ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರವಿಚಂದ್ರನ್‌ ನನ್ನ ಬಾಲ್ಯದ ಕ್ರಶ್‌

Last Updated 12 ಅಕ್ಟೋಬರ್ 2018, 19:45 IST
ಅಕ್ಷರ ಗಾತ್ರ

ಬುದ್ಧನ ನಗುವಿನ ಬೆಡಗಿ ನಿಮಿಕಾ ರತ್ನಾಕರ್‌ ಚಂದನವನದ ಹೊಸ ಫಸಲು. ಈಚೆಗೆ ತೆರೆಕಂಡ ‘ರಾಮಧಾನ್ಯ’ ಸಿನಿಮಾದಲ್ಲಿ ಐತಿಹಾಸಿಕ ಪಾತ್ರಕ್ಕೆ ಬಣ್ಣ ಹಚ್ಚಿ ಸಿನಿರಸಿಕರ ಮನ ಸೆಳೆದಿದ್ದರು. ಅದಕ್ಕೂ ಮುನ್ನ ಫ್ಯಾಷನ್‌ ಕ್ಷೇತ್ರದಲ್ಲಿ ಮಿಂಚು ಹರಿಸಿದವರು. ಗಾಯಕಿ, ರೂಪದರ್ಶಿ, ನಟಿಯಾಗಿ ಜನಪ್ರಿಯತೆಗಳಿಸಿರುವ ನಿಮಿಕಾ ರತ್ನಾಕರ್‌ ಈಗ ಸ್ಯಾಂಡಲ್‌ವುಡ್‌ನ ಬಹುನಿರೀಕ್ಷಿತ ಸಿನಿಮಾ ‘ರವಿಚಂದ್ರ’ ಚಿತ್ರದಲ್ಲಿ ರಿಯಲ್‌ ಸ್ಟಾರ್‌ ಉಪೇಂದ್ರ ಅವರೊಂದಿಗೆ ತೆರೆಹಂಚಿಕೊಳ್ಳುತ್ತಿದ್ದಾರೆ.

ಫ್ಯಾಷನ್‌ ಕ್ಷೇತ್ರವನ್ನೇ ಚಿಮ್ಮುಹಲಗೆಯಾಗಿಸಿಕೊಂಡು ಚಿತ್ರರಂಗಕ್ಕೆ ಜಿಗಿದ ನಿಮಿಕಾ, ಚಿತ್ರೋದ್ಯಮಕ್ಕೆ ಕಾಲಿಟ್ಟ ಚಿಕ್ಕ ಸಮಯದಲ್ಲೇ ದೊಡ್ಡ ನಟರೊಂದಿಗೆ ನಟಿಸುವ ಅದೃಷ್ಟ ಪಡೆದುಕೊಂಡವರು. ‘ರವಿಚಂದ್ರ’ ಸಿನಿಮಾದಲ್ಲಿ ಇಬ್ಬರು ಸ್ಟಾರ್‌ನಟರ ಜತೆಗೆ ನಟಿಸಿರುವುದರ ಬಗ್ಗೆ ಅವರು ತುಂಬ ಉತ್ಸಾಹದಿಂದಲೇ ಮಾತನಾಡುತ್ತಾರೆ.

‘ರವಿಚಂದ್ರ’ ಸಿನಿಮಾಕ್ಕೆ ಆಯ್ಕೆಯಾದಾಗ ಸಿಕ್ಕಾಪಟ್ಟೆ ಥ್ರಿಲ್‌ ಆಗಿದ್ದೆ. ಕನ್ನಡ ಚಿತ್ರರಂಗದ ಕನಸುಗಾರ ರವಿಚಂದ್ರನ್‌ ಅವರೆಂದರೆ ನನಗೆ ತುಂಬ ಇಷ್ಟ. ಚಿಕ್ಕವಳಿದ್ದಾಗಿನಿಂದಲೂ ಅವರನ್ನು, ಅವರ ಸಿನಿಮಾಗಳನ್ನು ತುಂಬ ಇಷ್ಟಪಡುತ್ತಿದ್ದೆ. ಒಂಥರಾ ಅವರು ನನ್ನ
ಬಾಲ್ಯದ ಕ್ರಶ್‌ ಇದ್ದ ಹಾಗೆ. ಈಗ ಅವರ ಜತೆ ನಟಿಸುವ ಅವಕಾಶ ಸಿಕ್ಕಿದ್ದಕ್ಕೆ ತುಂಬ ಖುಷಿಯಾಗಿದೆ. ಚಿತ್ರೀಕರಣ ಶುರುವಾದ ಮೊದಲ ದಿನ ಅವರ ಜತೆಗೆ ನಟಿಸಬೇಕಿದ್ದ ಸನ್ನಿವೇಶದಲ್ಲಿ ನಾನು ನಟಿಸುವುದನ್ನೂ ಮರೆತು, ಅವರನ್ನು ನೋಡುತ್ತಾ ಬರೀ ಸ್ಮೈಲ್‌ ಮಾಡುತ್ತಿದ್ದೆ. ಮನಸ್ಸಿನಲ್ಲಿ ಅಷ್ಟೊಂದು ಖುಷಿಯ ಅಲೆಗಳು ಎದ್ದಿದ್ದವು ಎನ್ನುತ್ತಾರೆ ಕರಾವಳಿಯ ಚೆಲುವೆ ನಿಮಿಕಾ.

‘ರವಿಚಂದ್ರ’ ದೊಡ್ಡ ದೊಡ್ಡ ನಟರಿರುವ ಬಹುತಾರಂಗಣ ಸಿನಿಮಾ. ನನಗೆ ಈ ಹಿಂದೆ ಸಿನಿಮಾಗಳಲ್ಲಿ ನಟಿಸಿದ್ದ ಅನುಭವ ಇತ್ತು. ಆದರೆ, ಇಷ್ಟು ದೊಡ್ಡ ನಟರೊಂದಿಗೆ ತೆರೆ ಹಂಚಿಕೊಂಡಿದ್ದು ಇದೇ ಮೊದಲು. ಹಾಗಾಗಿ, ಇದೊಂದು ರೀತಿಯ ಹೊಸ ಅನುಭವ ಎನ್ನಲು ಅಡ್ಡಿಯಿಲ್ಲ. ಜನಪ್ರಿಯ ನಟರ ಜತೆಗೆ ನಟಿಸುವ ಕೌತುಕ ಒಂದೆಡೆಯಾದರೆ; ಅವರ ಸರಿಸಮನಾಗಿ ನಟಿಸುವುದು ಹೇಗೆ ಎಂಬ ಆತಂಕವೂ ನನ್ನೊಳಗೆ ಮನೆಮಾಡಿತ್ತು. ಏಕೆಂದರೆ, ಅವರ ಮುಂದೆ ನನ್ನ ನಟನಾನುಭವ ಕಡಿಮೆ. ಕ್ರಮೇಣ ಸರಿಹೋಯಿತು. ದೊಡ್ಡ ನಟರ ಜತೆ ತೆರೆಹಂಚಿಕೊಂಡಿದ್ದು ಉತ್ತಮ ಅನುಭವ’ ಎನ್ನುತ್ತಾರೆ ಅಂತರರಾಷ್ಟ್ರೀಯ ಮಟ್ಟದಲ್ಲಿ ‘ಬೆಸ್ಟ್‌ ಮ್ಯೂಜಿಷಿಯನ್‌’ ಟೈಟಲ್‌ ಪಡೆದು ದೇಶಕ್ಕೆ ಕೀರ್ತಿ ತಂದಿರುವ ನಿಮಿಕಾ.

ನಿಮಿಕಾ ರತ್ನಾಕರ್‌ ‘ರವಿಚಂದ್ರ’ ಸಿನಿಮಾದಲ್ಲಿ ಶ್ರುತಿ ಎನ್ನುವ ಪಾತ್ರಕ್ಕೆ ಬಣ್ಣಹಚ್ಚಿದ್ದಾರೆ. ಸಾಧು ಕೋಕಿಲಾ ಅವರು ಇವರ ಮಾವನ ಪಾತ್ರ ನಿರ್ವಹಿಸಿದ್ದಾರೆ. ಇವರಿಬ್ಬರ ಜುಗಲ್‌ಬಂದಿಯಲ್ಲಿ ಮೂಡಿಬಂದಿರುವ ಹಾಸ್ಯ ಸನ್ನಿವೇಶಗಳು ಪ್ರೇಕ್ಷಕರಿಗೆ ಸಿಕ್ಕಾಪಟ್ಟೆ ಕಿಕ್‌ ಕೊಡಲಿವೆಯಂತೆ.

‘ಶ್ರುತಿ ತುಂಬ ಬಬ್ಲಿ ಹುಡುಗಿ. ಆಕೆಯ ಮಾವ ಸಾಧುಕೋಕಿಲ. ಜನರಿಗೆ ‘ಟೋಪಿ’ ಹಾಕುವಂತಹ ಪಾತ್ರವನ್ನು ನಾವಿಬ್ಬರೂ ನಿರ್ವಹಿಸಿದ್ದೇವೆ. ತುಂಬ ಚೆಲ್ಲುಚೆಲ್ಲಾಗಿ ಆಡುವ ವ್ಯಕ್ತಿತ್ವ ಶ್ರುತಿಯದ್ದು. ನಾಯಕನಟನ ಮೇಲೆ ಆಕರ್ಷಣೆ ಮೂಡಿ, ಲವ್‌ನಲ್ಲಿ ಬೀಳುವುದು, ಹಾಡು, ಡಾನ್ಸ್‌... ಈ ಬಗೆಯ ಪಾತ್ರ ಅದು. ತುಂಬ ಚೆನ್ನಾಗಿ ಮೂಡಿಬಂದಿದೆ. ಈ ಸಿನಿಮಾದಲ್ಲಿ ನಾನು ರವಿಚಂದ್ರನ್‌, ಉಪೇಂದ್ರ ಹಾಗೂ ಸಾಧು ಕೋಕಿಲಾ ಅವರ ಜತೆಗೆ ಹೆಚ್ಚಿನ ಸನ್ನಿವೇಶಗಳಲ್ಲಿ ಕಾಣಿಸಿಕೊಳ್ಳುತ್ತೇನೆ. ಮೊನ್ನೆಯಷ್ಟೇ ಈ ಮೂರು ಮಂದಿ ಒಟ್ಟಿಗೆ ಇರುವ ಸನ್ನಿವೇಶವನ್ನು ಚಿತ್ರೀಕರಿಸಲಾಯಿತು. ಅವತ್ತು ಸೆಟ್‌ನಲ್ಲಿ ಸಿಕ್ಕಾಬಟ್ಟೆ ಫನ್‌ ಇತ್ತು. ಎರಡು ಹಂತದ ಚಿತ್ರೀಕರಣ ಮುಗಿದಿದ್ದು, ಇನ್ನೂ ಸ್ವಲ್ಪ ಚಿತ್ರೀಕರಣ ಬಾಕಿ ಉಳಿದಿದೆ. ಜನವರಿಯಲ್ಲಿ ಸಿನಿಮಾ ತೆರೆಗೆ ಬರಬಹುದು’ ಎನ್ನುತ್ತಾರೆ ಅವರು.

ಕರಾವಳಿಯ ಪ್ರತಿಭೆ ನಟ, ನಿರ್ದೇಶಕ ಉಪೇಂದ್ರ ಅವರನ್ನು ಬಾಯ್ತುಂಬ ಹೊಗಳುವ ನಿಮಿಕಾ, ಅವರೊಟ್ಟಿಗೆ ನಟಿಸಿದ ಅನುಭವವನ್ನು ಹಂಚಿಕೊಂಡಿದ್ದು ಹೀಗೆ: ‘ಉಪೇಂದ್ರ ಅವರು ಡೌನ್‌ ಟು ಅರ್ಥ್‌ ವ್ಯಕ್ತಿ. ನಟ, ನಿರ್ದೇಶಕರಾಗಿ ಅವರದ್ದು ದೊಡ್ಡ ಹೆಸರು. ತುಂಬ ಕ್ರಿಯಾಶೀಲ ವ್ಯಕ್ತಿ. ನಟನೆಯೆಂಬುದು ಅವರಿಗೆ ಲೀಲಾಜಾಲ. ನಟನೆಯಲ್ಲಿ ಅವರದ್ದೇ ಒಂದು ಪ್ರತ್ಯೇಕ ಶೈಲಿ ಇದೆ. ಅದು ಆಕರ್ಷಕ ಮತ್ತು ವಿಭಿನ್ನ. ಅವರ ಜತೆಗೆ ನಟಿಸುವಾಗ ನನ್ನ ಅಭಿನಯದಲ್ಲಿ ತಪ್ಪಿದ್ದರೆ ಹೇಳುತ್ತಿದ್ದರು. ಶಾಟ್‌ ಚೆನ್ನಾಗಿ ಬಂದರೆ, ‘ತುಂಬ ಚೆನ್ನಾಗಿ ನಟಿಸಿದ್ದೀಯಾ’ ಎಂದು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರು. ನಂಗಂತೂ ಉಪೇಂದ್ರ ಅವರು ನಟಿಸುವುದನ್ನು ನೋಡುವುದೇ ಕಣ್ಣಿಗೆ ಹಬ್ಬ
ಅನ್ನಿಸುತ್ತಿತ್ತು’.

‘ರವಿಚಂದ್ರ’ ಸಿನಿಮಾ ಬಗ್ಗೆ ಕನ್ನಡ ಚಿತ್ರೋದ್ಯಮದಲ್ಲಿ ಅಪಾರ ನಿರೀಕ್ಷೆಗಳಿವೆ. ಅದೇ ರೀತಿ, ನನಗೂ ಕೂಡ ಈ ಸಿನಿಮಾ ಕುರಿತು ತುಂಬಾನೇ ನಿರೀಕ್ಷೆಗಳಿವೆ. ಈ ಚಿತ್ರ ನನಗೆ ಒಳ್ಳೆ ಬ್ರೇಕ್‌ ಕೊಡಲಿದೆ, ನನ್ನ ವೃತ್ತಿ ಬದುಕನ್ನು ಬದಲಿಸಲಿದೆ’ ಎಂದು ಹೇಳುವಾಗ ಬಟ್ಟಲು ಕಂಗಳ ಚೆಲುವೆ ನಿಮಿಕಾ ಕಣ್ಣುಗಳಲ್ಲಿ ಜೋಡಿದೀಪದ ಪ್ರಕಾಶವಿತ್ತು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT