ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಪ್ಪಾದವೋ ಎಲ್ಲ ಕಪ್ಪಾದವೋ

Last Updated 22 ನವೆಂಬರ್ 2018, 20:30 IST
ಅಕ್ಷರ ಗಾತ್ರ

‘ಹಾ ಬಂದ್ವಿ. ಬಂದೇ ಬಿಟ್ವಿ. ಇವ್ನು ಬೆಣ್ಣೆಮುರ್ಕು ರೆಡಿಯಾಗೋದೇ ಲೇಟು. ಹೆಂಗಸ್ರ ಥರ. ಏನೇನೋ ಬಳ್ಕೋತಾ ಏನೇನೋ ಸುತ್ಕೋತಾ ನಿಂತ್ ಬಿಡ್ತಾನೆ. ಈಗೇನು ಗಾಡಿ ಮೇಲೆ ಹತ್ತಿದೀವಿ. ಮುಹೂರ್ತದ ಟೈಮಿಗೆ ಸರೀ ಗುಂಡ್ ಹೊಡ್ದಂಗೆ ಅಲ್ಲಿರ್ತೀವಿ. ತಡ ಆಗಲ್ಲ’ ಎಂದು ರಂಗಪ್ಪ ಕಾಂಪ್ಲೆಕ್ಸಿನ ಎದುರಿನ ರಸ್ತೆಯಲ್ಲಿ ನಿಂತು ಮೊಬೈಲಲ್ಲಿ ಜೋರು ಜೋರು ಮಾತಾಡುತ್ತಿದ್ದ.

ಮಧ್ಯದಲ್ಲಿಯೇ ಅತ್ತ ಮುಖಮಾಡಿ, ‘ಲೇ ಸುಬ್ಬಣ್ಣಾ, ಬೆಣ್ಣೆಮುರುಕು ಬರ್ರೋ... ಮದ್ವೆ ಹೆಣ್ಣು ನಮ್ ಮುಖ ನೋಡ್ದೆ ತಾಳಿ ಕಟ್ಟಿಸ್ಕಳ್ಳಲ್ಲಂತೆ’ ಎಂದು ಬಜಾಯಿಸುತ್ತಿದ್ದ.

ಡಿಕಾಕ್ಷನ್ ಅಂಗಡಿಯಲ್ಲಿ ಟೀ ಕುಡಿಯುತ್ತಿದ್ದ ಲಾಯರ್ ದಿನೇಶ, ರಂಗಪ್ಪನ ಅವತಾರ ನೋಡ್ತಾ ‘ಏನೋ ಡಿಕಾಕ್ಷನ್ನು... ರಂಗಪ್ನೋರ ಪಟಾಲಂ ಯಾವ್ದೋ ಫ್ಯಾಷನ್ ಷೋಗೆ ಹೊರಟಂಗಿದೆ’ ಎಂದ. ‘ಯಾವ ಫ್ಯಾಷನ್ ಷೋ ಅಣ್ಣಾ, ಮದ್ವೆಗೆ ಹೊರಟಿರೋದು. ಮುದುಕ್ರೆಲ್ರೂ ಹೋಗ್ತಿದಾರೆ. ವಯಸ್ಕರ ಪ್ರವಾಸ. ಬಿಟ್ಟಿ ಊಟ, ಯಾರು ಬಿಡ್ತಾರೆ ಹೇಳಿ’ ಎನ್ನುತ್ತಾ ಡಿಕಾಕ್ಷನ್ ನಕ್ಕ. ‘ಓ.. ತಮ್ಮನ್ನು ಕರೆದಿಲ್ಲ ಅಂತ ಅಷ್ಟೊಂದು ಸಿಟ್ಟೋ’ ಎಂದು ತಮಾಷೆ ಮಾಡಿದ ದಿನೇಶ, ಟೀ ಗ್ಲಾಸ್ ಇಟ್ಟು ಗ್ಯಾರೇಜಿಗೆ ಬಂದ.

ಅಲ್ಲಿ ಅರ್ಥ ಬಬಲ್ ಗಮ್ ಅಗಿಯುತ್ತ ಕೂತಿದ್ದಳು. ವಿ4ಗಳು ಕಾರಿನ ಹಿಂಭಾಗದಲ್ಲಿ ಏನೋ ಮಾಡುತ್ತ ಕೂತಿದ್ದರು. ದಿನೇಶ ಕಾರಿನ ಬಾನೆಟ್ ಒಮ್ಮೆ→ಬಡಿದು ಅದರ ಮೇಲೆ ಒರಗಿಕೊಂಡು, ‘ಲೋ... ಅಪೋಸಿಟ್ ಗ್ಯಾಂಗು ಯಾವ್ದೋ ಮದ್ವೆಗೆ ಫ್ಯಾಮಿಲಿ ಆಡಿಯನ್ಸ್ ಆಗಿ ಹೊರ್ಟಿದಾರೆ. ಒಂದಿನ ಫುಲ್ ಬೋರು. ನಿಮ್ಮ ಕತೆ ಏನು?’ ಎಂದು ಕೆಣಕಿದ. ವಿ4ಗಳು ಒಟ್ಟೊಟ್ಟಿಗೆ ‘ಕಾರ್ತಿಕ್ ಪ್ಲ್ಯಾನ್ ರೆಡಿ ಮಾಡಿದಾನೆ. ವರ್ಕ್ ಅಂಡರ್ ಪ್ರಾಸೆಸ್’ ಎಂದರು. ದಿನೇಶ ತುಸು ಗಾಬರಿಯಿಂದಲೇ ‘ಏನೋ ಪ್ಲ್ಯಾನು? ಏನೇನೋ ಮಾಡ್ಬಿಡ್ಬೇಡ್ರೋ.. ಆಮೇಲೆ ಆ ಎಸ್‍ಐ ಬಂದು ತಲೆ ತಿಂತಾನೆ’ ಎಂದ.

ಅಷ್ಟರಲ್ಲಿ ಕಾರ್ತಿಕ್ ಬಂದು ಕಾರಿನ ಪೆನಲ್‍ಗಳಲ್ಲಿ ಬ್ಲ್ಯಾಕ್ ಪೌಡರ್ ಸುರಿದು ನಕ್ಕ. ಅರ್ಥ, ‘ಆಪರೇಷನ್ ಬ್ಲ್ಯಾಕ್ ಸ್ಮೋಕ್... ವಾಯುಮಾಲಿನ್ಯದ ಕಪ್ಪು ಪರಿಣಾಮಗಳು’ ಎಂದಳು ಎತ್ತಲೋ ನೋಡುತ್ತ. ದಿನೇಶ್‍ಗೆ ಪ್ಲ್ಯಾನ್ ಅರ್ಥ ಆಗಿ ಇನ್ನಷ್ಟು ಗಾಬರಿಗೊಂಡ. ಕಾರ್ತಿಕ್ ಬಳಿ ಬಂದು ‘ಬೇಡ ಕಣೋ. ಎಲ್ಲ ಮುದುಕ್ರೂ ಕಾಲಲ್ಲಿ ಚಪ್ಲಿ ಹಾಕ್ಕೊಂಡಿದಾರೆ. ಯೋಚ್ಸು... ಅವ್ರನ್ನು ರೊಚ್ಚಿಗೆಬ್ಬಿಸ್ಬೇಡ’ ಎಂದ. ಕಾರ್ತಿಕ್ ನಗುತ್ತ ‘ನಮಗೆ ಬೇಕು’ ಎಂದ.

‘ಏನು, ಚಪ್ಲೀನಾ?’

‘ಅವ್ರ ಮುಖದ ಗುರ್ತು ಅವರಿಗೇ ಸಿಗದಂಗೆ ಮಾಡ್ತೀವಿ, ನೋಡ್ತಿರು ಈಗ’ ಎಂದು ಕಾರಿನೊಳಗೆ ಹತ್ತಿ ಕೂತ. ವಿಕ್ರಮ್ ಕೂಡ ಹತ್ತಿದ.

ಅತ್ತ ರಂಗಪ್ಪ ಹೊಸ ಪಂಚೆಯನ್ನು ಎತ್ತಿ ಅಂಡರ್‍ವೇರ್ ಒಳಗಡೆ ಮೊಬೈಲ್ ಇಟ್ಟುಕೊಂಡು ಹೊರಡಲು ಸಿದ್ಧನಾದ. ಬೆಣ್ಣೆಮುರುಕು, ಸುಬ್ಬಣ್ಣ, ಮೂಗರ್ಜಿ ಸುಂದ್ರ ಮೂವರೂ ಬಿಳಿ ಪಂಚೆ ಬಿಳಿ ಷರ್ಟು ತೊಟ್ಟು ರೆಡಿಯಾಗಿದ್ದರು. ‘ಬೇಗ ಬರ್ರಲೋ... ಬೆಳಿಗ್ಗೆ ತಿಂಡಿ ಸಿಗಲ್ಲ ಈಗ. ಮಧ್ಯಾಹ್ನ ಊಟವೊಂದೇ ಗಟ್ಟಿ’ ಎಂದು ರಂಗಪ್ಪ ಅವರಿಗೆ ಜಬರಿಸುತ್ತಿದ್ದ.

ರೆಡಿ... ಒನ್ ಟೂ ಥ್ರೀ...!

ಗ್ಯಾರೇಜಿನಿಂದ ಕಾರು ರೊವ್ ರೊವ್ ಎಂದು ಶಬ್ದ ಮಾಡಿಕೊಂಡು ಹೊರಟಿತು. ಬೆನ್ನಹಿಂದೆಯೇ ಕಡುಗಪ್ಪು ಹೊಗೆ. ಕ್ಷಣಮಾತ್ರದಲ್ಲಿ ಇಡೀ ಗ್ಯಾರೇಜು ಕಾಂಪ್ಲೆಕ್ಸಿನ ಎದುರಿದ್ದ ಮುದುಕರು ಎಲ್ಲರನ್ನೂ ಕಪ್ಪು ಹೊಗೆ ನುಂಗಿಹಾಕಿತು.

ಕಾರನ್ನು ಅಷ್ಟು ದೂರ ಜೋರು ಓಡಿಸಿಕೊಂಡು ಹೋದ ಕಾರ್ತಿಕ್ ಥಟ್ಟನೇ ನಿಲ್ಲಿಸಿ ಇಳಿದು ಹಿಂಬದಿಯಿಂದ ಗ್ಯಾರೇಜು ಸೇರಿಕೊಂಡ. ವಿಕ್ರಮ್ ಕಾರು ಓಡಿಸಿಕೊಂಡು ಮುಂದೆ ಹೋದ.

ಹೊಗೆ ಕೊಂಚ ತಿಳಿಯಾಗುವಷ್ಟರಲ್ಲಿ ರಂಗಪ್ಪ ಹಾಗೂ ಅವನ ಜೊತೆಗಿನ ಮೂವರು ಮುದುಕರೂ ಡಾಂಬರು ಮೆತ್ತಿಕೊಂಡ ರಸ್ತೆಯ ಹಾಗೆಯೇ ಕಪ್ಪಗಾಗಿ ಹೊಳೆಯುತ್ತಿದ್ದರು. ಕೋಪದಿಂದ ಹಲ್ಲು ಕಡಿಯಲು ತುಟಿ ಅಗಲಿಸಿದಾಗ ರಂಗಪ್ಪನ ಹಲ್ಲೊಂದೇ ಬೆಳ್ಳಗೆ ಕಂಡು ಬೆಣ್ಣೆಮುರುಕುವಿಗೆ ನಗುಬಂದುಬಿಡ್ತು. ಮರುಕ್ಷಣವೇ ನಾನೂ ಹಾಗೇ ಕಾಣುತ್ತಿರಬಹುದು ಎಂದು ಹೊಳೆದು ನಗದೆ, ಹಲ್ಲು ಕಾಣಿಸದಂತೆ ತೆಪ್ಪಗೆ ನಿಂತ.

‘ಕರೀರೊ ಆ ದರಿದ್ರವನ್ನ...’ ಎಂದು ರಂಗಪ್ಪ ಗ್ಯಾರೇಜಿನ ಕಡೆಗೆ ಕೈ ತೋರಿಸುತ್ತ ಹೇಳಿದ. ಬೆಣ್ಣೆಮುರುಕು ನಿಧಾನಕ್ಕೆ ಗ್ಯಾರೇಜಿನ ಒಳಗೆ ಹೋಗಿ ಇಣುಕಿದ. ಯಾರೋ ಚಡ್ಡಿ ಬನ್ನಿಯನ್ನಿನ ಮೇಲೆ ಹಲ್ಲುಜ್ಜುತ್ತಾ ನಿಂತಿರುವುದು ಕಾಣಿಸಿತು. ಒಳಗೂ ಹೊಗೆ ತುಂಬಿಕೊಂಡು ಸರಿಯಾಗಿ ಕಾಣಿಸುತ್ತಿರಲಿಲ್ಲ. ‘ಯಾವೊನೊ ಅವ್ನು ಬಾರೋ ಇತ್ಲಾಗೆ...’ ಎಂದು ಬೆಣ್ಣೆ ಡೊಳ್ಳುಹೊಟ್ಟೆ ಅಲ್ಲಾಡಿಸುತ್ತ ಕರೆದಾಗ ಕಾರ್ತೀಕ್ ಹಲ್ಲುಜ್ಜುತ್ತ ತನಗೆ ಏನೂ ಗೊತ್ತೇ ಇಲ್ಲ ಎನ್ನುವನಂತೆ ತಿರುಗಿದ. ಅವನ ಮುಖ ನೋಡಿ ಬೆಣ್ಣೆಮುರುಕುವಿಗೆ ಅನುಮಾನ. ಆದರೂ ಅದನ್ನು ತೋರಿಸಿಕೊಳ್ಳದೆ, ‘ಏನ್ ಮುಖ ನೋಡ್ತಿದೀಯಾ... ಬಾ ಹೊರಗೆ’ ಎಂದ. ಕಾರ್ತಿಕ್ ಅಲ್ಲಿಯೇ ಅವನಿಗೆ ಕಣ್ ಹೊಡೆದು, ಹೊಟ್ಟೆಮೇಲೊಮ್ಮ ಮೆಲುವಾಗಿ ತಟ್ಟಿ ಹೆಗಲ ಮೇಲೆ ಟವೆಲ್ ಹಾಕಿಕೊಂಡೇ ಹೊರಗೆ ಬಂದ. ಹೊರಗೆ ನಿಂತಿದ್ದವರೆಲ್ಲರೂ ಇದ್ದಿಲು ಮೂರ್ತಿಗಳಾಗಿದ್ದರು.

ಕಾರ್ತಿಕ್ ಗಾಬರಿ ನಟಿಸುತ್ತಾ ‘ಏನಾಯ್ತು... ಅಯ್ಯೋ ಎಷ್ಟೊಂದು ಹೊಗೆ. ವಾಯುಮಾಲಿನ್ಯ’ ಎನ್ನುತ್ತಾ ರಂಗಪ್ಪನ ಎದುರಿಗೆ ಬಂದ. ಕೈಯಲ್ಲಿ ಚಪ್ಪಲಿ ಹಿಡಿದುಕೊಂಡು ನಿಂತಿದ್ದ ರಂಗಪ್ಪ, ‘ಹಿಂದೆ ನಿಂತು ಕೆಮ್ಮುತ್ತಿದ್ದ ಮುದುಕರ ಕಡೆಗೆ ತಿರುಗಿ, ‘ಎತ್ಕೊಳ್ರೋ ಎಲ್ರೂ ಚಪ್ಲೀನ’ ಎಂದ. ಎಲ್ಲರೂ ಕೆಮ್ಮುತ್ತಲೇ ಚಪ್ಪಲಿ ತೆಗೆದು ಕೈಯಲ್ಲಿ ಹಿಡಿದುಕೊಂಡರು. ಬೆಣ್ಣೆಮುರುಕು ಒಂದೇ ಕಾಲಲ್ಲಿ ಚಪ್ಪಲಿ ತೆಗೆಯಲು ಹೋಗಿ ಆಯತಪ್ಪಿ ದುಡುಂ ಎಂದು ಬಿದ್ದು ಕುಯ್ಯೋ ಮರ್ರೋ ಅನ್ನತೊಡಗಿದ. ರಂಗಪ್ಪ ಅವನ ಕಡೆಗೆ ತಿರುಗಿ ‘ನಿಂತ್ ನಿಂತಲ್ಲೇ ಬೀಳ್ತಿಯಲ್ಲೋ... ನಿಂತ್ಕಳ ನೆಟ್ಗೆ’ ಎಂದು ಗದರಿದ.

ಕಾರ್ತಿಕ್ ಅವರನ್ನು ಗಮನಿಸದೆ ಮತ್ತದೆ ಗಾಬರಿಯಿಂದ, ‘ಛೆ, ಸಿಲಿಂಡರ್ ಏನಾದ್ರೂ ಬ್ಲಾಸ್ಟ್ ಆಯ್ತಾ? ಅರ್ಥ... ಅಪಘಾತ ಆದಾಗ ನೋಡ್ತಾ ನಿಂತ್ಕೊಬಾರ್ದು, ಸಹಾಯ ಮಾಡಬೇಕು ಅಂತ ಸಿನಿಮಾ ಶುರುವಾಗೋ ಮೊದಲು ತೋರಿಸೊ ಆಡ್ ನೋಡಿಲ್ವಾ ನೀನು? ಅಗ್ನಿಶಾಮಕ ದಳಕ್ಕೆ ಕಾಲ್ ಮಾಡು’ ಎಂದೆಲ್ಲ ಹೇಳುತ್ತ ಅತ್ತಿತ್ತ ನೋಡತೊಡಗಿದ. ಮತ್ತೆ ಸುಬ್ಬಣ್ಣನ ಕಡೆಗೆ ತಿರುಗಿ, ‘ಏನ್ ರಂಗಪ್ನೋರೆ... ನೀವಿದ್ದಾಗಲೂ ಇಂಥ ದುರ್ಘಟನೆ ಸಂಭವಿಸ್ತು ಅಂದ್ರೆ ಆಶ್ಚರ್ಯ...’ ಎಂದ. ರಂಗಪ್ಪನಿಗೆ ಮೈಯೆಲ್ಲ ಉರಿದುಹೋಯ್ತು. ‘ಲೇಯ್... ದರಿದ್ರ... ನಾನ್ ರಂಗಪ್ಪ.. ಇಲ್ಲಿ ಇಲ್ಲಿದೀನಿ.. ನನ್ನತ್ರ ಮಾತಾಡಲೇ’ ಎಂದು ಕಟಕಟ ಹಲ್ಲು ಕಡಿಯುತ್ತ ಕಾರ್ತಿಕ್‍ನ ಕಾಲರ್ ಪಟ್ಟಿ ಹಿಡಿದ. ಅವನ ಕೈ ಕೊಡವಿಕೊಂಡ ಕಾರ್ತಿಕ್, ‘ಸಾಧ್ಯಾನೇ ಇಲ್ಲ. ಏನ್ ತಮಾಷೆ ಮಾಡ್ತೀರಾ? ನಮ್ ಓನರ್ ರಂಗಪ್ನೋರು ಸಖತ್ತಾಗಿದ್ರು... ರಂಗಪ್ನೋರು ಆಗ್ಲಿಕ್ಕೂ ಯೋಗ್ಯತೆ ಬೇಕು. ಬೀದೀಲಿ ನಿಂತ ಬಸವಗಳೆಲ್ಲ ತಾವು ರಂಗಪ್ಪ ಅಂತ ಹೇಳ್ಕೊಂಡ್ರೆ ಆಗಿಬಿಡ್ತಾರಾ? ಸುಮ್ನಿರಿ... ಅವರು ಹೆಂಗಿದ್ರು ಗೊತ್ತಾ?’ ಎಂದು ನಕ್ಕ. ‘ರಂಗಪ್ಪ ಇದ್ರು ಅಂದ್ರೆ... ಈಗೇನು ಸತ್ತೋಗವ್ನಾ?’ ಸುಬ್ಬಣ್ಣ ತನ್ನ ಕೀರಲು ಧ್ವನಿಯಲ್ಲಿಯೇ ಕೇಳಿದ. ‘ಶಾಂತಂ ಪಾಪಂ, ನಾನ್ ಹಾಗೆಲ್ಲ ಹೇಳ್ತೀನಾ?’ ಎಂದು ಕೆನ್ನೆ ಮುಟ್ಟಿಕೊಂಡ ಕಾರ್ತಿಕ್.

ಮೂಗರ್ಜಿ ಸುಂದ್ರಣ್ಣ ತನ್ನ ಗಂಭೀರ ಧ್ವನಿಯಲ್ಲಿ ‘ಇವೆಲ್ಲ ನಾಟಕ ಸಾಕು. ವಾಯುಮಾಲಿನ್ಯ ಮಾಡಿ, ನಮಗೆ ಕಿರುಕುಳ ನೀಡಿದ್ದು ನೀವೇ ಅಂತ ಪೊಲೀಸ್ ಸ್ಟೇಷನ್‍ಗೆ ಬಂದು ಒಪ್ಪಿಕೊಂಡು ಶರಣಾಗಿ’ ಎಂದ. ಕಾರ್ತಿಕ್ ಕೂಡ ಸೊಂಟದ ಮೇಲೆ ಕೈ ಹಾಕಿಕೊಂಡು ಅಷ್ಟೇ ಗಂಭೀರ ಧ್ವನಿಯಲ್ಲಿ ‘ಆಯ್ತು, ಕರೀರಿ ರಂಗಪ್ಪನೋರನ್ನ. ನಾನ್ ಅವರ ಜೊತೇನೆ ಮಾತಾಡ್ತೀನಿ’ ಎಂದ.

‘ಲೇಯ್... ಬರ್ದಿಟ್ಕ ಬೇಕಾದ್ರೆ, ಒಂದಿನ ನಿಮ್ ಗ್ಯಾರೇಜಿಗೆ ಬೆಂಕಿ ಹಚ್ಚಿ ಬೂದಿ ಮಾಡಿ ಹಣೆಗೆ ಹಚ್ಕೋತೀನಿ ನೋಡ್ತಿರ್ರಲೇ... ಪ್ರತಿಜ್ಞೆ... ಪ್ರತಿಜ್ಞೆ ಇದು.. ನೆನಪಿಟ್ಕಳಿ...’ ಎಂದು ರಂಗಪ್ಪ ತೊಡೆ, ಹಣೆ ಎಲ್ಲ ಯರ‍್ರಾಬಿರ‍್ರಿ ಬಡಿದುಕೊಂಡು ಕಿರುಚಾಡತೊಡಗಿದ. ಕಾರ್ತಿಕ್ ಅವನತ್ತ ಲಕ್ಷ್ಯ ಕೊಡದೆ ‘ನಿಮ್ ಜತೆ ಏನ್ ಮಾತು... ನಾನು ರಂಗಪ್ನೋರ ಹತ್ರಾನೇ ಮಾತಾಡ್ತೀನಿ ನಾನು’ ಎಂದು ಹೊರಟುಬಿಟ್ಟ. ಗ್ಯಾರೇಜಿನ ಬದಿಯಲ್ಲಿ ನಿಂತು ಈ ಎಲ್ಲ ಪ್ರಹಸನ ನೋಡುತ್ತಿದ್ದ ಅರ್ಥ, ದಿನೇಶ, ವಿ4ಗಳೆಲ್ಲ ಮುಸಿ ಮುಸಿ ನಗುತ್ತ ಒಳಗೆ ಹೋದರು.

ರಂಗಪ್ಪ ಸಿಟ್ಟಿನಿಂದ ತುಟಿ ಕಚ್ಚಿಕೊಂಡ. ಬಾಯಿಯೊಳಗೆ ಮಸಿ ಹೋಗಿ ಫೂ ಫೂ ಎಂದು ಉಗುಳತೊಡಗಿದ.

(ಮುಗಿಯಿತು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT