ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನಿರ್ಮಾಪಕರ ಗಲಾಟೆ ಪ್ರಕರಣ | ಸತೀಶ್‌ರಿಂದ ಹಲ್ಲೆ: ಸುರೇಶ್‌ ಆರೋಪ

Published 30 ಮೇ 2024, 13:50 IST
Last Updated 30 ಮೇ 2024, 13:50 IST
ಅಕ್ಷರ ಗಾತ್ರ

ಬೆಂಗಳೂರು: ‘ಗೋವಾದಲ್ಲಿ ಸೋಮವಾರ ಕನ್ನಡ ಸಿನಿಮಾ ನಿರ್ಮಾಪಕರ ನಡುವೆ ಗಲಾಟೆ ನಡೆದಿದ್ದು ನಿಜ. ನಿರ್ಮಾಪಕ ಸತೀಶ್‌ ಹಲವರ ಮೇಲೆ ಹಲ್ಲೆ ನಡೆಸಿದ್ದು, ಅವರ ಮೇಲೆ ಶಿಸ್ತುಕ್ರಮ ಜರುಗಿಸಲಾಗುವುದು’ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎನ್‌.ಎಂ.ಸುರೇಶ್‌ ಆರೋಪಿಸಿದರು.

ಗುರುವಾರ ವಾಣಿಜ್ಯ ಮಂಡಳಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಿರ್ಮಾಪಕ ದಶಾವರ ಮಂಜುನಾಥ್‌ ಮೇಲೆ ಸತೀಶ್‌ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಗಲಾಟೆ ಬಿಡಿಸಲು ಹೋದ ನನ್ನ ಮೇಲೆ ಹಾಗೂ ಎ.ಗಣೇಶ್‌ ಮೇಲೆ ಹಲ್ಲೆ ನಡೆಸಿದ್ದಾರೆ. ವಾಣಿಜ್ಯ ಮಂಡಳಿ ಗೌರವ ಬೀದಿಗೆ ಬರಬಾರದು ಎಂಬ ಕಾರಣಕ್ಕೆ ವಿಷಯ ಬಹಿರಂಗಪಡಿಸಲಿಲ್ಲ. ತಾಂತ್ರಿಕ ಕಾರಣದಿಂದ ದೂರು ನೀಡಿರಲಿಲ್ಲ. ಅದಕ್ಕೆ ಕ್ಷಮೆ ಇರಲಿ. ಗೋವಾಕ್ಕೆ ತೆರಳಿ ದೂರು ನೀಡುತ್ತೇವೆ. ಮಂಡಳಿಯಲ್ಲಿ ತೀರ್ಮಾನಿಸಿ ಸತೀಶ್‌ ವಿರುದ್ಧ ಶಿಸ್ತಕ್ರಮ ತೆಗೆದುಕೊಳ್ಳುತ್ತೇವೆ’ ಎಂದು ತಿಳಿಸಿದರು.  

‘ಮಂಡಳಿ ಅಧ್ಯಕ್ಷನಾದ ಬಳಿ ಪದಾಧಿಕಾರಿಗಳನ್ನ ಪ್ರವಾಸಕ್ಕೆ ಕರೆದುಕೊಂಡು ಹೋಗಬೇಕು ಎಂಬ ಆಸೆಯಿತ್ತು. ಹಾಗಾಗಿ 52 ಜನ ಗೋವಾಕ್ಕೆ ಹೋಗಿದ್ದೆವು. ಬೈಲಾ ವಿಷಯಕ್ಕಾಗಲಿ, ಚುನಾವಣೆ ವಿಷಯಕ್ಕಾಗಲಿ ನಡೆದ ಗಲಾಟೆ ಅಲ್ಲ. ಪಾರ್ಟಿ ಮುಗಿಸಿ ಊಟ ಮಾಡುವಾಗ ನಡೆದ ಘಟನೆ. ಘಟನಾ ಸ್ಥಳದ ಸಿಸಿಟಿವಿ ದೃಶ್ಯಗಳನ್ನು ತರಿಸಿ ಶೀಘ್ರದಲ್ಲಿ ಎಲ್ಲವಕ್ಕೂ ಸಾಕ್ಷಿ ನೀಡುತ್ತೇವೆ. ಇಡೀ ಚಿತ್ರೋದ್ಯಮ ಈ ಘಟನೆ ಒಕ್ಕೋರಲಿನಿಂದ ವಿರೋಧಿಸುತ್ತದೆ. ಗಲಾಟೆಯಲ್ಲಿ ರಕ್ತ ಕೋಡಿ ಹರಿದು ಹೋಗ್ತಿದೆ ಅನ್ನಿಸಿತು. ಸತೀಶ್‌ ಅವರನ್ನು ತಡೆಯಲು ಹೋದಾಗ, ಗನ್ ಇದೆ ತೆಗೆಯಲಾ ಎಂದು ಅತಿರೇಕದಿಂದ ವರ್ತಿಸಿದರು’ ಎಂದು ಸುರೇಶ್‌ ದೂರಿದರು.

ಎ.ಗಣೇಶ್‌ ಕೂಡ, ಭಾ.ಮಾ.ಹರೀಶ್‌, ಸಾ.ರಾ.ಗೋವಿಂದು ಮೊದಲಾದವರು ಘಟನೆ ಕುರಿತು ಮಾತನಾಡಿದರು. ವಾಣಿಜ್ಯ ಮಂಡಳಿ ಬಹುತೇಕ ಪದಾಧಿಕಾರಿಗಳು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.  

ಹಲ್ಲೆ ನಡೆಸಿಲ್ಲ: ‘ಗೋವಾಕ್ಕೆ ಪ್ರವಾಸಕ್ಕೆ ಹೋಗಿದ್ದೆವು. ಕ್ಲಬ್‌ನಲ್ಲಿ ಪಾರ್ಟಿ ಆಯೋಜಿಸಿದ್ದರು. ರಥಾವರ ಮಂಜುನಾಥ್‌ ಬಂದು ಬೈಲಾ ಕುರಿತು ಜಗಳಕ್ಕೆ ಬಂದರು. ಅವಾಚ್ಯ ಶಬ್ದಗಳಿಂದ ನಿಂದಿಸಿ ಹೊಡೆಯಲು ಬಂದರು. ನೂಕಾಟದಲ್ಲಿ ಬಿದ್ದು ಏಟಾಗಿದೆಯೇ ಹೊರತು ನಾನು ಯಾವುದೇ ರೀತಿಯಲ್ಲಿ ಹಲ್ಲೆ ನಡೆಸಿಲ್ಲ. ನನ್ನದು ತಪ್ಪಿಲ್ಲ. ಕಾನೂನು ಪ್ರಕಾರ ಹೋರಾಟ ಮಾಡುತ್ತೇನೆ’ ಎಂದು ಆಂತರ್ಯ ಸತೀಶ್‌ ಪ್ರಜಾವಾಣಿಗೆ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT