ಒಂಥರ ಹಿತಕರ ಬಣ್ಣಗಳು

7

ಒಂಥರ ಹಿತಕರ ಬಣ್ಣಗಳು

Published:
Updated:
Deccan Herald

 ತುಂಬಿ ಹರಿಯುವ ನದಿಯ ನೀರು ತನ್ನ ಮೇಲೆ ಬಾಗಿದ ಮರದ ಎಲೆಗಳಿಗೆ ತಾಕಿ, ಅವುಗಳಿಗೊಂದು ಹಿತವಾದ ಕಂಪನ ಕೊಟ್ಟು ಸಾಗುತ್ತದಲ್ಲ, ಅಂಥ ಹರಿವು– ಕಂಪನ ಎರಡೂ ಇರುವ ಸಿನಿಮಾ ‘ಒಂಥರ ಬಣ್ಣಗಳು’. ನಿರ್ದೇಶಕ ಸುನೀಲ್‌ ಭೀಮರಾವ್‌ ತಮ್ಮ ಮೊದಲ ಪ್ರಯತ್ನದಲ್ಲಿ ಭರವಸೆಯ ಗಟ್ಟಿ ಹೆಜ್ಜೆಯನ್ನೇ ಇಟ್ಟಿದ್ದಾರೆ.

ವೃತ್ತಿಯ ಜಂಜಡದಲ್ಲಿ ಸಿಲುಕಿರುವ ಮೂವರು ಸ್ನೇಹಿತರು, (ಜಯ್‌, ಶ್ರೀ ಮತ್ತು ರಾಮ್‌) ಅದರಿಂದ ತಪ್ಪಿಸಿಕೊಳ್ಳು ಎಲ್ಲಾದರೂ ಹೋಗಬೇಕು ಎಂದು ನಿರ್ಧರಿಸುತ್ತಾರೆ. ಮೂವರೂ ತಮಗೆ ಇಷ್ಟವಾಗುವ ಜಾಗವನ್ನು ಆಯ್ದುಕೊಳ್ಳುತ್ತಾರೆ. ಮೂರು ದಿನಗಳ ಪ್ರವಾಸದಲ್ಲಿ ಬದಾಮಿ, ಹುಬ್ಬಳ್ಳಿ, ಮಂಗಳೂರು ಮೂರು ಜಾಗಗಳಿಗೆ ಹೋಗಿಬರುವುದು ಎಂದು ನಿರ್ಧಾರವಾಗುತ್ತದೆ. ಅವರ ಜತೆ ಹಿತಾ ಮತ್ತು ಜಾನಕಿ ಕೂಡ ಸೇರಿಕೊಳ್ಳುತ್ತಾರೆ. ಈ ಮೂರು ದಿನಗಳ ಪ್ರಯಾಣವನ್ನೇ ಚಿತ್ರದ ಭಿತ್ತಿಯಾಗಿಸಿಕೊಂಡು ಹಲವು ಬಣ್ಣಗಳ ಚಿತ್ರ ಕೆತ್ತಿದ್ದಾರೆ ನಿರ್ದೇಶಕರು. ಕೀಟಲೆ, ತುಂಟಾಟಗಳಿಗೆ ಜಾಗ ಕೊಟ್ಟ ಹಾಗೆಯೇ ಗಾಢ ಮೌನದ ಮೂಲಕವೂ ಅವರು ಸಂಬಂಧಗಳ ಪಲ್ಲಟಗಳನ್ನು ಬಿಂಬಿಸಿದ್ದಾರೆ.

ಗಾಂಧಿನಗರದ ಕಲ್ಪನೆಯ ‘ಕಥೆ’ ಹೇಳುವುದು ಈ ಸಿನಿಮಾದ ಉದ್ದೇಶವೇ ಅಲ್ಲ. ಹಾಗೆಯೇ ಪ್ರೇಕ್ಷಕನನ್ನು ಬೆಚ್ಚಿ ಬೀಳಿಸುವುದು, ಕೊನೆಗೊಂದು ದಡ ಮುಟ್ಟಿಸಿ ವಿರಮಿಸುವ ಹಂಬಲವೂ ನಿರ್ದೇಶಕರಿಗಿಲ್ಲ. ತಮ್ಮನ್ನು ತಾವು ಕಳೆದುಕೊಳ್ಳಲು ಹೊರಡುವ ಈ ಐವರ ಪಯಣ, ತಮ್ಮನ್ನು ತಾವು ಕಂಡುಕೊಳ್ಳುವ ಶೋಧನೆಯಾಗಿಯೂ ಬದಲಾಗುತ್ತದೆ. ನಿರುದ್ದಿಶ್ಯ ಎಂದುಕೊಂಡೇ ಹೊರಟರೂ ಎಲ್ಲರಿಗೂ ತಮ್ಮ ಬದುಕನ್ನು ಕಾಡುತ್ತಿರುವ ಭೂತ– ವರ್ತಮಾನಗಳಿಗೆ ಮುಖಾಮುಖಿಯಾಗುವ ಉದ್ದೇಶವೂ ಇದೆ.

ಹೀಗೆ ಬದುಕಿನ ಸುಳಿಗಳನ್ನೂ, ಪ್ರಯಾಣದ ಸೌಂದರ್ಯವನ್ನೂ ಒಟ್ಟೊಟ್ಟಿಗೇ ಕಾಣಿಸುತ್ತ ಹೋಗುವ ರೀತಿಯಲ್ಲಿಯೇ ಈ ಚಿತ್ರವನ್ನು ಹೆಣೆಯಲಾಗಿದೆ. ಹಾಗಾಗಿಯೇ ಮನೋಹರ್‌ ಜೋಶಿ ಅವರ ಕ್ಯಾಮೆರಾ ನೆಲವ ಬಿಟ್ಟು ನಭದಲ್ಲಿಯೇ ಜಾಸ್ತಿ ಹಾರಾಡಿದೆ. ಶೀರ್ಷಿಕೆಯಲ್ಲಿನ ಬಣ್ಣಗಳನ್ನು ಕ್ಯಾಮೆರಾ ಚೌಕಟ್ಟಿನಲ್ಲಿಯೂ ಕಟ್ಟಿಕೊಡುವ ಪ್ರಯೋಗಕ್ಕೆ ಅವರು ಒಡ್ಡಿಕೊಂಡಿದ್ದಾರೆ. ಬಿ.ಜೆ. ಭರತ್‌ ಅವರ ಸಂಗೀತ ಚಿತ್ರಕ್ಕೊಂದು ವಿಶಿಷ್ಟ ಗಂಧ ಕೊಟ್ಟಿದೆ. 

ಹಲವು ಕಡೆಗಳಲ್ಲಿ ಹಿಂದಿಯ ‘ಜಿಂದಗಿ ನ ಮಿಲೇಗಿ ದುಬಾರ’ ಚಿತ್ರದ ನೆರಳು ಕಾಣಿಸುತ್ತದೆ.

 ಒಂದು ಸಹಜ ಹದ– ಸ್ವಾದದಲ್ಲಿ ಹರಿಯುತ್ತ ಹೋಗುವ ಪಯಣ ದ್ವಿತಿಯಾರ್ಧದಲ್ಲಿ ತುಸು ಅತ್ತಿತ್ತ ಹೊಯ್ದಾಡುತ್ತದೆ. ಬದಾಮಿ, ಸಿಗಂದೂರುಗಳನ್ನು ಕಾಣಿಸಿದಷ್ಟು ಅಧಿಕೃತವಾಗಿ ಮಂಗಳೂರು ಮತ್ತು ಹುಬ್ಬಳ್ಳಿಗಳನ್ನು ತೋರಿಸಿಲ್ಲ. ಅದರಲ್ಲಿಯೂ ಹುಬ್ಬಳ್ಳಿಯ ‘ವಾಡೆ’ ಕನ್ನಡ ಕಮರ್ಷಿಯಲ್‌ ಸಿನಿಮಾಗಳಲ್ಲಿ ಕಾಣುವ ಖಳನಟರ ಜಾಗದ ಸಿದ್ಧಮಾದರಿಯನ್ನೇ ನಂಬಿಕೊಂಡಂತಿದೆ. ಜಯ್‌ನ ಭಗ್ನ ಪ್ರೇಮವೂ ಇಡೀ ಕಥನದ ಕ್ಯಾನ್ವಾಸಿನಲ್ಲಿ ಅಸಹಜ ಬಣ್ಣದಂತೆ ತೋರುತ್ತದೆ. ಸಾಧುಕೋಕಿಲ ಅವರ ಭಾಗ ಇಲ್ಲದಿದ್ದರೂ ಚಿತ್ರಕ್ಕೆ ಏನೂ ನಷ್ಟ ಇರುತ್ತಿರಲಿಲ್ಲ.

ಹಿತಾ ಚಂದ್ರಶೇಖರ್ ಮತ್ತು ಕಿರಣ್‌ ಶ್ರೀನಿವಾಸ್‌ ಇಬ್ಬರೂ ತಮ್ಮ ಸಹಜ ನಟನೆಯ ಮೂಲಕ ಗಮನಸೆಳೆಯುತ್ತಾರೆ. ತುಂಟ ಹುಡುಗನಾಗಿ ಪ್ರತಾಪ್‌ ನಾರಾಯಣ್‌ ಕೂಡ ಇಷ್ಟವಾಗುತ್ತಾರೆ. ಉತ್ತರ ಕರ್ನಾಟಕದ ಭಾಷೆಯನ್ನು ಒಗ್ಗಿಸಿಕೊಳ್ಳದ ಸೋನುಗೌಡ ಅವರ ಮಾತುಗಳು ಚಿತ್ರದುದ್ದಕ್ಕೂ ಕಿರಿಕಿರಿ ಮಾಡುತ್ತದೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !