ಸೋಮವಾರ, 3 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಲರಂತವನಲ್ಲ ಈ ಪ್ರಸಾದ್...

Last Updated 19 ಜನವರಿ 2012, 19:30 IST
ಅಕ್ಷರ ಗಾತ್ರ

`ಇದು ಸಿನಿಮಾ ಅಲ್ಲ. ಇದು ಜೀವನ. ನಾನು ಈವರೆಗೆ ನಟಿಸಿರುವ ಸುಮಾರು 150 ಸಿನಿಮಾಗಳ ಪೈಕಿ ಟಾಪ್-5 ಚಿತ್ರಗಳಲ್ಲಿ ಇದೂ ಒಂದು~. ನಾಯಕ ನಟ ಅರ್ಜುನ್ ಸರ್ಜಾ ಮಾತುಗಳಲ್ಲಿ ಭಾವುಕತೆಯಿತ್ತು. `ಪ್ರಸಾದ್~ ಚಿತ್ರದ ಧ್ವನಿಮುದ್ರಿಕೆ ಬಿಡುಗಡೆ ಸಂದರ್ಭದಲ್ಲಿ, ಸಿನಿಮಾದ ವಿಶೇಷಗಳ ಬಗ್ಗೆ ಮಾತನಾಡುತ್ತಿದ್ದ ಅವರು, `ಇದು ಹೃದಯಕ್ಕೆ ಹತ್ತಿರವಾದ ಸಿನಿಮಾ~ ಎಂದು ಬಣ್ಣಿಸಿದರು.

ಬಾಲಕನೊಬ್ಬ ತನ್ನ ಅಂಗವೈಕಲ್ಯವನ್ನು ದಾಟಿ ಉನ್ನತ ಸಾಧನೆ ಮಾಡುವುದು `ಪ್ರಸಾದ್~ ಚಿತ್ರದ ಕಥೆ. ಈ ಬಾಲಕನ ತಂದೆಯಾಗಿ ಅರ್ಜುನ್ ನಟಿಸಿದ್ದಾರೆ. ಚಿತ್ರದಲ್ಲಿ ಅವರದು ಮಧ್ಯಮ ವರ್ಗದ ಮೆಕಾನಿಕ್ ಪಾತ್ರವಂತೆ. ಅವರ ಪತ್ನಿಯಾಗಿ ರೂಪದರ್ಶಿ ಮಾಧುರಿ ಭಟ್ಟಾಚಾರ್ಯ ನಟಿಸಿದ್ದಾರೆ.

ಉದ್ಯಮಿ ಅಶೋಕ್ ಖೇಣಿ `ಪ್ರಸಾದ್~ ಚಿತ್ರದ ನಿರ್ಮಾಪಕರು. ಕನ್ನಡದಲ್ಲಿದು ಅವರ ಮೊದಲ ಸಿನಿಮಾ. ಮೊದಲ ಪ್ರಯತ್ನಕ್ಕೆ ಅವರು ಹೆಸರಾಂತ ತಂಡವನ್ನೇ ಕಲೆಹಾಕಿರುವುದು ವಿಶೇಷ. ನಾಯಕನಟ ಅರ್ಜುನ್ ಸರ್ಜಾ, ನಾಯಕಿ ಮಾಧುರಿ ಭಟ್ಟಾಚಾರ್ಯ, ಸಂಗೀತ ನಿರ್ದೇಶಕ ಇಳಯರಾಜಾ, ನೃತ್ಯ ಸಂಯೋಜಕ ಶಾಮ್ ಅಕ್ದರ್ ಎಲ್ಲರೂ ತಂತಮ್ಮ ಕ್ಷೇತ್ರಗಳಲ್ಲಿ ಪ್ರಸಿದ್ಧರಾದವರೇ.

`ಕನ್ನಡದ ಬಗ್ಗೆ ನನಗೆ ಹೆಮ್ಮೆ. ಕನ್ನಡ ಚಿತ್ರರಂಗವನ್ನು ಭಾರತದಲ್ಲಿಯೇ ನಂಬರ್ 1 ಮಾಡುವ ನಿಟ್ಟಿನಲ್ಲಿ ನಾನು ಪ್ರಯತ್ನಿಸುತ್ತಿದ್ದೇನೆ~ ಎಂದು ಅಶೋಕ್ ಖೇಣಿ ತಮ್ಮ ಸಿನಿಮಾ ನಿರ್ಮಾಣದ ಹಿಂದಿನ ಉದ್ದೇಶವನ್ನು ಬಹಿರಂಗಪಡಿಸಿದರು.

ಇಳಯರಾಜಾ ಕೂಡ `ಪ್ರಸಾದ್~ ಬಗ್ಗೆ ಭಾವುಕರಾಗಿ ಮಾತನಾಡಿದರು. `ಈ ಸಿನಿಮಾ ಕಲಾದೇವಿ ಸರಸ್ವತಿಗೆ ಕಲೆಯ ರೂಪದಲ್ಲಿ ನೈವೇದ್ಯದ ಅರ್ಪಣೆ~ ಎಂದರು. ಅಂದಹಾಗೆ, ಈ ಸಿನಿಮಾ ಪೂರ್ತಿಯಾದ ನಂತರ ಇಳಯರಾಜಾ ಸಂಗೀತ ನೀಡಿದರಂತೆ. ಮೊದಲಿಗೆ ಸಂಗೀತ ನೀಡಲಿಕ್ಕೆ ಹಿಂಜರಿದಿದ್ದ ಅವರು, ಸಿನಿಮಾ ನೋಡಿದ ಮೇಲೆ ತಮ್ಮ ನಿರ್ಧಾರ ಬದಲಿಸಿದರಂತೆ.

ಧ್ವನಿಮುದ್ರಿಕೆ ಬಿಡುಗಡೆಗೆ ಮುನ್ನಾ ದಿನವಷ್ಟೇ ನಿರ್ಮಾಪಕರು ತಮ್ಮ ಬಂಧುಬಳಗಕ್ಕೆ ಚಿತ್ರ ತೋರಿಸಿದ್ದರು. ಸಿನಿಮಾ ನೋಡಿದ್ದ ಅಂಬರೀಷ್- `ಈ ಚಿತ್ರ ಕಣ್ಣಿನಲ್ಲಿ ನೀರಿನ ಬದಲು ರಕ್ತವನ್ನು ತರಿಸುತ್ತೆ~ ಎಂದರು. `ಪ್ರಸಾದ್~ ಮೂಲಕ ಆಕ್ಷನ್ ಹೀರೊ ಇಮೇಜ್‌ಗೆ ಹೊರತಾದ ಅರ್ಜುನ್ ಸರ್ಜಾ ಪ್ರತಿಭೆ ಅನಾವರಣಗೊಂಡಿದೆ ಎಂದು ಅಂಬರೀಷ್ ಹೇಳಿದರು.

`ಸಿನಿಮಾದಿಂದ ದುಡ್ಡು ಬರುತ್ತೆ. ಹೋಗುತ್ತೆ. ಆದರೆ, ಪ್ರಸಾದ್ ಸದಾ ತೆರೆಯ ಮೇಲೆ ಇರುತ್ತಾನೆ~ ಎಂದು ಚಿತ್ರತಂಡದ ಬೆನ್ನುತಟ್ಟಿದ್ದು ಹಿರಿಯ ನಟ-ನಿರ್ಮಾಪಕ ದ್ವಾರಕೀಶ್.

ಸುಮಲತಾ ಅಂಬರೀಷ್, ಸುದೀಪ್, ಮಾಧುರಿ ಭಟ್ಟಾಚಾರ್ಯ, ಲಹರಿ ವೇಲು, ಸುಧಾರಾಣಿ, ಚಿತ್ರದ ನಿರ್ದೇಶಕ ಮನೋಜ್ ಸತಿ ವೇದಿಕೆಯ ಮೇಲಿದ್ದರು.

ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿರುವ ಸಂಕಲ್ಪ್ ಎನ್ನುವ ಬಾಲಕನೂ ವೇದಿಕೆಯ ಮೇಲಿದ್ದ. ಎಲ್ಲರ ಪ್ರಶಂಸೆಗೆ ಪಾತ್ರನಾದ ಆ ಹುಡುಗನಿಗೆ ಮಾತು ಬಾರದು, ದನಿ ಕೇಳಿಸದು. `ಖೇಣಿ ಅವರು ಈ ಬಾಲಕನಿಗೆ ಶಸ್ತ್ರಚಿಕಿತ್ಸೆ ಮಾಡಿಸಿದ್ದು, ಸಂಕಲ್ಪ್ ಸದ್ಯದಲ್ಲಿಯೇ ಮಾತನಾಡಲಿದ್ದಾನೆ~ ಎಂದು ಅರ್ಜುನ್ ಹೇಳಿದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT