ಮಂಗಳವಾರ, ಡಿಸೆಂಬರ್ 7, 2021
20 °C

ಸಾಧುಕೋಕಿಲ ನಿರ್ದೇಶನದಲ್ಲಿ ‘ಮಹಾಯೋಗಿ ಸಿದ್ಧಾರೂಢ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸಿದ್ಧಾರೂಢರ ಜೀವನಾಧಾರಿತ ‘ಮಹಾಯೋಗಿ ಸಿದ್ಧಾರೂಢ’ ಚಿತ್ರದ ಟ್ರೇಲರ್‌ ಅನ್ನು ನಟ ಪುನೀತ್‌ ರಾಜ್‌ಕುಮಾರ್‌ ಇತ್ತೀಚೆಗೆ ಬಿಡುಗಡೆಗೊಳಿಸಿದರು. 

ಖ್ಯಾತ ಸಂಗೀತ ನಿರ್ದೇಶಕ ಸಾಧುಕೋಕಿಲ ಅವರು ಈ ಚಿತ್ರವನ್ನು ನಿರ್ದೇಶಿಸಿದ್ದು, ಬಾಗಲಕೋಟೆಯ ಮುಧೋಳದ ಮಂಟೂರಿನ ಸದಾನಂದ ಮಹಾಸ್ವಾಮಿ ಅವರು ಈ ಚಿತ್ರ ನಿರ್ಮಾಣ ಮಾಡಿದ್ದಾರೆ.

‘ನಮ್ಮ ಮನೆಗೂ, ಸಿದ್ಧಾರೂಢ ಮಠಕ್ಕೂ ಅವಿನಾಭಾವ ಸಂಬಂಧವಿದೆ. ಅಪ್ಪಾಜಿ ಅವರಾಗಲಿ, ನಮ್ಮ ಕುಟುಂಬದ ಯಾರೇ ಆಗಲಿ, ಹುಬ್ಬಳ್ಳಿಗೆ ಹೋದಾಗ ಮಠಕ್ಕೆ ಹೋಗಿ ಪೂಜೆ ಮಾಡಿಸಿಕೊಂಡು ಬರುತ್ತೇವೆ. ನಮ್ಮ ಅಜ್ಜಿ ಅವರು ಕೆಲವು ದಿನಗಳ ಕಾಲ ಈ ಮಠದಲ್ಲೇ ಇದ್ದರು ಎಂದು ಅಪ್ಪಾಜಿ ಹೇಳುತ್ತಿದ್ದರು. ಈ ಚಿತ್ರದ ಟ್ರೇಲರ್ ಬಿಡುಗಡೆಗೆ ಬರಬೇಕೆಂದು ಸಾಧುಕೋಕಿಲ ಅವರು ಕರೆದಾಗ ಸಂತೋಷವಾಯಿತು. ಟ್ರೇಲರ್ ತುಂಬಾ ಚೆನ್ನಾಗಿದೆ. ಸಿನಿಮಾ ನೋಡಲು ನಾನು ಕಾತುರನಾಗಿದ್ದೇನೆ’ ಎಂದರು ಪುನೀತ್ ರಾಜಕುಮಾರ್.

‘ಶರಣ ಶ್ರೇಷ್ಠರಾದ ಸಿದ್ಧಾರೂಢರ ಜೀವನಾಧಾರಿತ ಚಿತ್ರ ನಿರ್ದೇಶನ ಮಾಡಿದ್ದು ನನ್ನ ಪುಣ್ಯ. ಮಂಟೂರಿನ ಗುರುಗಳು ನನ್ನನ್ನ ಕರೆದು ಈ ರೀತಿಯ ಚಿತ್ರ ಮಾಡಿಕೊಬೇಕೆಂದು ಹೇಳಿದರು. ಈ ಸಲುವಾಗಿ ನನ್ನನ್ನು ದೆಹಲಿಗೆ ಕಳುಹಿಸಿ, ಅಲ್ಲಿ ಸ್ವಾಮಿನಾರಾಯಣ ಆಶ್ರಮದಲ್ಲಿ ಗುರುಗಳ ಕುರಿತು ಚಿತ್ರ ಮಾಡಿದ್ದಾರೆ. ನೋಡಿ ಬನ್ನಿ ಎಂದರು. ನೋಡಿ ಬಂದೆ. ಎಲ್ಲರಿಗೂ ಸಾಧುಕೋಕಿಲ, ಇಂತಹ ಚಿತ್ರ ಮಾಡಿದ್ದಾರಾ? ಎಂಬ ಆಶ್ಚರ್ಯ. ನನಗೂ ಮೊದಲು ಹಾಗೆ ಅನಿಸಿತು. ನಮ್ಮ ಚಿತ್ರದಲ್ಲಿ ಸಿದ್ಧಾರೂಢರ ಎಂಟು ವರ್ಷದಿಂದ ನಲವತ್ತೆಂಟು ವರ್ಷಗಳ ನಡುವೆ ನಡೆಯುವ ಮಹಿಮೆಗಳನ್ನು ತೋರಿಸಲಾಗಿದೆ. ಮಂಟೂರು, ಹೈದರಾಬಾದ್, ಕಾಶ್ಮೀರ, ಸಕಲೇಶಪುರ ಹಾಗೂ ಕರ್ನಾಟಕದ ಸುಂದರವಾದ ಸ್ಥಳಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಚಿತ್ರೀಕರಣ ನಡೆಯುವಾಗ ನನಗೂ ಕೆಲವು ವಿಶೇಷ ಅನುಭವಗಳಾದವವು. ಇದೇ ನ.9ರಂದು ಮಂಟೂರಿನ ಚಿತ್ರಮಂದಿರದಲ್ಲಿ 55 ನಿಮಿಷಗಳ ಅವಧಿಯ ಈ ಚಿತ್ರ ಬಿಡುಗಡೆಯಾಗುತ್ತಿದೆ’ ಎಂದರು ಸಾಧುಕೋಕಿಲ.

ಜೈ ಆನಂದ್ ಛಾಯಾಗ್ರಹಣ ಹಾಗೂ ಆನಂದ್ ಅವರ ಕಲಾ ನಿರ್ದೇಶನ ಈ ಚಿತ್ರಕ್ಕಿದೆ. ಸದಾನಂದ ಸ್ವಾಮಿ, ಕಲಾವಿದರಾದ ತೀರ್ಥೇಶ್ ಹಾಗೂ ಅರವಿಂದ್ ಕುಪ್ಲಿಕರ್ ಟ್ರೇಲರ್‌ ಬಿಡುಗಡೆ ವೇಳೆ ಉಪಸ್ಥಿತರಿದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು