ಮತ್ತೆ ಸೆಟ್ಟೇರಿದ ‘ನಿಷ್ಕರ್ಷ’

7

ಮತ್ತೆ ಸೆಟ್ಟೇರಿದ ‘ನಿಷ್ಕರ್ಷ’

Published:
Updated:
Deccan Herald

ಎರಡೂವರೆ ದಶಕದ ಹಿಂದೆ ನಟ ವಿಷ್ಣುವರ್ಧನ್‌ ನಟಿಸಿದ್ದ ‘ನಿಷ್ಕರ್ಷ’ ಸಿನಿಮಾ ಸೂಪರ್‌ ಹಿಟ್‌ ಆಗಿತ್ತು. ಸುನೀಲ್‌ ಕುಮಾರ್‌ ದೇಸಾಯಿ ಈ ಚಿತ್ರ ನಿರ್ದೇಶಿಸಿದ್ದರು. ಈಗ ಇದೇ ಹೆಸರಿನ ಚಿತ್ರವೊಂದು ಕಂಠೀರವ ಸ್ಟುಡಿಯೊದಲ್ಲಿ ಸೆಟ್ಟೇರಿದೆ.

ಸಿ.ಎಂ. ವಿಜಯ್‌ ಕಥೆ, ಚಿತ್ರಕಥೆ ಬರೆದು ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ. ಸ್ಕ್ರಿಪ್ಟ್‌ಗೆ ಟೈಟಲ್‌ ಸೂಕ್ತವಾಗಿದ್ದರಿಂದ ಚಿತ್ರಕ್ಕೆ ‘ನಿಷ್ಕರ್ಷ’ ಎಂದು ಹೆಸರಿಡಲಾಗಿದೆಯಂತೆ. ಆದರೆ, ಮೂಲ ಚಿತ್ರಕ್ಕೂ, ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂಬುದು ಚಿತ್ರತಂಡದ ಸ್ಪಷ್ಟನೆ.

‘ನೈಜ ಘಟನೆ ಆಧಾರಿತ ಚಿತ್ರ ಇದು. ದೇಸಾಯಿ ಸರ್‌ ನಿರ್ದೇಶಿಸಿದ್ದ ನಿಷ್ಕರ್ಷ ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿದೆ. ದೊಡ್ಡಮಟ್ಟದಲ್ಲಿ ಹಿಟ್‌ ಆದಂತಹ ಚಿತ್ರದ ಶೀರ್ಷಿಕೆ ಬಳಸಿಕೊಂಡಿರುವುದರಿಂದ ನನ್ನ ಮೇಲೆ ಜವಾಬ್ದಾರಿಯೂ ಹೆಚ್ಚಿದೆ’ ಎಂದು ನಿರ್ದೇಶಕ ವಿಜಯ್.

‘ಇದು ಸಸ್ಪೆನ್ಸ್, ಥ್ರಿಲ್ಲರ್‌ ಚಿತ್ರ. ಕಾಮಿಡಿಯೂ ಇದೆ. ಸಮಾಜದಲ್ಲಿ ಹೆಣ್ಣುಮಕ್ಕಳ ಬಗ್ಗೆ ಯಾರೊಬ್ಬರೂ ಕೆಟ್ಟದ್ದಾಗಿ ಮಾತನಾಡಬಾರದು. ಈ ಚಿತ್ರ ನೋಡಿದವರು ಎಂದಿಗೂ ಹೆಂಗಳೆಯರ ಬಗ್ಗೆ ಕೀಳಾಗಿ ಮಾತನಾಡುವುದಿಲ್ಲ’ ಎಂದ ಅವರು, ಚಿತ್ರದ ಗುಟ್ಟನ್ನು ಬಿಟ್ಟುಕೊಡಲಿಲ್ಲ.

ಹಿಮಾದ್ರಿ ಪ್ರೊಡಕ್ಷನ್‌ ಲಾಂಛನದಲ್ಲಿ ಈ ಚಿತ್ರ ನಿರ್ಮಾಣವಾಗುತ್ತಿದೆ. ಎಂ.ಸಿ. ಮಹೇಶ್‌ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಅವರ ಪುತ್ರ ಅನಿಕೇತನ್‌ ನಾಯಕ ನಟನಾಗಿ ಕಾಣಿಸಿಕೊಂಡಿದ್ದಾರೆ.

‘ನನಗೆ ಇದು ಮೊದಲ ಚಿತ್ರ. ಸಿನಿಮಾದಲ್ಲಿ ನಾನು ತಂದೆ, ತಾಯಿಗೆ ಒಬ್ಬನೇ ಮಗ. ಆದರೆ, ಯಾರ ಮಾತನ್ನೂ ಕೇಳುವುದಿಲ್ಲ’ ಎಂದು ನಕ್ಕರು ಅನಿಕೇತನ್.

ದಿವ್ಯಾ ಉರುಡಗ ಈ ಚಿತ್ರದ ನಾಯಕಿ. ಚಿತ್ರದಲ್ಲಿ ಅವರು ಬಜಾರಿ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರಂತೆ. ‘ನನ್ನದು ಭಿನ್ನವಾದ ಪಾತ್ರ. ಹುಲಿರಾಯ ಚಿತ್ರದಲ್ಲಿನ ನನ್ನ ನಟನೆ ನೋಡಿ ನಿರ್ದೇಶಕರು ಮತ್ತು ನಿರ್ಮಾಪಕರು ಅವಕಾಶ ನೀಡಿದ್ದಾರೆ. ಇದಕ್ಕೆ ನಾನು ಆಭಾರಿ’ ಎಂದು ಮಾತುಗಳನ್ನು ಹೊಗಳಿಕೆಗೆ ಮೀಸಲಿಟ್ಟರು.

ಚಿತ್ರದಲ್ಲಿ ಮೂರು ಹಾಡುಗಳಿದ್ದು, ವಿವೇಕ್‌ ಚಕ್ರವರ್ತಿ ಸಂಗೀತ ಸಂಯೋಜಿಸಿದ್ದಾರೆ. ಜಿ.ಎನ್‌. ಸರವಣನ್‌ ಅವರ ಛಾಯಾಗ್ರಹಣ ಚಿತ್ರಕ್ಕಿದೆ. ಮೈಸೂರು ಮತ್ತು ರಾಜಸ್ಥಾನದಲ್ಲಿ ಮುಂದಿನ ತಿಂಗಳ ಕೊನೆಯ ವಾರದಿಂದ ಚಿತ್ರೀಕರಣ ಆರಂಭಿಸಲು ಸಿದ್ಧತೆ ನಡೆಸಲಾಗಿದೆ. ಚಿತ್ರದ ಕೆಲವು ಸನ್ನಿವೇಶಗಳನ್ನು ವಿದೇಶದಲ್ಲಿಯೂ ಚಿತ್ರೀಕರಿಸಿಲು ಚಿತ್ರತಂಡ ಯೋಜನೆ ರೂಪಿಸಿದೆ.

ಅನಂತನಾಗ್, ಸಾಯಿಕುಮಾರ್, ಕಿಶೋರ್, ಚಿಕ್ಕಣ್ಣ, ವಿಜಯ್‍ ಪ್ರೀತು, ನಾಗಭೂಷಣ್, ಅಚ್ಯುತ್‌ ಕುಮಾರ್, ಸುಧಾ ಬೆಳವಾಡಿ ತಾರಾಗಣದಲ್ಲಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !