ಶನಿವಾರ, ಮಾರ್ಚ್ 25, 2023
22 °C

ಅಗಲಿದ ಅಪ್ಪುವಿಗೆ ಹಾಲು, ತುಪ್ಪ ಅರ್ಪಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

PV Photo

ಬೆಂಗಳೂರು: ಇಹದಿಂದ ಅಗಲಿ ಮಣ್ಣಿನಡಿ ತಣ್ಣನೆ ಮಲಗಿದ ನಟ ಪುನೀತ್‌ ರಾಜ್‌ಕುಮಾರ್‌ ಅವರ ಸಮಾಧಿಗೆ ಮಂಗಳವಾರ ಹಾಲು ತುಪ್ಪ ಎರೆದ ಕುಟುಂಬದವರು ಹೃದಯದಲ್ಲಿ ಚಿರಸ್ಥಾಯಿ ಆಗಿರುವ ಅವರನ್ನು ನೆನೆದು ಭಾವುಕರಾಗಿ ಮೌನಕ್ಕೆ ಜಾರಿದರು.

ಪುನೀತ್‌ ರಾಜ್‌ಕುಮಾರ್‌ ಅವರ ಅಂತ್ಯಕ್ರಿಯೆ ನಡೆದ ಕಂಠೀರವ ಸ್ಟುಡಿಯೋದ ಆವರಣದಲ್ಲಿ ದುಃಖ ಮಡುಗಟ್ಟಿದ ಮೌನ, ಗಂಭೀರ, ಭಾವುಕ ಸನ್ನಿವೇಶದ ನಡುವೆ ಸಮಾಧಿಗೆ ಹಾಲು ತುಪ್ಪ ಎರೆಯಲಾಯಿತು. ಸಿನಿಕ್ಷೇತ್ರದ ಪ್ರಮುಖರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. 

ಸಮಾಧಿ ಸ್ಥಳದ ಷೆಡ್‌ ಮಧ್ಯೆ ಹೂವಿನ ಮಂಟಪ ನಿರ್ಮಿಸಿ ಪೂಜೆಗೆ ವ್ಯವಸ್ಥೆ ಮಾಡಲಾಗಿತ್ತು. ಸಮಾಧಿ ಮುಂಭಾಗದಲ್ಲಿ ಪುನೀತ್‌ ಅವರ ನಗುಮೊಗದ ಭಾವಚಿತ್ರ ಅವರ ನೆನಪನ್ನು ಮರುಕಳಿಸಿ ಅಲ್ಲಿ ಸೇರಿದ್ದವರ ಕಣ್ಣಾಲಿಗಳು ತುಂಬುವಂತೆ ಮಾಡಿತ್ತು.

ಸಮಾಧಿಯ ಮೇಲೆ ನೆಟ್ಟ ತುಳಸಿ ಗಿಡ ಪುನೀತ್‌ ಅವರ ಅಮರತ್ವವನ್ನು ಸಂಕೇತಿಸುತ್ತಿತ್ತು. ಸಮಾಧಿಯ ಮೇಲ್ಭಾಗವನ್ನು ಹೂವುಗಳಿಂದ ಅಲಂಕರಿಸಲಾಗಿತ್ತು. ಪೂಜೆಯ ವೇಳೆ ಪುನೀತ್‌ ಅವರಿಗೆ ಇಷ್ಟವಾದ ಖಾದ್ಯಗಳನ್ನು ನೈವೇದ್ಯವಾಗಿ ಅರ್ಪಿಸಲಾಯಿತು.  

ಪುನೀತ್‌ ಪತ್ನಿ ಅಶ್ವಿನಿ, ಪುತ್ರಿಯರಾದ ದೃತಿ, ವಂದಿತಾ, ಅಣ್ಣ ಶಿವರಾಜ್‌ಕುಮಾರ್, ಗೀತಾ ಶಿವರಾಜ್‌ಕುಮಾರ್, ರಾಘವೇಂದ್ರ ರಾಜ್‌ಕುಮಾರ್, ಗೋವಿಂದರಾಜ್, ಲಕ್ಷ್ಮೀ, ಮಂಗಳಾ ರಾಘವೇಂದ್ರ ರಾಜ್‌ಕುಮಾರ್, ಮಧು ಬಂಗಾರಪ್ಪ, ವಿಜಯ್ ರಾಘವೇಂದ್ರ, ನಿರ್ಮಾಪಕ ಕೆ.ಪಿ. ಶ್ರೀಕಾಂತ್‌ ಸೇರಿದಂತೆ ಹಲವರು ಭಾಗವಹಿಸಿದ್ದರು. 

ಭಾವುಕರಾದ ಸಹೋದರರು: ‘ಈ ನೋವಿಗೆ ಯಾವುದೇ ಔಷಧಿ ಇಲ್ಲ. ಇದರೊಂದಿಗೆ ಬದುಕಲು ಶಕ್ತಿ ಕೊಡು ಎಂದು ಪ್ರಾರ್ಥಿಸಬೇಕು ಅಷ್ಟೇ’ ಎಂದು ಪುನೀತ್‌ ಸಹೋದರ, ನಟ ರಾಘವೇಂದ್ರ ರಾಜ್‌ಕುಮಾರ್‌ ಭಾವುಕರಾದರು. 

‘ನನ್ನ ತಮ್ಮನಿಗೆ 46 ವರ್ಷ ಮಾತ್ರ ಆ ದೇವರು ಸಮಯ ಕೊಟ್ಟಿದ್ದ. ಏನೇನು ಮಾಡಬೇಕೋ, ಅದೆಲ್ಲವನ್ನೂ 46 ವರ್ಷದ ಒಳಗೇ ಮುಗಿಸಿ, ಅಭಿಮಾನಿಗಳನ್ನು ಗೆದ್ದು ಹೊರಟರು. ಅವರ ಅವಧಿ ಮುಗಿಯಿತು. ಈ ನೋವನ್ನು ನಾವು ಮರೆಯಲು ಆಗದು’ ಎಂದರು.

‘ಅಪ್ಪು ನಮಗೆ ಹಾಲು ತುಪ್ಪ ಎರೆಯಬೇಕಿತ್ತು. ದೊಡ್ಡವರಾಗಿ ಈಗ ನಾವೇ ಅವನಿಗೆ ಆ ಕಾರ್ಯ ಮಾಡಬೇಕಾಗಿದೆ. ಪ್ರಪಂಚದಲ್ಲಿ ಯಾರಿಗೂ ಈ ನೋವು ಬರಬಾರದು’ ಎಂದು ಶಿವರಾಜ್‌ಕುಮಾರ್ ಹೇಳಿದರು.  

‘ನಾವೆಷ್ಟು ನೋವು ಅನುಭವಿಸಿದ್ದೇವೋ, ಅಭಿಮಾನಿಗಳು ಅದಕ್ಕಿಂತ ಹತ್ತು ಪಟ್ಟು ಹೆಚ್ಚು ನೋವು ಅನುಭವಿಸಿದ್ದಾರೆ. ನಾವು ಯಾವ ಜನ್ಮದಲ್ಲಿ ಏನು ಪುಣ್ಯ ಮಾಡಿದ್ದೆವೋ ಏನೋ, ಅಪ್ಪಾಜಿ (ಡಾ.ರಾಜ್‌ಕುಮಾರ್‌) ನಮಗೆ ಅಷ್ಟು ಪ್ರೀತಿ ಗಳಿಸಿಕೊಟ್ಟು ಹೋಗಿದ್ದಾರೆ. ಅಪ್ಪು ಕೂಡ ಅಷ್ಟೇ ಪ್ರೀತಿ ಗಳಿಸಿ ಹೋಗಿದ್ದಾನೆ’ ಎಂದರು.

‘ಅಭಿಮಾನಿಗಳು ಯಾವುದೇ ಕಾರಣಕ್ಕೂ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳಬಾರದು. ಜೀವ ಅಮೂಲ್ಯ ಉಡುಗೊರೆ. ಅದನ್ನು ಕಳೆದುಕೊಳ್ಳಬೇಡಿ’ ಎಂದು ಕೋರಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು