ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಟ್ಟಪ್ಪರ ಅರ್ಧಶತಕ!

Last Updated 11 ಫೆಬ್ರುವರಿ 2016, 19:30 IST
ಅಕ್ಷರ ಗಾತ್ರ

‘ನಿರ್ದೇಶಕರು ಮತ್ತು ನಮ್ಮ ನಡುವೆ ಪ್ರತಿ ದೃಶ್ಯಕ್ಕೂ ಮುನ್ನ ಸಂವಾದ ನಡೆಯಬೇಕು. ಹಾಗಿದ್ದಾಗಲೇ ಪ್ರತಿ ಪಾತ್ರ ಮತ್ತು ಸನ್ನಿವೇಶಕ್ಕೆ ಹೊಸ ಆಯಾಮಗಳು ದಕ್ಕಲು ಸಾಧ್ಯ’ ಎನ್ನುವುದು ನಟ ಡ್ಯಾನಿ ಕುಟ್ಟಪ್ಪ ಮಾತು. ತೀಕ್ಷ್ಣ ನೋಟ, ಹರಿತ ಧ್ವನಿಯ ಮೂಲಕವೇ ಪ್ರೇಕ್ಷಕರನ್ನು ಬೆಚ್ಚಿಬೀಳಿಸುವ ತಾಕತ್ತುಳ್ಳ ಡ್ಯಾನಿ ಕುಟ್ಟಪ್ಪ ಅವರು ‘ಖಳ’ನಂತೆಯೇ ಕಾಣುವ ತಮ್ಮ ದೇಹಾಕಾರವನ್ನು ಆನಂದಿಸುತ್ತಾರೆ. ಪಾತ್ರದಾಚೆಗೆ ಅವರ ಮಾತು, ನಡೆಯಲ್ಲಿ ಇಣುಕುವುದು ಮೃದುತ್ವ, ವಿನಯ.

ತೆರೆಯ ಮೇಲೆ ಖಳನಾಯಕನ ಪಾತ್ರಗಳ ಏಕತಾನತೆಯನ್ನು ಮೀರಲಾಗದ ಸಣ್ಣ ಬೇಸರ ಅವರ ಮಾತಿನಲ್ಲಿ ಇಣುಕಿದರೂ, ಹಾಗೆ ಬರುತ್ತಿರುವ ಅವಕಾಶಗಳು ಅವರಿಗೆ ನಿರಾಶೆ ಉಂಟುಮಾಡಿಲ್ಲ. ಚಿತ್ರರಂಗದ ಐದಾರು ವರ್ಷದ ಪಯಣದಲ್ಲಿ 50ನೇ ಹೆಜ್ಜೆ ಇರಿಸುತ್ತಿರುವ ಡ್ಯಾನಿ, ಅದನ್ನು ಸ್ಮರಣೀಯವಾಗಿಸಿಕೊಳ್ಳುತ್ತಿರುವ ಸಂಭ್ರಮದಲ್ಲಿದ್ದಾರೆ. ‘ಡೆಡ್ಲಿ 2’ ಚಿತ್ರದಿಂದ ಶುರುವಾದ ಸಿನಿಮಾ ಲೋಕದ ನಂಟಿನಲ್ಲಿ, ಅವರು ಬಣ್ಣಹಚ್ಚುತ್ತಿರುವ 50ನೇ ಸಿನಿಮಾ ‘ಬಾಹುಬಲಿ 2’.

ಖಳನಾಯಕನಾಗಿ ಅಬ್ಬರಿಸುವ ಪಾತ್ರಗಳಲ್ಲಿ ತಮ್ಮದೇ ವಿಭಿನ್ನ ಶೈಲಿ ಸೃಷ್ಟಿಸಿಕೊಂಡಿರುವ ಡ್ಯಾನಿ, ನಿರ್ದೇಶಕ ರಾಜಮೌಳಿ ಅವರ ಕಣ್ಣಿಗೂ ಬಿದ್ದಿದ್ದಾರೆ. ‘ಬಾಹುಬಲಿ’ಯ ಎರಡನೇ ಆವೃತ್ತಿಯಲ್ಲಿ ಚಿತ್ರತಂಡವನ್ನು ಸೇರಿಕೊಳ್ಳುವಂತೆ ಕರೆ ನೀಡಿದ್ದಾರೆ. ಕನ್ನಡದ ಗಡಿಯಾಚೆಗೂ ಖಳನಾಯಕ ಖದರ್‌ ತೋರಿಸುತ್ತಿರುವ ಡ್ಯಾನಿ ಅವರಿಗೆ ಇದು ಪುಳಕದ ಗಳಿಗೆ.

ರಾಣಾ ದಗ್ಗುಬಾಟಿಯೊಂದಿಗೆ ತೆರೆ ಹಂಚಿಕೊಳ್ಳುವುದು ಎಂಬ ಮಾಹಿತಿಯ ಹೊರತಾಗಿ ಪಾತ್ರದ ಕುರಿತು ಡ್ಯಾನಿ ಅವರಿಗೆ ಬೇರೇನೂ ತಿಳಿದಿಲ್ಲ. ತಮ್ಮಲ್ಲಿನ ‘ಖಳ’ನ ಚರ್ಯೆಯೇ ತಮ್ಮನ್ನು ಆಯ್ಕೆ ಮಾಡಲು ಕಾರಣ ಎನ್ನುವುದು ಅವರ ಅಭಿಪ್ರಾಯ. ‘ನೂರಾರು ಖ್ಯಾತನಾಮರು ನಟಿಸುತ್ತಿದ್ದಾರೆ. ಅವರೊಂದಿಗೆ ನನಗೂ ಒಂದು ಪಾತ್ರ ಸಿಕ್ಕಿದೆ. ಇದೇ ದೊಡ್ಡ ಅದೃಷ್ಟ. ಇಂತಹ ಚಿತ್ರಗಳಲ್ಲಿ ಒಂದು ಕ್ಷಣ ಮುಖ ಕಂಡರೂ ಜನ ನೆನಪಲ್ಲಿಟ್ಟುಕೊಳ್ಳುತ್ತಾರೆ’ ಎಂದು ಖುಷಿ ಹಂಚಿಕೊಳ್ಳುತ್ತಾರೆ ಅವರು.

ಮನಸು ವೈವಿಧ್ಯಮಯ ಪಾತ್ರಗಳನ್ನು ಬಯಸಿದರೂ, ತಮ್ಮನ್ನು ವಿಭಿನ್ನ ದೃಷ್ಟಿಕೋನದಿಂದ ನೋಡಬಲ್ಲ ನಿರ್ದೇಶಕರಿದ್ದರೆ ಮಾತ್ರ ಸಾಧ್ಯ ಎನ್ನುವ ಅವರಿಗೆ, ತಮಗೋಸ್ಕರವೇ ಚಿತ್ರಮಂದಿರಕ್ಕೆ ಬರಬೇಕು ಎನ್ನುವ ಪ್ರೇಕ್ಷಕರು ಸೃಷ್ಟಿಯಾಗಬೇಕೆಂಬ ಬಯಕೆಯಿದೆ. ರಘುವರನ್, ನಾಸೀರುದ್ದಿನ್‌ ಷಾ, ಅಮರೀಶ್‌ ಪುರಿ, ಪ್ರಕಾಶ್‌ ರೈ ಅವರು ಖಳನಾಯಕರಾಗಿರುವ ಸಿನಿಮಾಗಳಿಗೆ ಅವರನ್ನು ನೋಡಲೆಂದೇ ತಾವು ಹೋಗುತ್ತಿದ್ದ ದಿನಗಳನ್ನು ಡ್ಯಾನಿ ನೆನಪಿಸಿಕೊಳ್ಳುತ್ತಾರೆ.

ರಂಗಭೂಮಿಯ ಹಿನ್ನೆಲೆ

ಚಿಕ್ಕಂದಿನಿಂದಲೂ ನಟನೆಯ ಒಲವು ಹೊಂದಿದ್ದ ಡ್ಯಾನಿ, ಅಭಿನಯ ತರಂಗದಲ್ಲಿ ನಟನೆಯ ಸಾಮರ್ಥ್ಯಕ್ಕೆ ಸಾಣೆ ಹಿಡಿಸಿಕೊಂಡರು. ಅವಕಾಶಗಳಿಗೆ ಎದುರು ನೋಡುತ್ತಿದ್ದಾಗ, ಡ್ಯಾನಿಯ ಮಾತು, ನೋಟ ನೋಡಿಯೇ ‘ಡೆಡ್ಲಿ 2’ನಲ್ಲಿ ಪಾತ್ರ ನೀಡಿದರು ನಿರ್ದೇಶಕ ರವಿ ಶ್ರೀವತ್ಸ. ಬಳಿಕ ಡ್ಯಾನಿ ಹಿಂದೆ ತಿರುಗಿ ನೋಡುವ ಪ್ರಮೇಯವೇ ಬರಲಿಲ್ಲ.

‘ಮಾಣಿಕ್ಯ’, ‘ಬ್ರಹ್ಮ’, ‘ಪವರ್’, ‘ದಂಡುಪಾಳ್ಯ’, ‘ಪುಟ್ಟಣ್ಣ’, ‘ಮರ್ಯಾದೆ ರಾಮಣ್ಣ’ ಮುಂತಾದವು ಅವರ ಖಳನಾಯಕನ ಖದರನ್ನು ತೋರಿಸಿದ ಚಿತ್ರಗಳು. ‘ಶಿವಲಿಂಗ’, ‘ದಂಡುಪಾಳ್ಯ 2’, ‘ಕಬೀರ’ ಮುಂತಾದ ಬಿಡುಗಡೆಗೆ ಕಾದಿರುವ ಚಿತ್ರಗಳಿವೆ. ನೆರೆಯ ಭಾಷೆಗಳಲ್ಲಿಯೂ ಡ್ಯಾನಿ ಮಿಂಚುಹರಿಸಿದ್ದಾರೆ.
ದೊರಕುವ ಪ್ರತಿ ಪಾತ್ರವನ್ನೂ ಪ್ರೀತಿಸುವ ಮನೋಭಾವದ ಅವರು, ಸಿನಿಮಾಗಳು ಎಂದಿಗೂ ಕಲಾವಿದನಿಗೆ ತೃಪ್ತಿ ನೀಡಬಾರದು ಎನ್ನುತ್ತಾರೆ. ಅಭಿನಯದ ಕುರಿತು ತೃಪ್ತಿ ಸಿಕ್ಕಿದೆ ಎಂದರೆ ಅಲ್ಲಿಗೆ ಆ ಕಲಾವಿದನ ಬಣ್ಣದ ಪಯಣ ಅಂತ್ಯಗೊಂಡಿದೆ ಎಂದರ್ಥ. ಹೀಗಾಗಿ ತೃಪ್ತಿ ಸಿಕ್ಕಿಲ್ಲ, ಸಿಗಬಾರದು ಎಂದು ಹೇಳುತ್ತಾರೆ.

ಡ್ಯಾನಿಯ ‘ಖಳ’ ನೋಟ ಸಿನಿಮಾಗಳಲ್ಲಿ ವರದಾನವಾದರೂ, ಹೊರಗೆ ಅವರನ್ನು ನೋಡುವವರು ಮಾತನಾಡಿಸಲು ಹೆದರುತ್ತಾರೆ. ಮುಖದಲ್ಲಿನ ಕ್ರೌರ್ಯವೇ ಹಾಗಿದೆ ಎಂದು ನಗುತ್ತಾರೆ ಡ್ಯಾನಿ. ಜನ ಬಂದು ಮಾತನಾಡಿಸಬೇಕು ಎಂಬ ಆಸೆಯೂ ಅವರಿಗಿಲ್ಲ. ತಮ್ಮ ಪಾಡಿಗೆ ತಾವಿರುವ ಜಾಯಮಾನ ಅವರದು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT