ಶೂಟಿಂಗ್‌ ಮುಗಿಸಿದ ‘ಪ್ರೀಮಿಯರ್‌ ಪದ್ಮಿನಿ’

7

ಶೂಟಿಂಗ್‌ ಮುಗಿಸಿದ ‘ಪ್ರೀಮಿಯರ್‌ ಪದ್ಮಿನಿ’

Published:
Updated:
Prajavani

‘ಕೆಜಿಎಫ್’ ಖ್ಯಾತಿಯ ಕಲಾ ನಿರ್ದೇಶಕ ಶಿವಕುಮಾರ್‌ ಅವರ ಪರಿಶ್ರಮದಿಂದ ಕೆಫೆ ಶ್ರೀ ಹೌಸ್‌ ಬಾರ್‌ನ ರೂಪ ತಳೆದಿತ್ತು. ಅಲ್ಲಿ ಯೋಗರಾಜ್‌ ಭಟ್‌ ಬರೆದ ಎಣ್ಣೆ ಸಾಂಗ್‌ ರೀಲ್‌ ಕುಡುಕರ ಅಮಲೇರಿಸಿತ್ತು. ದೃಶ್ಯಕ್ಕೆ ಸ್ಬಾಭಾವಿಕ ಸ್ಪರ್ಶ ಬರಲೆಂದು ಹೊಗೆಯನ್ನೂ ಬಿಡಲಾಗುತ್ತಿತ್ತು. ಇನ್ನೊಂದೆಡೆ ‘ಆತ್ಲಾಗೆ ಹೋದರೆ ಆತ್ಲಗೆ, ಇತ್ಲಾಗೇ ಹೋದರೆ ಇತ್ಲಗೆ, ಮನಸು ಎಲ್ಲೋ ದೇಹ ಎಲ್ಲೋ’ ಹಾಡಿನ ಮಾರ್ದನಿ.

ಈ ದೃಶ್ಯ ಕಂಡುಬಂದಿದ್ದು ‘ಪ್ರೀಮಿಯರ್ ಪದ್ಮಿನಿ’ ಚಿತ್ರದ ಕೊನೆ ಹಂತದ ಚಿತ್ರೀಕರಣದ ಸೆಟ್‌ನಲ್ಲಿ. ನಟ ಜಗ್ಗೇಶ್ ಮತ್ತು ಪ್ರಮೋದ್ ನಟನೆಯಲ್ಲಿ ಮುಳುಗಿದ್ದರು.

ಜಗ್ಗೇಶ್‍, ‘ಒಂದು ಗಂಟೆಯಾದರೆ ದೇವರು ಬರುತ್ತದೆ’ ಎಂದು ತಮ್ಮದೇ ದಾಟಿಯಲ್ಲಿ ನಿರ್ದೇಶಕರಿಗೆ ಹೇಳುತ್ತಿದ್ದರು. ಟೇಕ್ ಓಕೆ ಆದ ನಂತರ ಚಿತ್ರತಂಡ ಮಾಧ್ಯಮದವರ ಮುಂದೆ ಹಾಜರಾಯಿತು.

ನಿರ್ಮಾಪಕಿ ಶ್ರುತಿನಾಯ್ಡು, ‘ಚಿತ್ರದ ಶೀರ್ಷಿಕೆಯ ಹಾಡು ಇದು. ಇದರ ಮೂಲಕ ಸಿನಿಮಾದ ವಿಷಯವನ್ನು ಹೇಳಿದ್ದೇವೆ. ಇದು ಮುಗಿದರೆ ಕುಂಬಳಕಾಯಿ ಒಡೆಯಲಾಗುತ್ತದೆ. ನಿರ್ದೇಶಕರು ಕಥೆ ಹೇಳಿದಂತೆಯೇ ದೃಶ್ಯ ರೂಪಕ್ಕೆ ತಂದಿದ್ದಾರೆ’ ಎಂದರು.

ನಾಯಕ ಜಗ್ಗೇಶ್‌, ‘ನಿರ್ದೇಶಕರು ಕಲಾವಿದರಿಂದ ಒಳ್ಳೆಯ ಕೆಲಸ ತೆಗೆಸಿದ್ದಾರೆ. ಶಾಟ್ ಸರಿಯಾಗಿ ಬರದಿದ್ದರೆ ಹತ್ತಿರ ಬಂದು ಕಿವಿಯಲ್ಲಿ ಗೌರವಯುತವಾಗಿ ಮರ್ಯಾದೆ ಹೋಗುವಂತೆ ಹೇಳುತ್ತಾರೆ’ ಎಂದು ನಕ್ಕರು.

‘ಪ್ರೇಕ್ಷಕ ಮಹಾ ಬುದ್ಧಿವಂತ. ಎಲ್ಲವನ್ನೂ ಪೂರ್ತಿಯಾಗಿ ನೋಡುವುದಿಲ್ಲ. ಕೆಲವೊಂದನ್ನು ಆಯ್ಕೆ ಮಾಡಿಕೊಂಡು ನೋಡುತ್ತಾನೆ. ಇಷ್ಟವಾದರೆ ಮುಂದಕ್ಕೆ ಹೋಗುತ್ತಾನೆ. ಹಾಗಾಗಿ, ನಾವು ಜವಾಬ್ದಾರಿಯಿಂದ ಸಿನಿಮಾ ಮಾಡಬೇಕಿದೆ. ನಮ್ಮ ಕಾಲದಂತೆ 25ರಿಂದ 50 ದಿನಗಳ ಪ್ರದರ್ಶನದ ಪರಿಕಲ್ಪನೆ ಈಗಿಲ್ಲ. ಈಗ ಸಿನಿಮಾವೊಂದು 150 ಕೇಂದ್ರಗಳಲ್ಲಿ 3 ದಿನ ಭರ್ಜರಿಯಾಗಿ ಪ್ರದರ್ಶನ ಕಂಡರೆ ಹೂಡಿದ ಬಂಡವಾಳ ವಾಪಸ್‌ ಬರುತ್ತದೆ. 10ನೇ ದಿನ ಬೋನಸ್ ಇದ್ದಂತೆ’ ಹಾಸ್ಯ ಚಟಾಕಿ ಹಾರಿಸಿದರು. 

ಈ ಹಾಡು ಪಾತ್ರಕ್ಕೆ ತಿರುವು ಕೊಡುತ್ತದೆಯಂತೆ. ಸಾಂಸಾರಿಕ ಜೀವನದಲ್ಲಿ ಏರುಪೇರು ಸಹಜ. ಇನ್ನು ಮುಂದೆಯೂ ಜೀವನ ಇದೆ. ಸಾವಿನ ಅಂಚಿನಲ್ಲೂ ಸುಂದರ ಬದುಕನ್ನು ಕಟ್ಟಿಕೊಡಬಹುದು ಎನ್ನುವುದೇ ಕಥಾ ಹಂದರ.  

‘ನಾನು ಧಾರಾವಾಹಿಯನ್ನೂ ರಿಮೇಕ್ ಮಾಡಿಲ್ಲ. ಸಿನಿಮಾವನ್ನೂ ನಕಲು ಮಾಡುವುದಿಲ್ಲ. ಅಪ್ಪಟ ಸ್ವಮೇಕ್ ಚಿತ್ರ ಇದು. ನನ್ನ ಬರವಣಿಗೆಗೆ ಬರ ಬಂದಿಲ್ಲ. ಕಾರು ಎನ್ನುವುದು ಮನಸ್ಥಿತಿ. ದೈನಂದಿನ ಜೀವನದಲ್ಲಿ ಯಜಮಾನ ಮತ್ತು ಚಾಲಕ ಇಬ್ಬರ ಸಂಬಂಧ ಮುಖ್ಯ. ಚಿತ್ರದಲ್ಲಿ ಸಾಂಕೇತಿಕವಾಗಿ ವಾಹನ ಬಳಸಲಾಗಿದೆ. ಚಿತ್ರವನ್ನು ಮಾರ್ಚ್‍ಗೆ ತೆರೆಗೆ ತರಲು ಸಿದ್ಧತೆ ಮಾಡಿಕೊಳ್ಳಲಾಗಿದೆ’ ಎಂದು ಮಾಹಿತಿ ನೀಡಿದರು ನಿರ್ದೇಶಕ ರಮೇಶ್‍ ಇಂದಿರಾ.

ಪ್ರಮೋದ್ ಚಾಲಕನಾಗಿ ಕಾಣಿಸಿಕೊಂಡಿದ್ದಾರೆ. ನಟಿಯರಾದ ಮಧೂ, ಸುಧಾರಾಣಿ, ವಿವೇಕ್, ದತ್ತಣ್ಣ ತಾರಾಗಣದಲ್ಲಿದ್ದಾರೆ. ಛಾಯಾಗ್ರಹಣ ಅದ್ವೈತ್‍ ಗುರುಮೂರ್ತಿ ಅವರದ್ದು. 

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !