ಶನಿವಾರ, ಆಗಸ್ಟ್ 20, 2022
21 °C

ಶೂಟಿಂಗ್‌ ಸೆಟ್‌ಗೆ ಮರಳಿದ ‘ಅವತಾರ ಪುರುಷ’

. Updated:

ಅಕ್ಷರ ಗಾತ್ರ : | |

Prajavani

‘ರ‍್ಯಾಂಬೊ 2’ ಚಿತ್ರದ ಬಳಿಕ ನಟ ಶರಣ್‌ ಮತ್ತು ಆಶಿಕಾ ರಂಗನಾಥ್‌ ಜೋಡಿ ‘ಅವತಾರ ಪುರುಷ’ ಸಿನಿಮಾದಲ್ಲಿ ಮತ್ತೆ ಒಂದಾಗಿರುವುದು ಎಲ್ಲರಿಗೂ ಗೊತ್ತೇ ಇದೆ. ಇದಕ್ಕೆ ಆ್ಯಕ್ಷನ್‌ ಕಟ್‌ ಹೇಳಿರುವುದು ಸಿಂಪಲ್‌ ಸುನಿ. ಕೋವಿಡ್‌–19 ಪರಿಣಾಮ ಇದರ ಶೂಟಿಂಗ್‌ ಸ್ಥಗಿತಗೊಂಡಿತ್ತು. ಸರ್ಕಾರದ ಮಾರ್ಗಸೂಚಿ ಅನ್ವಯ ಚಿತ್ರತಂಡ ಈಗ ಕೊನೆಯ ಹಂತದ ಶೂಟಿಂಗ್‌ ಆರಂಭಿಸಿದೆ.

ಲಾಕ್‌ಡೌನ್‌ಗೂ ಮೊದಲೇ ಚಿತ್ರತಂಡ ಇದರ ಮುಕ್ಕಾಲು ಭಾಗದಷ್ಟು ಚಿತ್ರೀಕರಣವನ್ನು ಪೂರ್ಣಗೊಳಿಸಿತ್ತು. ಮೂರು ಹಾಡುಗಳು ಮತ್ತು ಒಂದು ಸಾಹಸ ದೃಶ್ಯದ ಚಿತ್ರೀಕರಣವಷ್ಟೇ ಬಾಕಿ ಉಳಿದಿತ್ತು. ಈ ಕೊನೆಯ ಹಂತದ ಶೂಟಿಂಗ್‌ನಲ್ಲಿ ಬಾಕಿ ಉಳಿದಿರುವ ಚಿತ್ರೀಕರಣ ಪೂರ್ಣಗೊಳಿಸಿ ಡಿಸೆಂಬರ್‌ ಅಂತ್ಯಕ್ಕೆ ಜನರ ಮುಂದೆ ಬರುವ ಇರಾದೆ ಚಿತ್ರತಂಡದ್ದು.

ಚಿತ್ರದಲ್ಲಿ ಮಾಟ, ಮಂತ್ರದ ಸುತ್ತ ಕಥೆ ಹೆಣೆಯಲಾಗಿದೆ. ಅದಕ್ಕೆ ಹದವಾಗಿ ಹಾಸ್ಯದ ಲೇಪನ ಹಚ್ಚಲಾಗಿದೆ. ಇದೊಂದು ಪಕ್ಕಾ ಹಾರರ್‌, ಕಾಮಿಡಿ ಕಥೆವಂತೆ. ಶರಣ್‌ ಅವರದ್ದು ಇದರಲ್ಲಿ ಜೂನಿಯರ್‌ ಕಲಾವಿದನ ಪಾತ್ರ. ಹಾಗಾಗಿ, ವಿಭಿನ್ನ ಅವತಾರದಲ್ಲಿ ಅವರು ಕಾಣಿಸಿಕೊಳ್ಳಲಿದ್ದಾರೆ. ಆಶಿಕಾ ರಂಗನಾಥ್‌ ಅವರದ್ದು ಎನ್ಆರ್‌ಐ ಪಾತ್ರ. ಶರಣ್‌ ಅವರ ಪುತ್ರಿ ಪುಣ್ಯಾ ಈ ಚಿತ್ರದ ಮೂಲಕ ಬೆಳ್ಳಿತೆರೆ ಪ್ರವೇಶಿಸುತ್ತಿರುವ ಖುಷಿಯಲ್ಲಿದ್ದಾರೆ.

ಅಂದಹಾಗೆ ಮಂತ್ರವಾದಿ ಪಾತ್ರಕ್ಕೆ ಬಣ್ಣ ಹಚ್ಚಿರುವುದು ನಟ ಶ್ರೀನಗರ ಕಿಟ್ಟಿ. ಸಾಯಿಕುಮಾರ್‌ ಅವರದು ಆಯುರ್ವೇದಿಕ್‌ ಪಂಡಿತನ ಪಾತ್ರ. ಸುಧಾರಾಣಿ ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.

ಚಿತ್ರದಲ್ಲಿ ಒಟ್ಟು ನಾಲ್ಕು ಹಾಡುಗಳಿವೆ. ವಿಲಿಯಂ ಡೇವಿಡ್‌ ಅವರ ಛಾಯಾಗ್ರಹಣವಿದೆ. ಇಲ್ಲಿಯವರೆಗೆ ಕೇರಳದ ಪಾಲಕ್ಕಾಡ್ ಜಿಲ್ಲೆಯ ಒಳಪ್ಪಮನ್ನ, ಮಡಿಕೇರಿ ಮತ್ತು ಬೆಂಗಳೂರಿನ ಹೆಸರಘಟ್ಟದ ಸುತ್ತಮುತ್ತ ಶೂಟಿಂಗ್ ನಡೆಸಲಾಗಿದೆ. ಪುಷ್ಕರ್‌ ಫಿಲ್ಮ್ಸ್‌ನಡಿ ಪುಷ್ಕರ್‌ ಮಲ್ಲಿಕಾರ್ಜುನಯ್ಯ ಇದಕ್ಕೆ ಬಂಡವಾಳ ಹೂಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.