ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿನಿಮಾ ವಿಮರ್ಶೆ: ಹೊಡೆದಾಟವೇ ‘ಫೈಟರ್‌’ ಗುರಿ!

Published 6 ಅಕ್ಟೋಬರ್ 2023, 23:30 IST
Last Updated 6 ಅಕ್ಟೋಬರ್ 2023, 23:30 IST
ಅಕ್ಷರ ಗಾತ್ರ

ನಟ ವಿನೋದ್‌ ಪ್ರಭಾಕರ್ ಚಿತ್ರದಲ್ಲಿದ್ದ ಮೇಲೆ ಒಂದಷ್ಟು ಆ್ಯಕ್ಷನ್‌ ಇರಲೇಬೇಕು. ಚಿತ್ರ,ವಿಚಿತ್ರ ಫೈಟ್‌ಗಳು ಕಾಣಿಸಬೇಕು. ಭರಪೂರ ಫೈಟ್‌ನಿಂದಲೇ ತುಂಬಿ ತುಳುಕುವ ‘ಫೈಟರ್‌’ನ ಕಥೆಯನ್ನು ಒಂದು ಸಾಲಿನಲ್ಲಿ ಹೇಳುವುದು ಕಷ್ಟ! ನಾಯಕ ವಿನೋದ್‌ ಪ್ರಭಾಕರ್‌ ಮೋಹಕ್‌ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಾಯಕಿ ಲೇಖಾಚಂದ್ರ ವಿಸ್ಮಯಳಾಗಿ ಬರುತ್ತಾರೆ. ಸಣ್ಣ ಹುಡುಗನೊಬ್ಬನ ಮೇಲೆ ನಾಲ್ಕಾರು ನಾಯಿಗಳು ದಾಳಿ ಮಾಡುತ್ತವೆ. ಆತ ಅದರಿಂದ ಬದುಕುಳಿಯುವ ದೃಶ್ಯದಿಂದ ಸಿನಿಮಾ ಪ್ರಾರಂಭವಾಗುತ್ತದೆ. ಮೊಮ್ಮಗನ ಮೇಲೆ ನಾಯಿಗಳನ್ನು ಹರಿಬಿಟ್ಟವನು ಸ್ವಂತ ತಾತ. ಯಾಕೆ ಎಂಬುದಕ್ಕೆ ಚಿತ್ರದ ಕ್ಲೈಮ್ಯಾಕ್ಸ್‌ತನಕ ಕಾಯಬೇಕು.

ಚಿತ್ರದಲ್ಲಿ ಹಲವಾರು ಕಥೆಗಳು ಬಂದು ಹೋಗುವುದರಿಂದ ಮುಖ್ಯ ಕಥೆ ಇದೇ ಆಗಿರಬಹುದೆಂದು ನಾವೇ ಊಹಿಸಿಕೊಳ್ಳಬೇಕು! ಮೋಹಕನ ತಾಯಿ ಪಾತ್ರದಲ್ಲಿ ತಮಿಳು ನಟಿ ನಿರೋಷ ರಾಧಾ ಕಾಣಿಸಿಕೊಂಡಿದ್ದಾರೆ. ಅವರು ಜಿಲ್ಲಾಧಿಕಾರಿ. ಆದರೆ ಪಾತ್ರಕ್ಕೆ ಅವರು ಸೂಕ್ತ ಆಯ್ಕೆ ಆಗಿರಲಿಲ್ಲವೇನೋ ಎನ್ನಿಸುತ್ತದೆ. ಅಧಿಕಾರಿಯಾಗಿಯೂ, ತಾಯಿಯಾಗಿಯೂ ಅವರು ಕನೆಕ್ಟ್‌ ಆಗುವುದಿಲ್ಲ. ಅದಕ್ಕಿಂತ ಹೆಚ್ಚಾಗಿ ಸಾಕಷ್ಟು ಕಡೆ ಅವರ ಡಬ್ಬಿಂಗ್‌ ಸೂಕ್ತವಾಗಿಲ್ಲ. ಈ ಪಾತ್ರಕ್ಕೆ ಸ್ಥಳೀಯ ಪೋಷಕನಟಿಯರನ್ನು ನಿರ್ದೇಶಕರು ಬಳಸಿಕೊಳ್ಳಬಹುದಿತ್ತು.

ಚಿತ್ರದ ಮೊದಲಾರ್ಧ ಬ್ಲಡ್‌ಬ್ಯಾಂಕ್‌ ಮಾಫಿಯಾದ ಮೇಲೆ ಸಾಗುತ್ತದೆ. ನಾಯಕನ ಹೊಡೆದಾಟಕ್ಕೊಂದು ಕಾರಣಬೇಕು, ಖಳನಾಯಕರು ಇರಬೇಕು ಎಂಬ ಕಾರಣಕ್ಕೆ ಈ ಸನ್ನಿವೇಶಗಳನ್ನು ಸೃಷ್ಟಿಸಿದಂತೆ ಭಾಸವಾಗುತ್ತದೆ. ಯಾಕೆಂದರೆ ಚಿತ್ರದ ಕ್ಲೈಮ್ಯಾಕ್ಸ್‌ಗೂ ಮೊದಲಾರ್ಧಕ್ಕೂ ಸಂಬಂಧವೇ ಇಲ್ಲ. ಬ್ಲಡ್‌ಬ್ಯಾಂಕ್‌ ಮಾಫಿಯಾ ವಿರುದ್ಧದ ಹೋರಾಟ ಎಂದುಕೊಳ್ಳುತ್ತಿದ್ದಂತೆ ನಾಯಕಿ ವಿಸ್ಮಯಾಳ ಪ್ರವೇಶವಾಗುತ್ತದೆ. ಮೋಹಕ ಮತ್ತು ವಿಸ್ಮಯಳ ಪ್ರೇಮ ಕಥೆ ಆರಂಭವಾಗುತ್ತದೆ. ಪ್ರೇಮಕಥೆ ಅದೆಷ್ಟು ಪೇಲವವಾಗಿದೆಯೆಂದರೆ, 10 ವರ್ಷದ ಹಿಂದಿನ ಸಿನಿಮಾವೊಂದನ್ನು ನೋಡಿದಂತೆ ಭಾಸವಾಗುತ್ತದೆ. ನಾಯಕಿ ಬಾಯಿಯಲ್ಲಿ ಬರೀ ದ್ವಂದಾರ್ಥದ ಮಾತುಗಳನ್ನು ಹೇಳಿಸಿ ಪ್ರೇಕ್ಷಕನನ್ನು ನಗಿಸುವ ನಿರ್ದೇಶಕರ ಯತ್ನ ಫಲ ನೀಡಿಲ್ಲ. ನಾಯಕಿ ನಟನೆಯೂ ಅಷ್ಟಕಷ್ಟೆ.

ಪ್ರೇಮವಾದರೂ ಮುಂದುವರೆಯುತ್ತದೆಯಾ ಎಂದರೆ, ಅದೂ ಇಲ್ಲ. ಒಂದು ಫೈಟ್‌ ಮುಗಿಯುತ್ತಿದ್ದಂತೆ ಹಾಡು ಎಂಬ ಸಿದ್ಧಸೂತ್ರದಡಿ ಮೊದಲಾರ್ಧ ಮುಗಿದರೆ, ದ್ವಿತೀಯಾರ್ಧ ಬೇರೆಯದೇ ಕಥೆ. ಮತ್ತೊಂದು ನಾಯಕಿಯ ಪ್ರವೇಶ. ಮತ್ತೊಬ್ಬ ಖಳನಾಯಕನಾಗಿ ಶರತ್‌ ಲೋಹಿತಾಶ್ವ ಬರುತ್ತಾರೆ. ಗುರುಕಿರಣ್‌ ಸಂಗೀತದಲ್ಲಿ ಯಾವ ಹಾಡುಗಳೂ ಕಿವಿಗೆ ಹಿತ ಎನ್ನಿಸುವುದಿಲ್ಲ. ಹಿನ್ನೆಲೆ ಸಂಗೀತವೂ ಹಿತವಾಗಿಲ್ಲ. ಛಾಯಾಗ್ರಹಣ ಕೂಡ ನಡೆಯುತ್ತಿರುವ ದೃಶ್ಯಗಳಿಗೆ ಪೂರಕವಾಗಿಲ್ಲ. ಅನವಶ್ಯ ಸಂಗತಿಗಳು, ಜೂನಿಯರ್‌ ಆರ್ಟಿಸ್ಟ್‌ಗಳಿಂದ ಫ್ರೇಮು ತುಂಬಿಸುವ ಕೆಲಸವಾಗಿದೆಯಷ್ಟೆ.

ಚಿತ್ರ: ಫೈಟರ್‌

ನಿರ್ದೇಶನ: ನೂತನ್‌ ಉಮೇಶ್‌

ನಿರ್ಮಾಣ: ಕೆ.ಸೋಮಶೇಖರ್‌

ತಾರಾಗಣ: ವಿನೋದ್‌ ಪ್ರಭಾಕರ್‌ ಲೇಖಾಚಂದ್ರ ಪಾವನಾ ಗೌಡ ಮತ್ತಿರರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT