋಚಕ ತಿರುವುಗಳ ಮೂಲಕ ಬೇರೆಲ್ಲ ಧಾರಾವಾಹಿಗಳಿಗಿಂತ ವಿಭಿನ್ನವಾಗಿ ಪ್ರಸ್ತುತಪಡಿಸುತ್ತಿದ್ದೇವೆ’ ಎನ್ನುತ್ತಾರೆ ನಿರ್ದೇಶಕರು.

‘ವೀಕ್ಷಕರ ಅಭಿರುಚಿಗೆ ತಕ್ಕಂತೆ ಕಥೆ ಹೆಣೆಯಲಾಗಿದೆ. ಕುತೂಹಲ ಕೆರಳಿಸುವ ಚಿತ್ರಕಥೆ, ಮೊನಚಾದ ಸಂಭಾಷಣೆ ಹಾಗೂ ಚಿತ್ರೀಕರಣದ ಗುಣಮಟ್ಟ, ಗ್ರಾಫಿಕ್ಸ್‌...  ವಾರ ಪೂರ್ತಿ ಮನರಂಜನೆಯ ಭರ್ಜರಿ ರಸದೌತಣ ನೀಡಲಿದೆ’ ಎನ್ನುತ್ತಾರೆ ಅವರು.

‘ಕೌಟುಂಬಿಕ ಸಮಸ್ಯೆ, ಪ್ರೀತಿ– ಪ್ರೇಮ, ಅತ್ತೆ, ಸೊಸೆ ಜಗಳ... ಇವುಗಳೇ ಧಾರಾವಾಹಿಗಳಿಗೆ ವಸ್ತುಗಳಾಗಿದ್ದ ಸಂದರ್ಭದಲ್ಲಿ ಕಿರುತೆರೆ ಅಂಗಳಕ್ಕೆ ಹೊಸ ಸೇರ್ಪಡೆಯಾಗಿ ಪೌರಾಣಿಕ ಧಾರಾವಾಹಿಗಳು ಯಶಸ್ಸು ಕಂಡಿತು. ನಮ್ಮ ಈ ಧಾರಾವಾಹಿಯಲ್ಲಿ ಸಂಬಂಧಗಳ ಮಹತ್ವ, ಪ್ರೀತಿ, ಸಾಹಸ ದೃಶ್ಯಗಳು, ದುಷ್ಟ, ದೈವ ಶಕ್ತಿ... ಹೀಗೆ ಗೆಲುವಿಗೆ ಪೂರಕವಾಗುವ ಎಲ್ಲಾ ಅಂಶಗಳು ಇವೆ. ಇದೊಂದು ಫ್ಯಾಂಟಸಿ ಮಾದರಿ ಧಾರಾವಾಹಿ. ವೀಕ್ಷಕರನ್ನು ಸೆಳೆಯುವುದು ಖಚಿತ’  ಎಂಬುದು ಅವರ ಭರವಸೆಯ ನುಡಿ. 

ಪುನರ್ಜನ್ಮದ ಧಾರಾವಾಹಿಗಳೆಂದರೆ ಸಾಮಾನ್ಯವಾಗಿ ಒಂದು ಜನ್ಮದ ಕಥೆಯಿರುತ್ತದೆ. ಆದರೆ ಇಲ್ಲಿ ಏಳೇಳು ಜನ್ಮಗಳ ಕಥೆಯಿದೆ. ಏಳು ಜನ್ಮದ ಪಾತ್ರಗಳು ಒಂದೇ. ಆದರೆ ಕಥೆ, ಸನ್ನಿವೇಶಗಳು ಮಾತ್ರ ಬದಲಾಗುತ್ತಿರುತ್ತವೆ. 

‘ಪುರಾತತ್ವಶಾಸ್ತ್ರಜ್ಞ ವಿದ್ಯಾರ್ಥಿಯಾದ ಅಂಜಲಿ (ಭಾನು), ಮಂಗಳಪುರದ ರಾಣಿ ಚಂದ್ರಕುಮಾರಿಯ ಇತಿಹಾಸದ ಕುರುಹುಗಳನ್ನು ಹುಡುಕಲು ಪ್ರಾರಂಭಿಸುತ್ತಾಳೆ. ಈ ಸಂದರ್ಭದಲ್ಲಿ ಆಕೆಗೆ ಎದುರಾಗುವ ಸವಾಲುಗಳು ಪ್ರೇಕ್ಷಕರಿಗೆ ರೋಚಕ ಅನುಭವಗಳನ್ನು ನೀಡಲಿವೆ.  ಬಿಡಿ ಬಿಡಿಯಾದ ಕುರುಹುಗಳು ಆಕೆಯ ಪ್ರಶ್ನೆಗಳಿಗೆಲ್ಲ ಉತ್ತರ ನೀಡುತ್ತವೆಯೇ? ಎಂಬುದನ್ನು ಧಾರಾವಾಹಿಯ ಪ್ರತಿ ಕಂತುಗಳನ್ನು ನೋಡಿಯೇ ತಿಳಿಯಬೇಕು’ ಎಂದು ಕಥೆಯ ಎಳೆಯನ್ನು ಬಿಟ್ಟುಕೊಡುತ್ತಾರೆ ನಿರ್ದೇಶಕರು.

ಪ್ರಚಂಡ ಕುಳ್ಳ’, ‘ಜೀವನ ಚಕ್ರ’, ‘ಸತ್ಯ ಶಿವಂ ಸುಂದರಂ’... ಹೀಗೆ 80ರ ದಶಕದ ಹಲವು ಕನ್ನಡ ಚಿತ್ರಗಳಲ್ಲಿ ನಟಿಸಿ ಜನಪ್ರಿಯತೆ ಗಳಿಸಿದ್ದ, ಪಂಚಭಾಷಾ ನಟಿ ರಾಧಿಕಾ ಶರತ್‌ಕುಮಾರ್‌ ರಾಣಿ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಏಳು ವಿಭಿನ್ನ ಪಾತ್ರಗಳಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ಕಥೆ ಕೇಳಿದಾಕ್ಷಣ ನಿರ್ದೇಶಕರಿಗೆ ರಾಣಿಯ ಪಾತ್ರಕ್ಕೆ ಇವರೇ ಸೂಕ್ತ ಎನಿಸಿತಂತೆ. ಇವರ ಗತ್ತು, ಗಾಂಭೀರ್ಯ ರಾಣಿಯ ಪಾತ್ರಕ್ಕೆ ಹೊಂದುವುದೇ ಇದಕ್ಕೆ ಕಾರಣ. 

ರಾಜನಾಗಿ ಅರುಣ್‌ ಸಾಗರ್‌ ಜೊತೆಯಾಗಿದ್ದಾರೆ. ‘ಡಾರ್ಲಿಂಗ್‌’ ಸಿನಿಮಾ ನಾಯಕಿ ಭಾನು ಮುಖ್ಯವಾದ ಪಾತ್ರವೊಂದರಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ. 

ಬಹಳ ದಿನಗಳ ನಂತರ ಅರುಣ್‌ ಸಾಗರ್‌ ಕಿರುತೆರೆಯಲ್ಲಿ ಕಾಣಿಸಿಕೊಂಡಿದ್ದಾರೆ. ಧಾರಾವಾಹಿ ಅದ್ಭುತವಾಗಿ ಮೂಡಿಬರುತ್ತಿದೆ ಎನ್ನುವ ಅವರು, ಕಥೆಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. 

‘ಐತಿಹಾಸಿಕ ಕಥೆಯ ಮೂಲಕ ಪ್ರಾರಂಭವಾಗಿರುವ ಧಾರಾವಾಹಿ, ಮುಂದೆ ಸಮಕಾಲೀನ ಕಥೆಯಾಗಿ ರೂಪುಗೊಳ್ಳಲಿದೆ. ಧಾರಾವಾಹಿ ಅದ್ದೂರಿಯಾಗಿ ಮೂಡಿಬರುತ್ತಿದೆ. ಈಗಿನ ಕಾಲದ ಸಾಂಸರಿಕ ಸಮಸ್ಯೆಗಳ ಕುರಿತು ಕಥೆ ಹೇಳುತ್ತದೆ. ಮುಂದೆ ಇನ್ನಷ್ಟು ಕುತೂಹಲ ಮೂಡಿಸಲಿದೆ. ಕನ್ನಡದಲ್ಲಿ ಕೆಲವೇ ಕಂತುಗಳು ಪ್ರಸಾರವಾಗಿವೆ. ಹಾಗಾಗಿ ಇಲ್ಲಿಯ ಜನರ ಪ್ರತಿಕ್ರಿಯೆಗೆ ಇನ್ನಷ್ಟು ದಿನ ಕಾಯಬೇಕು. ತಮಿಳಿನಲ್ಲಿ ಹಲವು ಎಪಿಸೋಡ್‌ಗಳು ಪ್ರಸಾರವಾಗಿದ್ದು, ಉತ್ತಮ ಪ್ರತಿಕ್ರಿಯೆ ಬರುತ್ತಿದೆ’ ಎಂದು ಚುಟುಕಾಗಿ ಅವರು ಮಾತು ಮುಗಿಸಿದರು.

ಕನ್ನಡ, ತಮಿಳು, ತೆಲುಗು, ಮಲಯಾಳಂ ಭಾಷೆಗಳಲ್ಲಿ ಧಾರಾವಾಹಿ ಪ್ರಸಾರವಾಗುತ್ತಿದೆ. ಮುಂಬೈ ಸ್ಟುಡಿಯೊದಲ್ಲಿ ಐತಿಹಾಸಿಕ ಸನ್ನಿವೇಶಗಳ ಚಿತ್ರೀಕರಣ ನಡೆದರೆ,‌ ಚೆನ್ನೈನಲ್ಲಿ ಸಮಕಾಲೀನ ಕಥೆಯ ಚಿತ್ರೀಕರಣ ನಡೆಯುತ್ತಿದೆ. 

ರಡಾನ್‌ ಸಂಸ್ಥೆ ಈ ಧಾರಾವಾಹಿ ನಿರ್ಮಾಣದ ಹೊಣೆ ಹೊತ್ತಿದೆ. ಜನವರಿ ಏಳರಿಂದ ಧಾರಾವಾಹಿ ಆರಂಭವಾಗಿದ್ದು, ಪ್ರತಿದಿನ 8ಕ್ಕೆ ಉದಯ ವಾಹಿನಿಯಲ್ಲಿ ಪ್ರಸಾರವಾಗಲಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.