ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬಾಲಿವುಡ್‌ ಒಂದೇ ವೇದಿಕೆ ಅಲ್ಲ’

Last Updated 2 ಫೆಬ್ರುವರಿ 2014, 19:30 IST
ಅಕ್ಷರ ಗಾತ್ರ

ಭಾವನೆಗಳ ಅಗಾಧತೆಯನ್ನು ಬಣ್ಣಿಸಬಲ್ಲ ಇಂಪಾದ ದನಿ ಹಾಗೂ ಕೇಳಿದಷ್ಟೂ ಮತ್ತೆ ಮತ್ತೆ ಕೇಳಬೇಕೆನಿಸುವ ವಿಶೇಷ ದನಿ ಗಾಯಕ ಅಭಿಜಿತ್‌ ಭಟ್ಟಾಚಾರ್ಯ ಅವರದ್ದು. ಭಾರತೀಯ ಚಿತ್ರರಂಗದಲ್ಲಿ ಅನೇಕ ಮಧುರ ಗೀತೆಗಳನ್ನು ಹಾಡಿರುವ ಇವರು ಇತ್ತೀಚೆಗೆ ಹಿನ್ನೆಲೆ ಗಾಯನದಿಂದ ತುಸು ದೂರ ಸರಿದಿದ್ದರು. ಇದೀಗ ‘ಬೇಶರಂ’ ಚಿತ್ರದ ‘ದಿಲ್‌ ಕಾ ಜೋ ಹಾಲ್‌ ಹೈ’ ಹಾಡಿಗೆ ದನಿಯಾಗಿ ಮತ್ತೆ ಛಾಪು ಮೂಡಿಸಿದ್ದಾರೆ.

ಸಂಗೀತದಿಂದ ತಾವು ದೂರವೇನೂ ಇರಲಿಲ್ಲ ಎಂಬುದು ಅಭಿಜಿತ್‌ ನೀಡುವ ಸ್ಪಷ್ಟನೆ. ‘ನನ್ನ ಸಂಗೀತ ಪಯಣ ಎಂದಿಗೂ ಮುಗಿಯುವುದಿಲ್ಲ. ನನ್ನದೇ ದಾರಿಯಲ್ಲಿ ಸಂಗೀತದ ಆರಾಧನೆ ಮಾಡುತ್ತಿದ್ದೇನೆ. ಹಿನ್ನೆಲೆ ಗಾಯನದಲ್ಲಿ ತೊಡಗಿಕೊಂಡರೆ ಮಾತ್ರ ಸಂಗೀತ ಕ್ಷೇತ್ರದಲ್ಲಿ ಇದ್ದೇನೆ ಎಂಬ ಮಾತನ್ನು ನಾನು ಒಪ್ಪುವುದಿಲ್ಲ’ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.

ಸಂಗೀತದ ಸ್ವರಗಳು ಶ್ರುತಿಬದ್ಧವಾಗಿರಬೇಕು ಎಂದು ಹೇಳುವ ಅಭಿಜಿತ್‌, ಯಾವುದೇ ಕಾರಣಕ್ಕೂ ಈ ವಿಷಯದಲ್ಲಿ ರಾಜಿ ಆಗುವವರಲ್ಲ. ಅಪಶ್ರುತಿಯಲ್ಲಿ ಹಾಡುವವರನ್ನು ತರಾಟೆಗೆ ತೆಗೆದುಕೊಂಡು ಅವರು ನಿಂದಿಸಿದ ಅನೇಕ ಉದಾಹರಣೆಗಳು ಇವೆ. ತಮ್ಮ ಇಂಪಾದ ದನಿ ಹಾಗೂ ಖಡಕ್‌ ಮಾತಿನಿಂದ ಖ್ಯಾತಿ ಆಗಿರುವ ಇವರು, ‘ಸಂಗೀತ ಕ್ಷೇತ್ರದಲ್ಲಿ ನನ್ನದೇ ಆದ ಛಾಪು ಮೂಡಿಸಿದ್ದೇನೆ. ನನ್ನ ಪಾಲಿಗೆ ಹಾಡು ಎಂದರೆ ಕೇವಲ ಬಾಲಿವುಡ್‌ ಅಲ್ಲ, ಹಿನ್ನೆಲೆ ಗಾಯನವೂ ಅಲ್ಲ. ಸದ್ಯ ಅಂತರರಾಷ್ಟ್ರೀಯ ಕಛೇರಿಗಳಲ್ಲಿ ನಾನು ಭಾಗಿಯಾಗುತ್ತಿದ್ದೇನೆ. ಕೆಲವು ಸಮಯದಿಂದ ಮುಂಬೈನಿಂದ ದೂರ ಉಳಿದಿದ್ದೇನೆ’ ಎನ್ನುತ್ತಾರೆ ಅವರು.

ಸುಮಾರು ಎರಡು ದಶಕಗಳಿಂದ ತಮ್ಮ ಮಧುರ ಗಾಯನ ಹಾಗೂ ವಿಭಿನ್ನ ದನಿಯಿಂದ ಜನಮಾನದಲ್ಲಿ ನೆಲೆಸಿರುವ ಈ ವಿಶೇಷ ಪ್ರತಿಭೆ, ‘ತುಮ್‌ ದಿಲ್‌ ಕಿ ಧಡ್ಕನ್‌’, ‘ಮೈ ಕೋಯಿ ಐಸಾ ಗೀತ್‌ ಗಾವು’, ‘ಸುನೋ ನಾ ಸುನೋ ನಾ’, ‘ಮೇರೆ ಖಯಾಲೋಂ ಕಿ ಮಲಿಕಾ’ ಮುಂತಾದ ಅನೇಕ ಸೂಪರ್‌ ಹಿಟ್‌ ಗೀತೆಗಳನ್ನು ನೀಡಿದ್ದಾರೆ.

ಅಂದಹಾಗೆ, ಅಭಿಜಿತ್‌ ಅವರಿಗೆ ಇಂದಿನ ಬಾಲಿವುಡ್‌ ಸಂಗೀತದ ಬಗ್ಗೆ ಸಮಾಧಾನವಿಲ್ಲ. ‘ಇತ್ತೀಚಿನ ಸಂಗೀತ ತುಂಬಾ ಕೆಟ್ಟದಾಗಿದೆ. ಪೂರ್ತಿ ಬಾಲಿವುಡ್‌ ಸಂಸ್ಕೃತಿಯೇ ಕೆಸರಲ್ಲಿ ಬಿದ್ದು ಹೊರಳಾಡುತ್ತಿದೆ. ನಾನು ಇಂಥ ಸಂಗೀತದೊಂದಿಗೆ ಗುರುತಿಸಿಕೊಳ್ಳಲು ಇಷ್ಟಪಡುವುದಿಲ್ಲ. ನನ್ನ ಸಂಗೀತ ಪಯಣ ಶಂಕರ್‌ ಜೈಕಿಶನ್‌ ಅವರಂಥ ಸಂಗೀತ ನಿರ್ದೇಶಕರಿಂದ ಸ್ಫೂರ್ತಿ ಪಡೆದಿದೆ. ನಾನು ಹುಟ್ಟು ಕಲಾವಿದ. ಒಂದು ವೇಳೆ ಬಾಲಿವುಡ್‌ ಇಲ್ಲದೇ ಇದ್ದರೂ ನಾನು ನನ್ನದೇ ರೀತಿಯಲ್ಲಿ ಗಾಯನ ಪಯಣ ಮುಂದಿವರಿಸಿರುತ್ತಿದ್ದೆ. ನನ್ನ ಮೂರು ಆಲ್ಬಂಗಳಿವೆ. ಅವು ಎಂದಿಗೂ ಅಮರ’ ಎಂಬುದು ಅಭಿಜಿತ್‌ ಆತ್ಮವಿಶ್ವಾಸದ ನುಡಿ.

ತಂತ್ರಜ್ಞಾನವನ್ನು ಮುಖ್ಯವಾಗಿಸಿಕೊಂಡು ಇಂದು ಅನೇಕರು ಸಂಗೀತಗಾರರಾಗಿ ಮೆರೆಯುತ್ತಿದ್ದಾರೆ. ಆದರೆ ಅವರ್‍ಯಾರೂ ಸಂಗೀತಗಾರರೇ ಅಲ್ಲ ಎನ್ನುವ ಅಭಿಜಿತ್‌, ಎಲ್ಲರಂತೆ ತಂತ್ರಜ್ಞಾನವನ್ನಷ್ಟೇ ನೆಚ್ಚಿಕೊಂಡು  ಮೊಂಡು ಕಲಾವಿದನಾಗಲು ತಯಾರಿಲ್ಲವಂತೆ. ‘‘ಕಾಲ ಬದಲಾದಂತೆ ಸಂಗೀತವೂ ಕೃತಕವಾಗಿಬಿಟ್ಟಿದೆ. ಸಾಫ್ಟ್‌ವೇರ್‌ ಎಂದಿಗೂ ಸಂಗೀತಗಾರನನ್ನು ಹುಟ್ಟುಹಾಕಲಾರದು. ಕಪ್ಪು ಬಣ್ಣವನ್ನು ಎಂದೂ ಬಿಳಿ ಮಾಡಲಾಗದು; ಅದನ್ನು ಬೂದು ಬಣ್ಣಕ್ಕೆ ತಿರುಗಿಸಬಹುದಷ್ಟೆ. ಹಾಗೆಯೇ ತಂತ್ರಜ್ಞಾನ. ಅದು ಕೇವಲ ಶ್ರುತಿಶುದ್ಧಿ ಇಲ್ಲದ ‘ಬೇಸುರ್‌’ಗಳಿಗೆ ಹಾಗೂ ಸಂಗೀತಗಾರರಲ್ಲದವರಿಗೆ. ಇದು ನನ್ನ ಕಣ್ಣಿಗೆ ಶಾಪವಾಗಿ ಕಾಣುತ್ತಿದೆ’’ ಎಂದಿದ್ದಾರೆ.

ರಿಯಾಲಿಟಿ ಷೋಗಳಲ್ಲಿ ಕೂಡ ಮುಖ್ಯ ತೀರ್ಪುಗಾರರಾಗಿ ಅಭಿಜಿತ್‌ ಭಾಗವಹಿಸಿದ್ದರು. ತುಂಬಾ ಸಮಯದಿಂದ ಪ್ರಸಾರವಾಗುತ್ತಿರುವ ರಿಯಾಲಿಟಿ ಷೋಗಳ ಬಗ್ಗೆ ಅವರಿಗೆ ಪ್ರೀತಿ ಇದೆ. ಉತ್ತಮ ಗಾಯಕರು ಸ್ಪರ್ಧಿಸುತ್ತಾರೆ ಎಂಬ ಸಮಾಧಾನವೂ ಇದೆ. ಆದರೆ ಕೆಲವು ತೀರ್ಪುಗಾರರು ಗಾಯಕರು ಹೇಗೇ ಹಾಡಿದರೂ ಹೊಗಳುವುದನ್ನು ರೂಢಿಸಿಕೊಂಡುಬಿಟ್ಟಿದ್ದಾರೆ ಎಂಬುದು ಟೀಕೆ. ‘ಸುಮಾರು 20 ಸಾವಿರಕ್ಕೂ ಹೆಚ್ಚು ಮಂದಿ ಉತ್ತಮ ಗಾಯಕರಾಗುವ ಹಾದಿಯಲ್ಲಿ ಕಷ್ಟಪಡುತ್ತಿದ್ದಾರೆ. ಇಂಥದ್ದೇ ಸ್ಪರ್ಧೆ ಬಾಲಿವುಡ್‌ ಸಂಗೀತ ಕ್ಷೇತ್ರದಲ್ಲೂ ಇದೆ. ಕೆಲವು ಸಿನಿಮಾಗಳಿಗೆ ಐದು ಜನ ಸಂಗೀತ ನಿರ್ದೇಶಕರಿದ್ದರೆ, 10ಕ್ಕೂ ಹೆಚ್ಚು ಜನ ಹಾಡುಗಾರರಿರುತ್ತಾರೆ. ಇಲ್ಲಿ ಅವಕಾಶವೂ ಸಾಕಷ್ಟಿದೆ. ಅಂತೆಯೇ ಸ್ಪರ್ಧೆಯೂ ಹೆಚ್ಚಿದೆ’ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

ಯಾವ ನಟನಿಗೆ ಹಾಡುವುದೆಂದರೆ ನಿಮಗಿಷ್ಟ ಎಂಬ ಪ್ರಶ್ನೆಗೆ ಅಭಿಜಿತ್‌ ಅವರ ಉತ್ತರ ಹೀಗಿದೆ: ‘ನನ್ನ ದನಿ ಇಂದಿಗೂ ತಾಜಾತನವನ್ನು ಉಳಿಸಿಕೊಂಡಿದೆ. ಸಮಯ ಸಂದರ್ಭ ಅವಶ್ಯಕತೆಗಳಿಗೆ ತಕ್ಕಂತೆ ದನಿ ಬದಲಾಗುತ್ತದೆ ಕೂಡ. ನನ್ನ ಪ್ರತಿ ಹಾಡೂ ವಿಭಿನ್ನವಾಗಿರುತ್ತದೆ. ಇದಕ್ಕಾಗಿ ತುಂಬಾ ಪರಿಶ್ರಮ ಹಾಕುತ್ತೇನೆ. ನನ್ನ ಹಾಡು ನಟನ ವ್ಯಕ್ತಿತ್ವಕ್ಕೆ ದನಿಗೆ ಸರಿಹೊಂದಬೇಕು ಎಂದು ಬಯಸುವವನು ನಾನು.ಶಾರುಖ್‌ ಖಾನ್‌ ದನಿಗೆ ನನ್ನ ದನಿ ಚೆನ್ನಾಗಿ ಹೊಂದುತ್ತದೆ. ರಣಬೀರ್‌ ಕಪೂರ್‌ಗೆ ಕೂಡ. ಮಾಧುರ್ಯಭರಿತ ಸಂಗೀತ ಇಂಥ ಕಲಾವಿದರೊಂದಿಗೆ ಇನ್ನಷ್ಟು ಶ್ರೀಮಂತಗೊಳ್ಳುತ್ತದೆ’.

ಸಿಕ್ಕ ಅವಕಾಶಗಳ ಬಗೆಗೆ, ಮಾಡುತ್ತಿರುವ ಕೆಲಸಗಳ ಕುರಿತು ಅವರಿಗೆ ಸಮಾಧಾನವಿದೆ. ಬಯಸಿದ್ದು ದಕ್ಕಿದೆ ಎಂಬ ಸಮಾಧಾನವೂ ಇದೆ. ಸಂಗೀತ ನಿರ್ದೇಶಕನಾಗಬೇಕೆಂಬ ಕನಸನ್ನು ತಮ್ಮ ಆಲ್ಬಂ ‘ತೇರೆ ಬಿನಾ’ ಮೂಲಕ ಈಡೇರಿಸಿಕೊಂಡಿದ್ದೂ ಆಗಿದೆ.

‘ಸಿನಿಮಾ ವಿಷಯದಲ್ಲಿ ಸಂಗೀತ ಸಂಯೋಜನೆ ತುಸು ಪ್ರಯಾಸದಾಯಕ. ನಾನು ನನಗೆ ತಿಳಿದಂತೆ ಸಂಗೀತ ಸಂಯೋಜನೆಯ ಕೆಲಸಕ್ಕಿಳಿಯುವುದು, ಅದು ನಿರ್ದೇಶಕರಿಗೆ ಇಷ್ಟವಾಗದೇ ಇರುವುದು, ಆಮೇಲೆ ನನ್ನ ಕ್ರಿಯಾಶೀಲತೆ ಅವರಿಗೆ ಅರ್ಥವಾಗದೆ ನಮ್ಮಿಬ್ಬರ ಮಧ್ಯೆ ಜಟಾಪಟಿ ಪ್ರಾರಂಭವಾಗುವುದು... ಇವೆಲ್ಲ ಬೇಡ ಎಂಬ ಕಾರಣಕ್ಕೆ ಸಿನಿಮಾ ಸಂಗೀತ ಸಂಯೋಜನೆಯಿಂದ ದೂರ ಉಳಿದೆ’ ಎನ್ನುತ್ತಾರೆ ಅಭಿಜಿತ್‌.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT