‘ಗೊಂಬೆಗಳ ಲವ್’ ಸಿನಿಮಾ ಮೂಲಕ ಚಂದನವನದಲ್ಲಿ ಗುರುತಿಸಿಕೊಂಡಿರುವ ನಟ ಅರುಣ್ ಕುಮಾರ್, ‘ಮರಿ ಟೈಗರ್’ಗೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ ಎಂದು ಗಾಂಧಿನಗರದಿಂದ ಇತ್ತೀಚೆಗೆ ಸುದ್ದಿ ಹೊರಬಿದ್ದಿತ್ತು. ‘ನೆಲ್ಸನ್’ ಹೆಸರಿನ ಈ ಚಿತ್ರದಲ್ಲಿ ನಟ ವಿನೋದ್ ಪ್ರಭಾಕರ್ ಅವರ ಜೊತೆಗೆ ಯಾರಿರಲಿದ್ದಾರೆ ಎನ್ನುವ ಸುಳಿವು ಸಿಕ್ಕಿದೆ.
ಕರಾವಳಿಯ ಲಿಯೋನಿಲ್ಲಾ ಶ್ವೇತಾ ಡಿಸೋಜಾ ‘ನೆಲ್ಸನ್’ ತಂಡ ಸೇರಿಕೊಂಡಿದ್ದಾರೆ. ಅವರ ಪಾತ್ರದ ಬಗ್ಗೆ ಚಿತ್ರತಂಡದಿಂದ ಇನ್ನಷ್ಟೇ ಮಾಹಿತಿ ಹೊರಬೀಳಬೇಕಿದೆ. ಹಿಂದಿ ಸಿನಿಮಾ ‘Y’ಯಿಂದ ತಮ್ಮ ನಟನೆಯ ಪಯಣ ಆರಂಭಿಸಿದ್ದ ಲಿಯೋನಿಲ್ಲಾ, ಬಳಿಕ ಕನ್ನಡದ ‘ಖಾಸಗಿ ಪುಟಗಳು’, ‘ಹೆಜ್ಜಾರು’ ಸಿನಿಮಾಗಳಲ್ಲಿ ನಟಿಸಿದ್ದಾರೆ.
‘ಹೆಜ್ಜಾರು’ ಇನ್ನಷ್ಟೇ ಬಿಡುಗಡೆಯಾಗಬೇಕಿದೆ. ಸಿನಿಮಾ ಕ್ಷೇತ್ರದ ಜೊತೆಗೆ ಐ.ಟಿ. ಉದ್ಯೋಗಿಯಾಗಿಯೂ ಕೆಲಸ ಮಾಡುತ್ತಿರುವ ಲಿಯೋನಿಲ್ಲಾ, ‘ನೆಲ್ಸನ್’ ಜೊತೆಗೆ ಮತ್ತೊಂದು ಪ್ರಾಜೆಕ್ಟ್ ಕೂಡ ಒಪ್ಪಿಕೊಂಡಿದ್ದಾರೆ.
1960 ರಿಂದ 90ರ ದಶಕದಲ್ಲಿ ಚಾಮರಾಜನಗರದಲ್ಲಿ ನಡೆಯುವ ನೈಜ ಕಥೆಯನ್ನು ‘ನೆಲ್ಸನ್’ ಸಿನಿಮಾ ಹೊತ್ತಿದೆ. ಗ್ಯಾಂಗ್‌ಸ್ಟರ್‌ನ ಜೀವನದ ಸುತ್ತ ಕಥಾಹಂದರವಿದ್ದು, ವಿನೋದ್ ಪ್ರಭಾಕರ್ ಅವರು ಹಿಂದೆಂದೂ ಕಾಣದ ಅವತಾರದಲ್ಲಿ ಚಿತ್ರದ ಪೋಸ್ಟರ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ದೀಪ ಫಿಲ್ಮ್ಸ್ ಬ್ಯಾನರ್‌ನಲ್ಲಿ ಬಿ.ಎಂ. ಶ್ರೀರಾಮ್ (ಕೋಲಾರ) ಈ ಚಿತ್ರಕ್ಕೆ ಹಣ ಹೂಡಿದ್ದು, ಇದೇ ತಿಂಗಳಲ್ಲಿ ಚಿತ್ರತಂಡ ಶೂಟಿಂಗ್ ಅಖಾಡಕ್ಕೆ ಇಳಿಯಲಿದೆ.