ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಗಣಿತ ಸಂಕಟಗಳ ಚಿತ್ರಪಟ

ಉರ್ವಿ/ನಾವು ನೋಡಿದ ಸಿನಿಮಾ
Last Updated 17 ಮಾರ್ಚ್ 2017, 14:32 IST
ಅಕ್ಷರ ಗಾತ್ರ
ಉರ್ವಿ
ನಿರ್ಮಾಣ: ಬಿ.ಆರ್.ಪಿ. ಭಟ್
ನಿರ್ದೇಶನ: ಬಿ.ಎಸ್‌. ಪ್ರದೀಪ್ ವರ್ಮ
ತಾರಾಗಣ: ಶ್ವೇತಾ ಪಂಡಿತ್, ಶ್ರುತಿ ಹರಿಹರನ್, ಶ್ರದ್ಧಾ ಶ್ರೀನಾಥ್
 
ಎರಡೂವರೆ ಅಕ್ಷರಗಳ ಶೀರ್ಷಿಕೆಯ ‘ಉರ್ವಿ’ ಎರಡೂವರೆ ತಾಸಿನ ಸಿನಿಮಾ. ಉರ್ವಿ ಭೂಮಿಯ ಇನ್ನೊಂದು ಹೆಸರು. ಸಹನೆಗೆ, ಪೊರೆಯುವ ಗುಣಕ್ಕೆ ಭೂಮಿ ಒಂದು ರೂಪಕ.

ಆ ಕಾರಣದಿಂದಲೇ ಹೆಣ್ಣನ್ನು ಭೂಮಿಯೊಂದಿಗೆ ಹೋಲಿಸುವರು. ನಿರ್ದೇಶಕ ಪ್ರದೀಪ್ ವರ್ಮ ಅವರೂ ಭೂಮಿಯ ಗುಣಗಳನ್ನು ಹೆಣ್ಣಿಗೆ ಆರೋಪಿಸುತ್ತ ‘ಉರ್ವಿ’ ಸಿನಿಮಾ ಕಟ್ಟಿದ್ದಾರೆ. ಪುರುಷನ ರೂಪದಲ್ಲಿ ಹೆಣ್ಣು ಅನುಭವಿಸಬೇಕಾದ ಎಣೆಯಿಲ್ಲದ ಸಂಕಟಗಳ ಕಥೆಯನ್ನು ‘ಉರ್ವಿ’ ಕಟ್ಟಿಕೊಡುತ್ತದೆ.
 
ಈ ಚಿತ್ರದಲ್ಲೊಂದು ದೃಶ್ಯವಿದೆ. ಬಾಲಕಿಯೊಬ್ಬಳು ಮನೆಯ ಮೇಲೆ ಹತ್ತಿ ನಿಂತು ಸಾಯುವುದಾಗಿ ಹೆದರಿಸುತ್ತಿದ್ದಾಳೆ. ಕೆಳಗೆ ನಿಂತ ತರುಣಿಯರ ಗುಂಪೊಂದು ಆ ಹುಡುಗಿಯ ಮನವೊಲಿಸಲು ಪ್ರಯತ್ನಿಸುತ್ತದೆ. ಕೆಳಗೆ ಇಳಿದುಬಂದರೆ ವೇಶ್ಯಾವಾಟಿಕೆ ಪಾಲಾಗುವ ಸತ್ಯ ಆ ಬಾಲಕಿಗೆ ತಿಳಿದಿದೆ. ಈಗಾಗಲೇ ಮಾಂಸಕೂಪದ ಮಿಕಗಳಾಗಿರುವ ಹೆಣ್ಣುಗಳು ‘ನಿನ್ನನ್ನು ಕಾಪಾಡುತ್ತೇವೆ’ ಎಂದು ಕ್ಷೀಣ ಧ್ವನಿಯಲ್ಲಿ ಹೇಳುತ್ತಾರೆ.
 
ಈ ಗೊಂದಲದ ನಡುವೆ, ವೇಶ್ಯಾಗೃಹದಲ್ಲಿ ಸಿಲುಕಿಕೊಂಡ ಅಮಾಯಕ ಹೆಣ್ಣೊಬ್ಬಳು ಅಲ್ಲಿಂದ ಪಾರಾಗಲು ಪ್ರಯತ್ನಿಸುತ್ತಾಳೆ. ಆದರೆ, ಆಕೆ ತಪ್ಪಿಸಿಕೊಳ್ಳುವ ಬದಲು ತನ್ನ ಕಣ್ಣೆದುರು ಸಾಯುವ ಹುಡುಗಿಯನ್ನು ಉಳಿಸಲು ಮುಂದಾಗುತ್ತಾಳೆ. ಆಕೆ ವೈದ್ಯಕೀಯ ವಿದ್ಯಾರ್ಥಿನಿ. ಅವಳ ಪ್ರಯತ್ನ ಯಶಸ್ವಿಯಾಗದೆ ಬಾಲಕಿ ಸಾಯುತ್ತಾಳೆ. ಆ ಸಾವು ಅಲ್ಲಿನ ಯುವತಿಯರ ಸ್ವಾತಂತ್ರ್ಯಕ್ಕೆ ಪ್ರೇರಣೆಯಾಗುತ್ತದೆ. 
 
ಇದೊಂದು ದೃಶ್ಯದ ಮೂಲಕ ‘ಉರ್ವಿ’ ಚಿತ್ರದ ಕಥೆಯನ್ನು ಸಂಕ್ಷಿಪ್ತವಾಗಿ ಹೇಳಿಬಿಡಬಹುದು. ಆದರೆ, ಇದು ಹಾಗೆ ಹೇಳಿ ಮುಗಿಸುವ ಕಥೆಯಲ್ಲ. ನಿರ್ದೇಶಕರದು ಕೂಡ ಭೂಮಿಯಷ್ಟೇ ತಾಳ್ಮೆ. ಸ್ತ್ರೀಕುಲದ ಸಂಕಟದ ಕಥೆಗೆ ಕೊನೆಮೊದಲುಂಟೆ? ಅದಕ್ಕೆ ಕಾರಣವಾಗಿರುವ ಪುರುಷನ ಕ್ರೌರ್ಯಕ್ಕೆ ಎಲ್ಲೆಯುಂಟೆ? ಹೀಗೆ ಕೊನೆಮೊದಲಿಲ್ಲದ ಮನುಷ್ಯ ಇತಿಹಾಸದ ಕಥೆಯನ್ನು ಪ್ರದೀಪ್‌ ತಾಳ್ಮೆಯಿಂದ, ಪ್ರಾಮಾಣಿಕ ಕಾಳಜಿಯಿಂದ ಹೇಳಲು ಪ್ರಯತ್ನಿಸಿದ್ದಾರೆ. 
 
ಮೀನುಗಾರರ ಹಟ್ಟಿಯಿಂದ ಮಹಾನಗರದ ಚಕ್ರವ್ಯೂಹದವರೆಗೆ ಮಿಕಗಳಾದ ತರುಣಿಯರ ಕಥೆ ‘ಉರ್ವಿ’ಯಲ್ಲಿದೆ. ಅಪ್ಪ–ಅಕ್ಕನನ್ನು ಕಳಕೊಂಡು ದಂಧೆಯ ಪಾಲಾದ ಹುಡುಗಿ ಇಲ್ಲಿದ್ದಾಳೆ. ತಾನು ನಂಬಿದ ಗಂಡಿನ ಪಿತೂರಿಗೆ ಒಳಗಾಗಿ ಬಂಧಿಯಾದ ಅಮಾಯಕ ತರುಣಿಯಿದ್ದಾಳೆ. ಇರುಳಲ್ಲಿ ಭ್ರಷ್ಟರ ಮುಖಗಳನ್ನು ರೇಖೆ–ಬಣ್ಣಗಳಲ್ಲಿ ಬಿಡಿಸುವ ಮೂಲಕ ಬಯಲುಮಾಡುವ ಮುಖವಾಡದ ರಾಜಕುಮಾರನಿದ್ದಾನೆ.

ಇವರೆಲ್ಲರ ಬದುಕನ್ನು ಹಿಡಿತದಲ್ಲಿಟ್ಟುಕೊಂಡ ಕಾನೂನುಬದ್ಧ ಹಾಗೂ ಕಾನೂನುಬಾಹಿರ ವ್ಯವಸ್ಥೆಗಳಿವೆ. ಒಳಿತು–ಕೆಡುಕಿನ ಈ ಸಂಘರ್ಷವನ್ನು ನಿರ್ದೇಶಕರು ಕತ್ತಲೆಯ ರೂಪಕದ ಮೂಲಕ ಹೇಳಲು ಪ್ರಯತ್ನಿಸಿದ್ದಾರೆ. ‘ಉರ್ವಿ’ ಕಾಣಿಸುವ ಕತ್ತಲಲೋಕ ಸಹೃದಯರನ್ನು ತಲ್ಲಣಗೊಳಿಸುವಂತಿದೆ. ನಮ್ಮನ್ನೊಳಗೊಂಡ ಸಮಾಜ ಅದೆಷ್ಟು ಅಮಾನವೀಯವಾಗಿದೆ ಅನ್ನಿಸುತ್ತದೆ. 
 
ವೇಶ್ಯಾವಾಟಿಕೆ ಸಿನಿಮಾದ ಕೇಂದ್ರಬಿಂದು. ಶೃಂಗಾರಕ್ಕೆ ಸಾಕಷ್ಟು ಅವಕಾಶವಿದ್ದರೂ ನಿರ್ದೇಶಕರು ಆ ಬಗ್ಗೆ ಗಮನಹರಿಸಿಲ್ಲ. ಶ್ರುತಿ ಹರಿಹರನ್‌ ಜೊತೆಗೆ – ಶ್ರದ್ಧಾ ಶ್ರೀನಾಥ್‌ ಹಾಗೂ ಶ್ವೇತಾ ಪಂಡಿತ್‌ ಅವರಿಂದಲೂ ನಟನೆಯ ಅನಾವರಣಕ್ಕೆ ಅವರು ಗಮನಹರಿಸಿದ್ದಾರೆ.

ಅಭಿನಯದಲ್ಲಿ ಶ್ವೇತಾ ಅಚ್ಚರಿಹುಟ್ಟಿಸುತ್ತಾರೆ. ‘ಬ್ಯೂಟಿಫುಲ್‌ ಮನಸುಗಳು’ ಚಿತ್ರದ ಮತ್ತೊಂದು ಆಯಾಮದ ಪಾತ್ರ ಶ್ರುತಿ ಹರಿಹರನ್‌ ಅವರದು. ಶ್ರದ್ಧಾ ತಮ್ಮ ಸ್ನಿಗ್ಧ ಚೆಲುವಿನಿಂದ ಗಮನಸೆಳೆಯುತ್ತಾರೆ.

ಉಳಿದಂತೆ, ಖಳ ಪಾತ್ರಗಳಲ್ಲಿ ಅಚ್ಯುತಕುಮಾರ್‌ ಹಾಗೂ ಭವಾನಿ ಪ್ರಕಾಶ್‌ ನಟನೆ ಪ್ರಖರವಾಗಿದೆ. ಸೀತಾರಾಮ್‌ ಧಾರಾವಾಹಿಗಳಲ್ಲಿನ ಖಳನಾಯಕರು ಕಥನದ ಕೊನೆಗೆ ದೀರ್ಘವಾದೊಂದು ಸ್ವಗತ ರೂಪದ ಭಾಷಣದೊಂದಿಗೆ ನೋಡುಗರ ಅನುಕಂಪ ಗಳಿಸುತ್ತಾರೆ. ಇಲ್ಲಿನ ಖಳಪಾತ್ರಗಳ ಅಂತ್ಯವೂ ಅವರ ದುಷ್ಟತನವನ್ನು ಮರೆಸುವಷ್ಟು ಪ್ರಭಾವಿಯಾಗಿದೆ. 
 
‘ಉರ್ವಿ’ ಸಿನಿಮಾ ಒಂದು ಕಥೆಯಾಗಿಯಷ್ಟೇ ಉಳಿಯದೆ, ವರ್ತಮಾನದ ವಿದ್ಯಮಾನಗಳಿಗೆ ಕನ್ನಡಿಹಿಡಿಯುವ ಪ್ರಯತ್ನ ನಡೆಸುತ್ತದೆ. ಚೊಚ್ಚಿಲ ಸಿನಿಮಾದಲ್ಲಿಯೇ ಯುವ ನಿರ್ದೇಶಕರೊಬ್ಬರು ಇಂತಹ ಮಹತ್ವಾಕಾಂಕ್ಷಿ ಪ್ರಯತ್ನದಲ್ಲಿ ತೊಡಗಿಕೊಂಡಿರುವುದು ಸ್ವಾಗತಾರ್ಹ. ಕೆಲವೊಮ್ಮೆ ಗ್ರಾಂಥಿಕವೆನ್ನಿಸಿದರೂ ಕನ್ನಡದ ಮಾತುಗಳನ್ನು ಬಳಸುವಲ್ಲಿ ನಿರ್ದೇಶಕರು ಸಾಕಷ್ಟು ಎಚ್ಚರವಹಿಸಿದ್ದಾರೆ. ಈ ಮೂಲಕ ಚಿತ್ರಕ್ಕೊಂದು ‘ಕನ್ನಡತನ’ವೂ ಒದಗಿದೆ.

ಕತ್ತಲಲ್ಲೂ ಬೆಳಕಿನ ಬಣ್ಣಗಳ ಹಿಡಿಯುವ ನಿರ್ದೇಶಕರ ಹಂಬಲಕ್ಕೆ ಆನಂದ್‌ ಸುಂದರೇಶ್ ಛಾಯಾಗ್ರಹಣ ಸಮರ್ಥವಾಗಿ ಸ್ಪಂದಿಸಿದೆ. ಸಂಕಟದ ತಾರಕಸ್ಥಾಯಿಯಲ್ಲೂ ಸಂಯಮ ಕಳೆದುಕೊಳ್ಳದ ಮನೋಜ್ ಜಾರ್ಜ್‌ ಸಂಗೀತ ಕೂಡ ಸಿನಿಮಾದ ಚೆಲುವನ್ನು ಹೆಚ್ಚಿಸಿದೆ. ಆದರೆ, ಸಂಕಲನ ಇನ್ನಷ್ಟು ನಿಷ್ಠುರವಾಗಿರಬೇಕಿತ್ತು. ಸಿನಿಮಾದ ಕೆಲವು ದೃಶ್ಯಗಳು ನೋಡುಗರ ಸಹನೆಯನ್ನು ಪರೀಕ್ಷಿಸುವಷ್ಟು ದೀರ್ಘವಾಗಿವೆ.
 
ವೇಶ್ಯಾಗೃಹದಿಂದ ಪಾರಾಗಿಬಂದ ತರುಣಿಯರು ಕಡಲಕಿನಾರೆಯಲ್ಲಿ ನಿಂತು ದಿಗಂತದಲ್ಲಿನ ಸೂರ್ಯನನ್ನು ನೋಡುವುದು ‘ಉರ್ವಿ’ಯ ಕೊನೆಯ ದೃಶ್ಯ. ಅದು ಹೊಸ ಬೆಳಕಿನ ಸಂಕೇತವೂ ಹೌದು; ಆ ಬೆಳಕು ಸಮೀಪದಲ್ಲಿಲ್ಲ ಎನ್ನುವ ಧ್ವನಿಯೂ ಹೌದು. ‘ಉರ್ವಿ’ ಕನ್ನಡ ಚಿತ್ರರಂಗದ ಹೊಸ ತಲೆಮಾರಿನ ಯುವಕರು ದೃಶ್ಯಮಾಧ್ಯಮವನ್ನು ಗಂಭೀರವಾಗಿ ಪರಿಗಣಿಸಿರುವುದಕ್ಕೆ ಗಮನಿಸಲೇಬೇಕಾದ ಒಂದು ಉದಾಹರಣೆ.
 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT