ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರಾಘವೇಂದ್ರ ಸ್ಟೋರ್ಸ್‌’ ಸಿನಿಮಾ ವಿಮರ್ಶೆ: ‘ಸ್ಟೋರ್ಸ್‌’ನಲ್ಲಿ ಹಲವು ‘ವಿಷಯ’ ಪದಾರ್ಥ

Published 28 ಏಪ್ರಿಲ್ 2023, 20:35 IST
Last Updated 28 ಏಪ್ರಿಲ್ 2023, 20:35 IST
ಅಕ್ಷರ ಗಾತ್ರ

ಸಿನಿಮಾ: ರಾಘವೇಂದ್ರ ಸ್ಟೋರ್ಸ್‌(ಕನ್ನಡ)

ನಿರ್ದೇಶನ: ಸಂತೋಷ್‌ ಆನಂದ್‌ರಾಮ್‌

ನಿರ್ಮಾಪಕ: ವಿಜಯ ಕಿರಗಂದೂರು

ತಾರಾಗಣ: ಜಗ್ಗೇಶ್‌, ದತ್ತಣ್ಣ, ಅಚ್ಯುತ್‌ ಕುಮಾರ್‌, ಮಿತ್ರ, ರವಿಶಂಕರ್‌, ಶ್ವೇತಾ ಶ್ರೀವಾತ್ಸವ್‌

‘ರಾಘವೇಂದ್ರ ಸ್ಟೋರ್ಸ್‌’; ಹೆಸರಿಗೆ ತಕ್ಕ ಹಾಗೆ ಇಲ್ಲಿ ಹಲವು ಪದಾರ್ಥಗಳಿವೆ. ಹಾಸ್ಯ, ತುಂಟತನ, ಶೃಂಗಾರ, ವೇದನೆ ಅಥವಾ ಒಂದೇ ಪದದಲ್ಲಿ ಹೇಳುವುದಿದ್ದರೆ ‘ನವರಸ’ಗಳ ಮಿಶ್ರಣವಿಲ್ಲಿದೆ. ನಿರ್ದೇಶಕ ಸಂತೋಷ್‌ ಆನಂದ್‌ರಾಮ್‌ ತಮ್ಮ ಹಿಂದಿನ ಸಿನಿಮಾ ಟ್ರ್ಯಾಕ್‌ನಿಂದ ಕೊಂಚ ಸರಿದು, ಗಂಭೀರವಾದ ವಿಷಯಗಳನ್ನು ಹಾಸ್ಯಮಿಶ್ರಿತ ಬುಟ್ಟಿಯಲ್ಲಿಟ್ಟು ಕೊಂಚ ‘ರಭಸ’ವಾಗಿ ಪ್ರೇಕ್ಷಕರಿಗೆ ಬಡಿಸಿದ್ದಾರೆ.  

‘ರಭಸ’ ಎಂಬ ಪದ ಬಳಸಲೂ ಕಾರಣವಿದೆ. ಚಿತ್ರದ ಒಟ್ಟು ಅವಧಿ ಕೇವಲ 104 ನಿಮಿಷ. ಎರಡು ಕಥೆಯನ್ನು ಕಟ್ಟಿಕೊಡುವ ಈ ಅವಧಿಯ ಮೊದಲಾರ್ಧದ ಸ್ಕ್ರೀನ್‌ಪ್ಲೇ ಧುಮ್ಮಿಕ್ಕಿ ಸಾಗುತ್ತದೆ. ತಂದೆ ಗುಂಡಾ ಭಟ್ಟರ(ದತ್ತಣ್ಣ) ‘ರಾಘವೇಂದ್ರ ಸ್ಟೋರ್ಸ್‌’ನಲ್ಲಿ ಅಡುಗೆ ಭಟ್ಟ ಕಂ ಸಪ್ಲೈಯರ್‌ ಆಗಿರುವ ಹಯವದನ(ಜಗ್ಗೇಶ್‌) ಮದುವೆ ವಯಸ್ಸು ದಾಟಿದ ಬ್ರಹ್ಮಚಾರಿ. ತಮ್ಮನಿಗೆ ಮದುವೆಯಾಗಿ ಮಗುವಾಗಿದೆ, ತನಗೆ 40 ಆಗಿದ್ದರೂ ಮದುವೆಯಾಗಿಲ್ಲ ಎಂಬ ತೀರದ ಕೊರಗು. ಇದರ ನಡುವೆ ಆ ಊರಿನ ರಾಜಕೀಯ ಪಕ್ಷವೊಂದರ ಕಾರ್ಯಕರ್ತ ಕುಮಾರ್‌(ಅಚ್ಯುತ್‌ ಕುಮಾರ್‌) ಎಂಬಾತನ ದುರಾಸೆ, ಷಡ್ಯಂತ್ರದ ಕಥನ. ಹಯವದನನ ವಧು ಅನ್ವೇಷಣೆ ಹಾಗೂ ಮುಂದಿನ ‘ಗುರಿ’ಗಳೇ ಚಿತ್ರದ ಕಥಾಹಂದರ. ಇಷ್ಟೆಲ್ಲಾ ಪದಾರ್ಥಗಳನ್ನು ಕಡಿಮೆ ಅವಧಿಯಲ್ಲಿ ಬಡಿಸುವ ಸಾಹಸ ನಿರ್ದೇಶಕರದ್ದು.

ಮಲಯಾಳಂನಲ್ಲಿ ‘ಉಸ್ತಾದ್‌ ಹೋಟೆಲ್‌’ ಎನ್ನುವ ಸಿನಿಮಾವೊಂದು ಬಂದಿತ್ತು. ಈ ಸಿನಿಮಾ, ತುತ್ತು ಅನ್ನದ ಬೆಲೆ ತಿಳಿಸುವುದರ ಜತೆಗೆ ಆಹಾರಪ್ರೀತಿಯನ್ನು ಅಡುಗೆ ಕಲೆಯೊಟ್ಟಿಗೆ ಮೇಳೈಸಿದ ಕಥಾನವನ್ನು ಒಳಗೊಂಡಿತ್ತು. ಇದೇ ವಿಷಯವನ್ನೂ ‘ರಾಘವೇಂದ್ರ ಸ್ಟೋರ್ಸ್‌’ ಹೊತ್ತಿದೆ. ಆದರೆ ಇದು ರಿಮೇಕ್‌ ಅಲ್ಲ. ಅಡುಗೆಯನ್ನು ಉದ್ಯೋಗವಾಗಿಸಿಕೊಂಡವರಿಗೆ ಕಾಡುವ ಮದುವೆಯ ಸಮಸ್ಯೆ, ಪರೋಪಕಾರ, ವಯಸ್ಸು ಮೀರಿದ ಬಳಿಕದ ಮದುವೆ, ಬಾಡಿಗೆ ತಾಯ್ತನ, ಮಕ್ಕಳ ದತ್ತು, ಹಸಿವು, ರಾಜಕೀಯದಲ್ಲಿ ಬೆರೆತಿರುವ ಜಾತಿ, ಪ್ರಚಾರಕ್ಕಾಗಿ ಮಕ್ಕಳ ಅನಾಥಾಶ್ರಮಗಳ ಬಳಕೆ ಹೀಗೆ ಹಲವು ‘ಪದಾರ್ಥ’ಗಳು ಇಲ್ಲಿ ತುಂಬಿವೆ. ಇಷ್ಟೆಲ್ಲಾ ವಿಷಯಗಳನ್ನು 104 ನಿಮಿಷದ ಅವಧಿಯಲ್ಲಿ ಹೇಳಿರುವುದು ‘ರಭಸ’ದ ಧಾಟಿಗೆ ಕಾರಣವಾಗಿದೆ. 

ನಟನೆಯಲ್ಲಿ ಜಗ್ಗೇಶ್‌ ಇಡೀ ಸಿನಿಮಾ ಆವರಿಸಿಕೊಂಡಿದ್ದಾರೆ. ಮದುವೆ ಆಗಲಿಲ್ಲ ಎಂಬ ಕೊರಗು, ವೇದನೆ, ‘ಮೊದಲ ರಾತ್ರಿ’ಗಾಗಿ ಹಯವದನನ ಚಡಪಡಿಕೆ ಹೀಗೆ ಪ್ರತಿ ದೃಶ್ಯದಲ್ಲೂ ತಮ್ಮ ಹಾವಭಾವ, ತುಂಟ ಧ್ವನಿ ಹೊರಡಿಸಿ ಪ್ರೇಕ್ಷಕರನ್ನು ನಗಿಸುತ್ತಾರೆ. ಆಸ್ಪತ್ರೆ ದೃಶ್ಯದಲ್ಲಿ ಈ ‘ತುಂಟತನ’ ಕೊಂಚ ಅತಿಯಾಯಿತು ಎನಿಸುತ್ತದೆ. ಕೆಲವೆಡೆ ಕೇವಲ ಸಂಭಾಷಣೆಯೇ ನಗಿಸುತ್ತದೆ. ದತ್ತಣ್ಣ–ಜಗ್ಗೇಶ್‌ ‘ನೀರ್‌ದೋಸೆ’ ಜೋಡಿ ಮೊದಲಾರ್ಧದ ಜೀವಾಳ. ತಂದೆಯಾಗಿ ಅಣ್ಣನ ಸ್ಥಾನದಲ್ಲಿ ನಿಂತು ದತ್ತಣ್ಣ ಗಂಭೀರವಾಗಿದ್ದಾರೆ; ಅಷ್ಟೇ ತುಂಟತನವನ್ನೂ ಕಟ್ಟಿಕೊಟ್ಟಿದ್ದಾರೆ. ಮೊದಲಾರ್ಧದಲ್ಲಿ ತೆರೆದ ಮನಸ್ಸಿನ ದತ್ತಣ್ಣ, ದ್ವಿತೀಯಾರ್ಧದಲ್ಲಿ ಬಾಡಿಗೆ ತಾಯ್ತನ ವಿಚಾರದಲ್ಲಿ ಏಕಾಏಕಿ ಗಂಭೀರವಾದಾಗ ಪ್ರೇಕ್ಷಕನೂ ಗಲಿಬಿಲಿಗೊಳ್ಳುತ್ತಾನೆ. ನಾಯಕ, ನಾಯಕಿಯನ್ನು ಭೇಟಿಯಾಗುವ ಸಂದರ್ಭ ಹಾಗೂ ಮದುವೆಯ ಸನ್ನಿವೇಶದ ಬರವಣಿಗೆಯನ್ನು ನಿರ್ದೇಶಕರು ಇನ್ನಷ್ಟು ಗಟ್ಟಿಗೊಳಿಸಬೇಕಿತ್ತು.

‘ಕೋಗಿಲೆ’ಯಾಗಿ ನಟ ಮಿತ್ರ ಪ್ರೇಕ್ಷಕರನ್ನು ರಂಜಿಸುತ್ತಾರೆ. ಅವರ ನಟನೆಗೆ ಇಲ್ಲಿ ಹೆಚ್ಚು ಅಂಕ. ಅಚ್ಯುತ್‌ ಕುಮಾರ್‌, ‘ವೈಜಯಂತಿ’ಯಾಗಿ ಶ್ವೇತಾ ಶ್ರೀವಾತ್ಸವ್‌ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಚಿತ್ರದ ಒಂದು ಹಾಡು ಎಲ್ಲೋ ಗುನುಗಿದ ಅನುಭವ! ಶ್ರೀಶ ಕೂದುವಳ್ಳಿ ಛಾಯಾಗ್ರಹಣ ಚಿತ್ರಕ್ಕೆ ಮತ್ತಷ್ಟು ಜೀವ ತುಂಬಿದೆ. ಇಡೀ ಸಿನಿಮಾದ ‘ಜೀವಾಳ’ವನ್ನು ಕ್ಲೈಮ್ಯಾಕ್ಸ್‌ನಲ್ಲಿ ಪುನೀತ್‌ ರಾಜ್‌ಕುಮಾರ್‌ ಅವರ ಗುಣಕ್ಕೆ ಅರ್ಪಿಸಿದೆ ಚಿತ್ರತಂಡ. ‘ಏನೂ ಬಯಸದೆ ಆತ್ಮತೃಪ್ತಿಗೆ ಸೇವೆ ಮಾಡುವವನು ಪರಮಾತ್ಮನಿಗೆ ಹತ್ತಿರವಾಗುತ್ತಾನೆ. ‘ಪರಮಾತ್ಮ’ನಾಗುತ್ತಾನೆ’ ಎನ್ನುತ್ತಾ ನಿರ್ದೇಶಕರು ತೆರೆ ಎಳೆಯುತ್ತಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT