ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹9,909 ಕೋಟಿ ಮೌಲ್ಯದ ತೆಂಗು–ಅಡಕೆ ಬೆಳೆ ನಷ್ಟ

Last Updated 7 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ಬರಗಾಲದಿಂದ ರಾಜ್ಯದಲ್ಲಿ ತೆಂಗು ಮತ್ತು ಅಡಿಕೆ ಬೆಳೆ ಹಾಳಾಗಿದ್ದು, ₹9,909 ಕೋಟಿ ನಷ್ಟವಾಗಿದೆ ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ವಿಧಾನಸಭೆಗೆ ತಿಳಿಸಿದರು.

ಜೆಡಿಎಸ್‌ನ ಎಚ್.ಡಿ. ರೇವಣ್ಣ, ಕೆ.ಎಂ. ಶಿವಲಿಂಗೇಗೌಡ, ಸಿ.ಎನ್. ಬಾಲಕೃಷ್ಣ, ಪ್ರತಿ ತೆಂಗಿನ ಮರಕ್ಕೆ ₹8,000 ಪರಿಹಾರ ಪ್ಯಾಕೇಜ್ ಘೋಷಿಸಬೇಕು ಎಂದು ಆಗ್ರಹಿಸಿದರು. ಅಷ್ಟು ಪರಿಹಾರ ನೀಡುವುದು ಸಾಧ್ಯವಿಲ್ಲ. ತೋಟಗಾರಿಕೆ ಸಚಿವರು ವಿದೇಶದಿಂದ ವಾಪಸ್ ಬಂದ ಮೇಲೆ ಈ ಕುರಿತು ಸಭೆ ಕರೆದು ಪರಿಹಾರದ ಬಗ್ಗೆ ಚರ್ಚೆ ನಡೆಸಲಾಗುವುದು ಎಂದು ಕಾಗೋಡು ತಿಳಿಸಿದರು.

ಬೆಳೆನಷ್ಟಕ್ಕೆ  ಪರಿಹಾರ ಕೋರಿ ಕೇಂದ್ರಕ್ಕೆ ಮನವಿ ಸಲ್ಲಿಸಲಾಗಿದೆ. ಮುಖ್ಯಮಂತ್ರಿ ನೇತೃತ್ವದಲ್ಲಿ ಪ್ರಧಾನ ಮಂತ್ರಿಯವರ ಬಳಿಗೆ ನಿಯೋಗ ಕರೆದೊಯ್ಯಲು ಪತ್ರ ಬರೆಯಲಾಗಿದೆ. ಸಮಯ ನಿಗದಿಯಾದ ಕೂಡಲೇ ನಿಯೋಗ ಕರೆದೊಯ್ಯಲಾಗುವುದು ಎಂದು ಹೇಳಿದರು.‌

ಢೋಂಗಿ ವಿಮೆ ಕಂಪೆನಿ: ಬೆಳೆ ವಿಮೆ ಮಾಡಿಸುವ ಜವಾಬ್ದಾರಿಯೂನಿವರ್ಸಲ್‌ ಸೋಮ್ಸ್ ಕಂಪೆನಿಗೆ ವಹಿಸಲಾಗಿದೆ. ಇದೊಂದು ಢೋಂಗಿ ಕಂಪೆನಿಯಾಗಿದೆ. ಹಿಂಗಾರು ಹಂಗಾಮಿನಲ್ಲಿ ಬೆಳೆದ ಹೆಸರು ಕಾಳು ಹಾಳಾಗಿದೆ. ಈವರೆಗೂ ಬೆಳೆ ವಿಮೆ ನೀಡಿಲ್ಲ. ರೈತರ ಹೆಸರಿನಲ್ಲಿ ಲೂಟಿ ಹೊಡೆಯುವ ಕಂಪೆನಿ ಇದು ಎಂದು ಕೆ.ಎಂ. ಶಿವಲಿಂಗೇಗೌಡ ದೂರಿದರು.

ಕೇಂದ್ರ ಸರ್ಕಾರ ₹36 ಕೋಟಿಯನ್ನು ಕರ್ನಾಟಕಕ್ಕೆ ನೀಡಿದೆ ಎಂದು ಸಚಿವರು ಹೇಳಿದ್ದಾರೆ. ಅದರ ಅನ್ವಯ ₹80 ಲಕ್ಷ ಅರಸೀಕೆರೆಗೆ ಬಂದಿದೆ. ತಾಲ್ಲೂಕಿನಲ್ಲಿ ಎಂಟು ಲಕ್ಷ ಮರ ನಾಶವಾಗಿದ್ದು, ತಲಾ ₹10 ಪರಿಹಾರ ಸಿಗಲಿದೆ. ಇದರಿಂದ ರೈತರನ್ನು ಉಳಿಸಲು ಸಾಧ್ಯವೇ ಎಂದು ಪ್ರಶ್ನಿಸಿದರು.

57 ವಿಧಾನಸಭಾ ಕ್ಷೇತ್ರದಲ್ಲಿ ತೆಂಗು ಬೆಳೆಗಾರರಿದ್ದಾರೆ. ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರಿಗೆ ಈ ಕ್ಷೇತ್ರದ ಮತದಾರರ ಮತ ಬೇಡವೇ ಎಂದರು.

ಮೋದಿ ಬಳಿ ಗೌಡರು ಹೋದರೆ ನೀರು ಖಚಿತ!

ದೇವೇಗೌಡರನ್ನು ಪಕ್ಕದಲ್ಲಿ ಕೂರಿಸಿಕೊಂಡು ಪ್ರಧಾನಿ ಮೋದಿ ಮಾತನಾಡುತ್ತಾರೆ. ಅವರನ್ನು ಕರೆದುಕೊಂಡು ಹೋದರೆ ಶರಾವತಿ ನದಿ ನೀರನ್ನು ಅರಸೀಕೆರೆಗೆ ತರಬಹುದು ಎಂದು ಸಚಿವ ಕಾಗೋಡು ತಿಮ್ಮಪ್ಪ ಕುಟುಕಿದರು.

‘ಜೋಗ ಜಲಪಾತದಲ್ಲಿ ಹರಿದು ಹೋಗುವ ನೀರನ್ನಾದರೂ ನಮಗೆ ಕೊಟ್ಟರೆ ಬದುಕುತ್ತೇವೆ’ ಎಂದು ಜೆಡಿಎಸ್‌ನ ಶಿವಲಿಂಗೇಗೌಡ ಹೇಳಿದರು.

‘ನೇತ್ರಾವತಿ ನದಿ ನೀರನ್ನು ತಿರುಗಿಸಿದರೆ ಮೀನು ಸಾಯುತ್ತದೆ ಎಂದು ತಕರಾರು ಇದೆ. ಶರಾವತಿ ನೀರು ಜೋಗದಲ್ಲಿ ಜಿಗಿದು, ಗೇರುಸೊಪ್ಪಾದಲ್ಲಿರುವ ಅಣೆಕಟ್ಟಿನ ಬಳಿಕ ಸಮುದ್ರದ ಕಡೆ ಹರಿಯುತ್ತದೆ. ದೇವೇಗೌಡರಿಗೆ ಹೇಳಿ, ಆ ನೀರನ್ನು ನಿಮ್ಮ ಊರಿಗೆ ತೆಗೆದುಕೊಂಡು ಹೋಗಿ. ನಮ್ಮದೇನೂ ಅಭ್ಯಂತರವಿಲ್ಲ’ ಎಂದು ಕಾಗೋಡು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT