ಶನಿವಾರ, ಜುಲೈ 31, 2021
25 °C

ಅಯ್ಯಪ್ಪನುಂ ಕೋಶಿಯುಂ ಟಾಲಿವುಡ್‌ಗೆ ರಿಮೇಕ್: ರಾನಾ, ರವಿತೇಜಾ ನಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಾಲಿವುಡ್‌ನ ಬ್ಲಾಕ್‌ಬಸ್ಟರ್‌ ಹಿಟ್‌ ಸಿನಿಮಾ ‘ಅಯ್ಯಪ್ಪನುಂ ಕೋಶಿಯುಂ’ ಟಾಲಿವುಡ್‌ಗೆ ರಿಮೇಕ್‌ ಆಗಲಿದ್ದು, ಪ್ರಮುಖ ಪಾತ್ರದಲ್ಲಿ ನಟ ರಾನಾ ದಗ್ಗುಬಾಟಿ ಹಾಗೂ ರವಿತೇಜಾ ನಟಿಸಲಿದ್ದಾರೆ. 

ಕಳೆದ ತಿಂಗಳು ಬಾಲಿವುಡ್‌ ನಟ ಜಾನ್‌ ಅಬ್ರಹಾಂ ಅವರು ತಾನು ಮಲಯಾಳಂ ಸಿನಿಮಾ ‘ಅಯ್ಯಪ್ಪನುಂ ಕೋಶಿಯುಂ’ ಸಿನಿಮಾದ ಹಿಂದಿ ರಿಮೇಕ್‌ ಹಕ್ಕನ್ನು ಪಡೆದುಕೊಂಡಿದ್ದಾಗಿ ತಿಳಿಸಿದ್ದರು. ಈಗ ಈ ಸಿನಿಮಾ ತೆಲುಗು, ತಮಿಳು ಭಾಷೆಗೂ ರಿಮೇಕ್‌ ಆಗಲಿದೆ. 

ತೆಲುಗು ಭಾಷೆಯಲ್ಲಿ ಈಗಾಗಲೇ ರಿಮೇಕ್‌ ಸಿನಿಮಾದ ಸಿದ್ಧತೆ ಆರಂಭವಾಗಿದೆ. ಸುಧೀರ್‌ ವರ್ಮಾ ಈ ಚಿತ್ರ ನಿರ್ದೇಶಿಸಿಲಿದ್ದಾರೆ ಎಂಬ ಸುದ್ದಿಯೂ ಕೇಳಿಬರುತ್ತಿದೆ. ಆದರೆ ಇನ್ನೂ ಅಧಿಕೃತವಾಗಿಲ್ಲ. 

ಮಲಯಾಳಂನ ಮೂಲ ಚಿತ್ರದಲ್ಲಿ ಪೃಥ್ವಿರಾಜ್‌ ನಿರ್ವಹಿಸಿದ ಪಾತ್ರವನ್ನು ತೆಲುಗಿನಲ್ಲಿ ರಾನಾ ದಗ್ಗುಬಾಟಿ ನಿರ್ವಹಿಸಲಿದ್ದಾರೆ. ಸಿನಿಮಾ ನಿರ್ಮಾಣ ಸಂಸ್ಥೆ ಸಿತಾರಾ ಎಂಟರ್‌ಟೇನ್‌ಮೆಂಟ್‌, ಚಿತ್ರದ ಮತ್ತೊಂದು ಪ್ರಮುಖ ‘ಅಯ್ಯಪ್ಪನ್‌’ ಪಾತ್ರಕ್ಕೆ ಬಣ್ಣ ಹಚ್ಚುವಂತೆ ರವಿತೇಜಾ ಅವರ ಬಳಿ ಮಾತುಕತೆ ನಡೆಸಿದೆ. ಈ ಹಿಂದೆ ಈ ಪಾತ್ರಕ್ಕೆ ನಂದಮೂರಿ ಬಾಲಕೃಷ್ಣ ಅವರ ಬಳಿ ಸಂಸ್ಥೆ ಮಾತುಕತೆ ನಡೆಸಿತ್ತು. ಆದರೆ ಅವರು ಬೇರೆ ಚಿತ್ರಗಳನ್ನು ಒಪ್ಪಿಕೊಂಡಿದ್ದರಿಂದ ಚಿತ್ರೀಕರಣಕ್ಕೆ ದಿನಾಂಕ ಸರಿಹೊಂದದೇ ಹೋಗಿದ್ದರಿಂದ ಅವರು ಈ ಚಿತ್ರವನ್ನು ಒಪ್ಪಿಕೊಂಡಿಲ್ಲ ಎಂದು ವರದಿಗಳು ತಿಳಿಸಿವೆ. ಕೊರೊನಾ ಲಾಕ್‌ಡೌನ್‌ ಸಂಪೂರ್ಣ ತೆರವಾದ ನಂತರ ಚಿತ್ರತಂಡ ಪಾತ್ರ, ಕಲಾವಿದರ ಬಗ್ಗೆ ಅಧಿಕೃತವಾಗಿ ಪ್ರಕಟಿಸಲಿದೆ. 

ಈ ತೆಲುಗು ರಿಮೇಕ್‌ ಚಿತ್ರದ ಚಿತ್ರೀಕರಣವೂ ಸಹ ಮೂಲ ಚಿತ್ರವನ್ನು ಶೂಟಿಂಗ್‌ ಮಾಡಿದ ಊಟಿ ಹಾಗೂ ಕೊಡೈಕೆನಾಲ್‌ನಲ್ಲಿಯೇ ನಡೆಯಲಿದೆ ಎನ್ನಲಾಗಿದೆ. 

ಕಾಲಿವುಡ್‌ನ ನಿರ್ಮಾಪಕ ಕತ್ತಿರಸನ್‌ ಅವರು ‘ಅಯ್ಯಪ್ಪನುಂ ಕೋಶಿಯುಂ’ ಚಿತ್ರದ ತಮಿಳು ರಿಮೇಕ್‌ ಹಕ್ಕನ್ನು ಪಡೆದುಕೊಂಡಿದ್ದಾರೆ ಎಂದು ವರದಿಯಾಗಿದೆ. 

‘ಅಯ್ಯಪ್ಪನುಂ ಕೋಶಿಯುಂ’ ಚಿತ್ರವು ಇಬ್ಬರು ವ್ಯಕ್ತಿಗಳ ಪ್ರತಿಷ್ಠೆಗಳ ಸಂಘರ್ಷದ ಕಥಾವಸ್ತು ಹೊಂದಿದೆ. ಕೋಶಿ ಎಂಬ ಧನಿಕನ ಪಾತ್ರದಲ್ಲಿ ಪೃಥ್ವಿರಾಜ್‌ ಹಾಗೂ ಪೊಲೀಸ್‌ ಅಧಿಕಾರಿ ಅಯ್ಯಪ್ಪನ್‌ ಪಾತ್ರದಲ್ಲಿ ಬಿಜು ಮೆನನ್‌ ನಟಿಸಿದ್ದಾರೆ. ಈ ಚಿತ್ರವನ್ನು ಸಚ್ಚಿ ನಿರ್ದೇಶನ ಮಾಡಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು