ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲರ್‌ಫುಲ್‌ ‘ಚೆರ್ರಿ’

Last Updated 1 ಮೇ 2015, 19:30 IST
ಅಕ್ಷರ ಗಾತ್ರ

ಅಲ್ಲೊಂದು ಹೂವಿನಂಗಡಿ. ಆ ಅಂಗಡಿಯಲ್ಲಿ ಬಣ್ಣ ಬಣ್ಣದ ಹೂಗಳ ಗುಚ್ಛಗಳು. ಆ ಹೂವಿನಂಗಡಿ ಅಕ್ಕಪಕ್ಕದಲ್ಲಿ ತರಹೇವಾರಿ ಮಳಿಗೆಗಳು. ಅದು ಪಕ್ಕಾ ಮಾರುಕಟ್ಟೆ. ಪ್ರೀತಿಯಲ್ಲಿ ಬಿದ್ದ ಹುಡುಗ ತನ್ನ ಪ್ರಿಯತಮೆ ಎದುರು ಮೊದಲ ಬಾರಿ ಪ್ರೇಮ ನಿವೇದನೆ ಮಾಡಲು ‘ಹೇಳಿ ಮಾಡಿಸಿದ ಸ್ಥಳ’ ಅದು.

ಹೇಳಿ ಮಾಡಿಸಿದ ಸ್ಥಳ ಯಾಕೆಂದರೆ, ಅದು ಜಯರಾಂ ನಿರ್ದೇಶನದ ‘ಚೆರ್ರಿ’ ಚಿತ್ರದ ಚಿತ್ರೀಕರಣಕ್ಕೆಂದು ಕಲಾ ನಿರ್ದೇಶಕ ಶ್ರೀನಿವಾಸ್ ಅವರು ಬೆಂಗಳೂರಿನ ರಾಜರಾಜೇಶ್ವರಿ ನಗರದ ಬೀದಿಯೊಂದರಲ್ಲಿ ಹಾಕಿಸಿದ್ದ ಸೆಟ್. ಈ ಸೆಟ್‌ಗೆ ಪತ್ರಕರ್ತರು ಭೇಟಿ ನೀಡಿದ ಸಂದರ್ಭದಲ್ಲಿ, ನಾಯಕಿ ರಕ್ಷಾ ಮರೀನಾ ಹೂವು ಕೊಳ್ಳಲೆಂದು ಅಂಗಡಿಗೆ ಬಂದಿದ್ದರು.

ಪ್ರಶಾಂತ ಸಿದ್ಧಿ ಮತ್ತು ಕುರಿ ಪ್ರತಾಪ್ ಒಡೆತನದ ಹೂವಿನಂಗಡಿ ಅದು. ಅದೇ ಸಂದರ್ಭಕ್ಕೆ ಕಾಯುತ್ತಿದ್ದವನಂತೆ ನಾಯಕ ಸುಮಂತ್ ಶೈಲೇಂದ್ರ ಆಕೆಗೆ ಪ್ರೇಮ ನಿವೇದನೆ ಮಾಡಿಕೊಳ್ಳುವ ಸನ್ನಿವೇಶದ ಚಿತ್ರೀಕರಣ ಅಲ್ಲಿ ನಡೆಯುತ್ತಿತ್ತು. ಪ್ರೇಮ ನಿವೇದನೆ ಎಂದರೆ ಅದು ಕೋರಿಕೆ ಅಲ್ಲ. ‘ಪುರುಷ ಪ್ರಧಾನ’ ಎಂದು ಬಿಂಬಿಸಲಾಗುವ ಒರಟು ಶೈಲಿಯಲ್ಲೇ ನಾಯಕ ತನ್ನ ಪ್ರೇಮವನ್ನು ಪ್ರಕಟಿಸುತ್ತಿದ್ದರು. ಈ ದೃಶ್ಯ ಛಾಯಾಗ್ರಾಹಕ ಚಂದ್ರಶೇಖರ್ ಅವರ ಕ್ಯಾಮೆರಾದಲ್ಲಿ ದಾಖಲಾಗುತ್ತಿತ್ತು.

ಕೇರಳದ ಹುಡುಗಿ ಮರೀನಾ ಮೈಕಲ್ ಅವರನ್ನು ರಕ್ಷಾ ಎಂಬ ಹೆಸರಿನಲ್ಲಿ ಕನ್ನಡಕ್ಕೆ ಪರಿಚಯಿಸುತ್ತಿದ್ದಾರೆ ನಿರ್ದೇಶಕರು. ರಕ್ಷಾ ಚಿತ್ರದಲ್ಲಿ ಕಾಲೇಜು ಹುಡುಗಿ. ಸುಮಂತ್ ಈಗಾಗಲೇ ‘ಆಟ’, ‘ತಿರುಪತಿ ಎಕ್ಸ್‌ಪ್ರೆಸ್’ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಜಯರಾಂ ಅವರಿಗೆ ‘ಚೆರ್ರಿ’ ಮೊದಲ ನಿರ್ದೇಶನದ ಚಿತ್ರ.

ಚಿತ್ರದ ಅರವತ್ತೈದು ಭಾಗದಷ್ಟು ದೃಶ್ಯಗಳನ್ನು ಮಡಿಕೇರಿಯಲ್ಲಿ ಸೆಟ್ ಹಾಕಿ ಚಿತ್ರೀಕರಿಸಲಾಗಿದೆಯಂತೆ. ‘ಚೆರ್ರಿ’ಯಲ್ಲಿ ಒಟ್ಟು ಐದು ಹಾಡುಗಳಿದ್ದು ಅರ್ಜುನ್ ಜನ್ಯ ಸಂಗೀತ ಸಂಯೋಜಿ­ಸುತ್ತಿದ್ದಾರೆ. ನಾಲ್ಕು ಸಾಹಸ ದೃಶ್ಯಗಳಿದ್ದು, ಬೈಕ್ ರೇಸ್‌  ದೃಶ್ಯವನ್ನು ನೈಸ್ ರಸ್ತೆಯಲ್ಲಿ ಚಿತ್ರೀಕರಿಸುವ ಯೋಜನೆ ತಂಡದ್ದು. ಮಂಜುನಾಥ್ ಬಾಬು ‘ಚೆರ್ರಿ’ಗೆ ಹಣ ಹೊಂದಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT