ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಜುಕವಿ ನಿರ್ದೇಶನದ ‘ಟೆಂಪರ್’ ಟ್ರೈಲರ್ ಬಂತು

Last Updated 1 ಡಿಸೆಂಬರ್ 2022, 7:50 IST
ಅಕ್ಷರ ಗಾತ್ರ

ಕನ್ನಡ ಚಿತ್ರರಂಗದಲ್ಲಿ ಏಳೆಂಟು ವರ್ಷಗಳಿಂದ ಸಾಹಿತಿ, ಸಂಗೀತ ಸಂಯೋಜಕರಾಗಿ ಸೇವೆ ಸಲ್ಲಿಸುತ್ತಿರುವ ಮಂಜುಕವಿ ಈಗ ನಿರ್ದೇಶಕರಾಗಿ ‘ಟೆಂಪರ್’ ಚಿತ್ರವನ್ನು ತೆರೆಗೆ ತರುತ್ತಿದ್ದಾರೆ.

ಕನ್ನಡ ಹಾಗೂ ತೆಲುಗು ಭಾಷೆಗಳಲ್ಲಿ ನಿರ್ಮಾಣವಾಗಿರುವ ಈ ಚಿತ್ರದ ಟ್ರೈಲರ್ ಕಳೆದ ಸೋಮವಾರ ಚಲನಚಿತ್ರ ಕಲಾವಿದರ ಸಂಘದಲ್ಲಿ ಅನಾವರಣಗೊಂಡಿತು.

‘ಮಕ್ಕಳನ್ನು ಚಿಕ್ಕವರಿದ್ದಾಗಲೇ ಸುಸಂಸ್ಕೃತರನ್ನಾಗಿ ಬೆಳೆಸದೆ ಹೋದರೆ ಮುಂದೆ ಅವರು ಹೇಗೆ ಸಮಾಜಕ್ಕೆ ಹೊರೆಯಾಗುತ್ತಾರೆ ಎನ್ನುವುದು ಚಿತ್ರದ ಒನ್‌ಲೈನ್ ಸ್ಟೋರಿ. ಮಕ್ಕಳ ಜೊತೆ ತಂದೆ-ತಾಯಿಯ ಬಾಂಧವ್ಯ ಹಾಗೂ ಸ್ನೇಹದ ಕುರಿತಾಗಿ ಉತ್ತಮ ಸಂದೇಶ ಕೂಡ ಚಿತ್ರದಲ್ಲಿದೆ’ ಎಂದಿದೆ ಚಿತ್ರತಂಡ.

ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕ ಮಂಜುಕವಿ, ‘ಕುಟುಂಬ ಸಮೇತ ನೋಡಬಹುದಾದ ಫ್ಯಾಮಿಲಿ ಎಂಟರ್‌ಟೈನರ್‌ ಚಿತ್ರ ಇದಾಗಿದೆ. ಮಾಸ್ ಸ್ಟೋರಿ ಜೊತೆಗೊಂದು ಪ್ರೇಮಕಥೆಯೂ ಇದೆ. ಬೆಂಗಳೂರು, ಮಂಡ್ಯ, ಮೈಸೂರು, ನಂಜನಗೂಡು, ಶ್ರೀರಂಗಪಟ್ಟಣ, ಚಿಕ್ಕಮಗಳೂರು ಹಾಗೂ ಕುಂದಾಪುರ ಸುತ್ತಮುತ್ತ 50 ದಿನಗಳ ಕಾಲ ಚಿತ್ರದ ಚಿತ್ರೀಕರಣ ನಡೆಸಲಾಗಿದೆ. ನಾಯಕ ಚಿಕ್ಕಹುಡುಗನಾಗಿದ್ದಾಗಿಂದಲೂ ಸಣ್ಣ ವಿಷಯಕ್ಕೂ ತಕ್ಷಣ ಕೋಪಗೊಂಡು ಟೆಂಪರ್ ಆಗುತ್ತಾನೆ. ತನ್ನ ಗುಣ ಆತನನ್ನು ಯಾವ ಮಟ್ಟಕ್ಕೆ ತೆಗೆದುಕೊಂಡು ಹೋಯಿತು ಎಂದು ಚಿತ್ರದ ಮೂಲಕ ಹೇಳಿದ್ದೇವೆ’ ಎಂದರು.

‘ಗ್ಯಾರೇಜ್ ಮೆಕ್ಯಾನಿಕ್ ಆದ ನಾಯಕ ಊರ ಗೌಡನ ಮಗಳು ಗೀತಾಳನ್ನು ಪ್ರೀತಿಸುತ್ತಾನೆ. ಗೌಡನ ಅಟ್ಟಹಾಸವನ್ನು ಮುರಿದು ನಾಯಕ ಹೇಗೆ ತನ್ನ ಕುಟುಂಬ ಹಾಗೂ ತನ್ನ ಪ್ರೇಯಸಿಯನ್ನು ಕಾಪಾಡಿಕೊಳ್ಳುತ್ತಾನೆ ಎನ್ನುವುದೇ ‘ಟೆಂಪರ್’ ಚಿತ್ರದ ಎಳೆ. ಚಿತ್ರದ ಕಥೆ, ಚಿತ್ರಕಥೆ ಹಾಗೂ 5 ಹಾಡುಗಳನ್ನು ನಾನೇ ಬರೆದಿದ್ದೇನೆ. ಈ ಚಿತ್ರದ ಮೂಲಕ ಆರ್ಯನ್ ಸೂರ್ಯ ಹಾಗೂ ಕಾಶಿಮಾ ರಫಿ ಮೊದಲಬಾರಿಗೆ ನಾಯಕ, ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ’ ಎಂದರು ಅವರು.

ನಾಯಕ ಆರ್ಯನ್ ಸೂರ್ಯ ಮಾತನಾಡಿ, ‘ಮೊದಲಚಿತ್ರ ಆರಂಭದಲ್ಲಿ ಭಯ ಇತ್ತು. ತಬಲಾನಾಣಿ ಅವರು ಚೆನ್ನಾಗಿ ಮಾಡು ಎಂದು ಧೈರ್ಯ ತುಂಬಿದರು. ಆಕ್ಷನ್ ಚೆನ್ನಾಗಿ ಮಾಡಲು ಮಾಸ್ ಮಾದ ಅವರೇ ಕಾರಣ’ ಎಂದರು.

ನಾಯಕಿ ಕಾಶಿಮಾ ರಫಿ ಮಾತನಾಡಿ, ‘ಚಿತ್ರದಲ್ಲಿ ನಾನು ಒಬ್ಬ ವೈದ್ಯಕೀಯ ವಿದ್ಯಾರ್ಥಿನಿ ಹಾಗೂ ಊರಗೌಡನ ಮಗಳು. ಮೆಕ್ಯಾನಿಕ್ ಒಬ್ಬನನ್ನು ಪ್ರೀತಿಸುತ್ತೇನೆ. ಆ ವಿಷಯ ನಮ್ಮ ಮನೆಯಲ್ಲಿ ಗೊತ್ತಾದ ನಂತರ ಏನಾಗುತ್ತೆ ಅನ್ನೋದು ಚಿತ್ರದಲ್ಲಿದೆ’ ಎಂದು ಹೇಳಿದರು.

ನಟ ಮಿತ್ರ ಮಾತನಾಡಿ, ‘ಮಂಜು ಪ್ರತಿಭಾವಂತ ಬರಹಗಾರ, ಸ್ನೇಹ ಮತ್ತು ಸಂಬಂಧದ ಸಾರವನ್ನು ಹೇಳುವ ಚಿತ್ರವಿದು. ಹಾಸ್ಯ ಇದ್ದರೂ ಮೆಚ್ಯೂರ್ ಆದಂಥ ಪಾತ್ರವನ್ನು ಮಾಡಿದ್ದೇನೆ’ ಎಂದು ಹೇಳಿದರು.

ಶ್ರೀಬಾಲಾಜಿ ಎಂಟರ್ ಪ್ರೈಸಸ್ ಮೂಲಕ ವಿ. ವಿನೋದ್‌ಕುಮಾರ್ ಹಾಗೂ ಮೋಹನಬಾಬು ಅವರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಪತ್ರಕರ್ತ ಧನು ಯಲಗಚ್ ಹಾಗೂ ಮಜಾಟಾಕೀಸ್ ಪವನ್‌ಕುಮಾರ್ ನಾಯಕನ ಸ್ನೇಹಿತರಾಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ತಬಲಾನಾಣಿ, ಸುಧಾ ಬೆಳವಾಡಿ ನಾಯಕನ ತಂದೆ, ತಾಯಿಯಾಗಿ ನಟಿಸಿದ್ದಾರೆ. ನಾಯಕನ ಬಾಲ್ಯದ ಪಾತ್ರವನ್ನು ಮಾಸ್ಟರ್ ಪವನ್ ಮೋರೆ ಮಾಡಿದ್ದಾರೆ. ಈ ಚಿತ್ರದಲ್ಲಿ5 ಹಾಡುಗಳಿವೆ. ಆರ್.ಹರಿಬಾಬು ಸಂಗೀತ ಸಂಯೋಜನೆ ಮಾಡಿದ್ದಾರೆ. ಆರ್.ಕೆ.ಶಿವಕುಮಾರ್ ಅವರ ಕ್ಯಾಮರಾವರ್ಕ್ ಚಿತ್ರಕ್ಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT