ಹ್ಯಾಪಿ ಗೋ ಲಕ್ಕಿ ಕಾಪ್ ವಿಕ್ರಮ್

7

ಹ್ಯಾಪಿ ಗೋ ಲಕ್ಕಿ ಕಾಪ್ ವಿಕ್ರಮ್

Published:
Updated:
ಪ್ರಜ್ವಲ್ ದೇವರಾಜ್

ಶಿವರಾಜ್‌ಕುಮಾರ್ ನಾಯಕನಾಗಿ ನಟಿಸಿದ್ದ ‘ಇನ್‌ಸ್ಪೆಕ್ಟರ್ ವಿಕ್ರಮ್‌’ ಚಿತ್ರ 1989ರಲ್ಲಿ ತೆರೆಕಂಡಿತ್ತು. ಇದೀಗ ಅದೇ ಹೆಸರಿನ ಚಿತ್ರ ಮತ್ತೆ ತಯಾರಾಗಿದೆ. ಕನ್ನಡ ಚಿತ್ರರಂಗದಲ್ಲಿ ಪೊಲೀಸ್ ಪಾತ್ರ ಎಂದ ತಕ್ಷಣ ನೆನಪಾಗುವುದು ಒಂದು ಸಾಯಿಕುಮಾರ್. ಇನ್ನೊಬ್ಬರು ದೇವರಾಜ್‌. ಈ ಪೊಲೀಸ್‌ ಪಾತ್ರಗಳ ಸಂಪ್ರದಾಯವನ್ನು ಅವರ ಮಗ ಪ್ರಜ್ವಲ್‌ ಅವರೇ ಮುಂದುವರಿಸುವಂತೆ ತೋರುತ್ತದೆ. 

‘ಇನ್‌ಸ್ಪೆಕ್ಟರ್ ವಿಕ್ರಮ್‌’ನ ಹೊಸ ಅವತಾರವಾಗಿ ಪ್ರಜ್ವಲ್ ಮಿಂಚಲು ಸಜ್ಜಾಗಿದ್ದಾರೆ. ವಿಖ್ಯಾತ್ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಶ್ರೀ ನರಸಿಂಹ ಆಕ್ಷನ್ ಕಟ್‌ ಹೇಳಿದ್ದಾರೆ. ನರಸಿಂಹ ಅವರಿಗಿದು ಮೊದಲ ಸಿನಿಮಾ. 

ಇತ್ತೀಚೆಗೆ ಪ್ರಜ್ವಲ್ ಬರ್ತ್‌ಡೇಗೆ ‘..ವಿಕ್ರಮ್‌’ ಟೀಸರ್‌ ಅನ್ನು ಕೊಡುಗೆಯಾಗಿ ನೀಡಿತು ಚಿತ್ರತಂಡ. ಟೀಸರ್‌ನಲ್ಲಿ ನವೀನ್ ಕುಮಾರ್ ಅವರ ಛಾಯಾಗ್ರಹಣ ಮತ್ತು ಜೆ. ಅನೂಪ್‌ ಸೀಳಿನ್ ಅವರ ಹಿನ್ನೆಲೆ ಸಂಗೀತವೇ ಗಮನ ಸೆಳೆಯುವಂತಿದೆ. ಪ್ರಜ್ವಲ್ ತಂದೆ ದೇವರಾಜ್ ಟೀಸರ್ ಬಿಡುಗಡೆ ಮಾಡಿ ಹಾರೈಸಿದರು.

‘ತಾಂತ್ರಿಕವಾಗಿ ಈ ಚಿತ್ರ ತುಂಬ ಚೆನ್ನಾಗಿ ಬಂದಿದೆ. ಈಗಾಗಲೇ ಶೇ 50ರಷ್ಟು ಕೆಲಸ ಆಗಿದೆ. ಅಕ್ಟೋಬರ್ ಅಂತ್ಯ ಅಥವಾ ನವೆಂಬರ್‌ನಲ್ಲಿ ಚಿತ್ರವನ್ನು ತೆರೆಯ ಮೇಲೆ ತರುವ ಆಲೋಚನೆ ಇದೆ’ ಎಂದರು ವಿಖ್ಯಾತ್.

ಶ್ರೀನರಸಿಂಹ ಅವರು ಮಾತನಾಡಲು ಮೈಕ್‌ ಎತ್ತಿಕೊಂಡಾಗ ಉದ್ವೇಗದಿಂದ ಮಾತೇ ಹೊರಡಲಿಲ್ಲ. ‘ಏಳೆಂಟು ವರ್ಷದ ಕನಸು ಮತ್ತು ಶ್ರಮದ ಫಲ ಇದು’ ಎಂದು ಕೊಂಚ ಹೊತ್ತು ಮೌನವನ್ನಪ್ಪಿದರು. ನಂತರ ‘ಈ ಕಥೆ ಬರೆದಾಗ ನನ್ನ ಮನಸ್ಸಿಗೆ ಬಂದ ನಟ ಪ್ರಜ್ವಲ್. ಅವರೊಳಗೊಬ್ಬ ಹ್ಯೂಮರ್ ಇರುವ ನಟನಿದ್ದಾನೆ. ಟೈಮಿಂಗ್ ಇದೆ. ಇದು ಹ್ಯಾಪಿ ಗೋ ಲಕ್ಕಿ ಕಾಪ್ ಕಥೆ’ ಎಂದು ಚಿತ್ರದ ಕುರಿತು ವಿವರಿಸಿದರು. ಭಾವನಾ ಈ ಚಿತ್ರದಲ್ಲಿ ಪ್ರಜ್ವಲ್ ಜತೆ ತೆರೆಯನ್ನು ಹಂಚಿಕೊಳ್ಳುತ್ತಿದ್ದಾರೆ. 

‘ಈ ತಂಡದ ಮೇಲೆ ನನಗೆ ಅಪಾರ ನಂಬಿಕೆ ಇದೆ. ಹಾಗಾಗಿ ಕಥೆ ಕೇಳುವ ಮೊದಲೇ ಇವರು ಒಳ್ಳೆಯ ಸಿನಿಮಾ ಮಾಡುತ್ತಾರೆ ಎಂಬ ನಂಬಿಕೆ ಇತ್ತು. ಕಥೆಯಂತೂ ತುಂಬ ಇಷ್ಟವಾಯ್ತು. ಕೀಟಲೆ ಮಾಡಿಕೊಂಡು, ಎಲ್ಲರ ಕಾಲೆಳೆದುಕೊಂಡು ಓಡಾಡುತ್ತಿರುವ ಕಾಲೇಜು ಹುಡುಗನಿಗೆ ಯೂನಿಫಾರ್ಮ್‌ ತೊಡಿಸಿ ಪೊಲೀಸ್ ಸ್ಟೇಷನ್‌ಗೆ ತಂದು ಕೂಡಿಸಿದರೆ ಹೇಗಿರುತ್ತದೆಯೋ ಹಾಗಿದೆ ಈ ಚಿತ್ರದಲ್ಲಿ ನನ್ನ ಪಾತ್ರ’ ಎಂದು ಅವರು ವಿವರಿಸಿದರು. ಧರ್ಮಣ್ಣ ಅವರೂ ಈ ಚಿತ್ರದ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !