ಶುಕ್ರವಾರ, ಮಾರ್ಚ್ 5, 2021
30 °C

ಸಿನಿ ಕನಸಿಗೆ ರ‍್ಯಾಂಪ್‌ ಸಾಂಗತ್ಯ: ಚಂದನವನಕ್ಕೆ ಯಶಾ ಶಿವಕುಮಾರ್‌ ಹೊಸ ಆಗಮನ

ಕೆ.ಎಂ.ಸತೀಶ್‌ ಬೆಳ್ಳಕ್ಕಿ Updated:

ಅಕ್ಷರ ಗಾತ್ರ : | |

Prajavani

ಹಾಲಿಗೆ ಅರಿಷಿಣ ಹಾಕಿದಾಗ ಮೂಡುವ ಹೊಂಬಣ್ಣದಂತಹ ಮೈಬಣ್ಣ, ಬಟ್ಟಲು ಕಂಗಳ ಚೆಲುವು ಇಮ್ಮಡಿಗೊಳಿಸುವ ಹೂ ನಗುವಿನ ಒಡತಿ ಯಶಾ ಶಿವಕುಮಾರ್‌ ಚಂದನವನದ ಹೊಸ ಫಸಲು.

ಬಿಗ್‌ ಬ್ಯಾನರ್‌ ಸಿನಿಮಾಗಳ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿರುವ ಯಶಾ, ಮೂರು ತಿಂಗಳ ಅವಧಿಯಲ್ಲಿ ಮೂರು ಸಿನಿಮಾಗಳಲ್ಲಿ ನಟಿಸುವ ಅವಕಾಶ ಪಡೆದುಕೊಂಡಿದ್ದಾರೆ. ತಮ್ಮ ಸಿನಿ ಪಯಣದ ಆರಂಭದಲ್ಲೇ ಭರ್ಜರಿ ಖಾತೆ ತೆರೆಯುವ ಮೂಲಕ ಹೊಸ ಕಲಾವಿದರಿಗೆ ಸ್ಫೂರ್ತಿಯಾಗಿದ್ದಾರೆ.

ಯೋಗರಾಜ್‌ ಭಟ್‌ ನಿರ್ದೇಶನದ ‘ಪದವಿಪೂರ್ವ’, ವಿಜಯ್‌ ಮಿಲ್ಟನ್‌ ನಿರ್ದೇಶನದ ‘ಶಿವಪ್ಪ’ ಹಾಗೂ ಕೋಸ್ಟಲ್‌ವುಡ್‌ನ ‘ರಾಜ್‌ ಸೌಂಡ್ಸ್‌ ಅಂಡ್‌ ಲೈಟ್‌’ ಸಿನಿಮಾಗಳಲ್ಲಿ ಯಶಾ ನಟಿಸುತ್ತಿದ್ದಾರೆ.

ಚಿಕ್ಕಂದಿನಿಂದಲೂ ನಟಿಯಾಗುವ ಕನಸು ಹೊಸೆಯುತ್ತಿದ್ದ ಯಶಾ, ಅದನ್ನು ನನಸಾಗಿಸಿಕೊಳ್ಳಲು ಫ್ಯಾಷನ್‌ ಕ್ಷೇತ್ರದ ರ‍್ಯಾಂಪ್‌ ಅನ್ನೇ ಚಿಮ್ಮುಹಲಗೆಯಾಗಿಸಿಕೊಂಡರು. ಮಂಗಳೂರಿನ ಫ್ಯಾಷನ್‌ ಎಬಿಸಿಡಿ ಸಂಸ್ಥೆ ಮೂಲಕ ಗ್ಲ್ಯಾಮರ್‌ ಜಗತ್ತಿಗೆ ತೆರೆದುಕೊಂಡ ಯಶಾ ಅವರು ಮಿಸ್‌ ಕರ್ನಾಟಕ ಇಂಟರ್‌ ನ್ಯಾಷನಲ್‌, ಮಿಸ್‌ ಬೆಂಗಳೂರು ಮತ್ತು ಮಿಸ್‌ ಗ್ಲೋರಿ ಆಫ್‌ ಗ್ಯಾಲಕ್ಸಿ ಕಿರೀಟಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ಒಂದು ವರ್ಷದ ಫ್ಯಾಷನ್‌ ಕ್ಷೇತ್ರದ ಜತೆಗಿನ ಒಡನಾಟ ಅವರ ಬದುಕಿನ ದಿಕ್ಕು ಬದಲಿಸಿದೆ. ಚಿಕ್ಕಂದಿನಲ್ಲಿ ಕಂಡ ಕನಸುಗಳು ಚಿಗುರುತ್ತಿವೆ.

ಭರತನಾಟ್ಯದಲ್ಲಿ ಪರಿಣತಿ ಸಾಧಿಸಿರುವ ಯಶಾ ಕಥಕ್‌, ಮಣಿಪುರಿ, ಹಿಪ್‌ಹಾಪ್‌, ಬಾಲಿವುಡ್‌, ಫ್ರೀ ಸ್ಟೈಲ್‌ ಹೀಗೆ ನೃತ್ಯದ ನಾನಾ ಶೈಲಿಗಳನ್ನು ಕಲಿತಿದ್ದಾರೆ. ಫ್ಯಾಷನ್‌ ಕ್ಷೇತ್ರದಿಂದ ನೇರವಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿರುವ ಯಶಾ, ಎಂದಿಗೂ ಅಭಿನಯ ತರಗತಿಗಳಿಗೆ ಹಾಜರಾದವರಲ್ಲ. ಸಿನಿಮಾಗಳಲ್ಲಿ ನಟಿಸಲು, ಭಾವನೆಗಳನ್ನು ಅಭಿವ್ಯಕ್ತಿಗೆ ಪಡಿಸಲು ನೃತ್ಯವೇ ಸಹಕಾರಿ ಆಗುತ್ತದೆ ಎಂದು ಬಲವಾಗಿ ನಂಬಿದವರು.

‘ಮೊದಲ ಚಿತ್ರದಲ್ಲೇ ಬಿಗ್‌ ಬ್ಯಾನರ್‌ ಹಾಗೂ ಖ್ಯಾತ ನಿರ್ದೇಶಕರ ಜತೆಗೆ ಕೆಲಸ ಮಾಡಿದ್ದು ಖುಷಿ ಕೊಟ್ಟಿತು. ಯೋಗರಾಜ್‌ ಭಟ್ ಸಿನಿಮಾಗಳ ಮೂಲಕ ಲಾಂಚ್‌ ಆದವರು ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ‘ಶಿವಪ್ಪ’ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿದ್ದು ಇನ್ನೂ ಹೆಚ್ಚಿನ ಖುಷಿ ನೀಡಿದೆ. ಈ ಸಿನಿಮಾದಲ್ಲಿ ಡಾಲಿ ಧನಂಜಯ ಅವರೊಟ್ಟಿಗೆ ತೆರೆ ಹಂಚಿಕೊಳ್ಳುತ್ತಿದ್ದೇನೆ’ ಎನ್ನುತ್ತಾರೆ ಯಶಾ.

‘ಪದವಿಪೂರ್ವ’ ಮತ್ತು ‘ಶಿವಪ್ಪ’ ಸಿನಿಮಾದಲ್ಲಿ ಕಾಲೇಜು ಹುಡುಗಿಯ ಯುವತಿಯ ಪಾತ್ರ ನಿರ್ವಹಿಸಿರುವ ಯಶಾ ಅವರಿಗೆ, ತಮ್ಮ ಅಭಿನಯ ಸಾಮರ್ಥ್ಯವನ್ನು ಸವಾಲಿಗೊಡ್ಡುವ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ಹಂಬಲ ಇದೆಯಂತೆ. ವೃತ್ತಿ ಬದುಕಿನ ಆರಂಭದಲ್ಲಿ ಅತ್ಯುತ್ತಮ ಅವಕಾಶಗಳನ್ನು ಪಡೆದುಕೊಂಡಿರುವ ಯಶಾ ಅವರ ಬಟ್ಟಲು ಕಂಗಳಲ್ಲಿ ಚಿತ್ರೋದ್ಯಮದಲ್ಲಿ ದೊಡ್ಡ ಮಟ್ಟದಲ್ಲಿ ಬೆಳೆಯಬೇಕು ಎಂಬ ಆಸೆ ಮಡುಗಟ್ಟಿರುವುದು ಕಾಣಿಸುತ್ತದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು