ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಂದನವನ | ಅರ್ಧ ವರ್ಷ ಸ್ಟಾರ್‌ ನಟರ ಸಿನಿಮಾಗಳಿಲ್ಲ!

Published 2 ಮೇ 2024, 23:30 IST
Last Updated 2 ಮೇ 2024, 23:30 IST
ಅಕ್ಷರ ಗಾತ್ರ
ಸ್ಟಾರ್‌ ನಟರ ಸಿನಿಮಾಗಳು ಬಿಡುಗಡೆಯಾಗದೆ ಈ ವರ್ಷದ ಮೊದಲಾರ್ಧವನ್ನು ಚಂದನವನ ದೂಡಲಿದೆ. ಬಿಡುಗಡೆ ಸಜ್ಜಾಗಿರುವ ಸಿನಿಮಾಗಳೂ ನಾನಾ ಕಾರಣಗಳನ್ನು ಮುಂದಿಟ್ಟುಕೊಂಡು ತೆರೆಗೆ ಬರಲು ಹಿಂದಡಿ ಇಡುತ್ತಿವೆ. ಸ್ಟಾರ್‌ ನಟರ ಸಿನಿಮಾಗಳಿಲ್ಲದೆ ಹಲವು ಚಿತ್ರಮಂದಿರಗಳು ಮುಚ್ಚುವ ಪರಿಸ್ಥಿತಿಗೆ ಬಂದಿವೆ...

ಮಾರ್ಚ್‌ 8, 2024– ಇದು ಶಿವರಾಜ್‌ಕುಮಾರ್‌ ಮತ್ತು ಪ್ರಭುದೇವ ನಟನೆಯ ‘ಕರಟಕ ದಮನಕ’ ಸಿನಿಮಾ ಬಿಡುಗಡೆಗೊಂಡ ದಿನ. ಇದನ್ನೊಂದನ್ನು ಹೊರತುಪಡಿಸಿದರೆ ಈ ವರ್ಷ ಇಲ್ಲಿಯವರೆಗೆ (ಮೇ 3) ಇತರೆ ಸ್ಟಾರ್‌ ನಟರ ಸಿನಿಮಾಗಳು ತೆರೆಗೆ ಬಂದಿಲ್ಲ. ಸದ್ಯಕ್ಕೆ ಬರುವ ಯಾವ ಲಕ್ಷಣವೂ ಇಲ್ಲ. ಆಗಸ್ಟ್‌ 15ಕ್ಕೆ ಶಿವರಾಜ್‌ಕುಮಾರ್ ನಟನೆಯ ‘ಭೈರತಿ ರಣಗಲ್‌’ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಘೋಷಿಸಿದೆ. ಅಲ್ಲಿಗೆ ಚಂದನವನದ ತೆರೆಗಳು ಸಂಕ್ರಾಂತಿ, ಯುಗಾದಿ ಕಳೆದರೂ ಸ್ಟಾರ್‌ ನಟರ ಸಿನಿಮಾಗಳಿಲ್ಲದೆ ಅರ್ಧ ವರ್ಷವನ್ನು ದೂಡಲಿವೆ.

ಜನವರಿ–ಏಪ್ರಿಲ್‌ ಅವಧಿಯಲ್ಲಿ ಕೆಲ ಸದಭಿರುಚಿಯ ಸಿನಿಮಾಗಳು ಬಿಡುಗಡೆಗೊಂಡಿದ್ದರೂ, ಅವುಗಳಿಗೆ ಪ್ರೇಕ್ಷಕರ ಸಂಖ್ಯೆಯ ಕೊರತೆ ಕಾಡಿದವು. ಇಷ್ಟೆಲ್ಲದರ ನಡುವೆ ಚಂದನವನದ ತೆರೆಗಳಲ್ಲಿ ಮತ್ತೆ ಸಿನಿಮಾ ಹಬ್ಬ ಆರಂಭವಾಗಬೇಕು ಎಂದರೆ ಸ್ಟಾರ್‌ ನಟರ ಸಿನಿಮಾಗಳು ಸರತಿಯಲ್ಲಿ ಬಿಡುಗಡೆಗೊಳ್ಳಬೇಕು. ಆದರೆ ಪ್ರತಿಯೊಂದು ಚಿತ್ರತಂಡವೂ ತಮ್ಮದೇ ಕಾರಣ ನೀಡುತ್ತಾ ಸಿನಿಮಾ ಬಿಡುಗಡೆ ವಿಳಂಬ ಮಾಡುತ್ತಿವೆ. ಪ್ರತಿ ವರ್ಷದ ಏಪ್ರಿಲ್‌–ಮೇ ತಿಂಗಳು ಐಪಿಎಲ್‌ ಜ್ವರದಲ್ಲಿ ಕಳೆದರೆ, ಈ ವರ್ಷ ಬಂದಿರುವ ಚುನಾವಣೆ ಬಿಸಿಯೂ ಕೆಲ ಸಿನಿಮಾಗಳಿಗೆ ತಟ್ಟಿದೆ. ಜೂನ್‌ 4ಕ್ಕೆ ಚುನಾವಣೆ ಫಲಿತಾಂಶ ಬರಲಿದ್ದು, ಅಲ್ಲಿಯವರೆಗೂ ಸಿನಿಮಾ ಬಿಡುಗಡೆಗೆ ನಿರ್ಮಾಪಕರು ಹಿಂಜರಿಯುತ್ತಿದ್ದಾರೆ. ಕೆಲ ಸ್ಟಾರ್‌ಗಳ ಸಿನಿಮಾಗಳು ಒಟಿಟಿ, ಸ್ಯಾಟಲೈಟ್‌ ವ್ಯವಹಾರವಾಗದ ಕಾರಣದಿಂದ ಹಿಂದಡಿ ಇಡುತ್ತಿದೆ. ಜೊತೆಗೆ ಪ್ಯಾನ್‌ ಇಂಡಿಯಾ ಯುಗದಲ್ಲಿ ಅತ್ಯುತ್ತಮ ಗುಣಮಟ್ಟದ ಸಿನಿಮಾವನ್ನೇ ನೀಡಬೇಕು ಎನ್ನುವ ಕಾರಣಕ್ಕೂ ಕೆಲ ಸಿನಿಮಾಗಳು ವಿಳಂಬವಾಗುತ್ತಿವೆ. 

‘ಭೀಮ’ ಎಲ್ಲಿ ಹೋದ?

ಫೆಬ್ರುವರಿ 24, 2022 ರಂದು ದುನಿಯಾ ವಿಜಯ್‌ ತಮ್ಮ 28ನೇ ಸಿನಿಮಾ ‘ಭೀಮ’ ಘೋಷಿಸಿದರು. ಏಪ್ರಿಲ್‌ 18, 2022ಕ್ಕೆ ಈ ಸಿನಿಮಾದ ಮುಹೂರ್ತ ನಡೆಯಿತು. ಇದಾಗಿ ಎರಡು ವರ್ಷ ಉರುಳಿದೆ. ಚಿತ್ರತಂಡ ಈಗಾಗಲೇ ಚಿತ್ರದಲ್ಲಿರುವ ಪಾತ್ರಗಳನ್ನು ಪರಿಚಯಿಸಿದೆ. ಜೊತೆಗೆ ಫಸ್ಟ್‌ ಲುಕ್‌ ಟೀಸರ್‌, ಎರಡು ಹಾಡುಗಳನ್ನು ರಿಲೀಸ್‌ ಮಾಡಿದೆ. ಅಧಿಕೃತ ಟೀಸರ್‌ ಬಿಡುಗಡೆಯಾಗಿ ಮೂರು ತಿಂಗಳು ಕಳೆದಿದ್ದರೂ, ಸಿನಿಮಾ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಇನ್ನೂ ಘೋಷಿಸಿಲ್ಲ.

ಉಪೇಂದ್ರ ನಟನೆಯ ‘ಯುಐ’ ಸಿನಿಮಾ ವಿಎಫ್‌ಎಕ್ಸ್‌ ಕಾರಣದಿಂದಾಗಿ ವಿಳಂಬವಾಗಿದೆ ಎನ್ನುತ್ತಾರೆ ನಿರ್ಮಾಪಕ ಕೆ.ಪಿ. ಶ್ರೀಕಾಂತ್‌. 2022ರ ಜೂನ್‌ನಲ್ಲಿ ಸೆಟ್ಟೇರಿದ್ದ ಈ ಸಿನಿಮಾ ಇದೇ ಜೂನ್‌ನಲ್ಲಿ ತೆರೆಕಾಣುವ ಸಾಧ್ಯತೆ ಇದೆ. ಈ ಸಿನಿಮಾದ ವಿಳಂಬದಿಂದಾಗಿ ಬಿಡುಗಡೆಗೆ ಸಜ್ಜಾಗಿರುವ ‘ಬುದ್ಧಿವಂತ–2’ ಸಿನಿಮಾವೂ ಮುಂದೂಡಲ್ಪಡುತ್ತಿದೆ. ಆರಂಭದಲ್ಲಿ ‘ಭೀಮ’, ‘ಯುಐ’ ಸಿನಿಮಾಗಳ ಪ್ರಚಾರ ಭರ್ಜರಿಯಾಗಿದ್ದರೂ, ನಂತರ ಸದ್ದಿಲ್ಲದೇ ಹಿಂದಕ್ಕೆ ಸರಿದಿವೆ. 

ವ್ಯವಹಾರ ಮುನ್ನೆಲೆಗೆ

‘ಸ್ಟಾರ್‌ ಸಿನಿಮಾಗಳಿಲ್ಲದೆ ರಾಜ್ಯದ ಕೆಲ ಚಿತ್ರಮಂದಿರಗಳು ಮುಚ್ಚುವ ಪರಿಸ್ಥಿತಿಗೆ ಬರುತ್ತಿದೆ. ಅಂದಾಜು 150 ಚಿತ್ರಮಂದಿರಗಳು ಈಗಾಗಲೇ ಮುಚ್ಚಿವೆ. ಈ ಹಿಂದೆ ನಿರ್ಮಾಪಕರು ಆಡಿಯೊ ಕಂಪನಿಗಳ ಹಕ್ಕು, ಚಿತ್ರಮಂದಿರಗಳ ವ್ಯವಹಾರವನ್ನು ಮೊದಲು ಗಣನೆಗೆ ತೆಗೆದುಕೊಳ್ಳುತ್ತಿದ್ದರು. ಕ್ರಮೇಣ ಅವರ ಮನಸ್ಸು ಬದಲಾಯಿತು. ಚಿತ್ರಮಂದಿರ, ಒಟಿಟಿ, ಸ್ಯಾಟಲೈಟ್‌ ಹೀಗೆ ಎಲ್ಲ ವ್ಯವಹಾರಗಳಿಂದ ಬರುವ ಆದಾಯವನ್ನು ಏಕೆ ಕಳೆದುಕೊಳ್ಳಬೇಕು ಎನ್ನುವ ಮನಃಸ್ಥಿತಿಗೆ ಬಂದಿದ್ದಾರೆ. ಇದರಿಂದ ಪ್ರದರ್ಶಕರು ತೊಂದರೆ ಅನುಭವಿಸುತ್ತಿದ್ದಾರೆ. ‌ಏಳೆಂಟು ಸಿನಿಮಾಗಳು ಬಿಡುಗಡೆಗೆ ಸಿದ್ಧವಿದ್ದರೂ, ಅದರ ನಿರ್ಮಾಪಕರು ಒಟಿಟಿ, ಸ್ಯಾಟಲೈಟ್‌ ವ್ಯವಹಾರ ಪೂರ್ಣಗೊಳಿಸಲು ಕಾಯುತ್ತಿದ್ದಾರೆ. ನಿರ್ಮಾಪಕರು ಷೇರು ಮಾರುಕಟ್ಟೆಯಂಥ ಮನಃಸ್ಥಿತಿ ಬಿಟ್ಟು, ಈ ಮೊದಲು ಇದ್ದ ಲೆಕ್ಕಾಚಾರಕ್ಕೆ ಬರಬೇಕು. ಎರಡು ತಿಂಗಳಿಗೊಂದು ಸ್ಟಾರ್‌ ಸಿನಿಮಾ ಬಂದರೆ ಚಿತ್ರಮಂದಿರಗಳು ಜೀವಂತಿಕೆಯಿಂದ ಇರುತ್ತವೆ’ ಎನ್ನುತ್ತಾರೆ ವೀರೇಶ್‌ ಸಿನಿಮಾಸ್‌ನ ಮಾಲೀಕ ಕೆ.ವಿ.ಚಂದ್ರಶೇಖರ್‌.

ಜುಲೈಗೆ ‘ಮ್ಯಾಕ್ಸ್‌’?

ಕಿಚ್ಚ ಸುದೀಪ್‌ ನಟನೆಯ 46ನೇ ಸಿನಿಮಾ ‘ಮ್ಯಾಕ್ಸ್‌’ನ ಶೂಟಿಂಗ್‌ ಇನ್ನೂ ಪೂರ್ಣಗೊಂಡಿಲ್ಲ. ಕಳೆದ ನವೆಂಬರ್‌ನಲ್ಲಿ ತಮಿಳುನಾಡಿನಲ್ಲಿ ಸುರಿದ ಭಾರಿ ಮಳೆಯಿಂದಾಗಿ ಸಿನಿಮಾದ ಶೆಡ್ಯೂಲ್‌ ಅಸ್ತವ್ಯಸ್ತಗೊಂಡಿತು. ‘ಜೈಲರ್‌’ ಸಿನಿಮಾಗೆ ಸಾಹಸ ನಿರ್ದೇಶನ ಮಾಡಿದ್ದ ಕೆವಿನ್‌ ಇತ್ತೀಚೆಗಷ್ಟೇ ‘ಮ್ಯಾಕ್ಸ್‌’ನ ಕ್ಲೈಮ್ಯಾಕ್ಸ್‌ಗೆ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ಇನ್ನೂ ನಾಲ್ಕೈದು ದಿನಗಳ ಶೂಟಿಂಗ್‌ ಬಾಕಿ ಇದ್ದು, ಜುಲೈಗೆ ಈ ಸಿನಿಮಾ ತೆರೆಕಾಣುವ ಸಾಧ್ಯತೆ ಇದೆ. ಇದಾದ ಬಳಿಕ ಸುದೀಪ್‌, ಅನೂಪ್‌ ಭಂಡಾರಿ ಆ್ಯಕ್ಷನ್‌ ಕಟ್‌ ಹೇಳಲಿರುವ ‘ಬಿಲ್ಲಾ ರಂಗ ಬಾಷಾ’(BRB) ಟೀಸರ್‌ ಶೂಟ್‌ನಲ್ಲಿ ತೊಡಗಿಸಿಕೊಳ್ಳಲಿದ್ದಾರೆ.

ಧನಂಜಯ ನಟನೆಯ ‘ಕೋಟಿ’ ಜೂನ್‌ 14ಕ್ಕೆ ಬಿಡುಗಡೆಯಾಗುತ್ತಿದೆ. ಗಣೇಶ್‌ ನಟನೆಯ ‘ಕೃಷ್ಣಂ ಪ್ರಣಯ ಸಖಿ’ ಜೂನ್‌ನಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ. 2021ರಲ್ಲಿ ಶೂಟಿಂಗ್‌ ಆರಂಭಿಸಿದ್ದ ಧ್ರುವ ಸರ್ಜಾ ನಟನೆಯ ‘ಮಾರ್ಟಿನ್‌’ ಚಿತ್ರವು ಸದ್ಯ ಪೋಸ್ಟ್‌ ಪ್ರೊಡಕ್ಷನ್‌ ಹಂತದಲ್ಲಿದೆ. ಧ್ರುವ ನಟನೆಯ ‘KD’ ಸಿನಿಮಾದ ಶೂಟಿಂಗ್‌ ಕೂಡ ಕೊನೆಯ ಹಂತ ತಲುಪಿದೆ.

ಸಿನಿಮಾದಲ್ಲಿ ಹೆಚ್ಚು ಫೈಟ್ಸ್‌ ಇದ್ದು, ವಿಎಫ್‌ಎಕ್ಸ್‌ ಕೆಲಸ ಬಹಳಷ್ಟಿತ್ತು. ಈ ಕೆಲಸ ಕೊನೆಯ ಹಂತದಲ್ಲಿದೆ. ಚುನಾವಣೆ ಬಂದಿರುವ ಕಾರಣದಿಂದ ದಿನಾಂಕ ಘೋಷಿಸಿಲ್ಲ. ಚುನಾವಣೆ ಫಲಿತಾಂಶದ ಬಳಿಕ ‘ಭೀಮ’ ಬಿಡುಗಡೆಗೊಳ್ಳಲಿದೆ. ಜೊತೆಗೆ ಒಂದು ಹಾಡು ಮತ್ತು ಫೈಟ್‌ಗೆ ದುನಿಯಾ ವಿಜಯ್‌ ಅವರು ಬಾಡಿ ಟೋನ್‌ ಮಾಡಿಕೊಳ್ಳಬೇಕಿದ್ದ ಕಾರಣ ಆರು ತಿಂಗಳು ಸಮಯಾವಕಾಶ ನೀಡಿದ್ದೆವು. ಈ ಎಲ್ಲ ಕಾರಣದಿಂದ ಸಿನಿಮಾ ವಿಳಂಬವಾಯಿತು.
–ಕೃಷ್ಣ ಸಾರ್ಥಕ್‌, ಭೀಮ ಸಿನಿಮಾ ನಿರ್ಮಾಪಕ

ವಿನೋದ್‌ ಪ್ರಭಾಕರ್‌ ನಟನೆಯ ‘ಲಂಕಾಸುರ’ ಕೂಡಾ ಬಿಡುಗಡೆಗೆ ಸಿದ್ಧವಿದ್ದು, ಚಿತ್ರತಂಡ ಇನ್ನೂ ರಿಲೀಸ್‌ ದಿನಾಂಕ ಘೋಷಿಸಿಲ್ಲ. ದರ್ಶನ್‌ ನಟನೆಯ ‘ಡೆವಿಲ್‌’ ಚಿತ್ರದ ಶೂಟಿಂಗ್‌ ಆರಂಭವಾಗಿದೆ. ದರ್ಶನ್‌ ಕೈಗೆ ಪೆಟ್ಟು ಮಾಡಿಕೊಂಡಿದ್ದು, ಏನಿದ್ದರೂ ಅಕ್ಟೋಬರ್‌ನಲ್ಲೇ ಚಿತ್ರ ಬಿಡುಗಡೆಗೆ ಅವರು ನಿರ್ಧರಿಸಿದ್ದಾರೆ. 2022ರ ಮೇ ತಿಂಗಳಲ್ಲಿ ಸೆಟ್ಟೇರಿದ್ದ ಶ್ರೀಮುರಳಿ ನಟನೆಯ ‘ಬಘೀರ’ ಚಿತ್ರದ ಶೂಟಿಂಗ್‌ ಅಂತಿಮ ಹಂತದಲ್ಲಿದೆ.    

ಯಶ್‌ ನಟನೆಯ ‘ಕೆ.ಜಿ.ಎಫ್‌. ಚಾಪ್ಟರ್‌–2’ ಬಿಡುಗಡೆಗೊಂಡಿದ್ದು ಏಪ್ರಿಲ್‌ 14, 2022ರಂದು. ಏಪ್ರಿಲ್‌ 10, 2025ರಂದು ‘ಟಾಕ್ಸಿಕ್‌’ ಬಿಡುಗಡೆಯಾಗಲಿದೆ ಎಂದು ಯಶ್‌ ಈಗಾಗಲೇ ಘೋಷಿಸಿದ್ದು, ಮೂರು ವರ್ಷಗಳ ಬಳಿಕ ರಾಕಿಂಗ್‌ ಸ್ಟಾರ್‌ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ರಿಷಬ್‌ ಶೆಟ್ಟಿ ನಟಿಸಿ ನಿರ್ದೇಶಿಸುತ್ತಿರುವ ‘ಕಾಂತಾರ–ಒಂದು ದಂತಕಥೆ ಮೊದಲ ಅಧ್ಯಾಯ’ ಸಿನಿಮಾದ ಪ್ರಿಪ್ರೊಡಕ್ಷನ್‌ ಕೆಲಸಗಳು ಪೂರ್ಣಗೊಂಡಿದ್ದು, ರಿಷಬ್‌ ಹುಟ್ಟೂರಿನಲ್ಲಿ ನಿರ್ಮಿಸಲಾಗಿರುವ ಬೃಹತ್‌ ಸೆಟ್‌ಗಳಲ್ಲಿ ಚಿತ್ರೀಕರಣ ಶೀಘ್ರದಲ್ಲೇ ಆರಂಭವಾಗಲಿದೆ. ಈ ಸಿನಿಮಾವೂ 2025ರಲ್ಲಿ ತೆರೆಕಾಣುವ ಸಾಧ್ಯತೆ ಇದೆ. 

‘ಕಾಟೇರ’ ಸಿನಿಮಾ ಬಿಡುಗಡೆಯಾದ ಸಂದರ್ಭದಲ್ಲಿ ಚೇತರಿಕೆ ಕಂಡಿದ್ದ ಕೆಲ ಏಕಪರದೆ ಚಿತ್ರಮಂದಿರಗಳು ಇದೀಗ ಮತ್ತೆ ಮುಚ್ಚುವ ಹಂತ ತಲುಪಿವೆ’ ಎನ್ನುತ್ತಾರೆ ಪಿಆರ್‌ಒ ಸುಧೀಂದ್ರ ವೆಂಕಟೇಶ್‌. ಸ್ಟಾರ್‌ ನಟರ ಸಿನಿಮಾಗಳು ಚಿತ್ರಮಂದಿರ ತುಂಬಿದಾಗಲೇ ಚಂದನವನದಲ್ಲಿ ಹಬ್ಬದ ವಾತಾವರಣ ಕಾಣಿಸುತ್ತದೆ. ಈ ಹಬ್ಬ ಶೀಘ್ರವೇ ಆರಂಭವಾಗಲಿ ಎನ್ನುವ ಆಶಯ ಅಭಿಮಾನಿಗಳದ್ದು, ಚಿತ್ರಮಂದಿರಗಳ ಮಾಲೀಕರದ್ದು. ಸದ್ಯಕ್ಕೆ ಮುಂದಿನ ಶುಕ್ರವಾರ (ಮೇ 10) ಶರಣ್‌ ನಟನೆಯ ‘ಛೂ ಮಂತರ್‌’, ರಿಷಿ ನಟನೆಯ ‘ರಾಮನ ಅವತಾರ’, ವಿಜಯ ರಾಘವೇಂದ್ರ ನಟನೆಯ ‘ಗ್ರೇ ಗೇಮ್ಸ್‌’ ಸಿನಿಮಾಗಳು ಬಿಡುಗಡೆಯಾಗುತ್ತಿವೆ.

‘ಅಂಜನಿಪುತ್ರ’ ಮರುಬಿಡುಗಡೆ

ತೆರೆಗಳಿಗೆ ಸ್ಟಾರ್‌ ನಟರ ಸಿನಿಮಾಗಳ ಹರಿವು ಇಲ್ಲದೇ ಇರುವ ಸಂದರ್ಭದಲ್ಲೇ ಮೇ 10ರಂದು ನಟ ದಿವಂಗತ ಪುನೀತ್ ರಾಜ್‌ಕುಮಾರ್ ಅಭಿನಯದ ‘ಅಂಜನಿಪುತ್ರ’ ಮರುಬಿಡುಗಡೆಯಾಗುತ್ತಿದೆ. ಎಂ.ಎನ್.ಕೆ‌ ಮೂವೀಸ್ ಲಾಂಛನದಲ್ಲಿ ಎಂ.ಎನ್ ಕುಮಾರ್ ನಿರ್ಮಿಸಿ, ಎ.ಹರ್ಷ ನಿರ್ದೇಶಿಸಿರುವ ಈ ಸಿನಿಮಾ ರಾಜ್ಯದಾದ್ಯಂತ ಮತ್ತೆ ತೆರೆಗೆ ಬರಲಿದೆ.

ಮುಂದಿನ ವರ್ಷ ‘ರಿಚರ್ಡ್‌ ಆಂಟನಿ’

‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾ ಬಳಿಕ ಸದ್ಯ ನಟ ರಕ್ಷಿತ್‌ ಶೆಟ್ಟಿ, ತಮ್ಮ ನಿರ್ದೇಶನದ ‘ರಿಚರ್ಡ್‌ ಆಂಟನಿ’ ಪ್ರಾಜೆಕ್ಟ್‌ ಕೈಗೆತ್ತಿಕೊಂಡಿದ್ದಾರೆ. ಚಿತ್ರದ ಪ್ರಿ ಪ್ರೊಡಕ್ಷನ್‌ ಕೆಲಸಗಳು ಆರಂಭವಾಗಿದ್ದು, ಚಿತ್ರತಂಡ ಉಡುಪಿಯಲ್ಲಿ ಬೀಡುಬಿಟ್ಟಿದೆ. ಚಿತ್ರದ ಸ್ಕ್ರಿಪ್ಟ್‌ನಲ್ಲಿ ಸ್ವಲ್ಪ ಕೆಲಸ ಉಳಿದುಕೊಂಡಿದೆ ಎಂದಿದ್ದಾರೆ ರಕ್ಷಿತ್‌. ಜೂನ್‌ನಲ್ಲಿ ಸಿನಿಮಾದ ಶೂಟಿಂಗ್‌ ಆರಂಭವಾಗುವ ಸಾಧ್ಯತೆ ಇದೆ. ಕರಾವಳಿ ಭಾಗದಲ್ಲೇ ಶೇ 50–60 ಚಿತ್ರೀಕರಣ ನಡೆಯಲಿದೆ. ಕೇರಳ, ಗೋಕರ್ಣ ಭಾಗದಲ್ಲೂ ಶೂಟಿಂಗ್‌ ಸಾಧ್ಯವಿದೆ. ಮುಂದಿನ ವರ್ಷಕ್ಕೆ ಸಿನಿಮಾ ಸಿದ್ಧವಾಗಲಿದೆ ಎಂದಿದ್ದಾರೆ ರಕ್ಷಿತ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT