ಮಂಗಳವಾರ, ಮಾರ್ಚ್ 21, 2023
21 °C

'ಟಕ್ಕರ್‌' ಬೆಡಗಿ ರಂಜನಿ ರಾಘವನ್

ಕೆ.ಎಚ್. ಓಬಳೇಶ್‌ Updated:

ಅಕ್ಷರ ಗಾತ್ರ : | |

Prajavani

‘ನಾನು ನಟನೆಗೆ ಗಡಿರೇಖೆ ವಿಧಿಸಿಕೊಂಡಿಲ್ಲ. ಕಿರುತೆರೆ ಅಥವಾ ಹಿರಿತೆರೆ ಎಂಬ ಭೇದವೂ ಇಲ್ಲ. ಎರಡೂ ಕ್ಷೇತ್ರದಲ್ಲಿ ಪ್ರೇಕ್ಷಕರಿಗೆ ಒಳ್ಳೆಯ ಕಥೆಗಳನ್ನು ಹೇಳಬೇಕು ಎನ್ನುವುದಷ್ಟೇ ನನ್ನ ಉದ್ದೇಶ’

–ಇಷ್ಟನ್ನು ಹೇಳಿ ಚಂದದ ನಗು ಚೆಲ್ಲಿದರು ನಟಿ ರಂಜನಿ ರಾಘವನ್‌. ಅವರ ಈ ಸ್ಪಷ್ಟನೆಗೆ ಕಾರಣವೂ ಇತ್ತು. ರಂಜನಿ ಕ್ಯಾಮೆರಾ ಎದುರಿನ ನಟನೆಯ ಪಯಣ ಆರಂಭಿಸಿದ್ದು ಧಾರಾವಾಹಿಯ ಮೂಲಕ. ‘ಪುಟ್ಟಗೌರಿ ಮದುವೆ’ ಸೀರಿಯಲ್‌ ಅವರಿಗೆ ದೊಡ್ಡಮಟ್ಟದ ಹೆಸರು ತಂದುಕೊಟ್ಟಿತು. ಕಿರುತೆರೆಯಲ್ಲಿ ನಡೆಸುತ್ತಲೇ ‘ರಾಜಹಂಸ’ ಚಿತ್ರದ ಮೂಲಕ ಬೆಳ್ಳಿತೆರೆಗೂ ಅಡಿ ಇಟ್ಟರು. 

ಈಗ ಅವರ ನಟನೆಯ ದ್ವಿತೀಯ ಚಿತ್ರ ‘ಟಕ್ಕರ್’ ಬಿಡುಗಡೆಗೆ ಸಿದ್ಧವಾಗಿದೆ. ಕಳೆದ ಮಾರ್ಚ್‌ನಲ್ಲಿಯೇ ಇದು ಬಿಡುಗಡೆಯಾಗಬೇಕಿತ್ತು. ಲಾಕ್‌ಡೌನ್‌ನಿಂದಾಗಿ ತೆರೆ ಕಾಣಲಿಲ್ಲ. ಈ ಚಿತ್ರದಲ್ಲಿ ಅವರದು ಮುಗ್ಧ ಹುಡುಗಿಯ ಪಾತ್ರ. ‘ನಟ ದರ್ಶನ್‌ ಅವರ ಸಂಬಂಧಿ ಮನೋಜ್ ಕುಮಾರ್‌ ಈ ಚಿತ್ರದ ಹೀರೊ. ವಿ. ರಘುಶಾಸ್ತ್ರಿ ಇದನ್ನು ನಿರ್ದೇಶಿಸಿದ್ದಾರೆ. ಒಳ್ಳೆಯ ತಂಡ. ನನ್ನದು ವೈದ್ಯಕೀಯ ವಿದ್ಯಾರ್ಥಿನಿ ಪಾತ್ರ. ಇರುವೆಯನ್ನೂ ಸಾಯಿಸಬಾರದು ಎನ್ನುವ ಮನಸ್ಥಿತಿ ಆಕೆಯದ್ದು’ ಎಂದು ತಮ್ಮ ಪಾತ್ರ ಕುರಿತು ವಿವರಿಸುತ್ತಾರೆ.

ಕಿರುತೆರೆ ಮತ್ತು ಹಿರಿತೆರೆಯಲ್ಲಿನ ನಟನೆಯ ವ್ಯತ್ಯಾಸದ ಬಗ್ಗೆ ರಂಜನಿಗೆ ಸಾಕಷ್ಟು ತಿಳಿವಳಿಕೆ ಇದೆ. ‘ಧಾರಾವಾಹಿಗಳಲ್ಲಿನ ನಟನೆಗೆ ಒಂದು ಸೀಮಿತ ಚೌಕಟ್ಟು ಇರುತ್ತದೆ. ಸಿನಿಮಾದಲ್ಲಿ ಪಾತ್ರಗಳ ಪೋಷಣೆ ಎನರ್ಜಿಟಿಕ್‌ ಆಗಿರುತ್ತದೆ.  ಡಾನ್ಸ್, ಪಾತ್ರಗಳ ನಿರೂಪಣೆ ಭಿನ್ನವಾಗಿರುತ್ತದೆ. ನಟನೆ ಕೂಡ ಸವಾಲಿನಿಂದ ಕೂಡಿರುತ್ತದೆ’ ಎಂಬುದು ಅವರ ಅನುಭವದ ಮಾತು. 

ಅವರು ಯಾವುದೇ ಸಿನಿಮಾ ಒಪ್ಪಿಕೊಳ್ಳುವಾಗ ಕಥೆ ಮತ್ತು ಪಾತ್ರಕ್ಕೆ ಹೆಚ್ಚಿನ ಒತ್ತು ನೀಡುತ್ತಾರಂತೆ. ‘ಜೊತೆಗೆ, ಚಿತ್ರತಂಡವೂ ಅಷ್ಟೇ ಮುಖ್ಯ. ತಾವು ಹೇಳಿದ ಕಥೆಯನ್ನು ಪರದೆ ಮೇಲೆ ಅತ್ಯುತ್ತಮವಾಗಿ ನಿರೂಪಣೆ ಮಾಡುವ ನಿರ್ದೇಶಕರು ಇರಬೇಕು’ ಎನ್ನುತ್ತಾರೆ ಅವರು. 

‘ಬಾಲಿವುಡ್‌ನಲ್ಲಿ ರಿಯಾಲಿಸ್ಟಿಕ್‌ ಆದ ಪಾತ್ರಗಳಿಗೆ ಅಲ್ಲಿನ ನಾಯಕಿಯರು ಹೆಚ್ಚಿನ ಒತ್ತು ನೀಡುತ್ತಿದ್ದಾರೆ. ಬಣ್ಣ ಬಣ್ಣದ ಬಟ್ಟೆ ತೊಟ್ಟು ಹಾಡುಗಳಿಗೆ ನೃತ್ಯ ಮಾಡುವುದು ಕಡಿಮೆಯಾಗಿದೆ. ಗಟ್ಟಿಯಾದ ಪಾತ್ರಗಳಿಗೆ ಪ್ರಾಧಾನ್ಯ ನೀಡುತ್ತಾರೆ. ಅಂತಹ ಪಾತ್ರಗಳಲ್ಲಿ ನಟಿಸಲು ನನಗಿಷ್ಟ. ಸಮಾಜದಲ್ಲಿರುವ ಪಾತ್ರಗಳಿಗೆ ಪರದೆ ಮೇಲೆ ಜೀವ ತುಂಬಬೇಕು. ಅವರ ನೋವು, ನಲಿವುಗಳನ್ನು ಜನರಿಗೆ ಹೇಳಬೇಕು. ಅಂತಹ ಪಾತ್ರಗಳಿಗೆ ನಾನು ಹೆಚ್ಚು ಹೊಂದಾಣಿಕೆಯಾಗುತ್ತೇನೆ’ ಎನ್ನುತ್ತಾರೆ ರಂಜನಿ.

ದಿಗಂತ್‌ ಜೊತೆಗೆ ಹೊಸ ಚಿತ್ರ

ದಿಗಂತ್‌ ನಾಯಕರಾಗಿರುವ ‘ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ’ ಚಿತ್ರಕ್ಕೂ ರಂಜನಿ ಅವರೇ ನಾಯಕಿ. ಈ ವೇಳೆಗೆ ಇದರ ಶೂಟಿಂಗ್‌ ಆರಂಭವಾಗಬೇಕಿತ್ತು.

ಸೆಪ್ಟೆಂಬರ್‌ನಿಂದ ಶೂಟಿಂಗ್‌ ಶುರುವಾಗುವ ನಿರೀಕ್ಷೆಯಿದೆ. ‘ಇದೊಂದು ರಿಯಾಲಿಸ್ಟಿಕ್ ಆದ ಕಥೆ. ನನ್ನದು ಮಲೆನಾಡು ಹುಡುಗಿಯ ಪಾತ್ರ. ನನ್ನ ಪಾತ್ರದ ಹೆಸರು ಸೌಮ್ಯಾ. ನಾಯಕ ರಸಗೊಬ್ಬರದ ಅಂಗಡಿ ಇಟ್ಟುಕೊಂಡಿರುತ್ತಾನೆ. ಚಿಕ್ಕಂದಿನಿಂದಲೂ ನಾವಿಬ್ಬರು ಇಷ್ಟಪಟ್ಟಿರುತ್ತೇವೆ. ಕೊನೆಗೆ, ಆ ಪ್ರೀತಿ ಏನಾಗುತ್ತದೆ ಎಂಬುದೇ ಇದರ ಹೂರಣ’ ಎಂದು ವಿವರಿಸುತ್ತಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು