ಸಂಜು: ಅನುಕೂಲಸಿಂಧು ಆತ್ಮಕಥೆ

7

ಸಂಜು: ಅನುಕೂಲಸಿಂಧು ಆತ್ಮಕಥೆ

Published:
Updated:
‘ಸಂಜು’ ಚಿತ್ರದಲ್ಲಿ ರಣಬೀರ್ ಕಪೂರ್

ಚಿತ್ರ: ಸಂಜು (ಹಿಂದಿ)
ನಿರ್ಮಾಣ: ವಿಧು ವಿನೋದ್ ಚೋಪ್ರಾ, ರಾಜ್‌ಕುಮಾರ್ ಹಿರಾನಿ
ನಿರ್ದೇಶನ: ರಾಜ್‌ಕುಮಾರ್ ಹಿರಾನಿ
ತಾರಾಗಣ: ರಣಬೀರ್ ಕಪೂರ್, ಪರೇಶ್ ರಾವಲ್, ವಿಕ್ಕಿ ಕೌಶಲ್, ದಿಯಾ ಮಿರ್ಜಾ, ಅನುಷ್ಕಾ ಶರ್ಮ, ಸೋನಂ ಕಪೂರ್, ಮನಿಷಾ ಕೊಯಿರಾಲಾ

---

ಖ್ಯಾತರು, ಕುಖ್ಯಾತರ ಬದುಕಿನ ಕಥೆಗಳನ್ನು ಸಿನಿಮಾ ಮಾಡುವಾಗ ಅದರ ಅಪೂರ್ಣತೆ ಅಥವಾ ಮರೆಮಾಚಿರಬಹುದಾದ ಸಂಗತಿಗಳೂ ಮುಖ್ಯವಾಗಿಬಿಡುತ್ತವೆ. ನಟ ಸಂಜಯ್ ದತ್ ಬದುಕಿನ ಒಂದಿಷ್ಟು ಸಂಗತಿಗಳ ಮೇಲೆ ಬೆಳಕು ಚೆಲ್ಲುವ ‘ಸಂಜು’ ಕಥೆಯ ದೃಷ್ಟಿಯಿಂದ ಏಕಮುಖಿ. ಮನರಂಜನೆಯನ್ನೇ ಮುಖ್ಯವಾಗಿಸಿದರೆ ಮಜಾ.

ಸಂಜಯ್ ದತ್ ಮಾದಕವ್ಯಸನಿ, ಸ್ತ್ರೀಲೋಲ, ಅಸ್ಥಿರ ವೃತ್ತಿಬದುಕಿನ ಜನಪ್ರಿಯ ನಟ, ಶಸ್ತ್ರಾಸ್ತ್ರ ಇಟ್ಟುಕೊಂಡಿದ್ದ ಕಾರಣಕ್ಕೆ ಜೈಲು ಶಿಕ್ಷೆ ಅನುಭವಿಸಿದ ವ್ಯಕ್ತಿ ಎಂಬ ಬಹುಜನರಿಗೆ ಗೊತ್ತಿರುವ ಸಂಗತಿಗಳ ಹಿಂದಿನ ಭಾವುಕ ಜಗತ್ತನ್ನು ರಾಜ್‌ಕುಮಾರ್ ಹಿರಾನಿ ಕೆದಕಿದ್ದಾರೆ. ಸಂಜಯ್ ದತ್ ಅವರನ್ನು ಪ್ರಸನ್ನಗೊಳಿಸುವ ಅನುಕೂಲಸಿಂಧು ಚಿತ್ರಕಥೆ ಇದ್ದರೂ ಸಿನಿಮಾ ಶಿಲ್ಪವಾಗಿ ಅದನ್ನು ಒಪ್ಪಿಕೊಳ್ಳಲು ಸಾಕಷ್ಟು ಕಾರಣಗಳು ಸಿಗುತ್ತವೆ.

ಹಿರಾನಿ ನಾಡಿಮಿಡಿತ ಅರಿತ ಬರಹಗಾರ ಅಭಿಜಿತ್ ಜೋಷಿ ಎಂಥ ಗಂಭೀರ ದೃಶ್ಯವನ್ನೂ ಲಘು ಧಾಟಿಗೆ ಇಳಿಸಿ, ಕಚಗುಳಿ ಇಡಬಲ್ಲರು. ಹಲವು ಸನ್ನಿವೇಶಗಳಿಗೆ ಬಗೆ ಬಗೆಯ ಕ್ಲೈಮ್ಯಾಕ್ಸ್ (ಈ ಬಹು ಕ್ಲೈಮ್ಯಾಕ್ಸ್ ಸೂತ್ರವನ್ನು ‘ಥ್ರೀ ಈಡಿಯಟ್ಸ್‌’ನಲ್ಲೂ ಕಾಣಬಹುದು) ಬರೆಯುವುದರ ಮೂಲಕ ಪ್ರೇಕ್ಷಕರು ಕಣ್ಣು ಕೀಲಿಸುವಂತೆ ಮಾಡುವ ಜಾಣ್ಮೆ ಅವರಿಗೆ ಇದೆ. ಅದನ್ನು ಈ ಸಿನಿಮಾದಲ್ಲೂ ಹಲವು ದೃಶ್ಯಗಳು ಸಾಬೀತು ಪಡಿಸುತ್ತವೆ. ಸಂಭಾಷಣೆಯಲ್ಲೂ ಅಂಥ ಪಲುಕುಗಳಿವೆ. ಈ ಹದವರಿತ ‘ಪಂಚ್’ ಹಾಗೂ ನಾಯಕನಾಗಿ ರಣಬೀರ್ ಕಪೂರ್ ಪಾತ್ರದ ಪರಕಾಯ ಮಾಡಿರುವುದು– ಸಿನಿಮಾದ ಹೈಲೈಟುಗಳು.

ಸಿನಿಮಾದ ಮೊದಲಿನ ಅರ್ಧ ಭಾಗ ಸಂಜಯ್ ದತ್ ಮಾದಕವ್ಯಸನಿ ಆದದ್ದು ಯಾಕೆ ಎಂದು ಬಣ್ಣಿಸಲೇ ಬಳಕೆಯಾಗಿದೆ. ಅದರಲ್ಲಿ ಒಂದು ಭಗ್ನ ಪ್ರೇಮ, ಎರಡು ಸ್ನೇಹ, ಅಮ್ಮನ ಪ್ರೀತಿ, ಅಪ್ಪನ ಪುತ್ರ ಮೋಹ ಎಲ್ಲವೂ ಇವೆ. ಎಲ್ಲೂ ಗಾಂಭೀರ್ಯ ಹೆಚ್ಚಾಗಿ ಆವರಿಸದಂತೆ, ಪದೇ ಪದೇ ನಗೆಯುಕ್ಕಿಸಲೇಬೇಕು ಎಂಬ ಸಂಕಲ್ಪದಿಂದ ಕಥೆ ಕಟ್ಟಿದ್ದಾರೆ ಹಿರಾನಿ. ಎರಡನೇ ಭಾಗ ಹೆಣೆದಿರುವುದು ಸಂಜಯ್ ದತ್ ಜೈಲು ಶಿಕ್ಷೆಗೆ ಒಳಗಾಗುವ ಪ್ರಕ್ರಿಯೆಯನ್ನು ಏಕಮುಖವಾಗಿ ತೋರಬೇಕೆಂಬ ಹಾಗೂ ಆ ನಟನನ್ನು ಓಲೈಕೆ ಮಾಡಬೇಕೆಂಬ ಧೋರಣೆಯಿಂದ. ಇದನ್ನು ಸಾಕಾರ ಮಾಡಿಕೊಳ್ಳಲು ಮಾಧ್ಯಮದವರನ್ನೂ ನಿರ್ದೇಶಕರು ಹಣಿದಿದ್ದಾರೆ.

ಸಂಜಯ್ ದತ್ ಸ್ನೇಹಿತನ ಪಾತ್ರ ಹಾಗೂ ತಂದೆಯ ಪಾತ್ರವನ್ನು ಮುಂಚೂಣಿಗೆ ತಂದಿರುವ ನಿರ್ದೇಶಕರು, ಅದೇ ನಟನ ಮೊದಲ ಪತ್ನಿ ಹಾಗೂ ಮಕ್ಕಳ ಕುರಿತು ಪ್ರಸ್ತಾಪ ಮಾಡಿಯೇ ಇಲ್ಲ.

ದುರ್ಗುಣಗಳ ನಾಯಕನ ಮೇಲೆ ಸದ್ಗುಣಗಳ ಅಪ್ಪನ ಪಾತ್ರದ ನೆರಳು ಕವಿಯುವಂತೆ ನೋಡಿಕೊಳ್ಳುವ ನಿರ್ದೇಶಕರು, ಪ್ರಜ್ಞಾಪೂರ್ವಕವಾಗಿ ನೀತಿಯನ್ನೂ ಬಿತ್ತರಿಸುತ್ತಾ ಹೋಗುತ್ತಾರೆ. ಕೊನೆಗೆ ನಾಯಕನ ಆತ್ಮವಿಮರ್ಶೆಯ ಬಿಂದುವಿಗೇ ಅದನ್ನು ತಂದು ನಿಲ್ಲಿಸಿಬಿಡುತ್ತಾರೆ.

ಸಾಕ್ಷಾತ್ ಸಂಜಯ್ ದತ್ ತರಹವೇ ಕಾಣುವ, ಆಂಗಿಕ ಅಭಿನಯದಲ್ಲೂ ಅವರನ್ನೇ ಹೋಲುವ ರಣಬೀರ್ ಕಪೂರ್ ಜೀವಮಾನದ ಇದುವರೆಗಿನ ಅತ್ಯುತ್ತಮ ಪಾತ್ರವಿದು. ಕಟೆದ ತಮ್ಮ ಭುಜಗಳ ಮೇಲೆ ಅವರು ಇಡೀ ಸಿನಿಮಾವನ್ನು ಹೊತ್ತುಕೊಂಡಿದ್ದಾರೆ. ಪರೇಶ್ ರಾವಲ್ ನಾಟಕೀಯ ಅಭಿನಯವೂ ಉದ್ದೇಶಕ್ಕೆ ಪೂರಕ. ಸ್ನೇಹಿತನ ಪಾತ್ರದಲ್ಲಿ ವಿಕಿ ಕೌಶಲ್ ಕೂಡ ಗಮನ ಸೆಳೆಯುತ್ತಾರೆ. ನಟಿಯರಿಗೆ ಹೇಳಿಕೊಳ್ಳುವಂಥ ಅವಕಾಶಗಳು ಸಿನಿಮಾದಲ್ಲಿ ಇಲ್ಲ.

ಸಂಕಲನ, ನಿರೂಪಣೆ ಹಾಗೂ ಸಂಭಾಷಣೆಯಲ್ಲಿನ ಹಿಡಿತದಿಂದಾಗಿಯೇ ಮೈಮರೆತು ನೋಡಿಸಿಕೊಳ್ಳುವ ಸಿನಿಮಾದಲ್ಲಿ ಸಂಗೀತದ ರೂಪಕವೂ ಇದೆ. ಆದರೆ, ಅದು ಕಾಡುವುದಿಲ್ಲ. ಎ.ಆರ್. ರೆಹಮಾನ್ ಇದಕ್ಕೆ ಕೆಲಸ ಮಾಡಿದ್ದರೂ ಅವರ ರುಜು ಕಾಣುವುದಿಲ್ಲ. ಅಂತ್ಯದ ನಂತರವೂ ಕಾಡುವುದು ರಣಬೀರ್ ಕಪೂರ್ ಹರಳುಗಟ್ಟಿದ ಅಭಿನಯ. ಉಳಿಯುವುದು ಕಣ್ಣಂಚಿನಲ್ಲಿ ಒಂದೆರಡು ಹನಿ ನೀರು.

---

ಬರಹ ಇಷ್ಟವಾಯಿತೆ?

 • 12

  Happy
 • 2

  Amused
 • 2

  Sad
 • 1

  Frustrated
 • 3

  Angry

Comments:

0 comments

Write the first review for this !