ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎರಡು ವಿರಾಮ! ರಾಮ ರಾಮಾ...

Last Updated 5 ಅಕ್ಟೋಬರ್ 2018, 11:52 IST
ಅಕ್ಷರ ಗಾತ್ರ

ಚಿತ್ರ: A+
ನಿರ್ಮಾಪಕರು: ವಿ. ಪ್ರಭುಕುಮಾರ್
ನಿರ್ದೇಶನ: ವಿಜಯ್‌ ಸೂರ್ಯ
ತಾರಾಗಣ: ಅನಿಲ್‌ ಸಿದ್ಧು, ಸಂಗೀತಾ, ಪ್ರಶಾಂತ್‌ ಸಿದ್ಧಿ, ಲಕ್ಷ್ಮಿ ಹೆಗಡೆ, ಮಧುಸೂದನ್

ಒಮ್ಮೆಲೆ ಬಡಾವಣೆಯಲ್ಲಿರುವ ಬೀದಿದೀಪಗಳು, ಮನೆಗಳ ವಿದ್ಯುತ್ ದೀಪಗಳು ಸ್ವಿಚ್‌ಆಫ್‌ ಆಗುತ್ತವೆ. ಆಗ ನಾಯಕ ಸಿಗರೇಟ್‌ ಹತ್ತಿಸುತ್ತಾನೆ. ಆತ ಕೈಯಲ್ಲಿ ಮದ್ಯದ ಬಾಟಲಿ ಹಿಡಿದಾಗ ವಿದ್ಯುತ್‌ ದೀಪಗಳು ಬೆಳಗುತ್ತವೆ. ನಂತರದ ದೃಶ್ಯದಲ್ಲಿ ನಾಯಕ ದೇವರನ್ನು ವಾಚಾಮಗೋಚರವಾಗಿ ಬಯ್ಯುತ್ತಾನೆ. ಒಂದು ತಾಸು ಇವೇ ದೃಶ್ಯಗಳು ಪುನರಾವರ್ತನೆಯಾಗುತ್ತವೆ. ಪ್ರೇಕ್ಷಕರಿಗೆ ನಾಯಕನ ಮನೋಭಾವ ಅರ್ಥವಾಗುವುದಿಲ್ಲ.

ಆಗ ಪರದೆ ಮೇಲೆ ಚಿತ್ರದ ಮೊದಲಾರ್ಧ ಮುಗಿದಿರುವ ಸೂಚಕವಾಗಿ ‘ವಿರಾಮ’ ಪದ ಮೂಡುತ್ತದೆ. ವಿರಾಮಕ್ಕೆ ಹೊರಡಲು ಪ್ರೇಕ್ಷಕರು ಅಣಿಯಾದಾಗ ಮತ್ತೆ ತೆರೆಯ ಮೇಲೆ ಚಿತ್ರದ ಸನ್ನಿವೇಶಗಳು ಮುಂದುವರಿಯುತ್ತವೆ. ಹತ್ತು ನಿಮಿಷ ಕಳೆದ ಬಳಿಕ ಮತ್ತೆ ವಿರಾಮ. ಹೀಗೆ ಒಂದೇ ಚಿತ್ರದಲ್ಲಿ ಎರಡು ಬಾರಿ ವಿರಾಮ ಕಂಡಾಗ ತಬ್ಬಿಬ್ಬುಗೊಳ್ಳುವ ಸರದಿ ಪ್ರೇಕ್ಷಕರದ್ದು.

ಸಿನಿಮಾ ಮಾಡಲು ಹೊರಡುವ ಯುವ ನಿರ್ದೇಶಕನೊಬ್ಬ ಬಣ್ಣದಲೋಕದಲ್ಲಿ ಎದುರಾಗುವ ಸವಾಲುಗಳನ್ನು ಹೇಗೆ ಎದುರಿಸಿ ಗೆಲ್ಲುತ್ತಾನೆ ಎನ್ನುವುದೇ'A+' ಚಿತ್ರದ ತಿರುಳು. ಇದನ್ನು ಪ್ರೀತಿ ಮತ್ತು ಸ್ನೇಹ ಬೆರಸಿ ಹೇಳುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕ ವಿಜಯ್‌ ಸೂರ್ಯ.

ನಾಯಕ ಸಿನಿಮಾ ನಿರ್ದೇಶನಕ್ಕೆ ಇಳಿಯುವುದು, ಅವನ ಮೇಲೆ ನಾಯಕಿಗೆ ಪ್ರೀತಿ ಮೂಡುವುದು, ಅವಳ ಪ್ರೀತಿಯೆಂದರೆ ಅವನಿಗೆ ಅಲರ್ಜಿ, ನಾಯಕನಿಗೆ ನಾಯಕಿಯ ತಂದೆಯೇ ವಿಲನ್ ಆಗುವುದು, ಈ ವಿಲನ್‌ ವಿರುದ್ಧ ತೊಡೆತಟ್ಟಿ ನಿಲ್ಲುವ ನಾಯಕ, ಇನ್ನೊಂದೆಡೆ ನಂಬಿದ ಗೆಳೆಯರ ಮೋಸ... ಹೀಗೆ ಈಗಾಗಲೇ ಹಲವು ಬಾರಿ ತೆರೆಯ ಮೇಲೆ ನೋಡಿರುವ ಸವಕಲು ವೃತ್ತದಿಂದ ಆಚೆ ಜಿಗಿಯುವ, ಹೊಸದೇನನ್ನೂ ಪ್ರೇಕ್ಷಕರಿಗೆ ಕಟ್ಟಿಕೊಡುವ ಉದ್ದೇಶ ಈ ಚಿತ್ರಕ್ಕೆ ಇಲ್ಲ. ಇನ್ನೊಂದೆಡೆ ಹಳೆಯ ವಿಷಯವನ್ನು ಹೊಸದಾಗಿ ಹೇಳುವ ಜಾಣ್ಮೆಯೂ ನಿರ್ದೇಶಕರಿಗೆ ಸಿದ್ಧಿಸಿಲ್ಲ.

ನಾಯಕ ಅನಿಲ್ ಸಿದ್ಧು ಚಿತ್ರದ ಕೆಲವು ದೃಶ್ಯಗಳಲ್ಲಿ ಡೈಲಾಗ್ ಹೇಳುವಾಗ ನಟ ಉಪೇಂದ್ರ ಅವರ ಸಂಭಾಷಣಾ ಶೈಲಿ ಅನುಸರಿಸಿರುವುದು ಎದ್ದು ಕಾಣುತ್ತದೆ. ನಟನೆಯಲ್ಲಿ ಅವರು ಇನ್ನೂ ಸಾಕಷ್ಟು ಪಳಗಬೇಕಿದೆ. ಭೂಪೇಂದರ್‌ ಸಿಂಗ್‌ ರೈನಾ ಅವರ ಕ್ಯಾಮೆರಾ ಚಿತ್ರಕ್ಕೆ ಹೊಸದೇನನ್ನೂ ನೀಡಿಲ್ಲ. ಆರ್.ಎಸ್. ಗಣೇಶ್‌ ನಾರಾಯಣನ್‌ ಅವರ ಸಂಗೀತಕ್ಕೂ ಈ ಮಾತು ಅನ್ವಯವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT