ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಗಪ್ಪನ ಕಾಂಪ್ಲೆಕ್ಸು ವರ್ಸಸ್ ಬಾಂಡ್ ಗ್ಯಾರೇಜು

Last Updated 16 ನವೆಂಬರ್ 2018, 11:36 IST
ಅಕ್ಷರ ಗಾತ್ರ

ಇಪ್ಪತ್ತು ವರ್ಷ!

ಬಾಂಡ್ ನಮಗೆಲ್ಲ ಹೆಸರಿಟ್ಟು, ಮಲಗಲಿಕ್ಕೊಂದು ಜಾಗ ಕೊಟ್ಟು ಹೋಗಿ ಇಪ್ಪತ್ತು ವರ್ಷ ಆಯ್ತು.

ಅವ್ನು ಬರೀ ಬಾಂಡ್ ಅಲ್ಲ, ‘ರೇಸ್ ಬಾಂಡ್’ ಅಂತ ನಮಗೆ ಆಮೇಲೆ ಗೊತ್ತಾಯ್ತು. ಎಲ್ಲೆಲ್ಲಿಯೋ ದೊಡ್ಡ ದೊಡ್ಡ ರೇಸ್‍ಗಳಲ್ಲಿ ಭಾಗವಹಿಸಿದ್ದ. ಆಗಾಗ ನಮಗೆ ಹಣ ಕೊಟ್ಟು ಮಾಯವಾಗುತ್ತಿದ್ದ. ಅವನಿಗೆ ಹಣ ಎಲ್ಲಿಂದ ಬರ್ತಿತ್ತು, ಎಲ್ಲಿಡ್ತಾನೆ, ಎಲ್ಲಿಗೆ ಹೋಗ್ತಾನೆ, ಎಲ್ಲಿಂದ ಬರ್ತಾನೆ ಅಂತೆಲ್ಲ ನಾವ್ಯಾರೂ ಕೇಳ್ತಿರ್ಲಿಲ್ಲ. ಒಮ್ಮೊಮ್ಮೆ ಒಬ್ಬನೇ, ಕೆಲವೊಮ್ಮೆ ಹುಡುಗಿಯ ಜೊತೆಗೆ ಬರ್ತಿದ್ದ. ಒಂದ್ಸಲ ಬಂದ ಹುಡುಗಿ ಇನ್ನೊಂದ್ಸಲ ಬರ್ತಿರ್ಲಿಲ್ಲ.

ಅವತ್ತಿನ ಸಣ್ಣ ಶೀಟ್ ಮನೆ ಈಗ ದೊಡ್ಡ ಗ್ಯಾರೇಜಾಗಿದೆ. ‘ಬಾಂಡ್ ಗ್ಯಾರೇಜ್’ ಅಂತ ಹೆಸರಿಟ್ಟಿದೀವಿ. ನಮ್ಮ ಮನೆಯೂ ಅದೆ. ನಾನು ಅಂದುಕೊಂಡ ಹಾಗೆಯೇ ಲಾಯರ್ ಆಗಿದೀನಿ. ಈ ಲ್ಯಾಂಡ್ ಲಿಟಿಗೇಶನ್ ಕೇಸ್ ಅನ್ನೂ ನಾನೇ ನೋಡ್ತಿದ್ದೀನಿ. ಕಾರ್ತಿಕ್ ಎಂಜಿನಿಯರಿಂಗ್ ಮುಗ್ಸಿದಾನೆ. ಆದ್ರೆ ಕೆಲಸ ಗಿಲಸ ಅವನಿಗೆ ಒಗ್ಗಲ್ಲ. ಕಾರ್ ರೇಸ್ ಅಂದ್ರೆ ನಿದ್ದೇಲೂ ಎದ್ದು ಕೂಡ್ತಾನೆ. ಸುಮಾರು ಕಾರ್ ರೇಸ್‍ಗಳಲ್ಲಿ ಭಾಗವಹಿಸಿ ಟ್ರೋಫಿಗಳನ್ನು ಗ್ಯಾರೇಜಿನಲ್ಲಿ ಗುಡ್ಡೆ ಹಾಕಿದಾನೆ.

ರೇಸಿನ ಜೊತೆಗೆ ರಂಗಪ್ಪನ ಮಗಳು ಸಾಹಿತ್ಯಳಿಗೆ ಕಾರ್ತಿಕ್ ಮನಸ್ಸು ಕೊಟ್ಟಿದ್ದಾನೆ. ಮೊದಲು ಐದು ವರ್ಷ ಒನ್‍ವೇನಲ್ಲಿ ಓಡ್ತಿದ್ದ ಲವ್ ರೇಸು, ಮ್ಯೂಚುವಲ್ ಅಕೌಂಟ್ ಓಪನ್ ಮಾಡಿ ಮೂರು ವರ್ಷ ಆಯ್ತು. ಗ್ಯಾರೇಜಿನ ಹಿಂಭಾಗದ ಗಾಡಿಗಳ ಸ್ಪೇರ್‌ಪಾರ್ಟ್‌ಮೇಲಿದ್ದ ದೂಳಿನಲ್ಲಿ ಅಂಡು ಊರಿದ ಮಾರ್ಕ್ ಆಗಿದೆ ಅಂದ್ರೆ ಸಾಹಿತ್ಯಳ ತುಟಿಗೆ ಗಾಯ ಆಗಿದೆ ಅಂತ್ಲೇ ಅರ್ಥ. ಆಗೆಲ್ಲ ನಾವು ಚಾಲೆಂಜ್ ಕಟ್ಟಿಕೊಂಡು ಕಾರ್ತಿಕ್‍ನ ಬೆನ್ನ ಮೇಲೆ ಗೀರಿದ ಗುರುತು ಹುಡುಕ್ತೀವಿ. ಅವಳು ಸಿನಿಮಾ ನೋಡಿ ನೋಡಿ ‘ದೇಹಸಂಬಂಧವನ್ನು ಮೀರಿದ ಪವಿತ್ರ ಪ್ರೇಮ...’ದ ಕಾನ್ಸೆಪ್ಟು ತಲೇಲಿ ತುಂಬಿಕೊಂಡ ಪರಿಣಾಮ ‘ಮುತ್ತು ಮುತ್ತು ನೀರ ಹನಿಯ ತೋಂತನನನ’ಗಿಂತ ಇಬ್ರೂ ಒಂದೆಜ್ಜೆಯನ್ನೂ ಮುಂದಿಟ್ಟಿಲ್ಲ.

ಇನ್ನು ಅರ್ಥ – ಅವಳಿಗೆ ಕಾರ್ ಡಿಸೈನ್ ಮೇಲೆ ವ್ಯಾಮೋಹ. ಡಿಸೈನಿನ ಮೋಹದ ಬೆನ್ನು ಹತ್ತಿಯೇ ಯಾವ್ಯಾವ್ದೋ ದೇಶಾನೂ ಸುತ್ತಿ ಬಂದಿದಾಳೆ. ಅರ್ಥ ಹೆಸರಿಗಷ್ಟೆ, ಅವಳನ್ನು ಸೃಷ್ಟಿಸಿದ ಆ ಬ್ರಹ್ಮನಿಗೂ ಅರ್ಥ ಆಗುವವಳಲ್ಲ. ಅವಳಿಗೆ ಮಾತ್ರ ಲೈಫಲ್ಲಿ ತುಂಬ ಇಂಪಾರ್ಟೆಂಟ್ ಆಗಿರುವ ಏನೋ ಅರ್ಥ ಆಗಿದೆ ಅಂತ ನಂಗೆ ಯಾವಾಗಲೂ ಅನಿಸುತ್ತಿರ್ತದೆ. ಕೇಳಿದ್ರೆ ಚ್ಯೂಯಿಂಗ್ ಗಮ್ ಗುಳ್ಳೆ ಬಿಟ್ಟು ನಕ್ಕುಬಿಡ್ತಾಳೆ ಅಂತ ಕೇಳಕ್ಕೆ ಹೋಗಿಲ್ಲ.

ಕಡ್ಡಿ ಗೀರದೇ ಕಿಡಿ ಹೊತ್ತಿಸ್ತಾಳೆ ಈ ಅರ್ಥ
ಕಡ್ಡಿ ಗೀರದೇ ಕಿಡಿ ಹೊತ್ತಿಸ್ತಾಳೆ ಈ ಅರ್ಥ

ಲಿಟಿಗೇಶನ್ ಜಾಗದಲ್ಲಿಯೇ ರಂಗಪ್ಪ ಒಂದು ಕಾಂಪ್ಲೆಕ್ಸ್ ಕಟ್ಟಿಸಿ, ಒಂದಿಷ್ಟು ತನ್ನದೇ ವಯಸ್ಸಿನ ಮುದುಕರಿಗೆ ಅವರ ಜೀವಮಾನದ ಸಂಪಾದನೆಯನ್ನೆಲ್ಲ ತಗೊಂಡು ಮಾರಿಬಿಟ್ಟಿದಾನೆ. ಯಾಕೋ ಬಾಂಡ್ ಕೂಡ ಇದಕ್ಕೆ ಅಡ್ಡಿ ಮಾಡಲಿಲ್ಲ. ಕೇಳಿದ್ರೆ ‘ಕೋರ್ಟ್‍ನಲ್ಲಿ ಇತ್ಯರ್ಥ ಆಗ್ತದೆ. ಬಿಡು...’ ಎಂದು ತೇಲಿಸಿಬಿಡುತ್ತಿದ್ದ. ರಂಗಪ್ಪ ನೆಲಮಹಡಿಯನ್ನು ಮಾರಿ, ಮಾಳಿಗೆ ಮೇಲೆ ಮಗಳೊಂದಿಗೆ ಇದ್ದಾನೆ. ಹೆಂಡತಿ ಸತ್ತು ಯಾವ್ದೋ ಕಾಲ ಆಯ್ತು. ಸಾಹಿತ್ಯ ಮತ್ತು ಅವನು ಇಬ್ಬರೇ. ಹಾ, ಜೊತೆಗೆ ಶಾಂತಪ್ಪ ಅಂತ ಇದಾನೆ. ಈ ರಂಗಪ್ಪನ ಆಳು. ಖರೆ ಅಂದ್ರೆ ಸಾಹಿತ್ಯಳನ್ನು ರಂಗಪ್ಪನಿಗಿಂತ ಜೋಪಾನವಾಗಿ ನೋಡಿಕೊಂಡು ಬೆಳೆಸಿದವ್ನು ಅವನೇ.

ಕೆಳಗೆ ಬಿಲ್ಡಿಂಗ್ ಮೂಲೆಯ ಕೋಣೆಯಲ್ಲಿ ಮೂಗರ್ಜಿ ಸುಂದ್ರಣ್ಣನ ಆಫೀಸು. ಆಫೀಸು ಮನೆ ಎಲ್ಲ ಅದೇ. ಮದ್ವೆ ಆಗಿಲ್ಲ. ಬ್ರಹ್ಮಚಾರಿಯೋ ಅಲ್ವೋ ಗೊತ್ತಿಲ್ಲ. ಅವನು ‘ಊರ ದನಿ’ ಅಂತೊಂದು ಪತ್ರಿಕೆ ನಡೆಸ್ತಾನೆ. ಅವನ ಚೀಲದಲ್ಲಿ ಎರಡು ಪ್ರತಿ ಇರುವುದು ಬಿಟ್ಟರೆ ಅದು ಎಲ್ಲಿ ಸಿಗ್ತದೆ, ಯಾವ್ಯಾವಾಗ ಪ್ರಕಟ ಆಗ್ತದೆ ಅಂತ ಯಾರಿಗೂ ಗೊತ್ತಿಲ್ಲ. ಬುದ್ಧಿಜೀವಿಯ ಹಾಗೆ ಉದ್ದಗಡ್ಡ, ಕೂದಲು ಬಿಟ್ಕೊಂಡು, ಜುಬ್ಬಾ ಹಾಕ್ಕೊಂಡು ಹೆಗಲಿಗೊಂದು ಹಳೇ ಬ್ಯಾಗು ತಗಲಾಕ್ಕೊಂಡಿರ್ತಾನೆ. ಅವನು ಪತ್ರಿಕೆಗೆ ಬರೆಯುವುದಕ್ಕಿಂತ ಮೂಗರ್ಜಿಗಳನ್ನು ಬರೆಯುವುದೇ ಹೆಚ್ಚು. ರಸ್ತೆ ಕೆಟ್ಟೋಗಿದೆ, ಎಲ್ಲೋ ಭ್ರಷ್ಟಾಚಾರ ನಡೀತಿದೆ, ಸಾಮಾಜಿಕ ಅನ್ಯಾಯ ಆಗಿದೆ, ನ್ಯಾಯ ದೊರಕಿಸಿ ಕೊಡಿ ಹೀಗೆ ‘ಸಂಬಂಧಪಟ್ಟವರ ಗಮನಕ್ಕೆ’ ಪತ್ರ ಬರೆದು ಬರೆದು ಅವನಿಗೆ ತನ್ನ ಆಡುಭಾಷೆಯೇ ಮರೆತುಹೋದಂತಿದೆ. ಊಟ ಆಯ್ತಾ ಅಂತ ಕೇಳಿದ್ರೂ ‘ಖಂಡಿಸ್ತೇನೆ’ ಎನ್ನುವಂತಹ ಹೋರಾಟದ ಗಿರಾಕಿ. ಅವನನ್ನು ಅವನು ದೊಡ್ಡ ಹೋರಾಟಗಾರ ಅಂದ್ಕೊಂಡಿದ್ದಾನೆ. ಮನೆಯ ಗೋಡೆಯ ಮೇಲೆ ಗಾಂಧಿ, ನೆಲ್ಸನ್ ಮಂಡೇಲಾ, ಕಾರ್ಲ್‌ಮಾರ್ಕ್ಸ್‌ನಿಂದ ಅಣ್ಣಾ ಹಜಾರೆವರೆಗೆ ಹಲವರ ಪಕ್ಕದಲ್ಲಿ ನಿಂತಿರುವ ಫೋಟೊಗಳನ್ನು ಹಾಕ್ಕೊಂಡಿದ್ದಾನೆ. ಕೇಳಿದ್ರೆ ‘ನಾನು ಕಾರ್ಲ್‌ಮಾರ್ಕ್ಸ್‌ ಭೇಟಿಯಾದಾಗ...’ ಅಂತ ಕಥೆ ಶುರುಮಾಡಿಬಿಡ್ತಾನೆ.

ಅವನ ಮನೆಯ ಪಕ್ಕದಲ್ಲಿಯೇ ಮುನಿರಾಜುವಿನ ಸೀರೆ ಅಂಗಡಿ. ಅವ ಮಾಜಿ ಕಬಡ್ಡಿ ಪ್ಲೇಯರ್ ಅಂತೆ. ಆದರೆ, ಹೊಟ್ಟೆಯೊಳಗೊಂದು ದೊಡ್ಡ ವಾಲೀಬಾಲ್ ಇಟ್ಕೊಂಡಿರುವ ಹಾಗೆ ಕಾಣಿಸ್ತಾನೆ. ಆ ಹೊಟ್ಟೆ ಹೊತ್ತು ನಡೆಯೋದೇ ಕಷ್ಟ. ಹೀಗಿದ್ದರೂ ಮಹಾನ್ ಕಚ್ಚೆ ಹರುಕ. ಕಾಂಪ್ಲೆಕ್ಸಿನ ಹಿಂದಿನ ಮುರುಕು ಗೋಡೌನ್‍ನಲ್ಲಿ ಇವ್ನು ಆಗಾಗ ಯಾರ‍್ಯಾರ ಜೊತೆಗೋ ಕಬಡ್ಡಿ ಆಡೋದು ಎಲ್ಲರಿಗೂ ಗೊತ್ತು. ಆದ್ರೆ ಯಾರಿಗೂ ಗೊತ್ತಿಲ್ಲ ಅನ್ನೊಹಂಗೆ ಇರ್ತಾರೆ. ನಮ್ ಗ್ಯಾರೇಜಿನ ಹುಡುಗ್ರು ಇವನಿಗೆ ಇಟ್ಟಿರುವ ಹೆಸರು ಬೆಣ್ಣೆಮುರುಕು.

ಸೀರೆ ಅಂಗಡಿ ಪಕ್ಕ ಸುಬ್ಬಣ್ಣನ ಔಷಧಾಲಯ. ಈ ಸುಬ್ಬಣ್ಣ ಹಳೇ ರೌಡಿ ಶೀಟರ್. ದೇಹ ಮುದುಕಾದ್ರೂ ಅವನೊಳಗಿನ ರೌಡಿತನ ಕಮ್ಮಿಯಾಗಿಲ್ಲ. ಇವನು ಊರಿಗೆಲ್ಲ ಔಷಧಿ ಹಂಚ್ತಾನೆ, ಆದ್ರೆ ಅವನ ಹೆಂಡತಿ ಕಾಯಿಲೆ ಗುಣಪಡಿಸಲು ಮಾತ್ರ ಸಾಧ್ಯವಾಗಿಲ್ಲ.

ಔಷಧಿ ಅಂಗಡಿ ಇದೆ ಅಂದಮೇಲೆ ಡಾಕ್ಟರೂ ಇರಲೇಬೇಕಲ್ಲ. ಪಕ್ಕದಲ್ಲೇ ಇದ್ದಾರೆ ಡಾ. ಚಂದ್ರಶೇಖರ್, ನಿವೃತ್ತ ಸರ್ಕಾರಿ ವೈದ್ಯರು. ಅವರ ಕೈಗೆ ಯಾವಾಗ ಮೊಬೈಲ್ ಬಂತೋ ಆಗಿನಿಂದ ಆಡೋಕೆ ಶುರು ಮಾಡಿದ ಕ್ಯಾಂಡಿ ಕ್ರಶ್ ಆಟ ಇನ್ನೂ ಮುಗಿದಿಲ್ಲ. ಆಸ್ಪತ್ರೆಯಲ್ಲಿ ರೋಗಿಗಳನ್ನು ನೋಡೋದಕ್ಕಿಂತ ಕ್ಯಾಂಡಿ ಕ್ರಶ್ ಆಡೋದೇ ಹೆಚ್ಚು. ಇವರ ಅಸ್ಪತ್ರೆಯಲ್ಲಿ ಇನ್ನೊಬ್ಬ ಇಂಟ್ರೆಸ್ಟಿಂಗ್ ಮನುಷ್ಯ ಇದಾನೆ. ಖರೆ ಅಂದ್ರೆ ಬಂದ ಪೇಶಂಟ್‍ಗಳಿಗೆ ಏನಾಗ್ಬೇಕು ಅಂತ ವಿಚಾರಿಸಿ, ಕಳಿಸುವವನೇ ಅವನು.

ವೇಣು ಒಂಥರಾ ಸೀರಿಯಸ್ ಮನುಷ್ಯ. ಅಗತ್ಯಕ್ಕಿಂತ ಒಂದು ಮಾತೂ ಜಾಸ್ತಿ ಆಡೋದಿಲ್ಲ. ಈ ಆಸ್ಪತ್ರೆಗೆ ಕಾಂಪೌಂಡರ್, ಅಟೆಂಡರ್, ಡಾಕ್ಟರ್ ಎಲ್ಲ ಆಗಿಯೂ ಕೆಲಸ ಮಾಡ್ತಾನೆ. ಮೊದಲು ಹೃದಯ ಸಾಗಿಸುವ ಆಂಬುಲೆನ್ಸ್‌ಗೆ ಡ್ರೈವರ್ ಆಗಿದ್ದನಂತೆ. ಒಳ್ಳೆಯ ಡ್ರೈವರ್ ಅಂತ ಹೆಸರು ಮಾಡಿದ್ದನಂತೆ. ಈಗ, ರಸ್ತೆ ಮೇಲಿನ ದೂಳು ಹಾರಬಾರದು ಅಂತ ಕಾಳಜಿಯಿಂದ ನಿಧಾನ ಗಾಡಿ ಓಡಿಸ್ತಾನೆ.

ಇನ್ನೊಂದು ಮೂಲೆಯಲ್ಲಿ ಇರೋದು ಶಾಂಗ್ರೀಲಾ ಬ್ಯೂಟಿಪಾರ್ಲರು. ಸುಕನ್ಯಾ ಆಂಟಿ ಇದರ ಓನರು. ಅವರು ‘ಎಕ್ಸ್‌ಕ್ಯೂಜ್ ಮೀ ಆಂಟಿ’ ಅಂತ್ಲೇ ಗ್ಯಾರೇಜು ಜಗತ್ತಲ್ಲಿ ಫೇಮಸ್ಸು. ರಂಗಪ್ಪ ಆಗೀಗ, ‘ಉಗುರು ಜಾಸ್ತಿ ಬಂದ್ಬುಟ್ಟಿದೆ ನೋಡಮ್ಮಿ’ ಎಂತೆಲ್ಲ ನೆಪ ಮಾಡ್ಕೊಂಡು ಪಾರ್ಲರಿಗೆ ನುಸುಳುವುದು, ಗಂಟೆಗಟ್ಟಲೆ ಅಲ್ಲಿದ್ದು ಹೊರಗೆ ಬರುವಾಗಲೂ ಉಗುರು ಹಾಗೆಯೇ ಇರುವುದು, ಇದೆಲ್ಲ ಎಷ್ಟೆಷ್ಟೋ ದಿನಮಾನಗಳಿಂದ ನಡೆದೇ ಇದೆ.

ಆ ಕಡೆಯ ರಂಗಪ್ಪನ ಕಾಂಪ್ಲೆಕ್ಸಿಗೂ ಈ ಕಡೆ ಬಾಂಡ್ ಗ್ಯಾರೇಜಿಗೂ ಒಂದು ರಸ್ತೆಯ ಅಂತರ ಅಷ್ಟೆ. ಆದರೆ ಅಷ್ಟು ಅಂತರದಲ್ಲಿ ಹುಲ್ಲುಕಡ್ಡಿ ಇಟ್ಟರೂ ಹೊತ್ತಿಕೊಂಡು ಉರಿಯುವಷ್ಟು ಭಯಂಕರ ಸಿಟ್ಟು ಇಬ್ಬರಿಗೂ. ನಮ್ ಹುಡುಗ್ರು ಅವಕಾಶ ಸಿಕ್ಕಾಗೆಲ್ಲ, ಮುದುಕರನ್ನು ಗೋಳಾಡಿಸುತ್ತಾರೆ.

ಇದರ ನಡುವೆ ಲಿಟಿಗೇಶನ್ ಬೋರ್ಡ್ ಇದ್ಯಲ್ಲಾ, ಅದರ ಪಕ್ಕ ಹುಡುಗನೊಬ್ಬ ಗೂಡಂಗಡಿ ಹಾಕ್ಕೊಂಡಿದಾನೆ. ಇಡ್ಲಿ ಬೇಯ್ಸಿ ಕೊಡ್ತಾನೆ. ನಮಗೆ, ರಂಗಪ್ಪನ ಕಡೆಯವ್ರಿಗೆ ಟೀ ಸರಬರಾಜು ಮಾಡೋದು ಅವನೇ. ಎರಡೂ ಕಡೆಯವರಿಗೆ ಸಂಪರ್ಕ ಇರುವ ಒಬ್ಬನೇ ಮನುಷ್ಯ ಅವ್ನು. ಅವ್ನಿಗೆ ನಾವು ಡಿಕಾಕ್ಷನ್ ಅಂತ್ಲೇ ಕರೆಯೋದು.

ರಂಗಪ್ಪ ಹೀಗೆ ಮಹಡಿ ಮೇಲೆ ನಿತ್ಕಂಡು ಕೆರ್ಕೊತಿದಾನೆ ಅಂದ್ರೆ ಏನೋ ಅನಾಹುತ ಆಗ್ತಿದೆ ಅಂತ್ಲೇ ಅರ್ಥ
ರಂಗಪ್ಪ ಹೀಗೆ ಮಹಡಿ ಮೇಲೆ ನಿತ್ಕಂಡು ಕೆರ್ಕೊತಿದಾನೆ ಅಂದ್ರೆ ಏನೋ ಅನಾಹುತ ಆಗ್ತಿದೆ ಅಂತ್ಲೇ ಅರ್ಥ

ಗ್ಯಾರೇಜಿನಲ್ಲಿ ಇರುವ ನಾವೆಲ್ರೂ ಒಂದೇ ಕುಟುಂಬ ಅನ್ನೋ ಹಾಗೆ ಇದ್ದೇವೆ. ಜಗಳ ಪ್ರೀತಿ, ತಮಾಷೆ, ಸೋಂಬೇರಿತನ ಎಲ್ಲವೂ ಇದೆ. ಈ ಇಪ್ಪತ್ತು ವರ್ಷಗಳಲ್ಲಿ ಎಲ್ಲವೂ ಚೆನ್ನಾಗಿಯೇ ನಡೀತಿತ್ತು. ನಾವು ಓದಬೇಕು ಅಂದ್ಕೊಂಡಿದ್ದು ಓದಿದ್ವಿ. ಇಷ್ಟಪಟ್ಟ ಕೆಲಸವನ್ನೇ ಮಾಡ್ತಿದ್ವಿ. ಆದ್ರೆ ಒಂದೇ ಬೇಜಾರಿನ ವಿಷಯ ನಡೆದಿದ್ದು ವಿಕಾಸ್ ನಾಪತ್ತೆಯಾಗಿದ್ದು. ‘ವಿ4’ ಎಲ್ಲರೂ ಸಾಲಾಗಿ ಒಂದೇ ಕಡೆ ಮಲಗೋದು. ಒಂದಿನ ಬೆಳಿಗ್ಗೆ ಏಳುವಾಗ ಆ ಸಾಲಿನಲ್ಲಿ ವಿಕಾಸ್ ಇರಲಿಲ್ಲ.

ಅವನು ಕಾಣೆಯಾದ ಮರುದಿನವೇ ರಂಗಪ್ಪನ ಕಾಂಪ್ಲೆಕ್ಸಿನ ಬಟ್ಟೆ ಅಂಗಡಿ ಬೆಣ್ಣೆಮುರುಕು ಮಗಳೂ ಕಾಣೆಯಾದ್ಲು. ಜೋರು ಗಲಾಟೆ... ವಿಕಾಸನೇ ಅವಳನ್ನು ಓಡಿಸ್ಕೊಂಡು ಹೋಗಿದ್ದು ಅಂತ ಅವ್ರು, ನಮ್ಮ ಹುಡುಗ ಲವ್ ಗಿವ್ ಮಾಡಿದ್ರೆ ನಿಮ್ಮ ಹೆಣದ ಮೇಲೆ ತಾಳಿಕಟ್ಟಿ ಸಂಸಾರ ಮಾಡ್ತಿದ್ದ ಅಂತ ನಮ್ ಹುಡುಗ್ರು... ಅವ್ರಿಬ್ರೂ ಓಡಿ ಹೋದ್ರೋ... ನಡ್ಕೊಂಡ್ ಹೋದ್ರೋ... ಬೇರೆ ಬೇರೆ ಹೋದ್ರೋ, ಒಟ್ಗೆ ಹೋದ್ರೋ ಕರೆಕ್ಟಾಗಿ ಯಾರಿಗೂ ಗೊತ್ತಿಲ್ಲ. ಹಾ... ಬಹುಶಃ ಅರ್ಥಳಿಗೆ ಗೊತ್ತಿದೆ. ಆದ್ರೆ ಅವಳು ಎಲ್ಲಿಯೂ ಬಾಯ್ಬಿಟ್ಟಿಲ್ಲ. ಅವರಿಬ್ಬರೂ ಕಾಣೆಯಾದ ದಿನ ಜೋರು ಗಲಾಟೆ ನಡೀತಿವ್ರಾಗ ಅವಳು ಮಾತ್ರ ಸುಮ್ಮನೆ ಚೇರ್ ಮೇಲೆ ಕೂತ್ಕೊಂಡು ಚ್ಯೂಯಿಂಗ್ ಗಮ್ ಅಗೀತಾ ಆಕಾಶ ನೋಡ್ತಿದ್ಲು.

ಈಗಲೂ ಆಗೀಗ ‘ವಿಕಾಸ್ ಇದ್ದಿದ್ರೆ ಹಿಂಗಿರ್ತಿತ್ತು. ಅವನು ಹೀಗೆ ಹೇಳ್ತಿದ್ದ. ಹಿಂಗೆಲ್ಲ ಮಾಡ್ತಿದ್ದ’ ಅನ್ನೋ ಮಾತು ಬರ್ತಾನೇ ಇರತ್ತೆ. ಅವನು ಹೋದ್ರೂ ನಾವು ವಿಕ್ರಮ್, ವಿಜೇತ್, ವಿವೇಕ್ ಮೂರೇ ಜನ ಆದ್ರೂ ‘ವಿ4’ ಅಂತ್ಲೇ ಕರೀತೇವೆ. ಯಾವತ್ತೋ ಒಂದಿನ ರಾತ್ರಿ ಬೆಳಗಾಗುವುದರ ಒಳಗೆ ಈ ಮೂರು ಜನರ ಬೆಡ್‍ಶೀಟ್ ಅಡಿಯಿಂದ ವಿಕಾಸ್ ಎದ್ದು ಬರ್ತಾನೆ ಅಂತ ಅನ್ನಿಸುತ್ತಾ ಇರತ್ತೆ.

ಇಷ್ಟು ಕಥೆ. ಇನ್ಮೇಲೆ ಏನು ನಡೆಯತ್ತೋ ನೋಡೋಣ. ಮುಂದಿನ ಕಥೆಯಲ್ಲಿ ನಾನೂ ಭಾಗೀದಾರ. ಹಾಗಾಗಿ ಕಥೆಯೊಳಗೆ ಜಿಗಿಯಬೇಕಾಗಿದೆ. ಬಾಯ್... ಕಥೆ ತಂತಾನೆಯೇ ಮುಂದುವರಿಯತ್ತೆ. ಡೋಂಟ್ ವರಿ. ನನ್ನ ಪಾರ್ಟು ಬಂದಾಗ ಚಪ್ಪಾಳೆ ಹೊಡೀರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT