ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾಂಡಗೆ ಮಾರ್ಗ!

Last Updated 26 ಫೆಬ್ರುವರಿ 2015, 19:30 IST
ಅಕ್ಷರ ಗಾತ್ರ

‘ಒಂದು ಬೆಳೆ ತೆಗೆಯಬೇಕು ಅಂದ್ರೆ ಚೆನ್ನಾಗಿ ಉಳುಮೆ ಮಾಡುತ್ತೇವೆ. ಬೆಳೆ ಕೇಳಿದ್ದನ್ನೆಲ್ಲ ಕೊಡುತ್ತೇವೆ. ಅದರ ಫಲಿತಾಂಶ ಮುಂದಿನದ್ದು’– ಹೀಗೆ ಹೇಳುವಾಗ ನಿರ್ಮಾಪಕ ಘನಶ್ಯಾಂ ತುಳಜನಸಾ ಭಾಂಡಗೆ ಭಾವುಕರಾಗುತ್ತಾರೆ. ‘ಇಂಗಳೆ ಮಾರ್ಗ’ ಚಿತ್ರಕ್ಕೆ ಹಣ ಹೊಂದಿಸುವ ಮೂಲಕ ಸಿನಿಮಾ ಕ್ಷೇತ್ರಕ್ಕೆ ಕಾಲಿಟ್ಟವರು ಈ ಭಾಂಡಗೆ.

ಕನ್ನಡ ಮೊದಲ ದಲಿತ ಲೇಖಕ, ಹೋರಾಟಗಾರ, ಕರ್ನಾಟಕಕ್ಕೆ ಅಂಬೇಡ್ಕರ್ ಅವರನ್ನು ಪರಿಚಯಿಸಿದ ಸಾಧಕ– ಹೀಗೆ ಹಲವು ವಿಶೇಷಣಗಳ ಇಂಗಳೆಯ ದೇವರಾಯ ಅವರ ಕುರಿತ ಸಿನಿಮಾ ‘ಇಂಗಳೆ ಮಾರ್ಗ’. ಸರಜೂ ಕಾಟ್ಕರ್ ಅವರ ‘ದೇವರಾಯ’ ಕಾದಂಬರಿ ಆಧರಿಸಿದ ಚಿತ್ರವಿದು.

‘ಇಂಗಳೆ ಮಾರ್ಗ’ದಂಥ ವಿಶಿಷ್ಟವಾದ ಸಿನಿಮಾ ನಿರ್ಮಿಸಿದ್ದಾರೆ ಎನ್ನುವುದಷ್ಟೇ ಭಾಂಡಗೆ ಅವರ ಹೆಚ್ಚುಗಾರಿಕೆಯಲ್ಲ. ಎರಡೂ ಕಾಲುಗಳಿಲ್ಲದ ಅಂಗವಿಕಲ ಕ್ರೀಡಾಪಟು ಅವರು. ಕಲಾತ್ಮಕ ಸಿನಿಮಾ ನಿರ್ಮಿಸಿ ಅದನ್ನು ಜನರಿಗೆ ತಲುಪಿಸಲು ವೀಲ್‌ ಚೇರಿನಲ್ಲಿ ಕುಳಿತೇ ಅವರು ರಾಜ್ಯ ಸುತ್ತಿದ್ದಾರೆ. ಸಿನಿಮಾ ಕ್ಷೇತ್ರ ಸಂಪೂರ್ಣ ಹೊಸತಾದರೂ ಇಲ್ಲಿ ಏನನ್ನಾದರೂ ಸಾಧಿಸಬೇಕು ಎನ್ನುವ ಉದ್ದೇಶದಿಂದ ‘ಇಂಗಳೆ ಮಾರ್ಗ’ ರೂಪಿಸಿದ್ದಾರೆ.

‘ಅಸಮಾನತೆ, ಅನ್ಯಾಯ, ದೌರ್ಜನ್ಯಗಳು ಎಲ್ಲೆಡೆಯೂ ಹೇರಳವಾಗಿ ನಡೆಯುತ್ತಿವೆ ಎಂದು ಪ್ರಸ್ತುತ ಕಪ್ಪುಬಿಳುಪಿನ ರೀತಿ ಹೇಳಲು ಸಾಧ್ಯವಿಲ್ಲ. ಆದರೆ ಈ ಪಿಡುಗುಗಳು ಪೂರ್ಣ ಅಳಿದಿಲ್ಲ’ ಎನ್ನುವ ಭಾಂಡಗೆ, ಹಣದ ವಿಚಾರದಲ್ಲಿ ತಲೆಕೆಡಿಸಿಕೊಳ್ಳದೆ ಹೇಳಬೇಕಾದದ್ದನ್ನು ಹೇಳಿಯೇ ತೀರಬೇಕು ಎನ್ನುವ ಹಂಬಲದಿಂದ ಸಿನಿಮಾ ಮಾಡಿದ್ದಾರೆ.

‘ಇಂಗಳೆ ಮಾರ್ಗ’ ಜೈಪುರ ಮತ್ತು ಕೊಲ್ಹಾಪುರ ಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡಿದ್ದು, 2013ರ ಸಾಲಿನ ರಾಜ್ಯ ಪ್ರಶಸ್ತಿಗಳಲ್ಲಿ ಸಾಮಾಜಿಕ ಪರಿಣಾಮ ಬೀರುವ ಅತ್ಯುತ್ತಮ ಚಿತ್ರ ಪ್ರಶಸ್ತಿಗೆ ಪಾತ್ರವಾಗಿದೆ. ಇದೇ ಸಿನಿಮಾ ಈಗ ‘ಮಹಾ ಮಾನವ’ ಹೆಸರಿನಲ್ಲಿ ಮರಾಠಿಗೆ ಡಬ್ ಆಗುತ್ತಿದೆ.

ಇಂಗಳೆ ಹಾದಿಯ ಕಡುಕಷ್ಟಗಳು:
‘ನನಗೆ ಈ ಸಿನಿಮಾ ಕ್ಷೇತ್ರವೇ ಹೊಸದು. ಒಬ್ಬ ಕಲಾವಿದೆಯನ್ನು ಸಿನಿಮಾರಂಗಕ್ಕೆ ಪರಿಚಯಿಸಬೇಕು ಎಂದು ಹಲವು ನಿರ್ಮಾಪಕರನ್ನು ಭೇಟಿ ಮಾಡಿದೆ. ಅವರಿಂದ ತಾತ್ಸಾರದ ಪ್ರತಿಕ್ರಿಯೆ ಸಿಕ್ಕಿತು. ಆ ಬೇಸರದಲ್ಲಿಯೇ ‘ಇಂಗಳೆ ಮಾರ್ಗ’ವನ್ನು ನಿರ್ಮಿಸಲು ಉದ್ದೇಶಿಸಿದೆ. ಆರಂಭದಲ್ಲಿ 40 ಲಕ್ಷ ರೂಪಾಯಿ ಬಜೆಟ್‌ನಲ್ಲಿ ಯೋಚಿಸಿದ್ದ ಚಿತ್ರ  ಮುಟ್ಟಿದ್ದು ಒಂದು ಕೋಟಿ ರೂಪಾಯಿ.

ನಾನು ಸಾಮಾಜಿಕ ಸೇವಾ ಕ್ಷೇತ್ರದಲ್ಲಿ ತೊಡಗಿಕೊಂಡವನು. ಕಾದಂಬರಿ ಆಧಾರಿತ, ಸದಾಶಯ ಮತ್ತು ಜನಜಾಗೃತಿಯ ಚಿತ್ರಗಳು ವಿರಳವಾಗುತ್ತಿವೆ. ಈ ಹಿನ್ನೆಲೆಯಲ್ಲಿ ಈ ಕಾದಂಬರಿ ಆಯ್ಕೆ ಮಾಡಿಕೊಂಡಿದ್ದು. ಆದರೆ ಈ ಒಂದು ಚಿತ್ರವನ್ನು ಪೂರ್ಣಗೊಳಿಸುವಷ್ಟರಲ್ಲಿ ಹಲವರಿಂದ ಮೋಸಕ್ಕೊಳಗಾದೆ.

ಉತ್ತರ ಕರ್ನಾಟಕದ ನಿರ್ಮಾಪಕನನ್ನು ಗಾಂಧಿನಗರ ಹೇಗೆ ಬಳಸಿಕೊಳ್ಳುತ್ತದೆ ಎನ್ನುವುದು ಅರ್ಥವಾಯಿತು. ಒಂದು ಮದುವೆ ಸಮಾರಂಭ ನಡೆಯಬೇಕಾದರೆ ಹುಡುಗ ಇಲ್ಲವೇ ಹುಡುಗಿ ಓಡಿಹೋದರೆ ಯಾವ ಸ್ಥಿತಿ ಆಗುತ್ತದೆಯೋ ಅದೇ ಸ್ಥಿತಿ ನನಗೆ ಇಂಗಳೆ ಮಾರ್ಗವನ್ನು ನಿರ್ಮಿಸುವಾಗ ಆಗಿದೆ. ಇಲ್ಲಿನ ವ್ಯಾಕರಣವೇ ಅರ್ಥವಾಗದೆ, ಚೆನ್ನಾಗಿ ಪೆಟ್ಟು ತಿಂದೆ. ಗಾಂಧಿನಗರದಲ್ಲಿ ಕೆಲವರು ಇದ್ದಾರೆ. ಸಿನಿಮಾ ಮಾಡಬೇಕು ಅಷ್ಟೇ, ಅದು ಬಿಡುಗಡೆಯಾಗುತ್ತದೆಯೋ, ಜನರಿಗೆ ತಲುಪುತ್ತದೆಯೋ ಎಲ್ಲವೂ ಮುಂದಿನದ್ದು. ಈ ಮಾತನ್ನು ನಾನು ನೋವಿನಿಂದ ಹೇಳುತ್ತಿರುವೆ ಎನ್ನುತ್ತಾರೆ ಭಾಂಡಗೆ.

ತಮ್ಮ ಚಿತ್ರವನ್ನು 68ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆ ಕಾಣಿಸುವ ಮೂಲಕ ಪ್ರೇಕ್ಷಕರಿಗೆ ಚಿತ್ರವನ್ನು ತಲುಪಿಸುವ ಪ್ರಯತ್ನವನ್ನೂ ಭಾಂಡಗೆ ಮಾಡಿದ್ದರು. ಪ್ರಸ್ತುತ ‘ಇಂಗಳೆ ಮಾರ್ಗ’ ತೆರೆಗೆ ಬಂದು ವರ್ಷವಾಗಿದೆ. ಈಗ ಆ ಚಿತ್ರವನ್ನು ಹಳ್ಳಿಹಳ್ಳಿಗೆ ಕೊಂಡೊಯ್ಯುವ ಪ್ರಯತ್ನ ಮಾಡುತ್ತಿದ್ದಾರೆ. ‘ಎರಡು ಪ್ರೊಜೆಕ್ಟರ್‌ಗಳನ್ನು ಖರೀದಿಸಿದ್ದೇನೆ. ಅವುಗಳ ಮೂಲಕ ಹಳ್ಳಿಗಳಲ್ಲಿ ಸಿನಿಮಾ ಪ್ರದರ್ಶಿಸಲಾಗುವುದು.

50ಕ್ಕೂ ಹೆಚ್ಚು ಕಡೆಗಳಲ್ಲಿ ಚಿತ್ರದ ಬಗ್ಗೆ ವಿಚಾರ ಸಂಕಿರಣಗಳಾಗಿವೆ. ಬಹುಪಾಲು ಸಿನಿಮಾಗಳಲ್ಲಿ ಉತ್ತರ ಕರ್ನಾಟಕ ಭಾಷೆಯನ್ನು ಅಶ್ಲೀಲವಾಗಿ, ಲೇವಡಿಯಾಗಿ ಬಳಸಿಕೊಳ್ಳಲಾಗುತ್ತದೆ. ಮುಂದಿನ ದಿನಗಳಲ್ಲಿ ಉತ್ತರ ಕರ್ನಾಟಕಕ್ಕೆ ಸಂಬಂಧಿಸಿದಂತೆ ಹಲವು ಚಿತ್ರಗಳನ್ನು ಮಾಡಲು ಪ್ರಯತ್ನಿಸುವೆ’ ಎಂದು ತಮ್ಮ ಕನಸುಗಳನ್ನು ಭಾಂಡಗೆ ಹಂಚಿಕೊಳ್ಳುತ್ತಾರೆ.

ಸಮಾನತೆಯ ಕನವರಿಸುತ್ತ...
‘ಸಮಾಜದಲ್ಲಿ ತುಳಿತಕ್ಕೊಳಗಾದವರು, ಅಂಗವಿಕಲರು ಹೀಗೆ ಕಡೆಗಣಿಸಲ್ಪಟ್ಟ ಜನ ಸಮುದಾಯದ ಕುರಿತು ಸಿನಿಮಾ ಮಾಡುವೆ. ಸಮಾಜ ಮುಂದುವರೆದಿದೆ, ಆಧುನಿಕಗೊಳ್ಳುತ್ತಿದೆ ಎಂದರೂ ಅಸಮಾನತೆ ಅಳಿದಿಲ್ಲ. ಶುಭಕಾರ್ಯಗಳಿಗೂ ಭಜಂತ್ರಿಗಳು ನಾದಸ್ವರ (ಓಲಗ) ನುಡಿಸದಿದ್ದರೆ ಆ ಕಾರ್ಯಕ್ರಮವೇ ಅಪೂರ್ಣ ಎನ್ನುವ ಪರಿಸ್ಥಿತಿ ಇದೆ. ಆದರೆ ಓಲಗದವರನ್ನು ಕೊನೆಯಲ್ಲಿ ಕೂರಿಸಿ ಊಟ ಹಾಕಲಾಗುತ್ತದೆ. ಇಂದಿಗೂ ಅವರನ್ನು ಸಮಾಜ ವಿಶಾಲದೃಷ್ಟಿಯಿಂದ ನೋಡುತ್ತಿಲ್ಲ. ಮುಂದಿನ ದಿನಗಳಲ್ಲಿ ಈ ಬಗ್ಗೆ ಸಿನಿಮಾ ಮಾಡುವ ಆಲೋಚನೆ ಇದೆ’ ಎಂದು ಭಾಂಡಗೆ ತಮ್ಮ ನಾಳೆಗಳ ಬಗ್ಗೆ ಸುಳಿವು ನೀಡುತ್ತಾರೆ.

ಬಾಗಲಕೋಟೆಯವರಾದ ಘನಶ್ಯಾಂ ಭಾಂಡಗೆ ಮೂರು ವರುಷದವರಿದ್ದಾಗ ಪೊಲೀಯೊಗೆ ತುತ್ತಾಗಿ ಎರಡೂ ಕಾಲುಗಳ ಸ್ವಾಧೀನ ಕಳೆದುಕೊಂಡರು. ಅಂಗವಿಕಲ ಕ್ರೀಡಾಪಟುವಾಗಿಯೂ ಹೆಸರು ಗಳಿಸಿರುವ ಅವರು, ರಾಜ್ಯ ಹೊರ ರಾಜ್ಯಗಳಲ್ಲಿ ನಡೆದ ವಿವಿಧ ಕ್ರೀಡಾಕೂಟಗಳಲ್ಲಿ ಪಾಲ್ಗೊಂಡು ಪದಕಗಳನ್ನು ಪಡೆದಿದ್ದಾರೆ. ರಾಜ್ಯೋತ್ಸವ ಪ್ರಶಸ್ತಿ, ರಾಜ್ಯ ಸರ್ಕಾರ ಕೊಡಮಾಡುವ ಅಂಗವಿಕಲ ರಾಜ್ಯ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಅವರಿಗೆ ಸಂದಿವೆ.

‘ಇಂಗಳೆ ಮಾರ್ಗ’ ಚಿತ್ರದ ಮುಂದುವರಿದ ಭಾಗವಾಗಿ ಅವರು ‘ಇಂಗಳೆ ಮಾರ್ಗ’ ಪ್ರಶಸ್ತಿ ಸ್ಥಾಪಿಸಿದ್ದಾರೆ. ಮುಂದಿನ ದಿನಗಳಲ್ಲಿ ಚಿತ್ರಗಳಿಸುವ ಹಣದ ಜತೆಗೆ ಮತ್ತೊಂದಿಷ್ಟು ಮೊತ್ತ ಸೇರಿಸಿ, ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಅತ್ಯುತ್ತಮ ಅಂಕ ಪಡೆದ ಎಲ್ಲ ವರ್ಗದ ಬಡ ವಿದ್ಯಾರ್ಥಿಗಳಿಗೆ ‘ಇಂಗಳೆ ಮಾರ್ಗ’ ಪ್ರಶಸ್ತಿ ನೀಡುವುದು ಅವರ ಉದ್ದೇಶ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT