ಚಿತ್ರ: ಒಲವೇ ಮಂದಾರ–2
ನಿರ್ದೇಶನ: ಎಸ್.ಆರ್.ಪಾಟೀಲ್
ನಿರ್ಮಾಣ: ರಮೇಶ್ ಮರಗೋಳ
ತಾರಾಗಣ: ಸನತ್, ಪ್ರಜ್ಞಾ ಭಟ್, ಅನುಪಾ ಸತೀಶ್, ಭವ್ಯ, ಡಿಂಗ್ರಿ ನಾಗರಾಜ ಮತ್ತಿತರರು
ಊರೊಂದರಲ್ಲಿ ಕೆಲಸವಿಲ್ಲದೆ ಅಲೆದಾಡುತ್ತಿರುವ ನಾಯಕ–ಪಿಯು ಓದುತ್ತಿರುವ ನಾಯಕಿ ನಡುವೆ ಪ್ರೀತಿ ಹುಟ್ಟುವುದು, ಮನೆಯವರಿಗೆ ಇದು ಇಷ್ಟವಿಲ್ಲದೆ ಓಡಿಹೋಗುವುದು... ಈ ಎಳೆಯ ಕಥೆ ಇರುವ ಅನೇಕ ಸಿನಿಮಾಗಳು ಈಗಾಗಲೇ ತೆರೆ ಮೇಲೆ ಬಂದಿವೆ. ಇದಕ್ಕೆ ಮತ್ತೊಂದು ಸೇರ್ಪಡೆ ‘ಒಲವೇ ಮಂದಾರ–2’. ಜೊತೆಗಿರದ ಜೀವ ಎಂದೆಂದಿಗೂ ಜೀವಂತ ಎನ್ನುವುದು ಇಡೀ ಸಿನಿಮಾದ ಸಾರಾಂಶ.
ಊರಲ್ಲಿರುವ ನಾಯಕನಿಗೆ(ಆರ್ಯ) ಕೆಲಸವಿಲ್ಲ. ಆದರೆ ಅತ್ತಿಂದಿತ್ತ ಪ್ರತಿ ದೃಶ್ಯದಲ್ಲೂ ಅಲೆದಾಡಲು ಬುಲೆಟ್ ಬೈಕ್ ಇದೆ! ಇದಕ್ಕೆ ಯಾರು ಪೆಟ್ರೋಲ್ ಸುರಿಯುತ್ತಾರೆ ಎನ್ನುವುದಕ್ಕೆ ನಿರ್ಮಾಪಕರೇ ಪಾತ್ರವೊಂದಕ್ಕೆ ಬಣ್ಣಹಚ್ಚಿ ಉತ್ತರ ಹೇಳಿದ್ದಾರೆ! ಮಾತಿನ ಮಲ್ಲನಾದ ಆರ್ಯನ ಪ್ರೇಮಕಥೆಯೇ ಈ ಸಿನಿಮಾ. ಅನನುಕ್ರಮಣಿಕೆಯ ಚಿತ್ರಕಥೆಯಲ್ಲಿ ಸಿನಿಮಾ ಸಾಗುತ್ತದೆ. ಬೆಂಗಳೂರಿನ ಐ.ಟಿ. ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿರುವ ಆರ್ಯನ ಮೇಲೆ ಧೃತಿಗೆ(ಅನುಪಾ ಸತೀಶ್) ಪ್ರೀತಿ ಹುಟ್ಟಿದಾಗ, ಆರ್ಯನ ಮೊದಲ ಪ್ರೇಮಕಥೆ ತೆರೆದುಕೊಳ್ಳುತ್ತದೆ. ಈ ಭಾಗಕ್ಕೆ ಭೂಮಿ(ಪ್ರಜ್ಞಾ ಭಟ್) ನಾಯಕಿ. ಆರ್ಯನಿಗೆ ಭೂಮಿ ಸಿಗುತ್ತಾಳಾ? ಧೃತಿ ಪ್ರೀತಿ ಏನಾಗುತ್ತದೆ? ಎನ್ನುವುದಕ್ಕೆ ಸಿನಿಮಾ ನೋಡಬೇಕು.
ಸಿನಿಮಾದ ಆರಂಭಿಕ ದೃಶ್ಯಗಳು ಪೇಲವವಾಗಿವೆ. ಆರ್ಯನ ಪ್ರೀತಿಗಾಗಿ ಹಪಹಪಿಸುವ ನಾಯಕಿ, ಆಕೆಯ ಸಹೋದ್ಯೋಗಿ, ಸ್ನೇಹಿತೆಯರ ಜೊತೆಗಿನ ಸಂಭಾಷಣೆಯ ದೃಶ್ಯಗಳು ನೀರಸವಾಗಿವೆ. ನಾಯಕನ ಮೊದಲ ಪ್ರೀತಿಯನ್ನು ಹೇಳಲು ನಿರ್ದೇಶಕರು ಇಳಿದಾಗ ಕಥೆ ವೇಗ ಪಡೆದುಕೊಳ್ಳುತ್ತದೆ. ಆದರೆ ಮತ್ತದೇ ಹಳೆಯ ಸಿನಿಮಾಗಳ ಕಥಾ ಎಳೆ ತೆರೆದುಕೊಂಡಾಗ ಸಿನಿಮಾ ಗಟ್ಟಿತನ ಕಳೆದುಕೊಳ್ಳುತ್ತದೆ. ಸಿನಿಮಾದ ಅವಧಿ 110 ನಿಮಿಷದ್ದಾಗಿರುವುದರಿಂದ ನಿಟ್ಟುಸಿರು ಬಿಡಬಹುದು. ಕ್ಲೈಮ್ಯಾಕ್ಸ್‌ನಲ್ಲಿ ಕಥೆಗೊಂದು ಭಿನ್ನ ಆಯಾಮವನ್ನು ನಿರ್ದೇಶಕರು ನೀಡಿದ್ದಾರೆ.
ಹೊಸಬರ ಪ್ರಯತ್ನವಾಗಿರುವುದರಿಂದ ಬಂಡವಾಳ ಹೂಡಿದವರೇ ನಟರಾಗಿದ್ದಾರೆ! ಹೀಗಾಗಿ ಹಲವು ದೃಶ್ಯಗಳು ಕೃತಕವಾಗಿ ಕಾಣುತ್ತವೆ. ಸಿನಿಮಾದ ಹಾಡುಗಳು ಕಿವಿಗೆ ಇಂಪು. ನಟನೆಯಲ್ಲಿ ಪ್ರಜ್ಞಾ ಭಟ್ ಅವರಿಗೆ ಭವಿಷ್ಯವಿದೆ. ನಾಯಕ ಸನತ್ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.