ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾರೀರ ಬಲದಿಂದ ನಟನೆಯ ಪ್ರಭೆಯೆಡೆಗೆ

Last Updated 7 ಆಗಸ್ಟ್ 2018, 17:24 IST
ಅಕ್ಷರ ಗಾತ್ರ

ಕಲರ್ಸ್‌ ಸೂಪರ್‌ ವಾಹಿನಿ ನೋಡುಗರಿಗೆ ಒಂದು ಮಧುರವಾದ ಧ್ವನಿ ಚಿರಪರಿಚಿತವಾಗಿರುತ್ತದೆ. ಕಾರ್ಯಕ್ರಮಗಳ, ಧಾರಾವಾಹಿಗಳ ಪ್ರೋಮೊಗಳಲ್ಲಿ ಬರುವ ಧ್ವನಿಯದು. ಆಹಾ! ಇಷ್ಟು ಮಧುರ ಧ್ವನಿ ಇರುವ ಹುಡುಗನ ಮೋರೆ ಹೇಗಿರಬಹುದು ಎಂದು ಕುತೂಹಲ ತಾಳುವವರು ‘ನಾಗಿಣಿ’ ಧಾರಾವಾಹಿಯನ್ನು ನೋಡಬಹುದು. ಪ್ರೋಮೊಗಳಲ್ಲಿ ಹಿನ್ನೆಲೆ ಧ್ವನಿ ನೀಡಿರುವ ಕಲಾವಿದನೇ ಆ ಧಾರಾವಾಹಿಯಲ್ಲಿ ನಾಯಕನ ಅಣ್ಣನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಆ ಪಾತ್ರ ಯಾವುದು ಎಂಬುದನ್ನು ಧ್ವನಿಯ ಗುರ್ತಿನ ಮೇಲೆ ನೀವೇ ಪತ್ತೆಹಚ್ಚಬಹುದು.

ಆ ಹುಡುಗನ ಹೆಸರು ಸುಮಂತ್‌ ಭಟ್‌. ಹಿಂದೆ ಸುವರ್ಣ, ಜಿ ಕನ್ನಡ ವಾಹಿನಿಗಳಿಗೂ ಅವರು ಹಿನ್ನೆಲೆ ಧ್ವನಿ ಕಲಾವಿದರಾಗಿ ಕೆಲಸ ಮಾಡಿದ್ದರು. ಅದಕ್ಕೂ ಹಿಂದೆ ಹಲವು ಎಫ್‌ಎಂ ರೇಡಿಯೊಗಳಲ್ಲಿ ಆರ್‌ಜೆ ಆಗಿ ಕೆಲಸ ಮಾಡಿದ ಅನುಭವವೂ ಅವರಿಗಿದೆ.

ಬೆಂಗಳೂರಿನಲ್ಲಿಯೇ ಹುಟ್ಟಿ ಬೆಳೆದ ಸುಮಂತ್‌, ಮೊದಲು ಬದುಕಿನ ನಿರ್ವಹಣೆಗಾಗಿ ಮೊದಲು ಕೆಲಸ ಆರಂಭಿಸಿದ್ದು ಸೇಲ್ಸ್‌ಮನ್‌ ಆಗಿ. ನಂತರ ರೇಡಿಯೊ ಜಾಕಿ ಆಗಿ ಕೆಲಸಕ್ಕೆ ಸೇರಿಕೊಂಡರು. ಈ ಕೆಲಸದಲ್ಲಿಯೇ ಅವರಿಗೆ ಶಾರೀರ ಶ್ರೀಮಂತಿಕೆಯ ಶಕ್ತಿ ಅರಿವಾಗಿದ್ದು. ತಮ್ಮ ಪ್ರತಿಭೆಯನ್ನು ಸಾಬೀತುಕೊಳಿಸಲು ವೇದಿಕೆಯಾಗಿದ್ದೂ ಎಫ್‌ಎಂಗಳೇ. ಶಾರೀರಬಲದಿಂದಲೇ ಸುವರ್ಣ ವಾಹಿನಿಗೆ ಹಿನ್ನೆಲೆ ಧ್ವನಿ ಕಲಾವಿದನಾಗಿ ಸೇರಿಕೊಂಡಾಗ ಅವರೊಳಗೆ ಸುಪ್ತವಾಗಿದ್ದ ನಟನೂ ಜಾಗೃತನಾದ. ಆದರೆ ತಕ್ಷಣವೇ ಅವಕಾಶ ಸಿಗಲಿಲ್ಲ. ನಂತರ ಜಿ ಕನ್ನಡ ವಾಹಿನಿಯಲ್ಲಿ ಕೆಲಸಕ್ಕೆ ಸೇರಿಕೊಂಡ ಮೇಲೆ ಒಂದು ಧಾರಾವಾಹಿಯಲ್ಲಿ ಮುಖ್ಯ ಪಾತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿತು. ಅದರಲ್ಲಿ ಖ್ಯಾತ ನಟಿ ರೇಖಾರಾಣಿ ಅವರ ತಾಯಿಯಾಗಿ ನಟಿಸುತ್ತಿದ್ದರು. ಆದರೆ ಆ ಧಾರಾವಾಹಿ ಪ್ರಸಾರವಾಗಲೇ ಇಲ್ಲ. ಆ ಸಮಯದಲ್ಲಿ ಸುಮಂತ್‌, ರೇಖಾರಾಣಿ ಅವರ ಬಳಿ ನಟನೆಯನ್ನು ಕಲಿಯುವ ಇಂಗಿತ ವ್ಯಕ್ತಪಡಿಸಿದರು. ಅವರೂ ಖುಷಿಯಿಂದಲೇ ಒಪ್ಪಿಕೊಂಡರು.

‘ನನಗೆ ನಟನೆಯ ದೀಕ್ಷೆ ಕೊಟ್ಟವರು ರೇಖಾರಾಣಿ ಅವರೇ. ಇಂದು ನಾನು ಒಂದಿಷ್ಟು ನಟನೆಯನ್ನು ಕಲಿತಿದ್ದೇನೆ ಎಂದರೆ ಅದಕ್ಕೆ ಕಾರಣ ಅವರೇ’ ಎಂದು ಸುಮಂತ್‌ ಕೃತಜ್ಞತೆಯಿಂದ ನೆನಪಿಸಿಕೊಳ್ಳುತ್ತಾರೆ.‌

ಅದಾದ ಮೇಲೆ ಅವರಿಗೆ ಮತ್ತೆ ನಟನೆಯ ಅವಕಾಶ ಸಿಕ್ಕಿದ್ದುವಿನು ಬಳಂಜ ನಿರ್ದೇಶನದ ‘ಲವ್‌ ಲವಿಕೆ’ ಧಾರಾವಾಹಿಯಲ್ಲಿ. ಅದರಲ್ಲಿ ಅವರು ಖಳನಟನಾಗಿ ನಟಿಸಿದ್ದರು. ನಂತರ ‘ಹರಹರ ಮಹದೇವ’ ಧಾರಾವಾಹಿಯಲ್ಲಿ ನಂದಿಯ ಪಾತ್ರದಲ್ಲಿ ನಟಿಸಿದರು. ಈಗ ‘ನಾಗಿಣಿ’ ಧಾರಾವಾಹಿಯ ಮೂಲಕ ಕಿರುತೆರೆ ಪಯಣವನ್ನು ಮುಂದುವರಿಸುತ್ತಿದ್ದಾರೆ.

ಹಿರಿತೆರೆಯಲ್ಲಿ ಕಾಣಿಸಿಕೊಳ್ಳಬೇಕು ಎಂಬ ಹೆಬ್ಬಯಕೆಯೂ ಅವರಿಗೆ ಮೊದಲಿನಿಂದ ಇತ್ತು. ಅದು ಈಡೇರಲು ಈಗ ಮುಹೂರ್ತ ಬಂದಿದೆ. ಈ ವಾರ (ಆ. 13) ಬಿಡುಗಡೆಯಾಗುತ್ತಿರುವ ‘ಲೌಡ್‌ ಸ್ಪೀಕರ್‌’ ಚಿತ್ರದಲ್ಲಿ ಏಳು ಮುಖ್ಯ ಪಾತ್ರಗಳಿವೆ. ಅವರಲ್ಲಿ ಸುಮಂತ್‌ ಕೂಡ ಒಬ್ಬರು.

ಸುಮಂತ್‌ ನಟಿಸಿದ್ದ ಜಾಹೀರಾತನ್ನು ನೋಡಿ ಇಷ್ಟಪಟ್ಟು ಶಿವತೇಜಸ್‌ ತಮ್ಮ ಚಿತ್ರದಲ್ಲಿ ನಟಿಸಲು ಅವಕಾಶ ಕೊಟ್ಟರು. ಈ ಚಿತ್ರದಲ್ಲಿನ ತಮ್ಮ ಪಾತ್ರದ ಕುರಿತು ಅವರಿಗೆ ಸಾಕಷ್ಟು ಖುಷಿಯಿದೆ.

‘ಇದು ಕಾನ್ಸೆಪ್ಟ್‌ ಕಿಂಗ್‌ ಸಿನಿಮಾ. ಕಥೆಯೇ ಈ ಚಿತ್ರದ ನಿಜವಾದ ನಾಯಕ. ನಾನು ಜವಾಬ್ದಾರಿಯುತ ಗಂಡನ ಪಾತ್ರದಲ್ಲಿ ನಟಿಸಿದ್ದೇನೆ. ವಯಸ್ಸಿಗೆ ಮೀರಿದ ಪ್ರಬುದ್ಧತೆ ಇರುವ ಗಂಡನ ಪಾತ್ರವದು. ಸಿನಿಮಾದ ಮಜಾ ಶುರುವಾಗುವುದು ಒಂದು ಗೇಮ್‌ ಮೂಲಕ. ಇಂದು ನಾವು ಮೊಬೈಲ್‌ ಬಳಸುತ್ತಿದ್ದೇವೆಯೋ ಅಥವಾ ಮೊಬೈಲೇ ನಮ್ಮನ್ನು ಬಳಸಿಕೊಳ್ಳುತ್ತಿದೆಯೋ ಎಂಬ ರೀತಿಯ ಸೂಕ್ಷ್ಮ ಪ್ರಶ್ನೆಯನ್ನು ಈ ಚಿತ್ರದ ಮೂಲಕ ಎತ್ತವ ಪ್ರಯತ್ನವನ್ನು ನಿರ್ದೇಶಕರು ಮಾಡಿದ್ದಾರೆ’ ಎಂದು ಉತ್ಸಾಹದಿಂದಲೇ ವಿವರಿಸುತ್ತಾರೆ ಸುಮಂತ್‌.

ಈ ಚಿತ್ರದ ನಂತರ ಶಂಕರ್‌ ಆರ್ಯನ್‌ ನಿರ್ದೇಶನದ ಇನ್ನೊಂದು ಚಿತ್ರದಲ್ಲಿಯೂ ಅವರು ನಟಿಸಲು ಒಪ್ಪಿಕೊಂಡಿದ್ದಾರೆ. ‘ಹೊಸ ಸಿನಿಮಾದಲ್ಲಿ ನಾನು ಮತ್ತು ಗುಳ್ಟು ಚಿತ್ರದ ನಾಯಕ ನವೀನ್‌ ಇಬ್ಬರೂ ನಾಯಕರು. ಈ ಚಿತ್ರದಲ್ಲಿ ನನ್ನ ಪಾತ್ರ ಹಿಂದಿನ ಚಿತ್ರಕ್ಕಿಂತ ತುಂಬ ಭಿನ್ನವಾಗಿದೆ. ಇಷ್ಟು ಭಿನ್ನವಾದ ಪಾತ್ರಗಳಲ್ಲಿ ನಟಿಸುವ ಅವಕಾಶ ಸಿಕ್ಕಿರುವುದು ನನ್ನ ಅದೃಷ್ಟ’ ಎಂದು ಹೇಳುವ ಸುಮಂತ್‌ಗೆ ಕಥಾಪ್ರಧಾನ ಚಿತ್ರಗಳಲ್ಲಿಯೇ ನಟಿಸಬೇಕು ಎಂಬ ಆಸೆಯಿದೆ. ಅನಗತ್ಯ ಹೀರೊಯಿಸಂನಲ್ಲಿ ಅವರಿಗೆ ನಂಬಿಕೆ ಇಲ್ಲ. ‘ನಾನು ನಟಿಸುವ ಪಾತ್ರಗಳು ನನಗೆ ಸವಾಲು ತಂದೊಡ್ಡಬೇಕು. ನನ್ನಿಂದ ಈ ಪಾತ್ರ ನಿರ್ವಹಿಸುವುದು ಸಾಧ್ಯವಾ ಎಂಬ ಸಂದೇಹ ಹುಟ್ಟಿಸಬೇಕು. ಆಗಲೇ ನಟನೆಯ ಮಜಾ ಸಿಗುವುದು’ ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT