‘ಕಂಗನಾ ಜೊತೆ ಕೆಲಸ ಮಾಡಲು ನನಗೆ ತುಂಬಾ ಖುಷಿಯಾಗುತ್ತದೆ. ಸೆಟ್ನಲ್ಲಿ ತುಂಬಾ ಶ್ರದ್ಧೆಯಿಂದ ಕೆಲಸ ಮಾಡುತ್ತಾರೆ. ತನ್ನ ಪಾತ್ರಕ್ಕೆ ನ್ಯಾಯ ಒದಗಿಸಲು ಸಾಕಷ್ಟು ಶ್ರಮಪಡುತ್ತಾರೆ’ ಎಂದು ನಟ ಇಮ್ರಾನ್ ಖಾನ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
‘ಕಂಗನಾ ತಾನು ಅಭಿನಯಿಸುವ ಪಾತ್ರವನ್ನು ಗಂಭೀರವಾಗಿ ಸ್ವೀಕರಿಸುತ್ತಾರೆ. ಆ ಪಾತ್ರದಲ್ಲಿ ಸಂಪೂರ್ಣವಾಗಿ ಮಗ್ನರಾಗುತ್ತಾರೆ. ಹೀಗೆ ತನ್ನ ಕೆಲಸವನ್ನು ಗಂಭೀರವಾಗಿ ತೆಗೆದುಕೊಳ್ಳುವವರೆಂದರೆ ನನಗೆ ತುಂಬಾ ಇಷ್ಟ’ ಎಂದಿದ್ದಾರೆ ಇಮ್ರಾನ್. ಇದೇ ಮೊದಲ ಬಾರಿಗೆ ನಟಿ ಕಂಗನಾ ರನೋಟ್ ಹಾಗೂ ಇಮ್ರಾನ್ ಖಾನ್ ಬೆಳ್ಳಿಪರದೆ ಮೇಲೆ ಒಟ್ಟಾಗಿ ಕಾಣಿಸಿಕೊಳ್ಳಲಿದ್ದಾರೆ.
ನಿಖಿಲ್ ಅಡ್ವಾನಿ ನಿರ್ದೇಶನದ ‘ಕಟ್ಟಿ ಬಟ್ಟಿ’ ಚಿತ್ರದಲ್ಲಿ ನಾಯಕನಾಗಿ ಇಮ್ರಾನ್ ಹಾಗೂ ನಾಯಕಿಯಾಗಿ ಕಂಗನಾ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಒಂದು ವಾರದಲ್ಲಿ ಬಾಕಿ ಇರುವ ಚಿತ್ರೀಕರಣ ಮುಗಿಯಲಿದೆ. ಇದು ಇಬ್ಬರು ಯುವ ಪ್ರೇಮಿಗಳ ನಡುವಿನ ವಿಭಿನ್ನ ಪ್ರೇಮಕಥೆಯಾಗಿದೆ.
ಚಿತ್ರದಲ್ಲಿ ಪ್ರಸ್ತುತ ನಡೆಯುತ್ತಿರುವ ಪ್ರೀತಿ, ಅವರ ನಡುವಿನ ಕಲಹ, ಮನಸ್ತಾಪ, ಮತ್ತೆ ಒಂದಾಗುವ ಸಂಬಂಧಗಳ ಸುತ್ತ ಚಿತ್ರೀಕರಿಸಲಾಗಿದೆ. ‘ಮ್ಯಾಡಿ’ ಪಾತ್ರದಲ್ಲಿ ಇಮ್ರಾನ್ ಹಾಗೂ ‘ಪಾಯಲ್’ ಪಾತ್ರದಲ್ಲಿ ಕಂಗನಾ ಕಾಣಿಸಿಕೊಳ್ಳಲಿದ್ದಾರೆ.
ಎರಡು ವರ್ಷಗಳ ನಂತರ ಇಮ್ರಾನ್ ಮತ್ತೆ ‘ಕಟ್ಟಿ ಬಟ್ಟಿ’ ಚಿತ್ರದ ಮೂಲಕ ಬೆಳ್ಳಿ ಪರದೆ ಮೇಲೆ ಕಾಣಿಸಿಕೊಳ್ಳುತ್ತಿರುವುದು. ಈ ಹಿಂದೆ ಕರೀನಾ ಕಪೂರ್ ಜತೆ ‘ಗೋರಿ ತೆರೆ ಪ್ಯಾರ್ ಮೆ’ ಚಿತ್ರದಲ್ಲಿ ಅಭಿನಯಿಸಿದ್ದರು. ‘ಕಟ್ಟಿ ಬಟ್ಟಿ’ ಚಿತ್ರ ಸೆಪ್ಟೆಂಬರ್ 18ರಂದು ಬಿಡುಗಡೆಯಾಗಲಿದೆ.