ಸೋಮವಾರ, 17 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ ಸಿನಿ ಸಮ್ಮಾನ: ಅತ್ಯುತ್ತಮ ಸಂಗೀತ ನಿರ್ದೇಶನ– ನಾಮನಿರ್ದೇಶಿತರು

Published 10 ಜೂನ್ 2024, 23:58 IST
Last Updated 10 ಜೂನ್ 2024, 23:58 IST
ಅಕ್ಷರ ಗಾತ್ರ

‘ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನ’ದ ಎರಡನೇ ಆವೃತ್ತಿ ಸಮಾರಂಭ ಶೀಘ್ರದಲ್ಲೇ ನಡೆಯಲಿದ್ದು, 19 ವಿಭಾಗಗಳಲ್ಲಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡವರ ಹೆಸರು ಮತ್ತು ಸಿನಿಮಾಗಳ ಪಟ್ಟಿಯನ್ನು ಈಗಾಗಲೇ ಪ್ರಕಟಿಸಲಾಗಿದೆ. ಇದೀಗ ‘ಅತ್ಯುತ್ತಮ ಸಂಗೀತ ನಿರ್ದೇಶನ’ ವಿಭಾಗಕ್ಕೆ ನಾಮ ನಿರ್ದೇಶಿತರಾದವರನ್ನು ಪರಿಚಯಿಸಲಾಗುತ್ತಿದೆ. ಇನ್ನಷ್ಟು ಮಾಹಿತಿಗಳಿಗಾಗಿ ವೆಬ್‌ಸೈಟ್‌ ನೋಡಿ.
https://www.prajavani.net/cinesamman/season2

ವಿ.ಹರಿಕೃಷ್ಣ

ವಿ.ಹರಿಕೃಷ್ಣ
ವಿ.ಹರಿಕೃಷ್ಣ

‘ಕಾಟೇರ’ ಚಿತ್ರದ ಸಂಗೀತಕ್ಕಾಗಿ ನಾಮನಿರ್ದೇಶನಗೊಂಡಿದ್ದಾರೆ. ಇವರು 1990ರ ದಶಕದಲ್ಲಿ ಹಂಸಲೇಖ, ವಿ.ರವಿಚಂದ್ರನ್, ಸಾಧು ಕೋಕಿಲ, ಗುರುಕಿರಣ್ ಸೇರಿದಂತೆ ಅನೇಕ ಪ್ರಮುಖ ಸಂಗೀತ ನಿರ್ದೇಶಕರಿಗೆ ಸಹಾಯಕರಾಗಿ ಕೆಲಸ ಮಾಡಿದ್ದಾರೆ. 2006ರಲ್ಲಿ ನಟ ದರ್ಶನ್ ಅವರ ಮೊದಲ ನಿರ್ಮಾಣದ ‘ಜೊತೆ ಜೊತೆಯಲಿ’ ಚಿತ್ರದ ಮೂಲಕ ಸ್ವತಂತ್ರ ಸಂಗೀತ ನಿರ್ದೇಶಕರಾದರು. ಎರಡು ದಶಕಗಳಲ್ಲಿ 50ಕ್ಕೂ ಹೆಚ್ಚು ಚಿತ್ರಗಳಿಗೆ ಸಂಗೀತ ನೀಡಿದ್ದಾರೆ. 2008 ರಲ್ಲಿ ‘ಗಾಳಿಪಟ’, 2009 ರಲ್ಲಿ ‘ರಾಜ್ ದಿ ಶೋ ಮ್ಯಾನ್’ ಮತ್ತು 2010 ರಲ್ಲಿ ‘ಜಾಕಿ’ ಚಿತ್ರದ ಅತ್ಯುತ್ತಮ ಸಂಗೀತಕ್ಕಾಗಿ ಸತತವಾಗಿ ಫಿಲ್ಮ್‌ಫೇರ್ ಪ್ರಶಸ್ತಿಯನ್ನು ‍ಪಡೆದಿದ್ದಾರೆ.  2013 ರಲ್ಲಿ ತಮ್ಮದೇ ‘ಡಿ-ಬೀಟ್ಸ್’ ಎಂಬ ಆಡಿಯೊ ಕಂಪನಿಯನ್ನು ಪ್ರಾರಂಭಿಸಿದರು. ದರ್ಶನ್‌ ಅವರ ಬಹುತೇಕ ಸಿನಿಮಾಗಳಿಗೆ ಇವರದ್ದೇ ಸಂಗೀತ. ಸಾಕಷ್ಟು ಹಿಟ್‌ ಗೀತೆಗಳು ಇವರ ಹೆಸರಿನಲ್ಲಿದೆ. 

ಮಣಿಕಾಂತ್‌ ಕದ್ರಿ

ಕದ್ರಿ ಮಣಿಕಾಂತ್

ಕದ್ರಿ ಮಣಿಕಾಂತ್

‘ವಿರಾಟಪುರ ವಿರಾಗಿ’ ಚಿತ್ರದ ಸಂಗೀತಕ್ಕಾಗಿ ಮಣಿಕಾಂತ್‌ ಕದ್ರಿ ನಾಮನಿರ್ದೇಶನಗೊಂಡಿದ್ದಾರೆ. ಸವಾರಿ ಚಿತ್ರದ ‘ಮರಳಿ ಮರೆಯಾಗಿ’, ‘ಬಿಸಿಲು ತಾಗಿ’ ಮೊದಲಾದ ಸೂಪರ್‌ ಹಿಟ್‌ ಗೀತೆಗಳಿಂದ ಜನಪ್ರಿಯರಾದವರು. ಜಿಂಗಲ್ಸ್ ಮತ್ತು ಭಕ್ತಿಗೀತೆಗಳನ್ನು ಸಂಯೋಜನೆ ಮಾಡುವ ಮೂಲಕ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ಇವರು ಮಲಯಾಳದ ಧಾರಾವಾಹಿ ‘ಅಣ್ಣು ಮಜಯಾಯಿರುನ್ನು‘ ಶೀರ್ಷಿಕೆ ಗೀತೆಗಾಗಿ ಕೇರಳ ರಾಜ್ಯ ಪ್ರಶಸ್ತಿಯನ್ನು ಪಡೆದಿದ್ದಾರೆ. ಮಲಯಾಳದಿಂದಲೇ ಸಿನಿಪಯಣ ಪ್ರಾರಂಭಿಸಿ ಕನ್ನಡದಲ್ಲಿ ‘ಸವಾರಿ’ ಚಿತ್ರದ ಮೂಲಕ ಗುರುತಿಸಿಕೊಂಡರು. ಅಲ್ಲಿಂದ ಇಲ್ಲಿತನಕ 50ಕ್ಕೂ ಹೆಚ್ಚು ಚಿತ್ರಗಳಿಗೆ ಸಂಗೀತ ಸಂಯೋಜಿಸಿದ್ದಾರೆ. 2018ರಲ್ಲಿ ತೆರೆಕಂಡ ‘ನಡುವೆ ಅಂತರವಿರಲಿ’ ಚಿತ್ರದ ‘ಶಾಕುಂತಲೆ ಸಿಕ್ಕಳು’ ಗೀತೆ ಕೂಡ ಸೂಪರ್‌ ಹಿಟ್‌ ಆಗಿತ್ತು. ತುಳು, ತೆಲುಗು, ತಮಿಳು ಭಾಷೆಗಳಲ್ಲಿ ಕೆಲಸ ಮಾಡಿದ್ದಾರೆ.

ರಘು ದೀಕ್ಷಿತ್‌

ರಘು ದೀಕ್ಷಿತ್‌

ರಘು ದೀಕ್ಷಿತ್‌

‘ಆರ್ಕೆಸ್ಟ್ರಾ ಮೈಸೂರು’ ಚಿತ್ರದ ಸಂಗೀತಕ್ಕಾಗಿ ರಘು ದೀಕ್ಷಿತ್‌ ನಾಮನಿರ್ದೇಶನಗೊಂಡಿದ್ದಾರೆ.  ಗಾಯಕರಾಗಿ ಜನಪ್ರಿಯರಾಗಿರುವ ಇವರು, ತಮ್ಮದೇ ‘ದಿ ರಘು ದೀಕ್ಷಿತ್ ಪ್ರಾಜೆಕ್ಟ್’ ಬ್ಯಾಂಡ್‌ನೊಂದಿಗೆ ಪ್ರಪಂಚಾದ್ಯಂತ ಹಲವಾರು ಕಾರ್ಯಕ್ರಮಗಳನ್ನು ನೀಡಿದ್ದಾರೆ. ಭರತನಾಟ್ಯದಲ್ಲಿ ವಿದ್ವತ್ ಪದವಿ ಪಡೆದಿದ್ದಾರೆ. ಚಿನ್ನದ ಪದಕದೊಂದಿಗೆ ಸ್ನಾತಕೋತ್ತರ ಪದವಿ ಮುಗಿಸಿದ ಇವರು, ಪ್ರಾರಂಭದಲ್ಲಿ ಸ್ವಲ್ಪ ಸಮಯ ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಕೆಲಸ ಮಾಡಿದರು. ಇಂಗ್ಲಿಷ್ ಭಾಷೆಯಲ್ಲಿ ಹಾಡುಗಳನ್ನು ನುಡಿಸುತ್ತಿದ್ದ ಇವರು, ‘ಸೈಕೋ’ ಚಿತ್ರದಲ್ಲಿ ಸಂಗೀತ ನೀಡಿ ‘ನಿನ್ನ ಪೂಜೆಗೆ ಬಂದೆ ಮಾದೇಶ’ ಹಾಡಿನಿಂದ ಜನಪ್ರಿಯರಾದರು. ಜನಪದ ಗೀತೆಗಳನ್ನು ಇಂದಿನ ಟ್ರೆಂಡ್‌ನೊಂದಿಗೆ ಸಂಯೋಜಿಸುವ ಇವರು ಶಿಶುನಾಳ ಶರೀಫರ ತತ್ವಪದಗಳನ್ನು ಅಂತತರಾಷ್ಟ್ರೀಯ ವೇದಿಕೆಗಳಲ್ಲಿ ಜನಪ್ರಿಯಗೊಳಿಸಿದ್ದಾರೆ. ತಮ್ಮ ಬ್ಯಾಂಡ್‌ನಲ್ಲಿಯೇ ಮಗ್ನರಾಗಿರುವ ಇವರು, ‘ಲವ್‌ ಮಾಕ್ಟೇಲ್‌’ ಸೇರಿದಂತೆ ಕೆಲವಷ್ಟು ಚಿತ್ರಗಳಿಗೆ ಸಂಗೀತ ಸಂಯೋಜಿಸಿದ್ದಾರೆ. 

ಮಿದುನ್‌ ಮುಕುಂದನ್‌

ಮಿದುನ್ ಮುಕುಂದನ್

ಮಿದುನ್ ಮುಕುಂದನ್

‘ಸ್ವಾತಿ ಮುತ್ತಿನ ಮಳೆ ಹನಿಯೇ’ ಚಿತ್ರದ ಸಂಗೀತಕ್ಕಾಗಿ ನಾಮನಿರ್ದೇಶನಗೊಂಡಿದ್ದಾರೆ. ಕನ್ನಡ ಮತ್ತು ಮಲಯಾಳ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಇವರು 2016ರಲ್ಲಿ ‘ಕಹಿ’ ಚಿತ್ರದೊಂದಿಗೆ ಸ್ಯಾಂಡಲ್‌ವುಡ್‌ನಲ್ಲಿ ವೃತ್ತಿ ಪ್ರಾರಂಭಿಸಿದರು. ‘ಒಂದು ಮೊಟ್ಟೆಯ ಕಥೆ’ ಚಿತ್ರದ ‘ಚೆಂದ ಅವಳ ಕಿರು ಲಜ್ಜೆ’ ಗೀತೆಯ ಮೂಲಕ ಗಮನಸೆಳೆದರು. ‘ಶ್ರೀನಿವಾಸ ಕಲ್ಯಾಣ’, ‘ಗರುಡ ಗಮನ ವೃಷಭ ವಾಹನ’, ‘ರೋರ್ಸ್ಚಾಚ್’, ‘ಟೋಬಿ’ ಸೇರಿದಂತೆ 10ಕ್ಕೂ ಹೆಚ್ಚು ಚಿತ್ರಗಳಿಗೆ ಸಂಗೀತ ಒದಗಿಸಿದ್ದಾರೆ. ಹಿನ್ನೆಲೆ ಸಂಗೀತ ಇವರ ದೊಡ್ಡ ಶಕ್ತಿ. ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಚಿತ್ರದ ‘ಮೆಲ್ಲಗೆ ಧ್ಯಾನಿಸು’ ಗೀತೆ ಕೂಡ ಇವರ ಜನಪ್ರಿಯ ಗೀತೆಗಳ ಪಟ್ಟಿ ಸೇರಿದೆ.

ಬಿಂದುಮಾಲಿನಿ 

ಬಿಂದು ಮಾಲಿನಿ

ಬಿಂದು ಮಾಲಿನಿ

‘ಆಚಾರ್‌ ಆಂಡ್‌ ಕೋ’ ಚಿತ್ರದ ಸಂಗೀತಕ್ಕಾಗಿ ಬಿಂದುಮಾಲಿನಿ ನಾಮನಿರ್ದೇಶನಗೊಂಡಿದ್ದಾರೆ. ಗಾಯಕಿಯಾಗಿ ಜನಪ್ರಿಯವಾಗಿರುವ ಇವರು ಸಂಗೀತ ಸಂಯೋಜಿಸಿದ್ದು ಕಡಿಮೆ. ಗ್ರಾಫಿಕ್ ವಿನ್ಯಾಸಕಿ ಮತ್ತು ರಂಗಕರ್ಮಿಯಾಗಿಯೂ ಗುರುತಿಸಿಕೊಂಡಿದ್ದಾರೆ. ತಾವೇ ಸಂಯೋಜಿಸಿ, ಹಾಡಿದ ‘ನಾತಿಚರಾಮಿ’ ಚಿತ್ರದ ‘ಮಾಯಾವಿ ಮನವೇ’ ಹಾಡಿಗೆ, 2019ರಲ್ಲಿ 66ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ‘ಅತ್ತ್ಯುತ್ತಮ ಹಿನ್ನೆಲೆ ಗಾಯಕಿ’ ಪುರಸ್ಕೃತರಾಗಿದ್ದಾರೆ. ಹಿಂದೂಸ್ತಾನಿ ಮತ್ತು ಕರ್ನಾಟಕ ಸಂಗೀತವನ್ನು ಗುರುಗಳಾದ ಕಿರಣವಲ್ಲಿ, ಮಂಗಳಾ ಶಂಕರ್, ಉಸ್ತಾದ್ ಅಬ್ದುಲ್ ರಶೀದ್ ಖಾನರ ಬಳಿ ಅಭ್ಯಾಸ ಮಾಡಿದ್ದಾರೆ. ‘ಆಚಾರ್‌ ಆಂಡ್‌ ಕೋ’ ಚಿತ್ರದಲ್ಲಿನ ಅನನ್ಯವಾದ ಹಿನ್ನೆಲೆ ಸಂಗೀತ ಗಮನ ಸೆಳೆದಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT