ಬುಧವಾರ, ನವೆಂಬರ್ 20, 2019
27 °C

ತ್ಯಾಗದ ಕಥೆ ಹೇಳುವ ತ್ರಿನೇತ್ರಂ

Published:
Updated:
Prajavani

‘ಮಂಗಳಮುಖಿಯರಿಗೂ ಒಳ್ಳೆಯ ಮನಸ್ಸು ಇದೆ’ ಎನ್ನುವ ಸಂದೇಶವನ್ನು ಸಮಾಜಕ್ಕೆ ನೀಡಲಿದೆಯಂತೆ ಹೊಸಬರ ‘ತ್ರಿನೇತ್ರಂ’ ಚಿತ್ರ. ಇದರ ಮೊದಲ ಪೋಸ್ಟರ್‌ ಹೊರಬಂದಿದೆ.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಕಾರ್ಯದರ್ಶಿ ಬಾ.ಮ.ಹರೀಶ್ ಪೋಸ್ಟರ್‌ ಅನಾವರಣಗೊಳಿಸಿ, ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

1992ರಲ್ಲಿ ಮಡಿಕೇರಿಯಲ್ಲಿ ನಡೆದ ಸತ್ಯ ಘಟನೆಯೊಂದನ್ನು ಸಿನಿಮಾವಾಗಿ ತೆರೆ ಮೇಲೆ ತರುತ್ತಿದ್ದಾರೆ ನಿರ್ದೇಶಕ ಚನ್ನಪಟ್ಟಣದ ಮನುಕುಮಾರ್‌ ಆರ್. ನಿರ್ದೇಶನದ ಜತೆಗೆ ಚಿತ್ರಕಥೆಯ ನೊಗವನ್ನೂ ಅವರೇ ಹೊತ್ತಿದ್ದಾರೆ. ಬಹುತೇಕ ಹೊಸಬರೇ ಸೇರಿಕೊಂಡು ಈ ಸಿನಿಮಾ ಮಾಡುತ್ತಿದ್ದಾರೆ. 

ಮಂಡ್ಯ, ಮೈಸೂರು, ಮಡಿಕೇರಿ, ಮಂಗಳೂರು ಕಡೆಗಳಲ್ಲಿ ಚಿತ್ರೀಕರಣ ನಡೆಸುವುದು ಚಿತ್ರತಂಡದ ಯೋಜನೆ.

‘ರಥಾವರ’, ‘ಹಫ್ತಾ’ ಚಿತ್ರಗಳಲ್ಲಿ ಮಂಗಳಮುಖಿಯ ಪಾತ್ರ ಪ್ರಧಾನವಾಗಿದ್ದವು. ಈಗ ಅದೇ ಸಾಲಿಗೆ ‘ತ್ರಿನೇತ್ರಂ’ ಚಿತ್ರ ಕೂಡ ಸೇರಲಿದೆ. ಈ ಚಿತ್ರಕ್ಕೆ ‘ತ್ಯಾಗಂ’ ಎನ್ನುವ ಅಡಿಶೀರ್ಷಿಕೆ ನೀಡಲಾಗಿದೆ. ಅಂದರೆ, ಚಿತ್ರದಲ್ಲಿ ತ್ಯಾಗವೇ ಪ್ರಧಾನವಾಗಿರಲಿದೆ ಎನ್ನುವುದನ್ನು ಬಿಡಿಸಿ ಹೇಳಬೇಕಿಲ್ಲ.

ಮೂರು ಕಣ್ಣುಗಳು ಸೇರಿದರೆ ‘ತ್ರಿನೇತ್ರಂ’. ಇದರಲ್ಲಿ ಹುಡುಗ– ಹುಡುಗಿ ಎರಡು ಕಣ್ಣುಗಳಾದರೆ, ಮೂರನೇ ಕಣ್ಣೇ ಮಂಗಳಮುಖಿಯ ಪಾತ್ರ ಎನ್ನುತ್ತಾರೆ ಚಿತ್ರದ ನಿರ್ದೇಶಕರು.

ಈ ಚಿತ್ರಕ್ಕೆ ಬಂಡವಾಳ ಹಾಕಿರುವ ನಿರ್ಮಾಪಕಿ ಕವಿತಾಗೌಡ ನಾಯಕಿಯಾಗಿ ಕಾಲೇಜು ಹುಡುಗಿ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ನಾಯಕ ಅರ್ಪಿತ್‍ಗೌಡ, ಅಧಿಕಾರಿಯಾಗಬೇಕೆಂಬ ಆಸೆ ಇಟ್ಟುಕೊಂಡು, ಹಳ್ಳಿಯಿಂದ ಪಟ್ಟಣಕ್ಕೆ ಬರುವ ಯುವಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 

ಶುಶಾಂಕ್, ಗೋವಿಂದ್‍ರಾಜ್, ಅರ್ಜುನ್, ರಮೇಶ್‍ ಪಂಡಿತ್ ತಾರಾಗಣದಲ್ಲಿ ಇದ್ದಾರೆ. ಐದು ಹಾಡುಗಳಿಗೆ ಲೋಕೇಶ್ ಸಾಹಿತ್ಯ ರಚಿಸಿದ್ದಾರೆ. ವಿನಯ್‍ ಕೊಪ್ಪ ಸಂಭಾಷಣೆ ಹೊಸೆದಿದ್ದಾರೆ.

ಸಂಗೀತ ರಾಘವೇಂದ್ರ ವಿ., ಸೋಲೈಮಣಿ- ಶಿವಾಜಿ ಛಾಯಾಗ್ರಹಣ, ಹರೀಶ್‍ಕುಮಾರ್ ಸಂಕಲನ, ಆನಂದ್ ನೃತ್ಯ, ವೈಲೆಟ್‍ವೇಲು ಸಾಹಸವಿದೆ.

ಪ್ರತಿಕ್ರಿಯಿಸಿ (+)