ಮಂಗಳವಾರ, ಫೆಬ್ರವರಿ 25, 2020
19 °C

‘ಕೈಲಾಸ’ ಯಾತ್ರೆಗೆ ಹೊರಟ ವೈಭವ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವೈಭವ್‌ ನಟಿಸಿದ ಮೊದಲ ಚಿತ್ರ ‘ತಾರಕಾಸುರ’. ಬುಡಬುಡಿಕೆ ಜನಾಂಗದ ಆಚರಣಾ ಪದ್ಧತಿ ಮತ್ತು ಮರಳು ಗಣಿಗಾರಿಕೆ ಸುತ್ತ ಇದರ ಕಥೆ ಹೆಣೆಯಲಾಗಿತ್ತು. ಗಲ್ಲಾಪೆಟ್ಟಿಗೆಯಲ್ಲಿ ಈ ಚಿತ್ರ ಯಶಸ್ಸು ಕಾಣಲಿಲ್ಲ. ಈಗ ‘ಕೈಲಾಸ’ ಸಿನಿಮಾದ ಮೂಲಕ ಮತ್ತೆ ಅವರು ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ‘ಕಾಸಿದ್ರೆ’ ಎಂಬ ಅಡಿಬರಹವೂ ಈ ಚಿತ್ರಕ್ಕಿದೆ.

ಕಂಠೀರವ ಸ್ಟುಡಿಯೊದಲ್ಲಿ ಇತ್ತೀಚೆಗೆ ಇದರ ಮುಹೂರ್ತ ನೆರವೇರಿತು. ಬದುಕಿನ ಅರ್ಥ ಅರಿಯಲು ಹೊರಟ ಹುಡುಗ ಮತ್ತು ಜವಾಬ್ದಾರಿ ಇರುವ ಹುಡುಗಿಯ ನಡುವೆ ಅರಳುವ ಪ್ರೀತಿ ಮೂಲಕ ಕಥೆ ಶುರುವಾಗುತ್ತದೆಯಂತೆ. ಆಕೆಯ ಮನಸ್ಸು ಗೆಲ್ಲಲು ಆತ ಏನೆಲ್ಲಾ ಕಸರತ್ತು ನಡೆಸುತ್ತಾನೆ, ಎಲ್ಲಿ ಅಂಡಲೆಯುತ್ತಾನೆ ಎಂಬುದು ಸಿನಿಮಾದ ಕಥೆ.

ಹನ್ನೆರಡು ವರ್ಷಗಳ ಕಾಲ ಟೆಕ್ಕಿಯಾಗಿ ಕೆಲಸ ನಿರ್ವಹಿಸಿರುವ ನಾಗ್ ವೆಂಕಟ್ ಈ ಚಿತ್ರ ನಿರ್ದೇಶಿಸುತ್ತಿದ್ದಾರೆ.  ಎರಡು ಕಿರುಚಿತ್ರಗಳು ಮತ್ತು ವೆಬ್ ಸಿರೀಸ್ ನಿರ್ದೇಶಿಸಿರುವ ಅನುಭವ ಅವರಿಗಿದೆ. ಬೆಂಗಳೂರು, ತೀರ್ಥಹಳ್ಳಿ ಮತ್ತು ಕೊಡಗಿನ ಸುತ್ತಮುತ್ತ ಚಿತ್ರೀಕರಣ ನಡೆಸಲು ಚಿತ್ರತಂಡ ಯೋಜನೆ ರೂಪಿಸಿದೆ.

ವೈಭವ್‌ ಅವರದು ಬಿಂದಾಸ್ ಹುಡುಗನ ಪಾತ್ರ. ಬದುಕಿನ ಮೌಲ್ಯಗಳ ಹೊಣೆ ಹೊತ್ತುಕೊಂಡ ಹುಡುಗಿಯಾಗಿ ಮಂಗಳೂರು ಮೂಲಕ ರಾಶಿ ಬಾಲಕೃಷ್ಣ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ.

ನಾಲ್ಕು ಹಾಡುಗಳಿಗೆ ಆಶಿಕ್ ಅರುಣ್ ಸಂಗೀತ ನೀಡಿದ್ದಾರೆ. ಛಾಯಾಗ್ರಹಣ ವಿನೋದ್ ರಾಜೇಂದ್ರನ್ ಅವರದು. ತ್ಯಾಗು ಎಂ. ಸಂಕಲನ ನಿರ್ವಹಿಸಿದ್ದಾರೆ. ಸ್ಟನ್ನರ್ ಸ್ಯಾಮ್ ಸಾಹಸ ನಿರ್ದೇಶಿಸಿದ್ದಾರೆ. ವಾಸಿಕ್ ಅಲ್‍ಸಾದ್ ಅವರು ಮಹದ್ ಪಿಕ್ಚರ್ಸ್ ಮೂಲಕ ಬಂಡವಾಳ ಹೂಡಿದ್ದಾರೆ. ಮೊದಲ ದೃಶ್ಯಕ್ಕೆ ನಟ ಧನಂಜಯ್‌ ಫಲಕ ತೋರಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)