ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷ್ಣನ ಪ್ರೇಮ ಸಲ್ಲಾಪ!

Last Updated 27 ಏಪ್ರಿಲ್ 2020, 19:30 IST
ಅಕ್ಷರ ಗಾತ್ರ

ಕೃಷ್ಣನ ಹೆಸರಿನ ಸರಣಿ ಸಿನಿಮಾಗಳಿಗೂ ಹಾಗೂ ನಟ ಕೃಷ್ಣ ಅಜೇಯ್‌ ರಾವ್‌ಗೂ ಬಿಡಿಸಲಾಗದ ನಂಟು. ‘ತಾಯಿಗೆ ತಕ್ಕ ಮಗ’ ಚಿತ್ರದ ಬಳಿಕ ಅವರು ಪರದೆ ಮೇಲೆ ಕೃಷ್ಣನ ವೇಷ ಕಳಚುತ್ತಾರೆ ಎಂದು ನಿರೀಕ್ಷಿಸಿದ್ದವರಿಗೆ ನಿರಾಸೆಯಾಗಿದ್ದರೆ ಅಚ್ಚರಿಪಡಬೇಕಿಲ್ಲ. ಏಕೆಂದರೆ ‘ಕೃಷ್ಣನ ಟಾಕೀಸ್‌’ ಚಿತ್ರದ ಮೂಲಕ ಮತ್ತೆ ತಮ್ಮೊಳಗಿರುವ ಕೃಷ್ಣನ ಮೇಲಿರುವ ಪ್ರೀತಿಯನ್ನು ಅವರು ತೆರೆದಿಟ್ಟಿದ್ದಾರೆ. ಈ ನಡುವೆಯೇ ಅವರು ‘ಶೋಕಿವಾಲ’ನ ಅವತಾರ ಎತ್ತಿರುವುದು ಗಾಂಧಿನಗರದಲ್ಲಿ ಕುತೂಹಲ ಹೆಚ್ಚಿಸಿದೆ.

ಈ ಚಿತ್ರ ನಿರ್ದೇಶಿಸಿರುವುದು ಜಾಕಿ. ‘ಲಕ್ಕಿ’, ‘ಅಧ್ಯಕ್ಷ’, ‘ರನ್ನ’ ಮತ್ತು ‘ವಿಕ್ಟರಿ’ ಸಿನಿಮಾಗಳಿಗೆ ಸಹ ನಿರ್ದೇಶಕರಾಗಿ ದುಡಿದ ಅನುಭವ ಅವರಿಗಿದೆ. ‘ಶೋಕಿವಾಲ’ ಪಕ್ಕಾ ಹಳ್ಳಿ ಸೊಗಡಿನ ಚಿತ್ರ. ರಸ್ತೆಗಳಲ್ಲಿ ಸಂಚರಿಸುವ ಹೆಂಗಳೆಯರ ಮೇಲೆ ಶೋಕಿವಾಲನಿಗೆ ಅಪರಿಮಿತ ಮೋಹ. ಮತ್ತೊಂದೆಡೆ ತಾನು ಹುಡುಗಿಯೊಬ್ಬಳನ್ನು ಪ್ರೀತಿಸಿ ಮದುವೆಯಾಗಬೇಕು ಎಂಬುದು ಅವನ ಆಸೆ. ಕೊನೆಗೆ, ಹೇಗೆ ಹಸೆಮಣೆ ಏರುತ್ತಾನೆ ಎಂಬುದೇ ಇದರ ಹೂರಣ. ಮೊದಲ ಬಾರಿಗೆ ಅಜೇಯ್ ರಾವ್ ಹಳ್ಳಿ ಹುಡುಗನಾಗಿ ಬಣ್ಣ ಹಚ್ಚಿದ್ದಾರೆ. ನಾಯಕಿ ಸಂಜನಾ ಆನಂದ್ ಅವರದ್ದು ಹಳ್ಳಿ ಹುಡುಗಿಯ ಪಾತ್ರವಂತೆ.

ಟಿ.ಆರ್. ಚಂದ್ರಶೇಖರ್ ಇದಕ್ಕೆ ಬಂಡವಾಳ ಹೂಡಿದ್ದಾರೆ. ಈಗಾಗಲೇ, ಚಿತ್ರದ ಶೂಟಿಂಗ್‌ ಪೂರ್ಣಗೊಂಡಿದ್ದು ಡಬ್ಬಿಂಗ್‌ ಕೂಡ ಮುಕ್ತಾಯಗೊಂಡಿದೆ. ಪೋಸ್ಟ್‌ ಪ್ರೊಡಕ್ಷನ್‌ ಕೆಲಸ ಶುರುವಾಗಿದೆಯಂತೆ.

‘ಐವತ್ತು ದಿನಗಳಲ್ಲಿ ಶೂಟಿಂಗ್‌ ಪೂರ್ಣಗೊಳಿಸುವುದಾಗಿ ನಿರ್ಮಾಪಕರಿಗೆ ಭರವಸೆ ನೀಡಿದ್ದೆ. ನಲವತ್ತೈದು ದಿನಗಳಲ್ಲಿ ಚಿತ್ರೀಕರಣ ಪೂರ್ಣಗೊಂಡಿದೆ.ಕಲಾವಿದರು ಡಬ್ಬಿಂಗ್ ವೇಳೆ ಸಿನಿಮಾ ವೀಕ್ಷಿಸಿದ್ದಾರೆ. ಚಿತ್ರ ಚೆನ್ನಾಗಿ ಮೂಡಿಬಂದಿದೆ ಎಂದು ತಿಳಿಸಿದ್ದಾರೆ. ಅವರ ಮಾತುಗಳು ನನಗೆ ಖುಷಿಕೊಟ್ಟಿವೆ’ ಎಂಬುದು ನಿರ್ದೇಶಕ ಜಾಕಿ ಅವರ ವಿವರಣೆ.

ಚನ್ನಪಟ್ಟಣ, ಹೊಂಗನೂರು, ವಿರೂಪಾಕ್ಷಪುರ, ಶ್ರೀರಂಗಪಟ್ಟಣ, ಮಂಡ್ಯ, ಮೈಸೂರು, ತುಮಕೂರು ಮತ್ತು
ಮಾಗಡಿ ಸುತ್ತಮುತ್ತ ಶೂಟಿಂಗ್ ನಡೆಸಲಾಗಿದೆ. ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, ಶ್ರೀಧರ್ ವಿ. ಸಂಭ್ರಮ್ ಸಂಗೀತ ನೀಡಿದ್ದಾರೆ. ಲಾಕ್‌ಡೌನ್‌ ಮುಗಿದ ಬಳಿಕ ಆಡಿಯೊ ಬಿಡುಗಡೆ ಮಾಡುವ ಇರಾದೆ ಚಿತ್ರತಂಡದ್ದು.

ಜಯಂತ ಕಾಯ್ಕಿಣಿ, ವಿ. ನಾಗೇಂದ್ರಪ್ರಸಾದ್, ಚೇತನ್ ಕುಮಾರ್ ಸಾಹಿತ್ಯ ರಚಿಸಿದ್ದಾರೆ.ನವೀನ್ ಕುಮಾರ್‌ ಎಸ್. ಅವರ ಛಾಯಾಗ್ರಹಣವಿದೆ. ಕೆ.ಎಂ. ಪ್ರಕಾಶ್ ಅವರ ಸಂಕಲನವಿದೆ. ಪ್ರಶಾಂತ್ ರಾಜಪ್ಪ ಸಂಭಾಷಣೆ ಬರೆದಿದ್ದಾರೆ. ಮೋಹನ್ ನೃತ್ಯ ನಿರ್ದೇಶಿಸಿದ್ದಾರೆ. ವಿಕ್ರಮ್ ಮೋರ್ ಸಾಹಸ ನಿರ್ದೇಶಿಸಿದ್ದಾರೆ. ಮೈಸೂರು ರಘು ಅವರ ಕಲಾ ನಿರ್ದೇಶನವಿದೆ.

ಶರತ್ ಲೋಹಿತಾಶ್ವ , ಗಿರೀಶ್ ಶಿವಣ್ಣ , ತಬಲಾ ನಾಣಿ, ಮುನಿರಾಜ್, ಪ್ರಮೋದ್ ಶೆಟ್ಟಿ, ಅರುಣಾ ಬಾಲರಾಜ್, ವಾಣಿ, ಚಂದನಾ, ಲಾಸ್ಯಾ ನಾಗರಾಜ್‌, ನಾಗರಾಜಮೂರ್ತಿ ತಾರಾಗಣದಲ್ಲಿದ್ದಾರೆ. ಕೊರೊನಾ ಭೀತಿ ಕಡಿಮೆಯಾದ ಬಳಿಕ ಜನರ ಮುಂದೆ ಬರಲು ಚಿತ್ರತಂಡ ನಿರ್ಧರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT