ಬುಧವಾರ, ಸೆಪ್ಟೆಂಬರ್ 18, 2019
28 °C

ಪೈಲ್ವಾನ್‌: ಕಿಚ್ಚನ ಕುಸ್ತಿಗೆ ಪ್ರೇಕ್ಷಕರು ಸುಸ್ತು

Published:
Updated:
Prajavani

ಸ್ಯಾಂಡಲ್‌ವುಡ್‌ನ ಬಹು ನಿರೀಕ್ಷಿತ ಪೈಲ್ವಾನ್ ಚಿತ್ರದ ಟ್ರೇಲರ್‌ ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ಇದೇ ಮೊದಲ ಬಾರಿಗೆ ಕುಸ್ತಿಪಟು ಪಾತ್ರದಲ್ಲಿ ಅಭಿನಯಿಸಿರುವ ಅಭಿನಯ ಚಕ್ರವರ್ತಿ ಸುದೀಪ್‌ ಹೊಸ ಅವತಾರ ಅಭಿಮಾನಿಗಳನ್ನು ಆಕರ್ಷಿಸುತ್ತಿದೆ.

ಇದೇ ಮೊದಲ ಬಾರಿಗೆ ಕನ್ನಡ ಚಿತ್ರರಂಗದಲ್ಲಿ ಬಣ್ಣ ಹಚ್ಚಿರುವ ಖ್ಯಾತ ಬಾಲಿವುಡ್ ನಟ ಸುನೀಲ್ ಶೆಟ್ಟಿ ಈ ಚಿತ್ರದಲ್ಲಿ ಕಿಚ್ಚನ ಗುರುವಾಗಿ ಕಾಣಿಸಿಕೊಂಡಿರುವುದು ಟ್ರೇಲರ್‌ನಲ್ಲಿ ಸ್ಪಷ್ಟವಾಗಿದೆ.

ಕುಸ್ತಿಪಟು ಪಾತ್ರಕ್ಕೆ ತಕ್ಕಂತೆ ದೇಹವನ್ನು ಒಗ್ಗಿಸಿರುವ ಸುದೀಪ್ ಅವರ ಶ್ರಮ ಹಲವು ದೃಶ್ಯಗಳಲ್ಲಿ ಎದ್ದು ಕಾಣುತ್ತಿದೆ. ಟ್ರೇಲರ್‌ನ ವಿವಿಧ ದೃಶ್ಯಗಳು, ಸಾಧನೆಗೆ ಪ್ರೇರಿಸುವಂತಹ, ಸಮಾಜಕ್ಕೆ ಸಂದೇಶ ರವಾನಿಸುವ ಕಥೆಯೇ ಚಿತ್ರದ ವಸ್ತು ಎಂದು ಬಿಂಬಿಸುತ್ತಿವೆ.

ಟ್ರೇಲರ್‌ನ ಆರಂಭದಲ್ಲಿ ಬರುವ ‘ಬಲ ಇದೆ ಅಂತೆ ಹೊಡೆಯೋನು ರೌಡಿ. ಬಲವಾದ ಕಾರಣಕ್ಕೆ ಹೊಡೆಯೋನು ಯೋಧ’ ಎಂಬ ಡೈಲಾಗ್‌ ಶಿಳ್ಳೆಹಾಕುವಂತೆ ಮಾಡಿದೆ. ಟ್ರೇಲರ್‌ನ ಬಹುತೇಕ ದೃಶ್ಯಗಳಲ್ಲಿ ಹೊಡೆದಾಟವೇ ಎದ್ದು ಕಾಣುತ್ತಿದ್ದು, ಮಾಸ್‌ ಪ್ರೇಕ್ಷಕರ ಮನ ಗೆಲ್ಲುವುದು ಕಡ್ಡಾಯ ಎಂಬ ಅಭಿಪ್ರಾಯಗಳೂ ಟ್ರೇಲರ್‌ನ ಕಾಮೆಂಟ್‌ಗಳಲ್ಲಿ ವ್ಯಕ್ತವಾಗಿವೆ.

ಕನ್ನಡ ಸೇರಿದಂತೆ ಒಂಬತ್ತು ಭಾಷೆಗಳಲ್ಲಿ ಚಿತ್ರ ಬಿಡುಗಡೆಯಾಗುತ್ತಿದ್ದು, ಬಹುತೇಕ ಭಾಷೆಗಳಲ್ಲಿ ತಮ್ಮ ಪಾತ್ರಕ್ಕೆ ಸುದೀಪ್ ಅವರೇ ಧ್ವನಿ ನೀಡಿದ್ದಾರೆ.

ಈವರೆಗೆ ಸುಮಾರು 20 ಲಕ್ಷ ಜನ ಯೂಟ್ಯೂಬ್‌ನಲ್ಲಿ ಟ್ರೇಲರ್ ವೀಕ್ಷಿಸಿದ್ದು, ಸಮಾರು 10 ಸಾವಿರ ಮಂದಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ತೆಲುಗು ಟ್ರೇಲರ್‌ ಅನ್ನು16 ಲಕ್ಷ ಮಂದಿ, ತಮಿಳು ಟ್ರೇಲರ್ ಅನ್ನು 4 ಲಕ್ಷ ಜನ ವೀಕ್ಷಿಸಿದ್ದಾರೆ.

ಲಹರಿ ಸಂಗೀತ ಸಂಸ್ಥೆ ತಮ್ಮ ಯೂಟ್ಯೂಬ್‌ ವಾಹಿನಿ ಮೂಲಕ ಟ್ರೇಲರ್‌ ಬಿಡುಗಡೆ ಮಾಡಿದೆ.

ಬಾಲಿವುಡ್ ನಟರಾದ ಸುಶಾಂತ್ ಸಿಂಗ್‌, ಕಬೀರ್ ದುಹನ್ ಸಿಂಗ್, ಅಕ್ಷತಾ ಸಿಂಗ್ ಮತ್ತು ಅವಿನಾಶ್, ಶರತ್ ಲೋಹಿತಾಶ್ವ ಚಿತ್ರದ ಪ್ರಮುಖ ತಾರಾಗಣದಲ್ಲಿದ್ದಾರೆ.

ನಿರ್ದೇಶಕ ಕೃಷ್ಣ ಚಿತ್ರಕ್ಕ ಆ್ಯಕ್ಷನ್ ಕಟ್‌, ಹೇಳಿದ್ದು, ಸ್ವಪ್ನ ಕೃಷ್ಣ ಅವರು ಹಣ ಸುರಿದಿದ್ದಾರೆ. ಅರ್ಜುನ್ ಜನ್ಯ ಸಂಗೀತ ನೀಡಿದ್ದು, ವಿ. ನಾಗೇಂದ್ರ ಪ್ರಸಾದ್ ಹಾಡುಗಳನ್ನು ಬರೆದಿದ್ದಾರೆ. ಚಿತ್ರ ಸೆಪ್ಟೆಂಬರ್ 12ಕ್ಕೆ ತೆರೆ ಕಾಣಲಿದೆ.

Post Comments (+)