ಶುಕ್ರವಾರ, 12 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

Kannada Movies | ಮತ್ತೆ ಸಿನಿಮಾ ಹಬ್ಬ ಶುರು

Published 13 ಜೂನ್ 2024, 23:43 IST
Last Updated 13 ಜೂನ್ 2024, 23:43 IST
ಅಕ್ಷರ ಗಾತ್ರ

ಐಪಿಎಲ್‌, ಲೋಕಸಭೆ ಚುನಾವಣೆ, ಅದರ ಫಲಿತಾಂಶದ ಭರಾಟೆಯಲ್ಲಿ ಮಂಕಾಗಿದ್ದ ಕನ್ನಡ ಚಿತ್ರರಂಗ ಮೈಕೊಡವಿ ಎದ್ದೇಳುತ್ತಿದೆ. ಇದರ ಪರಿಣಾಮವಾಗಿ ಶುಕ್ರವಾರ(ಜೂನ್‌ 14) ಸಾಲು ಸಾಲು ಸಿನಿಮಾಗಳು ತೆರೆಕಂಡಿವೆ.

ಶಿವಮ್ಮ

ಬೂಸಾನ್‌ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ‘ನ್ಯೂ ಕರೆಂಟ್ಸ್‌’ ವಿಭಾಗದಲ್ಲಿ ಪ್ರಶಸ್ತಿ ಪಡೆದ, ರಿಷಬ್‌ ಶೆಟ್ಟಿ ನಿರ್ಮಾಣದ ‘ಶಿವಮ್ಮ’ ತೆರೆಕಂಡಿದೆ. ಜೈಶಂಕರ್‌ ಆರ್ಯರ್‌ ನಿರ್ದೇಶನದ ಈ ಚಿತ್ರದಲ್ಲಿ ಯರೇಹಂಚಿನಹಾಳದ ಶರಣಮ್ಮ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ.

ಯರೇಹಂಚಿನಹಾಳದಲ್ಲೇ ಈ ಸಿನಿಮಾದ ಶೂಟಿಂಗ್‌ ನಡೆದಿದ್ದು, ಗ್ರಾಮಸ್ಥರೇ ಇಲ್ಲಿನ ಬಹುತೇಕ ಪಾತ್ರಗಳಿಗೆ ಬಣ್ಣಹಚ್ಚಿರುವುದು ವಿಶೇಷ. ಬೆಂಗಳೂರಿನಲ್ಲಿ ದೊಡ್ಡ ಮಟ್ಟದಲ್ಲಿ ಈ ಸಿನಿಮಾವನ್ನು ಬಿಡುಗಡೆ ಮಾಡುತ್ತಿಲ್ಲ. ನಿಗದಿತ ಪ್ರದರ್ಶನಗಳಷ್ಟೇ ಇವೆ. ಉತ್ತರ ಕರ್ನಾಟಕದಲ್ಲಿ ಹೆಚ್ಚಿನ ಕಡೆ ಏಕಪರದೆ ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆಯಾಗಿದೆ. ಕೆಆರ್‌ಜಿ ಈ ಸಿನಿಮಾವನ್ನು ವಿತರಣೆ ಮಾಡಿದೆ.    

chef ಚಿದಂಬರ

ಎಂ.ಆನಂದರಾಜ್ ನಿರ್ದೇಶನದ ‘Chef ಚಿದಂಬರ’ ಸಿನಿಮಾದಲ್ಲಿ ಅನಿರುದ್ಧ ಮುಖ್ಯಭೂಮಿಕೆಯಲ್ಲಿದ್ದಾರೆ. ದಮ್ತಿ ಪಿಕ್ಚರ್ಸ್ ಲಾಂಛನದಲ್ಲಿ ರೂಪ ಡಿ.ಎನ್ ನಿರ್ಮಿಸಿರುವ ಈ ಚಿತ್ರಕ್ಕೆ ನಿರ್ದೇಶಕರೇ ಕಥೆ ಬರೆದಿದ್ದು, ಚಿತ್ರಕಥೆ ಹಾಗೂ ಸಂಭಾಷಣೆ ಗಣೇಶ್ ಪರಶುರಾಮ್ ಅವರದ್ದು. ‘ಇದೊಂದು ಭಿನ್ನವಾದ ಸಿನಿಮಾ. ಡಾರ್ಕ್‌ ಕಾಮಿಡಿ ಸಿನಿಮಾ. ಕ್ರೈಂ ಥ್ರಿಲ್ಲರ್‌ ಸಿನಿಮಾವಾದರೂ ಹಾಸ್ಯ ಪ್ರಧಾನ ಚಿತ್ರವಾಗಿದೆ’ ಎನ್ನುತ್ತಾರೆ ಆನಂದರಾಜ್‌. ಅನಿರುದ್ಧ ಅವರಿಗೆ ಜೋಡಿಯಾಗಿ ನಿಧಿ ಸುಬ್ಬಯ್ಯ ಹಾಗೂ ‘ಲವ್ ಮಾಕ್ಟೇಲ್’ ಖ್ಯಾತಿಯ ರೇಚೆಲ್ ಡೇವಿಡ್‌ ಅಭಿನಯಿಸಿದ್ದಾರೆ. ಶರತ್ ಲೋಹಿತಾಶ್ವ, ಕೆ.ಎಸ್. ಶ್ರೀಧರ್‌, ಶಿವಮಣಿ ಮುಂತಾದವರು  ತಾರಾಬಳಗದಲ್ಲಿದ್ದಾರೆ.

ಲವ್‌ ಲಿ

ವಸಿಷ್ಠ ಸಿಂಹ, ಸ್ಟೆಫಿ ಪಟೇಲ್‌ ಹಾಗೂ ಸಮೀಕ್ಷ ನಟನೆಯ ಚಿತ್ರವಿದು. ಸಿನಿಮಾಗೆ ಚೇತನ್ ಕೇಶವ್ ಆ್ಯಕ್ಷನ್ ಕಟ್‌ ಹೇಳಿದ್ದಾರೆ. ‘ನನ್ನ ಸಿನಿಪಯಣದ ಹೆಮ್ಮೆಯ ಸಿನಿಮಾ ಇದು. ಈ ಸಿನಿಮಾದ ವಿಶೇಷತೆಗಳು ಹಲವಾರು. ‘ಮಫ್ತಿ’ ಸಿನಿಮಾದಲ್ಲಿ ನರ್ತನ್‌ಗೆ ಸಹಾಯಕರಾಗಿ ಕೆಲಸ ಮಾಡಿದವರು ನಿರ್ದೇಶಕ ಚೇತನ್ ಕೇಶವ್. ಕಳೆದ 9 ವರ್ಷದಿಂದ ಚಿತ್ರರಂಗದಲ್ಲಿ ಇದ್ದಾರೆ. ಮುಂದೊಂದು ದಿನ ನಿರ್ದೇಶಕನಾಗುತ್ತೀಯ ಎಂದು ಹೇಳಿದ್ದೆ. ತಮ್ಮ 30ನೇ ವಯಸ್ಸಿನಲ್ಲೇ ಒಂದು ಪ್ರಬುದ್ಧವಾದ ಸಿನಿಮಾವನ್ನು ಚೇತನ್‌ ನೀಡಿದ್ದಾರೆ. ಎಲ್ಲ ಕಮರ್ಷಿಯಲ್‌ ಅಂಶಗಳು ಸಿನಿಮಾದಲ್ಲಿದೆ’ ಎನ್ನುತ್ತಾರೆ ವಸಿಷ್ಠ ಸಿಂಹ.  

ಕೋಟಿ

‘ಡಾಲಿ’ ಧನಂಜಯ ಅಭಿನಯದ ಈ ಸಿನಿಮಾವನ್ನು ಪರಮ್‌ ನಿರ್ದೇಶಿಸಿದ್ದಾರೆ. ಸಾಮಾನ್ಯವ್ಯಕ್ತಿಯೊಬ್ಬನ ‘ಕೋಟಿ’ ಕನಸು ಸಿನಿಮಾದ ಜೀವಾಳ. ‘ಕೋಟಿ’ಯಲ್ಲಿ ಧನಂಜಯಗೆ ಜೋಡಿಯಾಗಿ ಮೋಕ್ಷಾ ಕುಶಾಲ್ ನಟಿಸಿದ್ದಾರೆ. ಕೊಡಗಿನ ಮೋಕ್ಷಾ ಈ ಸಿನಿಮಾ ಮೂಲಕ ಚಂದನವನಕ್ಕೆ ಹೆಜ್ಜೆ ಇಡುತ್ತಿದ್ದಾರೆ. ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾದಲ್ಲಿ ಮಿಂಚಿದ್ದ ರಮೇಶ್ ಇಂದಿರಾ ಈ ಸಿನಿಮಾದಲ್ಲಿ ‘ದಿನೂ ಸಾವ್ಕಾರ್‌’ ಎಂಬ ಖಳನಟನ ಪಾತ್ರಕ್ಕೆ ಬಣ್ಣಹಚ್ಚಿದ್ದಾರೆ. ಸಿನಿಮಾ ಡ್ರಾಮಾ ಥ್ರಿಲ್ಲರ್ ಎಳೆಯನ್ನು ಹೊಂದಿದೆ. ವಾಸುಕಿ ವೈಭವ್ ಹಾಡುಗಳಿಗೆ ಸ್ವರ ಸಂಯೋಜನೆ ಮಾಡಿದ್ದಾರೆ. ನೊಬಿನ್ ಪೌಲ್ ಹಿನ್ನೆಲೆ ಸಂಗೀತ ಚಿತ್ರಕ್ಕಿದೆ. ರಂಗಾಯಣ ರಘು, ತಾರಾ, ಪೃಥ್ವಿ ಶಾಮನೂರು, ಸರ್ದಾರ್‌ ಸತ್ಯ ಮತ್ತು ತನುಜಾ ವೆಂಕಟೇಶ್ ತಾರಾಬಳಗದಲ್ಲಿದ್ದಾರೆ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT