ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂಚತಂತ್ರ: ರಂಗಪ್ಪ ಸಿಮೆಂಟು ಮುಕ್ಕಿದ ಪ್ರಸಂಗ

ಸಿನಿ ಕಾದಂಬರಿ
Last Updated 1 ನವೆಂಬರ್ 2018, 19:46 IST
ಅಕ್ಷರ ಗಾತ್ರ
ADVERTISEMENT

ನಾನು ದಿನೇಶ. ಲಾಯರು. ಈಗ ನಂಗೆ ಇಪ್ಪತ್ತೆಂಟು ವರ್ಷ. ಅಥವಾ ಹಾಗಂದ್ಕಳಣ. ಯಾಕೆಂದ್ರೆ ನಂಗೆ ಶಾಲೆಗೆ ಹಚ್ಚುವಾಗ ನಮ್ ಬಾಂಡ್ ಹೇಳಿದ ಡೇಟ್ ಆಫ್ ಬರ್ತು ಬರೀ ಸುಳ್ಳು. ಅದು ಸುಳ್ಳು ಅಂತ ಗೊತ್ತು, ನಿಜ ಯಾವ್ದು ಅಂತ ನಂಗೂ ಗೊತ್ತಿಲ್ಲ.

ಬಸ್ಸಲ್ಲಿ ಕಂಡಕ್ಟರ್ ಅಷ್ಟೇ ಅಲ್ಲ, ಬದುಕೂ ಪದೆ ಪದೆ ಚೇಂಜ್ ಕೇಳತ್ತೆ. ಆದ್ರೆ ವ್ಯತ್ಯಾಸ ಒಂದೇ. ಬಸ್ಸಲ್ಲಿ ನಾವು ಕಂಡಕ್ಟರಿಗೆ ಚೇಂಜ್‌ ಕೊಡ್ತೀವಿ; ಬದುಕು ನಮಗೆ ಚೇಂಜ್ ಕೊಡತ್ತೆ.ಬದಲಾವಣೆ ಅಂದ್ರೆ ಏನು ಅಂತ ಯಾರಾದ್ರೂ ಕೇಳಿದ್ರೆ ನನ್ನ ಬದುಕನ್ನೇ ತೋರಿಸ್ತೀನಿ. ಜತೆಗೆ ನನ್ ಜೊತೆಗಿರೋ ಮತ್ತೈದು ಕೋತ್ ನನ್ಮಕ್ಳ ಪಾಸ್‍ಪೋರ್ಟ್ ಸೈಜ್ ಫೋಟೊನೂ ಜೊತೆಗಿಡ್ತೀನಿ. ಹಾ... ಇಷ್ಟಕ್ಕೆ ಮುಗಿಯಲ್ಲ. ನಮ್ ಗ್ಯಾರೇಜು ಎದ್ರುಗಿನ ರಂಗಪ್ಪನ ಕಾಂಪ್ಲೆಕ್ಸ್ ಇದ್ಯಲ್ಲ... ಅದ್ರ ಎದ್ರು ಅಂಡು ಕೆರ್ಕೋತಾ, ಡೊಳ್ಳೊಟ್ಟೆ ಅಲ್ಲಾಡಿಸ್ಕತಾ, ಮೂಗೊಳಗೆ ಕೈ ಹಾಕ್ಕೊಳ್ತಾ, ಸೊಂಟದಿಂದ ಜಾರಿಬಿದ್ ಲುಂಗಿನ ಯಬಡಾಸನ ಹಾಗೆ ತಲೆಗೆ ಕಟ್ಟಿಕೊಳ್ತಾ, ದಾರೀಲಿ ಹೋಗೊ ಹೆಂಗುಸ್ರ ಹಿಂದ್ಬದಿಯಿಂದ ನೋಡಿ ಜೊಲ್ಲುನುಂಗ್ತಾ ನಿಂತ್ಕೊಂಡಿರ್ತಾರಲಾ, ಆ ಮುದುಕರನ್ನೂ ನೀವು ನೋಡ್ಲೇ ಬೇಕು.

ಈಗಿನ ಮುದುಕರೇ ಇಪ್ಪತ್ತು ವರ್ಷಗಳ ಹಿಂದೆ ಯುವಕರಾಗಿದ್ರು ಅಂತ ಹೇಳಿದ್ರೆ ಅದು ಬದಲಾವಣೆಯೇ ಅಲ್ವಾ? ಹಾಗೆಯೇ ಈಗ ಯುವಕರಾಗಿರುವ ಇತ್ಲಾಕಡೆಯ ನಾವೂ ಆಗ ಚಿಳ್ಳೆ ಪಿಳ್ಳೆಗಳಾಗಿದ್ವಿ. ಈಗ ಇತ್ಲಾಗಿನ ನಮ್ಮ ಹುಡುಗರು ಮತ್ತು ಅತ್ಲಾಗಿನ ಪರಮವೈರಿ ಮುದುಕರ ಮಧ್ಯದ ಖಾಲಿ ಜಾಗದಲ್ಲಿ ಕಾಲಕ್ರಮೇಣ ಕಳ್ದು ಹೋದ ಇಪ್ಪತ್ತು ವರ್ಷದಲ್ಲಿ ಆಗಿದ್ದು ಸಣ್ಣ ಸುಮಾರಿನ ಜೀವ ವಿಕಾಸ ಏನಲ್ಲ. ಜೀವ ವಿಕಾಸಕ್ಕೆ ಜ್ವಲಂತ ಪುರಾವೆಯಾಗಿ ಆ ರಂಗಪ್ಪನ ಮಗಳು ಸಾಹಿತ್ಯಾಳನ್ನೋ ನೋಡ್ಬೋದು...

ಸ್ವಲ್ಪ ತಡ್ಕಳಿ... ಚಂದಿದಾಳೆ ಅಂತ ಡೈರೆಕ್ಟು ನೋಡ್ಬೇಡಿ... ನಮ್ ಹುಡುಗ ಕಾರ್ತೀಕ್‍ಗೆ ಸಿಟ್ಟು ಬರ್ತದೆ.

ಹಾಂ, ನಾನು ಲಾಯರ್ ಅಲ್ವಾ, ಮಾತು ಹೆಚ್ಚು. ಸುತ್ತಿ ಬಳಸಿ ಮಾತಾಡಿ ಕನ್‍ಫ್ಯೂಸ್ ಮಾಡೋದು ಅಭ್ಯಾಸ. ಆದ್ರೆ ಈ ಎಲ್ಲದಕ್ಕೂ ಖರೆ ಖರೆ ಸಂಬಂಧ ಇದೆ... ಅದೇನು ಸಂಬಂಧ ಅಂತ ಗೊತ್ತಾಗ್ಬೇಕಾದ್ರೆ ಈ ಕಥೆ ಕೇಳ್ಬೇಕು.

ಈ ಕಥೆ ಶುರುವಾಗಿ ಇಪ್ಪತ್ತು ವರ್ಷ ಆಯ್ತು. ಅಲ್ಲಲ್ಲ... ಕಥೆ ಅದ್ಕೂ ಮೊದಲಿಂದಲೂ ನಡೀತಿತ್ತು. ಬಹುಶಃ ಯಾವಾಗಲೂ ಇತ್ತು. ನಾನು ನೋಡ್ಲಿಕ್ಕೆ ಶುರುಮಾಡಿದ್ದು ಇಪ್ಪತ್ತು ವರ್ಷಗಳ ಹಿಂದೆ. ನಾನೀಗ ನಿಮಗೆ ಕಥೆ ಹೇಳ್ತಿದ್ದೇನೆ ಅಂದ ಕೂಡ್ಲೆ ಅದು ಈಗಾಗ್ಲೇ ಮುಗ್ದು ಹೋಗಿದೆ ಅಂದ್ಕೋಬೇಡಿ. ಕೋರ್ಟ್‌ನಲ್ಲಿನ ಸಿವಿಲ್ ಕೇಸ್ ಇದ್ದಂಗೆ ಇದು. ಮುಗ್ಯೂದೇ ಇಲ್ಲ. ಹಾ... ಈ ಕಥೆಯೂ ಒಂದು ಲ್ಯಾಂಡ್ ಲಿಟಿಗೇಶನ್ ಕೇಸಿನ ಮೇಲೆಯೇ ಇದೆ... ಅದನ್ನು ಆಮೇಲೆ ಹೇಳ್ತೇನೆ. ಅದ್ಕಿಂತ ಮುಖ್ಯ ಏನು ಗೊತ್ತಾ? ನಂಗೂ ಈ ಕಥೇಲೊಂದು ಪಾರ್ಟಿದೆ... ಅಂದ್ರೆ ನನ್ನ ಪಾರ್ಟು ಬಂದ ಕೂಡ್ಲೇ ನಾನು ಕಥೆಯ ಒಳಗೆ ಜಿಗಿದು ಬಿಡ್ತೇನೆ. ಈಗೇನು ಕಥೆಯ ಹೊರಗಿದ್ದೀನಾ? ಇಲ್ಲ ಅನ್ಸುತ್ತೆ. ನಾನು ಕಥೆಯೊಳಗೆ ಹೋದರೂ ಕಥೆ ಬರ್ತಾನೇ ಇರ್ತದೆ. ಅದ್ಯಾರೋ ಹೇಳಿದಾರಲಾ... ಷೋ ಮಸ್ಟ್ ಗೋ ಆನ್ ಅಂತ... ಹಂಗೆ.

ಎಲ್ಲಿಂದ ಶುರುಮಾಡೂದು ಈ ಕಥೇನ? ಆ ದುಬಾಕು ರಂಗಪ್ಪನಿಗೆ, ಬಾಂಡ್ ಕುಂಡೆ ಮೇಲೆ ಬಾರಿಸಿದಲ್ಲಿಂದ್ಲೇ ಶುರು ಮಾಡಿದ್ರೆ ಸರಿ. ಹೆಂಗ್ ಬಿದ್ದಿತ್ತು ಅಂದ್ರೆ... ನಂಗೆ ಈಗ ನೆನಪಿಸಿಕೊಂಡ್ರೂ ಕಿಸಕ್ಕನೆ ನಗು ಬರ್ತದೆ. ನಾನು ಮೊದಲು ಈ ಜಾಗಕ್ಕೆ ಬಂದಿದ್ದೂ ಆಗ್ಲೇ ಅಲ್ವಾ? ತಡೀರಿ, ಅದ್ಕಿಂತ ಚೂರೇಚೂರು ಮೊದಲಿಂದಲೇ ಶುರು ಮಾಡ್ತೀನಿ.

ಸಿಟಿ ರೈಲ್ವೆ ನಿಲ್ದಾಣದ ಪಕ್ಕದ ಕೊಂಪೆಯಲ್ಲಿ ಕರ್ಚೀಫಿಗೆ ಸೊಲ್ಯೂಷನ್ ಮೆತ್ಕಂಡು ಮೂಗಿಗೆ ಹಿಡ್ಕಂಡು ಸೇದ್ತಾ ನಿಂತಿದ್ದ ನನ್ನ ಎದುರಲ್ಲಿ ಬಾಂಡ್ ನಿಂತಾಗ ಪೊಲೀಸೇ ಬಂದ್ರೇನೋ ಅಂತ ಹೆದರಿ ಓಡ್ಲಿಕ್ಕೆ ಶುರುಮಾಡಿದ್ದೆ. ಆದ್ರೆ ಎಲ್ಲಿ ಓಡೋದು, ಅಷ್ಟೊತ್ತಿಗಾಗ್ಲೇ ಸೊಲ್ಯೂಶನ್ ಅಮಲು ನೆತ್ತಿಗೆ ಹತ್ತಿ ರೈಲುಗಳೆಲ್ಲ ಹಳಿ ಬಿಟ್ಟು ಫ್ಲೈ ಓವರ್ ಮೇಲೆ ಓಡ್ಲಿಕ್ಕೆ ಶುರು ಮಾಡಿದ್ವು. ನಾ ಓಡ್ತಿದ್ದೀನಿ ಅಂತ್ಲೇ ಅಂದ್ಕೊಂಡಿದ್ದೆ. ಆದ್ರೆ ನಿಂತಲ್ಲೇ ನಿತ್ಕಂಡಿದ್ದೆ. ಕೈಯಲ್ಲಿನ ಕರ್ಚೀಪು ಕಿತ್ತುಕೊಂಡ ಬಾಂಡ್ ಹೇಳಿದ ಮಾತು ಇನ್ನೂ ಕಿವಿಯಲ್ಲಿ ಗುಂಯ್ಗುಡ್ತಿದೆ. “ಹೇ ಬಾಯ್, ನೀನು ಅಮಲನ್ನು ತಿನ್ಬೇಕು. ಅಮಲಿಗೇ ನಿನ್ನ ತಿನ್ಲಿಕ್ಕೆ ಬಿಡಬಾರ್ದು. ಅಮಲು ನಿನ್ನ ತಿಂದ್ಬಿಟ್ರೆ, ಪೊಲೀಸರಿಂದ ತಪ್ಪಿಸಿಕೊಳ್ಳಲಿಕ್ಕೆ ಕಷ್ಟ ಆಗತ್ತೆ’’ ಅಂತ ಜೋರು ನಕ್ಕುಬಿಟ್ಟಿದ್ದ. ಹಂಗೇ ನನ್ನ ಎತ್ತಾಕ್ಕೊಂಡು ಬಂದು ಜೀಪಲ್ಲಿ ಕೂಡಿಸಿದ್ದ. ಅಲ್ಲಿ ಮತ್ತಷ್ಟು ಜನ ನಂದೇ ವಯಸ್ಸಿನ ಮಕ್ಳಿದ್ರು ಅಂತ ಆಗ್ಲೇ ಲೆಕ್ಕ ಹಾಕ್ಲಿಕ್ಕೆ ಆಗ್ಲೇ ಇಲ್ಲ. ಗುಂಗೆಲ್ಲ ಕೊಂಚ ಇಳಿದು ಸುತ್ತಲಿನ ಚರಾಚರಗಳೆಲ್ಲ ಅವುಗಳು ಇರುವ ಗಾತ್ರ ಆಕಾರಕ್ಕೆ ಒಂದೊಂದೇ ಆಗಿ ಕಾಣುವಷ್ಟರಲ್ಲಿ ಬಾಂಡ್ ಜೀಪು ಈ ಜಾಗಕ್ಕೆ ಬಂದು ಮುಟ್ಟಿತ್ತು.

ಅರಸು ಪಾಳ್ಯ, ಬೆಂಗಳೂರು ಗ್ರಾಮಾಂತರ ಜಿಲ್ಲೆ.

ಇಪ್ಪತ್ತು ವರ್ಷದ ಹಿಂದಿನದ್ದು ಎಷ್ಟು ಹೂಬೇಹೂಬ್ ನೆನಪಿದೆ ನಂಗೆ. ಅಥವಾ ನಿಮಗೆ ಹೇಳುವ ಉಮೇದಿನಲ್ಲಿ ಒಂದಿಷ್ಟು ಖಾರ ಮಸಾಲೆ ಸೇರಿಸ್ಕೋತಿದೀನಾ ಅಂತ... ಸೇರಿದ್ರೆ ಸೇರ್ಲಿ ಬಿಡಿ... ಮುಂದಿನ ಪ್ರಸಂಗದಲ್ಲಿ ಬೇಕಂತ್ಲೇ ಒಂದಿಷ್ಟು ಹೆಚ್ಚು ಸೇರಿಸ್ತೀನಿ, ಯಾಕಂದ್ರೆ ಆ ಪ್ರಸಂಗವೇ ಹಂಗಿದೆ. ಆಗ ರಂಗಪ್ಪ ಈಗಿನಷ್ಟು ಹಣ್ಣಾಗಿರ್ಲಿಲ್ಲ. ಹೊಟ್ಟೆ ಹೆಚ್ಚೂಕಮ್ಮಿ ಇಷ್ಟೇ ಇತ್ತು ಅನ್ಸತ್ತೆ. ಅಥವಾ ಚೂರೇ ಚೂರು ಕಮ್ಮಿ ಇತ್ತೇನೋ. ಆದ್ರೆ ಧ್ವನಿ ಇನ್ನೂ ಕೀರಲು ಇತ್ತು. ನಾನ್ ಕಥೆ ಹೇಳೂದು ಹಿಂಗೇ... ಸ್ವಲ್ಪ ಸುತ್ತಿ ಸುತ್ತಿ ವಿಷಯಕ್ಕೆ ಬರೂದು. ತಡ್ಕಳಿ ಹೇಳ್ತೇನೆ.

ಅದು ಇದೇ ಜಾಗ. ಇದು ಅಂದ್ರೆ ಈಗಿದ್ದಂಗೇನೂ ಇರ್ಲಿಲ್ಲ. ಅಲಾ... ಇಡೀ ಬೆಂಗಳೂರೇ ಆಗ ಈಗಿದ್ದಂಗೆ ಇರ್ಲಿಲ್ಲ ಬಿಡಿ. ಖಾಲಿ ಜಾಗ ಆಗಿತ್ತಿದು. ಸುತ್ತಮುತ್ತಾನೂ ಖಾಲಿ ಖಾಲಿ... ಈ ರಂಗಪ್ಪ ಒಂದೆಡೆ ಸಿಮೆಂಟು ಚೀಲ ರಾಶಿ ಹಾಕ್ಸಿ ಆಳುಗಳ ಕೈಲಿ ಹೊರಿಸ್ತಿದ್ದ. ಮತ್ತೊಂದ್ಕಡೆ ಕನ್‍ಸ್ಟ್ರಕ್ಷನ್ ಕೆಲಸ ನಡೀತಿತ್ತು. ಬಾಂಡ್ ನಮ್ಮೆಲ್ಲ ಎತ್ತಾಕ್ಕಂಡು ಬಂದು ಜೀಪ್ ಅಲ್ಲಿ... ಆ ತುದಿಯಲ್ಲಿ ನಿಲ್ಲಿಸಿದ. ಅವ ಯಾವತ್ತೂ ಜೀಪು ನೆಟ್ಟಗೆ ಇಳ್ದಿದ್ದೇ ಇಲ್ಲ. ಹಾರಿಯೇ ಇಳಿಯೂದು.

ಇಳಿದ ನೋಡಿ... ಎಂಥ ಆಳು ಅವ...

‘ಈ ಸ್ವತ್ತು ರಂಗಪ್ಪ ಮತ್ತು ಕುಟುಂಬಕ್ಕೆ ಸೇರಿದ್ದು, ಅತಿಕ್ರಮ ಪ್ರವೇಶ ನಿಷೇಧಿಸಿದೆ’ ಅಂತೊಂದು ಬೋರ್ಡ್ ಇತ್ತು. ಅದನ್ನು ಜಾಡಿಸಿ ಒದ್ದ. ಅದು ಮುರಕೊಂಡು ಬಿತ್ತು. ಅದೇ ಬೋರ್ಡ್ ಕೈಗೆತ್ತಿಕೊಂಡು ಅಷ್ಟೇ ಜೋರಾಗಿ ಮುಂದೆ ನಡೆದ. ನಾವು ಜೀಪಿಂದಿಳಿದು ಓಡ್ತಾ ಓಡ್ತಾನೇ ಅವನ ಹಿಂದೆ ಹೋದೆವು. ಅವ ನಡಿಯೋದಕ್ಕೂ ನಾವು ದಮ್ಮುಗಟ್ಟಿಕೊಂಡು ಓಡುವುದಕ್ಕೂ ಸಮಸಮ.,. ಆಗ ನನ್ನ ಜತೆಗೆ ಈ ಕಾರ್ತಿಕ್, ‘ವಿ4’ಗಳು ಎಲ್ಲರೂ ಇದ್ರು. ಜತೆಗೆ ಬಾಂಡ್‍ನ ತಂಗಿ ಅರ್ಥಳೂ ಇದ್ಲು. ಆದ್ರೆ ನಾವ್ಯಾರೂ ಒಬ್ಬರಿಗೊಬ್ರು ಪರಿಚಯ ಇರಲಿಲ್ಲ. ಅವರ ಯಾರ ಮುಖವೂ ನನಗೆ ನೆನಪಿಲ್ಲ. ಕಾರ್ತೀಕ್‍ನ ಕೈಲೊಂದು ಆಟಿಕೆ ಕಾರ್ ಇತ್ತು ಅನ್ನೋದು ನೆನಪಿದೆ. ಅರ್ಥ ಹಾಗೆ ಬಾಂಡ್‍ನ ಹಿಂದೆ ಓಡ್ತಾ ಇರೋವಾಗ್ಲೇ ಬಾಯಲ್ಲಿನ ಚ್ಯೂಯಿಂಗ್ ಗಮ್ ಗುಳ್ಳೆ ಮಾಡಿ ಪಡ್ ಅಂತ ಒಡೆದಿದ್ದು, ತುಟಿಗೆ ಅಂಟಿಸಿಕೊಂಡಿದ್ದ ಚ್ಯೂಯಿಂಗ್ ಗಮ್ ಅನ್ನು ನಾಲಿಗೆಯಲ್ಲಿ ಸವರಿ ಬಾಯಿಗೆ ಸೇರಿಸಿಕೊಂಡಿದ್ದು ಪಕ್ಕಾ ನೆನಪಿದೆ. ಅಷ್ಟು ಚೋಟು ಆಗಿದ್ದಾಗಿಂದ್ಲೂ ಅವಳದು ಸ್ಟೈಲೇ ಸ್ಟೈಲು.

ಅರ್ಥ ಬಾಯಿಯಲ್ಲಿನ ಚ್ಯೂಯಿಂಗ್ ಗಮ್ ಗುಳ್ಳೆ ಒಡೆಯುವುದಕ್ಕೂ ಬಾಂಡ್ ತನ್ನ ಕೈಲಿದ್ದ ಬೋರ್ಡ್ ಅನ್ನು ಬೀಸಿ ರಂಗಪ್ಪನ ಕುಂಡೆಗೆ ಬಾರಿಸುವುದಕ್ಕೂ ಸರಿಸರಿಯಾಗಿತ್ತು. ಅದೂ ಎಂಥ ಸೌಂಡು ಬಂದಿತ್ತು. ಬಡ್ ಅಂತ. ಹಂಗಂಗೆ ಮುಂದೆ ಮಗುಚಿ ಬಿದ್ದ ರಂಗಪ್ಪ. ಬಿದ್ದ ಮೇಲೂ ಸತ್ತ ಇಲಿಗೆ ಎತ್ತೆತ್ತಿ ಬಾರಿಸಿದಂತೆ “ಬೋರ್ಡ್ ಹಾಕ್ಕೊಂಡ್ ಕೆಲ್ಸ ಮಾಡ್ತಿದಿಯಾ... ಈಡಿಯಟ್... ಲ್ಯಾಂಡ್ ಏನ್ ನಿಮಪ್ಪಂದಾ...?’’ ಎನ್ನುತ್ತಾ ಮತ್ತೆರಡು ಬಾರಿಸಿದ. ಒಂದೊಂದು ಹೊಡೆತ ಬಿದ್ದಾಗಲೂ ರಂಗಪ್ಪ ಕುಯ್ಯೋ ಮರ‍್ರೋ ಅಂದಿದ್ದನ್ನು ನೋಡ್ಬೇಕಿತ್ತು. ರಂಗಪ್ಪನಿಗೆ ಹೊಡೆತ ಬಿದ್ದಿದ್ದೇ ಬಿದ್ದಿದ್ದು, ಕೂಲಿ ಮಾಡೋರೆಲ್ಲ ಒಂದೇ ಕ್ಷಣ ಕೈಲಿ ಹಿಡ್ಕಂಡಿದ್ದೆಲ್ಲ ಅಲ್ಲಲ್ಲೇ ಬಿಟ್ಟು ಎಸ್ಕೇಪ್.!

ಇತ್ತ ತಿರುಗಿ ನಮ್ಮತ್ತ ನೋಡಿದ ಬಾಂಡ್ ‘ಬರ‍್ರೋ... ಬರ‍್ರೋ ಇಲ್ಲಿ...’ ಎಂದು ಕರೆದ. ಅವನ ಮುಖದಲ್ಲಿ ಜಗಳ ಮುಗಿಸಿದ ಯಾವ ಉದ್ವಿಗ್ನತೆಯೂ ಇರಲಿಲ್ಲ. ಈಗಷ್ಟೇ ಟೀ ಕುಡಿದು ಹೋಟೆಲಿಂದ ಹೊರಬಂದವನಷ್ಟೇ ಸಹಜವಾಗಿ ನಮ್ಮ ಕರೆದ. ನಾವು ಒಬ್ಬರಿಗಿಂತ ಒಬ್ಬರು ಮುಂದಾಗಿ ಓಡಿ ಹೋದ್ವಿ. “ಹಿಡ್ಕಳ್ರೋ ಇದ್ನ...’’ ಎಂದು ಬೋರ್ಡ್ ತೋರ್ಸಿದ. ಎಳೆದಾಡ್ಕಂಡು ಬೋರ್ಡ್ ಅನ್ನು ಹಿಡ್ಕಂಡ್ವಿ. ಹಾ.. ನಾವಷ್ಟೇ, ಅರ್ಥ ದೂರದಲ್ಲೇ ಬಬಲ್‍ಗಮ್ ಅಗಿಯುತ್ತ ನಿರ್ಲಿಪ್ತವಾಗಿ ನಿಂತು ನೋಡ್ತಿದ್ಲು. ಪಕ್ಕದಲ್ಲೇ ಇದ್ದ ಏಷ್ಯನ್ ಪೇಂಟ್ ಡಬ್ಬಕ್ಕೆ ಒಂದು ಕಲ್ಲು ಎತ್ತಾಕಿ ಒಡೆದ. ನಂತ್ರ ಇಡೀ ಬೋರ್ಡಿಗೆ ಬಣ್ಣ ಬಳಿದ. ಅದರ ಮೇಲೆ ಪಕ್ಕದಲ್ಲಿದ್ದ ಕಡ್ಡಿ ತಗೊಂಡು 'APPAYYA BOND PROPERTY' ಅಂತ ಬರೆದು ‘ಈಗ ಸರಿಯಾಯ್ತು’ ಅಂತ ನಕ್ಕ. ನಾವೆಲ್ಲ ಸೇರಿ ಮೊದಲು ಇದ್ದ ಜಾಗದಲ್ಲೇ ಬೋರ್ಡ್ ಹುಗಿದ್ವಿ. ಅದುವರೆಗೆ ಸುಮ್ನೆ ನೋಡ್ತಿದ್ದ ಅರ್ಥ, ಅಲ್ಲೇ ಇದ್ದ ಸಿಮೆಂಟಿಗೆ, ಮರಳು ಕಲೆಸಿ ನೀರು ಹಾಕಿ ಬುಡಕ್ಕೆ ತಂದು ಸುರಿದ್ಲು. ಅದನ್ನು ನೋಡಿ “ಹೇ.. ಗುಡ್ ಗುಡ್’ ಅಂತ ಅವಳ ಬೆನ್ನು ತಟ್ಟಿದ. ಅವಳು ಅವನ ವಿಚಿತ್ರ ದೊಗಲೆ ಪ್ಯಾಂಟಿಗೆ ಕೈ ಹಾಕಿ ಇನ್ನೊಂದು ಬಬಲ್‍ಗಮ್ ತಗೊಂಡು ಬಾಯಿಗೆ ಹಾಕ್ಕೊಂಡ್ಲು. ನಾವು ನೋಡ್ತಾನೇ ನಿಂತಿದ್ವಿ.

ಅಷ್ಟೊತ್ತಿಗೆ ಮತ್ತೆ ರಂಗಪ್ಪನ ಲ್ಯಾಂಬ್ರೆಟಾ ಶಬ್ದ ಕೇಳ್ತು. ಅವನ ಹಿಂದೆ ಬುಲೆಟ್‍ನಲ್ಲಿ ಪೊಲೀಸು... ಪೊಲೀಸು ನೋಡಿ ನಂಗಂತೂ ಎದೆ ಧಸ್ ಅಂತು ಓಡ್ಲಿಕ್ಕೆ ಶುರು ಮಾಡಿದ್ದೆ. ಈ ಅರ್ಥ ಹಿಂದಿಂದ ಕಾಲರ್ ಹಿಡ್ದು ನಿಲ್ಸಿರದಿದ್ರೆ ಈಗ ಈವತ್ತು ನಾ ಎಲ್ಲಿರ್ತಿದ್ನೋ ನಂಗೇ ಗೊತ್ತಿಲ್ಲ.

“ಲೇ ಬಾಂಡು... ಹಲ್ಲೆ ಹಲ್ಲೆ ಮಾಡಿದೀಯಾ.... ಅಮಾಯಕನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದೀಯಾ... ಬಾ ಈಗ... ಸಾಹೇಬ್ರು ಬಂದಿದಾರೆ. ಅವ್ರ ಮುಂದೆ ತೋರ್ಸು ನಿನ್ನ ಪೌರುಷ...’

ಬಾಂಡ್ ಅವನ ಮಾತಿಗೂ ತನಗೂ ಸಂಬಂಧವೇ ಇಲ್ಲ ಎನ್ನುವಂತೆ ಸಿಗಾರ್ ಹೊಗೆಯನ್ನೊಮ್ಮೆ ಉಗುಳಿ ಎದುರಿಗೆ ಹೋಗಿ ನಿಂತ. ಪೊಲೀಸ್ ಕೊಂಚ ಗತ್ತಿನಿಂದ್ಲೇ “ಯಾಕ್ರೀ ಹೊಡ್ದಿದ್ದು?. ಕಂಪ್ಲೇಂಟ್ ಮಾಡಿದಾರೆ’’ ಅಂದ. ಬಾಂಡ್ ತುಂಬಾ ಕೂಲ್ ಆಗಿಯೇ “ನಮ್ ಜಾಗ ಇದು. ಇಲ್ಲಿ ಬಂದು ಹೇಳ್ದೆ ಕೇಳ್ದೆ ಕೆಲಸ ಮಾಡ್ತಿದ್ದ. ಅದ್ಕೆ ಎರಡ್ ಬಿಟ್ಟೆ’’ ಎಂದ. ಬಾಂಡ್ ನನಗೆ ಈ ಲೋಕದ ಮನುಷ್ಯನೇ ಅಲ್ಲ, ತುಂಬಾ ದೊಡ್ಡ ಮನುಷ್ಯ ಅನಿಸಿಬಿಟ್ಟಿತ್ತು.

ರಂಗಪ್ಪ ಮತ್ತೆ ಅರಚಾಟ ಶುರು ಮಾಡಿದ್ದ. “ಇದು ನಂದೇ ಜಾಗ. ಲೀಗಲ್ಲು. ನೋಡಿ ನೋಡಿ’’ ಎನ್ನುತ್ತಾ ಲ್ಯಾಂಬ್ರೆಟಾ ಸೀಟಿನ ಅಡಿಗಿದ್ದ ಕಾಗದ ಪತ್ರ ತಂದು ಪೊಲೀಸರ ಕೈಗೆ ಹಿಡಿದ. ಅವರು ಅದನ್ನೊಮ್ಮೆ ನೋಡಿ “ಏನ್ ಹೇಳ್ತೀರಿ’’ ಎನ್ನುವ ಹಾಗೆ ಬಾಂಡ್ ಕಡೆ ನೋಡಿದ್ರು. ಬಾಂಡ್ ಮೊದಲಿನಷ್ಟೇ ಕೂಲಾಗಿ ‘‘ನಮ್ಮಪ್ಪ ಈ ಜಾಗವನ್ನು ಯಾರಿಗೂ ಮಾರಿಲ್ಲ. ಇದು ನಮ್ದೇ. ಅವೆಲ್ಲ ಒರಿಜಿನಲ್ ಕಾಗದಪತ್ರಗಳಲ್ಲ. ಆ ರಂಗಪ್ಪ ಪಕ್ಕಾ ಫ್ರಾಡು’’ ಎನ್ನುತ್ತ ಎತ್ತಲೋ ನೋಡಿ ಸಿಗಾರ್ ಹೊಗೆ ಬಿಟ್ಟ. ಎಲ್ಲೆಲ್ಲಿ ಏನೇನು ಹೊತ್ಕಂಡಂಗಾಯ್ತೋ ರಂಗಪ್ಪಂಗೆ. “ಏನ್ ಫ್ರಾಡು? ಯಾರು ಫ್ರಾಡು? ನಿನ್ನಪ್ಪನೇ ಸ್ವತಃ ನಂಗೆ ಬರ್ಕೊಟ್ಟಿರದು ಇಲ್ಲಿ ಇಲ್ಲಿ ಸೈನಿದೆ ನೋಡು... ಸಾರ್, ಈ ನನ್ಮಗನಿಗೆ ಮದ್ವೆ ಇಲ್ಲ, ಹೆಂಡ್ರಿಲ್ಲ... ಈ ಮಕ್ಕಳೆಲ್ಲ ಎಲ್ಲಿಂದ ಎತ್ತಾಕಂಡ್ ಬಂದ ಕೇಳಿ ಸಾರ್. ಮಕ್ಕಳ ಕಳ್ಳ ಸರ್, ಇವ್ನು. ಕಿಡ್ನಿ ಮಾರ್ತಾನೆ ಸರ್ ಇವ್ನು. ಕೇಸು ಹಾಕಿ ಸಾರ್’ ಎಂದು ಬಡಬಡಿಸತೊಡಗಿದ.

ಅದುವರೆಗೆ ನಾವು ನೋಡ್ತಾನೇ ನಿಂತಿದ್ವಿ. ಅರ್ಥ ನಮ್ಮ ಮಧ್ಯ ಬಂದು, “ಬನ್ರೋ’’ ಎಂದು ಹೇಳಿ ಮುಂದೆ ನಡೆದ್ಲು. ನಾವು ಅವಳ ಹಿಂದೆ... ಸೀದಾ ಹೋಗಿ ರಂಗಪ್ಪನ ಕಾಲನ್ನು ಹಿಡ್ಕಂಡು ದಬದಬ ಗುದ್ದಲು ಶುರು ಮಾಡಿದ್ಲು. ಕಾರ್ತಿಕ್ ಮತ್ತೆ ‘ವಿ4’ ಲುಂಗಿ ಎಳೆಯತೊಡಗಿದ್ರು.

‘‘ನಿಮ್ಮಪ್ಪ ಎಲ್ಲಿ? ಕರ್ಕಬನ್ನಿ’’ ಎಂದ ಪೊಲೀಸ್.

“ಅಪ್ಪ ಎಲ್ಲಿದಾನೋ ಗೊತ್ತಿಲ್ಲ’’ ಎಂದ ಬಾಂಡ್.

ಇನ್ನೂ ಏನೋ ಹೇಳಬೇಕು, ಅಷ್ಟರಲ್ಲೇ ಮತ್ತೆ ರಂಗಪ್ಪ ತನ್ನ ಕಾಲ ಸುತ್ತುವರಿದಿದ್ದ ಮಕ್ಕಳನೆಲ್ಲ ಒಂದ್ಸಲ ಕೊಡವಿಕೊಂಡು “ಎಲ್ಲಿಂದ ಕರ್ಕಬರ್ತಾನೆ ಸಾರ್. ಹತ್ತು ವರ್ಷ ಆಯ್ತು... ನಾಪತ್ತೆ. ಎಲ್ಲೋಗವ್ನೋ ಯಾರಿಗೊತ್ತು? ಈ ಜಾಗ ನಂಗೆ ಕೊಟ್ಟು ಹೋದ. ಇವ್ನೂ ಕಾಣೆಯಾಗಿ ನಾಲ್ಕು ವರ್ಷ ಆಗಿತ್ತು. ಈಗ ಪ್ರತ್ಯಕ್ಸ ಆಗ್ತಿದ್ದಾನೆ. ದೊಡ್ಡ ಜೇಮ್ಸು ಬಾಂಡಿನಂಗೆ’ ಎಂದು ಅಸಹ್ಯವಾಗಿ ನಕ್ಕ. ಬಾಂಡ್‍ಗೆ ಈಗ ಕೋಪ ಬಂತು “ಯೂ... ಬ್ಲಡೀ...’ ಎನ್ನುತ್ತ ಬಾಯಲ್ಲಿದ್ದ ಸಿಗಾರ್ ಉಗುಳಿ ರಂಗಪ್ಪನತ್ತ ನುಗ್ಗಿದ. ಪೊಲೀಸ್ ಅಡ್ಡಬರದಿದ್ರೆ ಅವತ್ತೇ ಅದೇ ಜಾಗದಲ್ಲೇ ರಂಗಪ್ಪನ ಗೋರಿ ಕಟ್ಟಬೇಕಾಗ್ತಿತ್ತೇನೋ. “ರೀ.. ಹಂಗೆಲ್ಲ ಹೊಡೆಯುವ ಹಾಗಿಲ್ಲ. ಕೇಸ್ ಆಗತ್ತೆ’’ ಎಂದವನೇ ಧ್ವನಿ ಇನ್ನಷ್ಟು ಎತ್ತರಿಸಿ, “ನೋಡಿ, ಇಬ್ರು ಕೇಳಿಸ್ಕೊಳ್ಳಿ.. ಇದು ಸಿವಿಲ್ ಕೇಸ್...ಕೋರ್ಟಲ್ಲಿ ಬಗೆ ಹರಿಸ್ಕೊಳ್ಳಿ...’ ಎಂದ. ಬಾಂಡ್ ನಿಂತು ತುಸು ಯೋಚಿಸಿ ಹೂಂ ಗುಟ್ಟಿದ. ಪೊಲೀಸ್ ನಮ್ಮತ್ತ ತಿರುಗಿ
“ಇವರು’’ ಎಂದ ಪ್ರಶ್ನಾರ್ಥಕವಾಗಿ. ಬಾಂಡ್ ಮತ್ತೊಂದು ಸಿಗಾರ್ ಹಚ್ಚಿಕೊಳ್ತಾ “ಅವಳು ನನ್ನ ತಂಗಿ ಅರ್ಥ. ಇವರೆಲ್ಲ ಅನಾಥ ಮಕ್ಕಳು. ನಾನೇ ಸಾಕಿ ಓದಿಸ್ತಿದೀನಿ. ಇದೇ ಮನೇಲಿ ಇರ್ತಾರೆ’’ ಎಂದು ಆ ಜಾಗದ ಒಂದು ಮೂಲೆಯಲ್ಲಿದ್ದ ಸಣ್ಣ ತಗಡಿನ ಮನೆ ತೋರಿಸಿದ. ನಂಗೆ ಬಾಂಡ್ ಮಾತು ಕೇಳಿ ಆಶ್ಚರ್ಯವಾಯ್ತು. ನಂಗೇನಾದ್ರೂ ಕಲಿಸೂದಾದ್ರೆ ಇಂಗ್ಲಿಷು ಕಲಿಸು ಅಂತ ಹೇಳ್ಬೇಕು ಅಂತ ಮನಸಲ್ಲೇ ಅಂದ್ಕೊಂಡಿದ್ದೆ.

ಪೊಲೀಸ್ ಹೊರಟು ನಿಂತ. ರಂಗಪ್ಪನೂ ಹೋಗ್ತಾ ಹೋಗ್ತಾನೇ “ನಾನ್ ಜಾಗ ಬಿಡಲ್ಲ’ ಎಂದ. ಇತ್ಲಾಗೆ ನಿಂತಿದ್ದ ಅರ್ಥಳ ಗ್ಯಾಂಗ್ ಕೂಡ ಒಕ್ಕೊರಲಲ್ಲಿ “ನಾವೂ ಬಿಡಲ್ಲ’’ ಅಂದ್ವು. ರಂಗಪ್ಪ ಕೋಪದಿಂದ ಉರ್ಕೊಳ್ತಾ ಹೊರಟು ಹೋದ. ಬಾಂಡ್ ಮುಖದಲ್ಲಿ ಸಣ್ಣ ನಗು.

(ಸಶೇಷ)

**

ಸಿನಿಮಾ ಸ್ಕ್ರಿಪ್ಟ್‌: ಯೋಗರಾಜ ಭಟ್‌, ಮಾಸ್ತಿ,ಕಾಂತರಾಜ್‌

ಕಾದಂಬರಿ ರೂ‍ಪ: ರಘುನಾಥ ಚ.ಹ., ಪದ್ಮನಾಭ ಭಟ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT