ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಿಸ್ ಬಿಪಾಶಾ ಜಸ್ಟ್ ಮಿಸ್!

Last Updated 15 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಸ್ಯಾಂಡಲ್‌ವುಡ್‌ಗೆ ಬರಬೇಕಿದ್ದ ಬಾಲಿವುಡ್ ತಾರೆ ಬಿಪಾಶಾ ಬಸು ಜಸ್ಟ್ ಮಿಸ್ ಆಗಿದ್ದಾರೆ!

ಎಲ್ಲ ಅಂದುಕೊಂಡಂತೆ ಆಗಿದ್ದರೆ ಬಿಪಾಶಾ, ‘ಮಾಮು ಟೀ ಅಂಗಡಿ ಸಿನಿಮಾದಲ್ಲಿ  ಅಭಿನಯಿಸಬೇಕಿತ್ತು. ಈ ಬಗ್ಗೆ ನಿರ್ದೇಶಕ ಎ.ಪರಮೇಶ್ ಕೆಲ ದಿನಗಳ ಹಿಂದೆ ಹೇಳಿಕೊಂಡಿದ್ದರು. ಆದರೆ ಅದು ಸಾಧ್ಯವಾಗಿಲ್ಲ. ಅದಕ್ಕೇನು ಕಾರಣ ಎಂದರೆ ನಿರ್ದೇಶಕ ಎ.ಪರಮೇಶ್ ಹಲವು ಕಾರಣಗಳನ್ನು ಮುಂದಿಡುತ್ತಾರೆ.

ನಾಲ್ವರು ನಾಯಕ ನಟರು ಅತಿಥಿ ಪಾತ್ರದಲ್ಲಿ ನಟಿಸಿರುವ ‘...ಟೀ ಅಂಗಡಿ ಹಲವು ವೈಶಿಷ್ಟ್ಯಗಳ ಸಂಗಮವಂತೆ. ಶ್ರೀನಗರ ಕಿಟ್ಟಿ, ಅಜಯ್ ರಾವ್, ಯೋಗೀಶ ಹಾಗೂ ಪ್ರೇಮ್ ಒಂದು ಹಾಡಿಗೆ ದನಿಗೂಡಿಸಿದ್ದಾರೆ. ಇಂಥ ಚಿತ್ರಕ್ಕೆ ಬಾಲಿವುಡ್‌ನಿಂದ ನಟಿಯೊಬ್ಬಳನ್ನು ಕರೆಸುವ ಯೋಚನೆಯು ಪರಮೇಶ್ ಅವರಲ್ಲಿತ್ತು. ಇದಕ್ಕೆ ಸಂಬಂಧಿಸಿದಂತೆ ಮಾತುಕತೆ ಕೂಡ ನಡೆಯಿತು. ಆದರೆ ಕೊನೇ ಹಂತದಲ್ಲಿ ಅದು ಕೈಗೂಡಲಿಲ್ಲ.

‘ಸಿನಿಮಾಕ್ಕೆ ಅದೊಂದು ಪ್ಲಸ್ ಪಾಯಿಂಟ್ ಆದಂತೆಯೂ ಆಯಿತು. ಪ್ರಚಾರ ಸಿಕ್ಕಂತೆಯೂ ಆಯಿತು ಅಂತ ಬಿಪಾಶಾ ಬಸು ಅವರನ್ನು ಕರೆಸಲು ಯತ್ನಿಸಿದೆವು. ಮೂರು ತಾಸು ಅವಧಿಯ ಚಿತ್ರೀಕರಣಕ್ಕೆ ಅವರಿಗೆ ಸೂಕ್ತ ಸಂಭಾವನೆ ಕೊಡಲು ಒಪ್ಪಿಕೊಂಡಿದ್ದೆವು. ಅಜಯ್ ರಾವ್ ಜತೆ ಚಿತ್ರೀಕರಣದಲ್ಲಿ ಬಿಪಾಶಾ ನಟಿಸಬೇಕಿತ್ತು. ಆದರೆ ಅಜಯ್‌ ಹಾಗೂ ಬಿಪಾಶಾ ಕಾಲ್‌ಷೀಟ್ ಹೊಂದಿಕೆಯಾಗಲಿಲ್ಲ. ಬಿಪಾಶಾ ಲಭ್ಯವಿದ್ದ ದಿನ ನಮಗೆ ಆ ದೃಶ್ಯ ಚಿತ್ರೀಕರಿಸುವ ವಿಶೇಷ ಯೂನಿಟ್ ಸಿಗುವ ಸಾಧ್ಯತೆ ಇರಲಿಲ್ಲ. ಇದೆಲ್ಲಕ್ಕಿಂತ ಹೆಚ್ಚಾಗಿ ಚಿತ್ರೀಕರಣದ ದಿನ ಪತ್ರಿಕಾಗೋಷ್ಠಿಯಲ್ಲಿ ತಾವು ಪಾಲ್ಗೊಳ್ಳುವುದಿಲ್ಲ ಎಂದು ಬಿಪಾಶಾ ಸ್ಪಷ್ಟಪಡಿಸಿದರು. ಇಷ್ಟೆಲ್ಲ ಖರ್ಚು ಮಾಡಿಯೂ ನಮ್ಮ ಸಿನಿಮಾ ಪ್ರಚಾರಕ್ಕೆ ಉಪಯೋಗವಾಗದೇ ಹೋದರೆ ಹೇಗೆ ಅಂತ ಅವರ ಪಾತ್ರಕ್ಕೆ ಕತ್ತರಿ ಹಾಕಿದೆವು’ ಎಂದು ಹೇಳುತ್ತಾರೆ ಪರಮೇಶ್.

ಚಿತ್ರದಲ್ಲಿ ಬಿಪಾಶಾಗೆ ಪಾತ್ರ ಸೃಷ್ಟಿಸಿ, ಕೊನೆಗೆ ಕತ್ತರಿ ಹಾಕಿದ್ದರಿಂದ ಏನು ಲಾಭ ಎಂಬ ಪ್ರಶ್ನೆಗೆ, ‘ಏನೋ ಡಿಫೆರೆಂಟ್ ಆಗಿ ಸಿನಿಮಾ ಮಾಡಲು ಪ್ರಯತ್ನಿಸಿದೆವು. ಆಗಲಿಲ್ಲ ಎಂದು ಕೈ ಚೆಲ್ಲಿದರು ಪರಮೇಶ್. ಅಷ್ಟಕ್ಕೂ ಬಿಪಾಶಾ ಅವರನ್ನು ಸಂಪರ್ಕಿಸಿದ್ದು ನಿಜವೇ ಅಥವಾ ಬರೀ ಪ್ರಚಾರ ತಂತ್ರವೇ ಎಂಬ ಪತ್ರಕರ್ತರ ಸಂಶಯ ನಿವಾರಿಸಲು ಯತ್ನಿಸಿದ ಪರಮೇಶ್, ‘ನನ್ನ ಹಾಗೂ ಬಿಪಾಶಾ ಮಧ್ಯೆ ಮೊಬೈಲ್‌ನಲ್ಲಿ ನಡೆದ ಮಾತುಕತೆಯನ್ನು ಹಲವಾರು ಜನರಿಗೆ ಈಗಾಗಲೇ ತೋರಿಸಿದ್ದೇನೆ’ ಎಂದರು.

ಮೂರು ತಾಸುಗಳ ಅವಧಿಯ ಚಿತ್ರೀಕರಣಕ್ಕೆ ಬಿಪಾಶಾಗೆ ನಿಗದಿಯಾಗಿದ್ದ ಸಂಭಾವನೆ ಎಷ್ಟು ಎಂದು ನಿರ್ದೇಶಕರನ್ನು ಕೇಳಿದಾಗ, ಹೇಳುವುದೋ ಬೇಡವೋ ಎಂಬಂತೆ ‘೨೮ ಲಕ್ಷ ರೂಪಾಯಿ’ ಎಂದು ಬಹಿರಂಗಪಡಿಸಿದರು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT