ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂದಿ ಚಿತ್ರರಂಗದಿಂದ ನಾನು ಅಪಮಾನಿತನಾಗಿದ್ದೆ: ಚಿರಂಜೀವಿ ಬೇಸರ

ದಕ್ಷಿಣ ಭಾರತದ ಸಿನಿಮಾಗಳ ಯಶಸ್ಸಿನ ಬಗ್ಗೆ ಚಿರಂಜೀವಿ ಮೆಚ್ಚುಗೆ
Last Updated 2 ಮೇ 2022, 14:50 IST
ಅಕ್ಷರ ಗಾತ್ರ

ಹೈದರಾಬಾದ್: ಈ ಹಿಂದೆ ಭಾರತೀಯ ಸಿನಿಮಾ ಜಗತ್ತನ್ನು ಹಿಂದಿ ಸಿನಿಮಾಗಳಿಂದ ವ್ಯಾಖ್ಯಾನಿಸುವುದನ್ನು ಕಂಡು ದಕ್ಷಿಣ ಭಾರತೀಯ ಕಲಾವಿದನಾಗಿದ್ದ ನನಗೆ ಅಪಮಾನವಾಗಿತ್ತು ಎಂದು 1988ರಲ್ಲಿ ತಮ್ಮ ಜೀವನದಲ್ಲಿ ನಡೆದ ಘಟನೆಯ ಕಹಿ ಅನುಭವವನ್ನು ಮೆಗಾಸ್ಟಾರ್ ಹಾಗೂ ಹಿರಿಯ ನಟ ಚಿರಂಜೀವಿ ಹಂಚಿಕೊಂಡಿದ್ದಾರೆ.

ಆದರೆ ಚಿತ್ರ ನಿರ್ಮಾಪಕ ಎಸ್.ಎಸ್. ರಾಜಮೌಳಿ ಅವರ ಬಾಹುಬಲಿ ಚಿತ್ರದ ಸರಣಿಗಳು ಮತ್ತು ಆರ್‌ಆರ್‌ಆರ್ ಚಿತ್ರಗಳು ದೇಶ ಮತ್ತು ಜಾಗತಿಕ ಮಟ್ಟದಲ್ಲಿ ದಕ್ಷಿಣ ಚಿತ್ರರಂಗವನ್ನು ಜನಪ್ರಿಯಗೊಳಿಸಿವೆ. ಈ ಮೂಲಕ ನಾವು ತಾರತಮ್ಯದಿಂದ ಮುಕ್ತರಾಗಿದ್ದೇವೆ ಎಂದು ಹೇಳಿದ್ದಾರೆ.

ಹಿಂದಿ ರಾಷ್ಟ್ರೀಯ ಭಾಷೆ ಎಂಬ ಕುರಿತು ಬಾಲಿವುಡ್ ನಟ ಅಜಯ್ ದೇವಗನ್ ಮತ್ತು ಕನ್ನಡದ ನಟ ಸುದೀಪ್ ಮಧ್ಯೆ ಟ್ವೀಟ್ ಸಮರದ ಬೆನ್ನಲ್ಲೇ, ಹಿರಿಯ ನಟ ಚಿರಂಜೀವಿ ಅವರ ಈ ಹೇಳಿಕೆ ಹೊರಬಿದ್ದಿದೆ.

ತಮ್ಮ ಅಭಿನಯದ ಆಚಾರ್ಯ ಚಿತ್ರ ಕುರಿತಾದ ಕಾರ್ಯಕ್ರಮದಲ್ಲಿ ಇತ್ತೀಚೆಗೆ ಮಾತನಾಡಿದ ಅವರು, 'ಭಾರತೀಯ ಸಿನಿಮಾ ಎಂದರೆ ಹಿಂದಿ ಚಿತ್ರಗಳು ಎಂಬಂತಾಗಿತ್ತು. ಹಲವು ವರ್ಷಗಳ ಕಾಲ ಹಿಂದಿ ಸಿನಿಮಾಗಳನ್ನು ಮಾತ್ರ ಭಾರತೀಯ ಚಿತ್ರಗಳು ಎಂಬಂತೆ ಬಿಂಬಿಸಲಾಗಿತ್ತು' ಎಂದು ಬೇಸರ ವ್ಯಕ್ತಪಡಿಸಿದರು.

1988ರಲ್ಲಿ ರಾಷ್ಟ್ರೀಯ ಚಲನಚಿತ್ರಗಳ ಪ್ರಶಸ್ತಿ ಪುರಸ್ಕಾರ ಕಾರ್ಯಕ್ರಮಕ್ಕೆ ಹೋಗಿದ್ದೆ. ಅಲ್ಲಿ ಪೃಥ್ವಿರಾಜ್ ಕಪರ್, ರಾಜ್ ಕಪೂರ್, ದಿಲೀಪ್ ಕುಮಾರ್, ದೇವ್ ಆನಂದ್, ಅಮಿತಾಭ್ ಬಚ್ಚನ್, ರಾಜೇಶ್ ಖನ್ನಾ ಮತ್ತು ಧರ್ಮೇಂದ್ರ ಅವರ ಚಿತ್ರಗಳನ್ನು ಅಳವಡಿಸಲಾಗಿತ್ತು. ಅಲ್ಲದೆ ಬಾಲಿವುಡ್ ನಿರ್ದೇಶಕರು ಮತ್ತು ನಟಿಯರ ಬಗ್ಗೆ ವರ್ಣಿರಂಜಿತ ವಿವರಣೆಗಳನ್ನು ನೀಡಲಾಗಿತ್ತು. ಆದರೆ, ಡಾ. ರಾಜ್ ಕುಮಾರ್, ಎ. ನಾಗೇಶ್ವರ ರಾವ್ ಮತ್ತು ಎನ್.ಟಿ. ರಾಮರಾವ್ ಸೇರಿದಂತೆ ದಕ್ಷಿಣ ಭಾರತದ ಪ್ರಮುಖ ಕಲಾವಿದರ ಬಗ್ಗೆ ಯಾವುದೇ ಚಿತ್ರ ಮತ್ತು ವಿವರಣೆಯಿರಲಿಲ್ಲ. ಜೊತೆಗೆ ಭಾರತೀಯ ಚಿತ್ರರಂಗಕ್ಕೆ ದಕ್ಷಿಣ ಭಾರತದ ಚಿತ್ರಗಳ ಕೊಡುಗೆಗಳ ಬಗ್ಗೆಯೂ ಬಾಲಿವುಡ್ ಚಿತ್ರರಂಗ ಗೌರವ ನೀಡುತ್ತಿರಲಿಲ್ಲ.ಇದರಿಂದ ನನಗೆ ಅವಮಾನ ಆಗಿತ್ತು' ಎಂದು ಬೇಸರ ವ್ಯಕ್ತಪಡಿಸಿದರು.

ಆದರೆ ಬಾಹುಬಲಿ ಮತ್ತು ಆರ‌್‌ಆರ್‌ಆರ್‌ ಚಿತ್ರಗಳು ಭಾರತೀಯ ಸಿನಿಮಾ ಸ್ಥಾನವನ್ನು ಪಡೆದುಕೊಂಡಿವೆ ಎಂದು ಹರ್ಷ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT