ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Rajanikanth Birthday: ಕಂಡಕ್ಟರ್‌ನಿಂದ ಸೂಪರ್‌ಸ್ಟಾರ್‌: ರಜನಿಕಾಂತ್‌ ಸಿನಿ ಪಯಣ

Published 12 ಡಿಸೆಂಬರ್ 2023, 10:24 IST
Last Updated 12 ಡಿಸೆಂಬರ್ 2023, 10:24 IST
ಅಕ್ಷರ ಗಾತ್ರ

ದಕ್ಷಿಣ ಭಾರತ ಚಿತ್ರರಂಗದ ಮೇರು ನಟ ರಜನಿಕಾಂತ್‌ ಇಂದು 73ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ತಮ್ಮ ಸಿನಿ ಬದುಕಿನಲ್ಲಿ ಹಲವಾರು ಏರಿಳಿತಗಳನ್ನು ಕಂಡಿರುವ ರಜನಿಕಾಂತ್‌ ಇಂದು ಅಭಿಮಾನಿಗಳ ಪಾಲಿನ ಸೂಪರ್‌ಸ್ಟಾರ್‌ ಎನಿಕೊಂಡಿದ್ದಾರೆ. ಕರ್ನಾಟಕದಲ್ಲಿ ಹುಟ್ಟಿ, ತಮಿಳುನಾಡಿನಲ್ಲಿ ಜೀವನ ಕಂಡುಕೊಂಡ ರಜನಿಕಾಂತ್‌ ಅವರ ಬದುಕೇ ಒಂದು ಮಾದರಿಯಾಗಿದೆ.

ರಜನಿ ಹುಟ್ಟುಹಬ್ಬದ ಈ ಸಂಭ್ರಮದಲ್ಲಿ ‘ತಲೈವಾರ್ 170’ ಚಿತ್ರದ ಪೋಸ್ಟರ್‌ ಬಿಡುಗಡೆಯಾಗಿದೆ. ಸತತ ಎರಡು ವರ್ಷಗಳ ಕಾಲ ಸಿನಿ ಬದುಕಿಗೆ ವಿರಾಮ ತೆಗೆದುಕೊಂಡಿದ್ದ ತಲೈವಾ, ‘ಜೈಲರ್’ ಚಿತ್ರದ ಮೂಲಕ ಬೆಳ್ಳಿತೆರೆಗೆ ಅಪ್ಪಳಿಸಿದ್ದರು. ಇದೀಗ ಹೊಸ ಚಿತ್ರ ‘ತಲೈವಾರ್‌ 170’ ಚಿತ್ರೀಕರಣದಲ್ಲಿ ಸಕ್ರಿಯರಾಗಿದ್ದಾರೆ.

ತಮಿಳು ನಟ ಕಮಲ್‌ ಹಾಸನ್‌, ಅಳಿಯ ಧನುಷ್‌, ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಸೇರಿದಂತೆ ಚಿತ್ರರಂಗದ ಗಣ್ಯರು ರಜನಿಕಾಂತ್‌ ಅವರಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ.

ಕಂಡಕ್ಟರ್‌ನಿಂದ ಸೂಪರ್‌ಸ್ಟಾರ್‌: ಬೆಳೆದು ಬಂದಿ ಹಾದಿ

  • 1950, ಡಿಸೆಂಬರ್‌ 12ರಂದು ಬೆಂಗಳೂರಿನಲ್ಲಿ(ಮೈಸೂರು ರಾಜ್ಯ) ಜನಿಸಿದ ರಜನಿಕಾಂತ್‌ ಅವರ ಮಾತೃಭಾಷೆ ಮರಾಠಿ. ಇವರ ಮೂಲ ಹೆಸರು ಶಿವಾಜಿ ರಾವ್ ಗಾಯಕ್ವಾಡ್‌. ಇವರ ಪೂರ್ವಜರು ಮಹಾರಾಷ್ಟ್ರದ ಮೂಲದವರಾಗಿದ್ದಾರೆ. ರಜನಿಕಾಂತ್‌ ತಂದೆ ಕರ್ನಾಟಕ ಪೊಲೀಸ್‌ ಇಲಾಖೆಯಲ್ಲಿ ನೇಮಕಗೊಂಡ ಕಾರಣ ಬೆಂಗಳೂರಿಗೆ ಬಂದು ನೆಲೆಸಿದ್ದರು.

  • ಮರಾಠಿ ಮಾತೃಭಾಷೆಯಾದರೂ ಇಂದಿಗೂ ಮರಾಠಿ ಭಾಷೆಯ ಚಿತ್ರದಲ್ಲಿ ರಜನಿಕಾಂತ್‌ ನಟಿಸಿಲ್ಲ.

  • ಬಾಲ್ಯದಲ್ಲಿಯೇ ತಾಯಿಯನ್ನು ಕಳೆದುಕೊಂಡ ರಜನಿಕಾಂತ್ ಅವರ ವಿದ್ಯಾಭ್ಯಾಸದ ಹೊಣೆಯನ್ನು ಅವರ ಅಣ್ಣಂದಿರು ವಹಿಸಿಕೊಂಡಿದ್ದರು. ತುಂಟನಾಗಿದ್ದ ರಜನಿಕಾಂತ್ ಅವರನ್ನು ರಾಮಕೃಷ್ಣ ಮಠಕ್ಕೆ ಸೇರಿಸಿದ್ದರು. ಅಲ್ಲಿಯೇ ರಜನಿ ವೇದಭ್ಯಾಸ ಮಾಡಿದ್ದರು.

  • ಬೆಂಗಳೂರು ಸಾರಿಗೆ ಸಂಸ್ಥೆಯಲ್ಲಿ (ಬಿಎಂಟಿಸಿ) ನಿರ್ವಾಹಕರಾಗಿ ಕೆಲಸ ಮಾಡುವ ಮುಂಚೆ ರಜನಿಕಾಂತ್ ಕೂಲಿಯಾಗಿಯೂ ಕೆಲಸ ಮಾಡಿದ್ದರು. ಕಂಡಕ್ಟರ್ ಕೆಲಸವನ್ನು ಪ್ರೀತಿಯಿಂದ ಮಾಡುತ್ತಿದ್ದ ರಜನಿಕಾಂತ್, ಅತ್ಯಂತ ‘ಸ್ಟೈಲಿಶ್‌ ಕಂಡಕ್ಟರ್’ ಎಂದು ಕರೆಸಿಕೊಂಡಿದ್ದರಂತೆ.

  • ಕೆ.ಬಾಲಚಂದ್ರ ನಿರ್ದೇಶನದ ‘ಅಪೂರ್ವ ರಾಗಂಗಳ್‌’ (1975) ಸಿನಿಮಾದಲ್ಲಿ ರಜನಿ ಮೊದಲ ಬಾರಿಗೆ ಕಾಣಿಸಿಕೊಂಡಿದ್ದರು. ನಂತರ ಪುಟ್ಟಣ ಕಣಗಾಲ್‌ ನಿರ್ದೇಶನದ ‘ಕಥಾ ಸಂಗಮ’ದಲ್ಲಿ ನಟಿಸಿದ್ದರು. ಕನ್ನಡ, ತಮಿಳು, ಮಲಯಾಳಂ, ತೆಲುಗು, ಹಿಂದಿ ಸಿನಿಮಾಗಳಲ್ಲಿ ಕೇವಲ ನಾಲ್ಕೇ ವರ್ಷದಲ್ಲಿ ಸುಮಾರು 50 ಸಿನಿಮಾಗಳಲ್ಲಿ ನಟಿಸಿದ್ದರು.

  • 1981ರಲ್ಲಿ ಲತಾ ರಂಗಾಚಾರಿ ಅವರನ್ನು ವಿವಾಹವಾಗಿದ್ದು, ಐಶ್ವರ್ಯ, ಸೌಂದರ್ಯ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.

  • ‘ಮುರಟ್ಟು ಕಾಳೈ’ ಸಿನಿಮಾದ ಚಿತ್ರೀಕರಣದ ವೇಳೆ ಡೂಪ್‌ ಇಲ್ಲದೆ ರೈಲಿನಲ್ಲಿ ಫೈಟಿಂಗ್ ಸೀಕ್ವೆನ್ಸ್ ಮಾಡಿದ ದಕ್ಷಿಣ ಭಾರತದ ಮೊದಲ ನಟ ಎಂಬ ಹೆಗ್ಗಳಿಕೆಗೆ ರಜನಿಕಾಂತ್ ಪಾತ್ರರಾಗಿದ್ದರು.

  • ನಿರ್ದೇಶಕ ಎಸ್‌.ಪಿ. ಮುತ್ತುರಾಮನ್ ಅವರೊಂದಿಗೆ ಅತೀ ಹೆಚ್ಚು ಸಿನಿಮಾಗಳನ್ನು ಮಾಡಿರುವ ರಜನಿಕಾಂತ್‌ ಅವರಿಗೆ ಅವರೇ ಸಿನಿಮಾದ ಗುರುವಾಗಿದ್ದರು.

  • ರಜನಿಕಾಂತ್ ಅವರ ಮೊದಲ ಹಿಂದಿ ಚಿತ್ರ ‘ಅಂದಾ ಕಾನೂನ್’(1983) ಬಾಕ್ಸ್ ಆಫೀಸ್‌ನಲ್ಲಿ ಕಮಾಲ್ ಮಾಡಿದ್ದು, ಚಿತ್ರಮಂದಿರದಲ್ಲಿ ಸುಮಾರು 50 ವಾರಗಳ ಕಾಲ ಪ್ರದರ್ಶನ ಕಂಡಿತ್ತು.

  • 2002ರಲ್ಲಿ ಬಿಡುಗಡೆಯಾದ ‘ಬಾಬಾ’ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ಮಕಾಡೆ ಮಲಗಿತ್ತು. ಇದಾದ ನಂತರ ಸಿನಿ ಬದುಕಿನಲ್ಲಿ ಹಿನ್ನಡೆ ಅನುಭವಿಸಿದ್ದ ರಜನಿಕಾಂತ್ ಅವರಿಗೆ ‘ಚಂದ್ರಮುಖಿ’ ಸಿನಿಮಾ ಮತ್ತೆ ಹಳೆ ಹುರುಪು ಮರುಳಿಸಿತ್ತು.

  • 33 ವರ್ಷಗಳ ಹಿಂದೆ ‘ಹಮ್’ ಚಿತ್ರದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದ ರಜನಿಕಾಂತ್ ಮತ್ತು ಅಮಿತಾಬ್‌ ಬಚ್ಚನ್‌ ಇದೀಗ ‘ತಲೈವಾರ್ 170’ ಚಿತ್ರದಲ್ಲಿ ಮತ್ತೆ ಒಂದಾಗಿದ್ದಾರೆ.

  • ಕಂಡಕ್ಟರ್‌ ಆಗಿ ಬದುಕು ಪ್ರಾರಂಭಿಸಿದ್ದ ರಜನಿಕಾಂತ್, ಇದೀಗ ಒಂದು ಸಿನಿಮಾಕ್ಕೆ ಸುಮಾರು ₹100 ಕೋಟಿಯಷ್ಟು ಸಂಭಾವನೆ ಪಡೆಯುತ್ತಾರೆ.

  • ಸಾಮಾಜಿಕ ಜಾಲತಾಣಗಳಿಂದ ಅಂತರ ಕಾಯ್ದಕೊಂಡಿದ್ದ ರಜನಿ 2014ರಲ್ಲಿ ಮೊದಲ ಬಾರಿಗೆ ಟ್ವಿಟರ್‌ ಖಾತೆ ತೆರೆದಿದ್ದರು.

  • ರಜನಿಕಾಂತ್ ರಾಜಕೀಯಕ್ಕೆ ಕಾಲಿಡುತ್ತಾರೆ ಎಂಬ ಸುದ್ದಿ ಹಬ್ಬಿದ್ದು, ತದನಂತರ ತಮ್ಮ ನಿರ್ಧಾರದಿಂದ ರಜನಿ ಹಿಂದೆ ಸರಿದಿದ್ದರು.

  • ಮೂತ್ರಪಿಂಡ ಸಂಬಂಧಿತ ಸಮಸ್ಯೆಯಿಂದ ಬಳಲುತ್ತಿದ್ದ ರಜನಿಕಾಂತ್, ಸಿಂಗಾಪುರದಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದರು. ಆದರೆ ಸಮಸ್ಯೆಯೇ ಇಲ್ಲ ಎಂಬಂತೆ ಮತ್ತೆ ಪುಟಿದೆದ್ದ ರಜನಿಕಾಂತ್ ಅವರು ಇತ್ತೀಚೆಗೆ ತೆರೆಕಂಡ ‘ಜೈಲರ್’ ಚಿತ್ರದವರೆಗೂ ಮನೋಜ್ಞ ಅಭಿನಯವನ್ನು ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT