ಕೆಲವು ಸಿನಿಮಾ ಹಾಡುಗಳಿರುತ್ತವೆ– ಅವು ಎಂದೂ ಸಾಯುವುದೇ ಇಲ್ಲ. ಅದರಲ್ಲೂ ಆ ಹಾಡುಗಳಿಗೆ ಸಂಗೀತ ಸಂಯೋಜಕ ಖಯ್ಯಾಂ ಸಂಗೀತ ನೀಡಿದ್ದರೆಂದರೆ ಮುಗಿದೇ ಹೋಯಿತು; ಅವು ಚಿರಂಜೀವಿ. ಬಾಲಿವುಡ್ನಲ್ಲಿ ‘ಮಾಧುರ್ಯದ ದೊರೆ’ಯಾಗಿದ್ದ ಸಂಗೀತ ನಿರ್ದೇಶಕ ಮೊಹಮ್ಮದ್ ಝಹೂರ್ ಖಯ್ಯಾಂ ಹಷ್ಮಿ ಕಳೆದ ವಾರ 92ರ ಇಳಿವಯಸ್ಸಿನಲ್ಲಿ ಹೃದಯಾಘಾತದಿಂದ ತೀರಿಕೊಂಡರು. ಅವರು ಸಂಗೀತ ಸಂಯೋಜನೆ ಮಾಡಿದ ಕನಿಷ್ಠ 20 ಹಾಡುಗಳನ್ನಾದರೂ ನಾವು ಇವತ್ತು ಸೂಪರ್ಹಿಟ್ ಎಂದು ಪಟ್ಟಿ ಮಾಡಬಹುದು. ಅದರಲ್ಲೂ ಈ ಮೂರು ಹಾಡುಗಳು ಕೋಟ್ಯಂತರ ಸಂಗೀತ ಪ್ರೇಮಿಗಳಿಗೆ ಸದಾ ಸಾಂತ್ವನ ಹೇಳುತ್ತಿರುತ್ತವೆ, ಭಾವನೆಗಳನ್ನು ಉದ್ದೀಪಿಸುತ್ತವೆ, ಅಪರೂಪದ ಅನುಭೂತಿ ನೀಡುತ್ತವೆ.

ಕಭೀ ಕಭೀ ಮೆರೆ ದಿಲ್ ಮೆ..

43 ವರ್ಷಗಳ ಹಿಂದೆ ಹಿಂದಿ ಬೆಳ್ಳಿತೆರೆಯಲ್ಲಿ ಮೊಳಗಿದ ಈ ಹಾಡು, ಇವತ್ತಿಗೂ ಸಂಗೀತಪ್ರಿಯರ ಕಿವಿಗಳಲ್ಲಿ ಗುಂಯ್ಗುಡುತ್ತಲೇ ಇದೆ. ಬಿರಿದ ಗುಲಾಬಿ ತುಟಿಗಳ ಸೇಬುಕೆನ್ನೆಯ ರಾಖಿ ಮತ್ತು ಕಿವಿ ಮುಚ್ಚಿದ ಜೊಂಪೆಕೂದಲು– ಮೊಂಡು ಮೂಗಿನ ಹೀರೊ ಅಮಿತಾಭ್ ಬಚ್ಚನ್. ಡಿಸೆಂಬರಿನ ಚಳಿಯಲ್ಲಿ ಅದ್ದಿತೆಗೆದ ಕಾಶ್ಮೀರದ, ಬೆಳ್ಳನೆಯ ಹಿಮಚ್ಛಾದಿತ ನೆಲದ ಮೇಲೆ ತಬ್ಬಿಕೊಂಡು ಕುಳಿತು, ಮಲಗಿ ‘ಕಭೀ ಕಭೀ ಮೆರೆ ದಿಲ್ ಮೆ, ಖಯಾಲ್ ಆತಾ ಹೈ..’ ಎಂದು ಹಾಡುತ್ತಿದ್ದರೆ, ಇವತ್ತಿಗೂ ಎಲ್ಲ ವಯಸ್ಸಿನ ಸಂಗೀತಪ್ರಿಯರು ದಿಗ್ಮೂಢರಂತೆ ನೋಡುತ್ತಾರೆ, ಆಲಿಸುತ್ತಾರೆ. ಕೋಟ್ಯಂತರ ಪ್ರೇಮಿಗಳು ರಾಖಿ ಮತ್ತು ಅಮಿತಾಭ್ ಸ್ಥಾನದಲ್ಲಿ ತಮ್ಮನ್ನು ಕಲ್ಪಿಸಿಕೊಂಡು ಭಾವಪರವಶರಾಗುತ್ತಾರೆ.

ಈ ಹಾಡಿನ ತೆರೆಯ ಹಿಂದಿನ ಸಮ್ಮೋಹಿನಿಯನ್ನು ಕಟ್ಟಿಕೊಟ್ಟವರು ಸಂಗೀತ ಸಂಯೋಜಕ ಖಯ್ಯಾಂ, ಕವಿ ಸಾಹಿರ್ ಲೂಧಿಯಾನ್ವಿ ಮತ್ತು ಗಾಯಕ ಮುಖೇಶ್. ನಿರ್ದೇಶಕ ಯಶ್ ಛೋಪ್ರಾ, ಖಯ್ಯಾಂ ಜೊತೆ, ‘ಚಿತ್ರದ ಯಶಸ್ಸಿಗೆ ಪ್ರಾರ್ಥಿಸಿ ಖಯ್ಯಾಂಜೀ’ ಎಂದಿದ್ದರಂತೆ. ಬಿಡುಗಡೆಯಾದ ಚಿತ್ರ ಬೆಳ್ಳಿತೆರೆಯ ಎಲ್ಲ ದಾಖಲೆಗಳನ್ನೂ ಮುರಿದಿಕ್ಕಿತು. ಮೆಹಬೂಬ್ ಸ್ಟುಡಿಯೋದಲ್ಲಿ ರೆಕಾರ್ಡಿಂಗ್ ಆದ ಹಾಡುಗಳಲ್ಲೇ ಅತ್ಯಧಿಕ ರೇಟಿಂಗ್ ಲಭಿಸಿತು. ಸಂಗೀತ ನಿರ್ದೇಶಕ, ಗಾಯಕ ಮತ್ತು ಚಿತ್ರಸಾಹಿತಿ ಮೂವರಿಗೂ ಫಿಲಂಫೇರ್ ಪ್ರಶಸ್ತಿ ತಂದುಕೊಟ್ಟಿತು.

ಕವಿ ಮಜ್ರೂಹ್ ಸುಲ್ತಾನ್ಪುರಿ ಅವರ ಉರ್ದು ಕವನ ಸಂಕಲನ ‘ತಲ್ಖಿಯಾನ್’ನಲ್ಲಿದ್ದ ಈ ಕವಿತೆಗೆ, 1950ರಲ್ಲೇ ಚೇತನ್ ಆನಂದ್ ನಿರ್ದೇಶಿಸಿದ ಇನ್ನೊಂದು ಸಿನಿಮಾದ ಸಲುವಾಗಿ ಖಯ್ಯಾಂ ಸಂಗೀತ ಸಂಯೋಜಿಸಿದ್ದರು. ಗೀತಾ ದತ್ ಮತ್ತು ಸುಧಾ ಮಲ್ಹೋತ್ರಾ ಹಾಡಿದ್ದರು. ಆ ಸಿನಿಮಾ ಬಿಡುಗಡೆ ಆಗಲೇ ಇಲ್ಲ. ‘ಕಭೀ ಕಭೀ’ ಚಿತ್ರದ ಸಲುವಾಗಿ ಈ ಕವಿತೆಯನ್ನು, ಹಾಡಿನ ಮಾಧುರ್ಯ ಹೆಚ್ಚಿಸುವಂತೆ ತಿದ್ದಿ ಬರೆಯಲಾಯಿತು. ಮೂಲ ಹಾಡಿನಲ್ಲಿ ‘ಕಭೀ ಕಭೀ ಮೆರೆ ದಿಲ್ ಮೆ, ಖಯಾಲ್ ಆತಾ ಹೈ/ ಕಿ ಜಿಂದಗೀ ತೆರೆ ಜುಲ್ಫೋಂ ಕಿ ನರ್ಮ್ ಚಾವೋ ಮೆ’ ಎಂದಿತ್ತು. ಎರಡನೇ ಸಾಲನ್ನು ಬದಲಾಯಿಸಿ ‘ಕೆ ಜೈಸೆ ತುಜ್ಕೋ ಬನಾಯಾ ಗಯಾ ಹೈ ಮೇರೆ ಲಿಯೇ’ ಎಂದು ತಿದ್ದಲಾಯಿತು. ಹೀಗೆ ಅಲ್ಲಲ್ಲಿ ಸಾಲುಗಳು ರೊಮ್ಯಾಂಟಿಕ್ಕಾಗಿ ಬದಲಾದವು.

ಚಿತ್ರದಲ್ಲಿ ಮೂರು ಕಡೆ ಈ ಹಾಡಿದೆ. ಮೊದಲು ಅಮಿತಾಭ್ ಅದನ್ನು ಕವಿತೆಯ ರೂಪದಲ್ಲಿ ಓದುತ್ತಾರೆ. ಓದುತ್ತಿದ್ದಂತೆಯೇ ಹಿನ್ನೆಲೆಯಲ್ಲಿ ಹಾಡು ಶುರುವಾಗುತ್ತದೆ. ಇನ್ನೊಂದು ದೃಶ್ಯದಲ್ಲಿ ರಾಖಿ ಮತ್ತು ಶಶಿಕಪೂರ್ ಮದುವೆಯ ಮೊದಲ ರಾತ್ರಿಯ ದೃಶ್ಯ. ಮಧುಮಂಚದ ಮೇಲೆ ಕುಳಿತಿರುವ ರಾಖಿಯ ರಕ್ತವರ್ಣದ ತುಟಿಬಣ್ಣ, ಕೆನ್ನೆಯಲಿ ಉಕ್ಕುವ ಕಣ್ಣೀರು. ‘ಸುಹಾಗ್ ರಾತ್ ಹೈ, ಗೂಂಘಟ್ ಉಠಾ ರಹಾ ಹೂಂ ಮೈ’ ಎಂದು ಮುಖೇಶ್ ಮತ್ತು ಲತಾ ಹಾಡುತ್ತಿದ್ದರೆ, ಹಿನ್ನೆಲೆಯಲ್ಲಿ ಶಹನಾಯ್ ಹೊಮ್ಮಿಸುವ ನಾದ, ಖಯ್ಯಾಂ ಅವರ ಪರಿಪೂರ್ಣತೆಯ ಗೀಳಿಗೆ ಸ್ಪಷ್ಟ ಸಾಕ್ಷಿ. ಈ ಡುಯೆಟ್ ಜನಪ್ರಿಯತೆಯಲ್ಲಿ ಮೊದಲ ಹಾಡನ್ನೂ ಹಿಂದಿಕ್ಕಿತು.1976ರ ರೇಡಿಯೊ ಸಿಲೋನ್ನ ಬಿನಾಕಾ ಗೀತ್ಮಾಲಾದಲ್ಲಿ ಇದು ವರ್ಷದ ಟಾಪ್ ಹಾಡಾಗಿ ರಾರಾಜಿಸಿತು. ಹಾಡಿನ ಹಲವು ರಿಮಿಕ್ಸ್ ಪ್ರಯೋಗಗಳು ನಡೆದವು.ಈ ಹಾಡು ಜನರನ್ನು ಎಷ್ಟು ಹುಚ್ಚೆಬ್ಬಿಸಿತೆಂದರೆ, ಕೋಟಿಗಟ್ಟಳೆ ಸಂಖ್ಯೆಯಲ್ಲಿ ರೆಕಾರ್ಡ್, ಕ್ಯಾಸೆಟ್, ಸಿ.ಡಿ.ಗಳು ಮಾರಾಟವಾದವು. ಸೂಪರ್ಸ್ಟಾರ್ ರಾಜೇಶ್ ಖನ್ನಾ ಈ ಹಾಡಿಗೆ ಮರುಳಾಗಿ ತನ್ನಲ್ಲಿದ್ದ ಒಂದು ಕಾರನ್ನೇ ಖಯ್ಯಾಂ ಅವರಿಗೆ ಉಡುಗೊರೆಯಾಗಿ ನೀಡಿದ.

ನೂರೀ... ನೂರೀ... ಆಜಾರೇ...

1979ರಲ್ಲಿ ಬಂದ ‘ನೂರೀ’ ಚಿತ್ರದ ಈ ಹಾಡು ಲತಾ ಮಂಗೇಶ್ಕರ್ ಮತ್ತು ನಿತಿನ್ ಮುಖೇಶ್ ಸ್ವರದಲ್ಲಿ ದೇಶದಾದ್ಯಂತ ಕೋಲಾಹಲ ಸೃಷ್ಟಿಸಿತು. ಮನಮೋಹನ್ಕೃಷ್ಣ ನಿರ್ದೇಶಿಸಿದ ಏಕೈಕ ಸಿನಿಮಾ ಇದು.

ಇಡೀ ಸಿನಿಮಾದ ಜೀವಾಳವೇ ಈ ಹಾಡು. ಜಾನ್ ನಿಸಾರ್ ಅಖ್ತರ್ ಬರೆದ ಈ ಹಾಡಿಗೆ ಖಯ್ಯಾಂ ಸಂಗೀತ ಎಷ್ಟೊಂದು ಮಾಧುರ್ಯ ತುಂಬಿತೆಂದರೆ, ಹಾಡಿನ ಬಲದಿಂದಲೇ ಚಿತ್ರದ ಆ ವರ್ಷದ 9ನೇ ಅತ್ಯಧಿಕ ಗಳಿಕೆಯ ಚಿತ್ರ ಎನ್ನಿಸಿತು. 1981ರಲ್ಲಿ ಚೀನಾದಲ್ಲಿ ಬಿಡುಗಡೆಯಾದ ಚಿತ್ರ ಜನರ ಮನಸೂರೆಗೊಂಡಿತು. ಚೀನೀಯರು ‘ಆವಾರಾ’ ಮತ್ತು ‘ಕ್ಯಾರವಾನ್’ ಸಿನಿಮಾದ ಜೊತೆಗೆ ಇದನ್ನೂ ಸೂಪರ್ಹಿಟ್ ಪಟ್ಟಿಗೆ ಸೇರಿಸಿಕೊಂಡರು. ಫರೂಕ್ ಶೇಖ್ ಎಂಬ ಹೀರೊ ಅಲ್ಲದ ನಟನ ಹೆಸರಿನೊಂದಿಗೆ ’ನೂರೀ’ ಹಲವಾರು ವರ್ಷಗಳ ಕಾಲ ಅಂಟಿಕೊಂಡು ‘ಸ್ಟಾರ್’ ಆಗಿಸಿತು. ಲತಾ ಮಂಗೇಶ್ಕರ್ ಮತ್ತು ನಿತಿನ್ ಮುಖೇಶ್ ಕಂಠದಲ್ಲಿ ಮೂಡಿಬಂದ ಹಾಡು ಈಗ 40 ವರ್ಷ ಕಳೆದರೂ ತನ್ನ ಮಾಧುರ್ಯವನ್ನು ಕಳೆದುಕೊಂಡಿಲ್ಲ. ಆ ಬಳಿಕ ಬಂದ ಯಾವ ರೊಮ್ಯಾಂಟಿಕ್ ಚಿತ್ರಗಳ ಹಾಡುಗಳಿಗೂ ಈ ಹಾಡಿನ ಜನಪ್ರಿಯತೆಯನ್ನು ಅಳಿಸಿಹಾಕಲಾಗಿಲ್ಲ.

ಇನ್ ಆಂಖೋಂಕೆ ಮಸ್ತೀ ಕೆ..

ಭಾರತೀಯ ಚಿತ್ರರಂಗದಲ್ಲಿ ‘ರೇಖಾ ಬ್ರ್ಯಾಂಡ್ ಮುಜ್ರಾ’ಗಳ ಛಾಪೊತ್ತಿದ ಈ ಹಾಡು ‘ಉಮ್ರಾವೊ ಜಾನ್’ ಚಿತ್ರದ್ದು. ನಟಿ ರೇಖಾ ಆ ಬಳಿಕ ನೂರಾರು ಚಿತ್ರಗಳಲ್ಲಿ ಅತ್ಯುತ್ತಮ ಪಾತ್ರಗಳನ್ನು ಮಾಡಿದರೂ, ಚಿತ್ರದ ಈ ಹಾಡು (ಆಶಾ ಭೋಸ್ಲೆ) ಮತ್ತು ನೃತ್ಯ ಆಕೆಗೆ ತಂದುಕೊಟ್ಟ ಜನಪ್ರಿಯತೆಗೆ ಬೆಲೆ ಕಟ್ಟಲಾಗದು. 1982ರಲ್ಲಿ ತೆರೆಗೆ ಬಂದ ಚಿತ್ರಕ್ಕೆ ಸಂಗೀತ ನೀಡಿದ ಖಯ್ಯಾಂ, ಚಿತ್ರಸಾಹಿತಿ ನಿದಾ ಫಝ್ಲಿ ಅವರನ್ನೂ ಖ್ಯಾತಿಯ ಉತ್ತುಂಗಕ್ಕೆ ಒಯ್ದರು. ಅತ್ಯುತ್ತಮ ಸಂಗೀತ ನಿರ್ದೇಶಕ, ಅತ್ಯುತ್ತಮ ನಟಿ, ಅತ್ಯುತ್ತಮ ಗಾಯಕಿ ಮತ್ತು ಮನ್ಸೂರ್ ಅವರಿಗೆ ಅತ್ಯುತ್ತಮ ಪ್ರೊಡಕ್ಷನ್ ಡಿಸೈನ್– ಹೀಗೆ ನಾಲ್ಕು ರಾಷ್ಟ್ರಪ್ರಶಸ್ತಿಗಳನ್ನು ದೋಚಿದ ಚಿತ್ರವಿದು. ಜೊತೆಗೆ ರೇಖಾ ಮತ್ತು ಖಯ್ಯಾಂ ಅವರಿಗೆ ಫಿಲಂಫೇರ್ ಪ್ರಶಸ್ತಿಯೂ ದಕ್ಕಿತು.

ಕಡುಕೆಂಪು ಮೆಹಂದಿಯಲ್ಲಿ ಅದ್ದಿದ ಕೈಬೆರಳುಗಳನ್ನು ಕಣ್ಣ ಮಟ್ಟಕ್ಕೆ ತಂದು ಮುಜುರಾ ಮಾಡುತ್ತಾ ಬೆಳ್ಳಿಬೆಳಕಲ್ಲಿ ಮಿಂದ ರೇಖಾ ನೃತ್ಯ ಮಾಡುತ್ತಿದ್ದರೆ ಅದಕ್ಕೆ ಸಂವಾದಿಯಾಗಿ ಖಯ್ಯಾಂ ಅವರ ಸಂಗೀತ ತಣ್ಣನೆ ಹರಿವ ನದಿಯಂತೆ! ಈ ಚಿತ್ರದ ಸಂಗೀತ ಸಂಯೋಜಿಸಲು ಖಯ್ಯಾಂ ಬರೋಬ್ಬರಿ ಎರಡು ವರ್ಷಗಳನ್ನು ತೆಗೆದುಕೊಂಡರಂತೆ.

ಬ್ರಿಟಿಷ್ ಭಾರತದ ಪಂಜಾಬಿನಿಂದ ಸಂಗೀತದ ಹುಚ್ಚಿನೊಂದಿಗೆ ದೆಹಲಿಗೆ ಓಡಿಬಂದ ಬಾಲಕ ಖಯ್ಯಾಂ. ಪಂಡಿತ್ ಅಮರನಾಥ್ ಬಳಿ ಶಾಸ್ತ್ರೀಯ ಸಂಗೀತ ಕಲಿತು ಲಾಹೋರ್ಗೆ ಹೋದ. ಅಲ್ಲಿ ಪಂಜಾಬಿ ಸಂಗೀತ ನಿರ್ದೇಶಕ ಬಾಬಾ ಚಿಸ್ತಿಗೆ ಸಹಾಯಕ. 17ರ ಹರೆಯದಲ್ಲಿ ಲೂಧಿಯಾನಕ್ಕೆ ಬಂದು, ಎರಡನೇ ಮಹಾಯುದ್ಧದಲ್ಲಿ ಸೈನಿಕನಾಗಿದ್ದ. ಅಲ್ಲಿಂದ ಮುಂಬೈ ಪಯಣ. 1950ರಲ್ಲಿ ‘ಬೀವಿ’ ಚಿತ್ರಕ್ಕೆ ಖಯ್ಯಾಂ ನೀಡಿದ ಸಂಗೀತ ನಿರ್ದೇಶನದಲ್ಲಿ ಮೊಹಮ್ಮದ್ ರಫಿ ಹಾಡಿದ ‘ಅಖೇಲೆ ಮೆ ವೊ ಘಬ್ರಾತೆ ತೊ ಹೋಂಗೆ‘ ಹಿಟ್ ಆಯಿತು. 1961ರಲ್ಲಿ ‘ಶೋಲಾ ಔರ್ ಶಬ್ನಮ್’ ಚಿತ್ರದ ಸಂಗೀತ ಧರ್ಮೇಂದ್ರಗೆ ಜೀವ ಕೊಟ್ಟಿತು. ‘ಕಭೀ ಕಭೀ’ ಚಿತ್ರದಹಾಡು ಹಿಟ್ ಆದ ಬಳಿಕ ಖಯ್ಯಾಂ ಮಾಧುರ್ಯಕ್ಕೆ ಫಿದಾ ಆದ ರಾಜೇಶ್ ಖನ್ನಾ ಸಾಲುಸಾಲಾಗಿ ತನ್ನ ಮೂರು ಚಿತ್ರಗಳಿಗೆ (ತೋಡೀಸಿ ಬೇವಫಾಯ್, ದರ್ದ್ ಮತ್ತು ದಿಲ್ ಎ ನಾದಾನ್) ಖಯ್ಯಾಂ ಅವರಿಂದಲೇ ಸಂಗೀತ ಕೊಡಿಸಿದ.

89ನೇ ವಯಸ್ಸಿನಲ್ಲಿ ಸಂಗೀತಗಾರರು ಮತ್ತು ತಂತ್ರಜ್ಞರಿಗೆ ಪ್ರೋತ್ಸಾಹ ನೀಡಲು ‘ಖಯ್ಯಾಂ ಜಗಜೀತ್ ಕೌರ್ ಚಾರಿಟೆಬಲ್ ಟ್ರಸ್ಟ್’ ಆರಂಭಿಸಿ ಜೀವಮಾನವಿಡೀ ದುಡಿದು ಕೂಡಿಟ್ಟಿದ್ದ 10 ಕೋಟಿ ರೂಪಾಯಿಗಳನ್ನು ಅದಕ್ಕೆ ದಾನ ಮಾಡಿದವರು ಖಯ್ಯಾಂ. ಕಭೀ ಕಭೀ ಮೆರೆ ದಿಲ್ ಮೆ ಖಯಾಲ್ ಆತಾ ಹೈ–ಇಂತಹ ಇನ್ನೊಬ್ಬ ಸಂಗೀತ ಸಂಯೋಜಕ ಹುಟ್ಟುವುದು ಕಷ್ಟ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.