ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆಯ ನೆನಪಿನ ಹಂಗು

Last Updated 10 ಸೆಪ್ಟೆಂಬರ್ 2016, 11:47 IST
ಅಕ್ಷರ ಗಾತ್ರ

ಚಿತ್ರ: ಮುಂಗಾರು ಮಳೆ2
ನಿರ್ದೇಶಕ: ಶಶಾಂಕ್‌
ನಿರ್ಮಾಣ: ಜಿ. ಗಂಗಾಧರ್‌
ತಾರಾಗಣ: ಗಣೇಶ್‌, ನೇಹಾ ಶೆಟ್ಟಿ, ರವಿಚಂದ್ರನ್‌, ರವಿಶಂಕರ್‌, ಸಾಧು ಕೋಕಿಲಾ, ಐಂದ್ರಿತಾ ರೇ


‘ಮತ್ತೆ ಮಳೆ ಹೊಯ್ಯುತ್ತಿದೆ /ಎಲ್ಲ ನೆನಪಾಗುತಿದೆ’ ಎನ್ನುವ ಯು.ಆರ್‌. ಅನಂತಮೂರ್ತಿ ಅವರ ಕವಿತೆಯ ಸಾಲುಗಳು ಮಳೆ ಮತ್ತು ಪ್ರೀತಿಯ ಮಧುರ ನೆನಪುಗಳಲ್ಲಿ ಸಹೃದಯರನ್ನು ತೋಯಿಸುತ್ತವೆ. ಈ ಸಾಲುಗಳು ‘ಮುಂಗಾರು ಮಳೆ’ಯ ಮರು ‘ಹೊಡೆತ’ಕ್ಕೂ ಅನ್ವಯಿಸುತ್ತವೆ. ಇಲ್ಲಿ ಮತ್ತೆ ಹೊಯ್ಯುವ ಮಳೆ ದಶಕದ ಹಿಂದೆ ಸುರಿದ ‘ಮುಂಗಾರು ಮಳೆ’ಯ ಜತೆ ಅದೇ ಅಲೆದಾಟ, ಪ್ರೀತಿ, ತ್ಯಾಗ, ಹೊಯ್ದಾಟಗಳ ಹಳೆಯ ಕಥನಗಳನ್ನೂ ನೆನಪಿಸುತ್ತದೆ. ಆದರೆ ಅಷ್ಟೇ ಆಪ್ತವಾಗಿ ತೋಯಿಸಲಾರದು.

‘ಮುಂಗಾರು ಮಳೆ–2’ ಹತ್ತು ವರ್ಷಗಳ ಹಿಂದೆ ಸುರಿದ ‘ಮುಂಗಾರು ಮಳೆ’ಯಂತೆ ಕಾಡುವುದಿಲ್ಲ. ಪ್ರಸ್ತುತ  ಸನ್ನಿವೇಶಕ್ಕೆ ತಕ್ಕಂತೆ ಮೋಡ ಬಿಸಿಲಿನ ನಡುವೆ ಒಂದೆರಡು ಹನಿಗಳನ್ನಷ್ಟೇ ಉದುರಿಸುತ್ತದೆ. ಮತ್ತೊಂದು ಮಳೆಗಾಗಿ ಕಾದ ಪ್ರೇಕ್ಷಕನಿಗೆ ಸಿಗುವುದು ಅಲ್ಪತೃಪ್ತಿಯಷ್ಟೇ.

‘ಮುಂಗಾರು ಮಳೆ’ಯ ಸ್ವರೂಪ ಮತ್ತು ಅದರ ಶೈಲಿ ಎರಡನ್ನೂ ಮರೆಸುವಂತೆ ಮರಳುಗಾಡಿನಲ್ಲಿ ಸುತ್ತು ಹೊಡೆಸಿದರೂ, ಮಳೆಯ ಅಬ್ಬರ ತೋರಿಸುವ ಅನಿವಾರ್ಯತೆಯಲ್ಲಿ,  ಮಡಿಕೇರಿಯ ಮಂಜಿನೊಳಗೆ ಮತ್ತು ಜೋಗ ಜಲಪಾತದ ತುದಿಯಲ್ಲಿ ನಿಂತು ಪ್ರೀತಿಯನ್ನು ಕನವರಿಸುವ ಸುಳಿಯೊಳಗೆ ಸಿಲುಕಿರುವುದು ನಿರ್ದೇಶಕ ಶಶಾಂಕ್‌ ಅವರ ವೈಫಲ್ಯ ಎನ್ನಬಹುದು. ಮೊದಲ ಭಾಗದ ಪ್ರಭಾವ ಮತ್ತು ಅದರ ಹೋಲಿಕೆಗಳಿಂದ ತಪ್ಪಿಸಿಕೊಳ್ಳಲಾರದ ಸಂಕಟವನ್ನು ಸ್ವತಃ ನಿರ್ದೇಶಕರೇ ಸೃಷ್ಟಿಸಿಕೊಂಡಿದ್ದಾರೆ.

ಬದುಕಿನಲ್ಲಿ ‘ಎಕ್ಸೈಟ್‌ಮೆಂಟ್‌’ಗಳನ್ನು ಹುಡುಕುವ ಪ್ರೀತಂನದು ಇಲ್ಲಿ ತುಸು ಬದಲಾದ ವ್ಯಕ್ತಿತ್ವ. ಪ್ರೀತಿಸುವುದು ಮತ್ತು ಆಕೆ ‘ಬೋರ್‌’ ಎನಿಸಿದಾಗ ಸಂಬಂಧ ಮುರಿದುಕೊಳ್ಳುವುದು ಆತನಿಗೆ ಸಲೀಸು. ಆತನಂತೆಯೇ ಜೀವನದ ಸಂಭ್ರಮಗಳನ್ನು ಅನುಭವಿಸುವ ಹುಡುಕಾಟದಲ್ಲಿ ಜತೆಯಾಗುವವಳು ನಂದಿನಿ. ಹಿಂದಿಯ ‘ಯೇ ಜವಾನಿ ಹೇ ದೀವಾನಿ’ ಚಿತ್ರದ ಪಯಣದ ಕಥನವನ್ನು ಇದು ನೆನಪಿಸದೆ ಇರಲಾರದು. ನಾಯಕ  ‘ನೀನು ನನಗೆ ಬೋರ್ ಎನಿಸುತ್ತಿದ್ದೀಯಾ’ ಎಂದು ತನ್ನ ಪ್ರೇಯಸಿಯರಿಗೆ ಹೇಳುವ ಮಾತು  ಸಿನಿಮಾ ಕಥೆಯನ್ನು ಅಣಕಿಸುವಂತಿದೆ.

ಆರಂಭದಲ್ಲಿ ಖುಷಿಯ ಕ್ಷಣಗಳನ್ನಷ್ಟೇ ಬದುಕನ್ನಾಗಿಸುವ ನಿರ್ದೇಶಕರು, ಬಳಿಕ ಭಾವುಕರನ್ನಾಗಿಸುವ ಹಳೆಯ ಸೂತ್ರವನ್ನೇ ನೆಚ್ಚಿಕೊಂಡಿದ್ದಾರೆ. ‘ಕೃಷ್ಣನ್‌ ಲವ್‌ ಸ್ಟೋರಿ’ ಮತ್ತು ‘ಕೃಷ್ಣ ಲೀಲಾ’ದಂತಹ ಪ್ರೇಮಕಥೆಗಳನ್ನು ಸೊಗಸಾಗಿ ಕಟ್ಟಿಕೊಟ್ಟಿದ್ದ ಶಶಾಂಕ್‌, ಸ್ವಂತಿಕೆ ಕಳೆದುಕೊಂಡಿದ್ದಾರೆ.

‘ಪ್ರೀತಿ ಮಧುರ, ತ್ಯಾಗ ಅಮರ’ ಎಂಬ ಹಳೆಯ ಸಂದೇಶ ಇಂದಿಗೂ ಪ್ರಸ್ತುತ ಎಂಬುದನ್ನು ಪ್ರೇಕ್ಷಕರು ಮತ್ತೆ ಒಪ್ಪಿಕೊಳ್ಳಬೇಕು. ಹಾಗೆಯೇ ‘ನಿಜ ಪ್ರೀತಿ ನಿತ್ಯ ನೂತನ’ ಎಂಬ ಕೊನೆಯ ಸಾಲುಗಳನ್ನು ಒಪ್ಪಿಕೊಳ್ಳುವಷ್ಟು ಪ್ರೇಮಕಥೆ ಗಾಢ ಎನಿಸುವುದೂ ಇಲ್ಲ.

ಗಣೇಶ್‌ ತುಂಟಾಟಿಕೆ ಮತ್ತು ಭಾವುಕತೆ ಎರಡರಲ್ಲಿಯೂ ಅದೇ ಹಳೆಯ ಗುಣವಿದೆ. ಮಗನಿಗಾಗಿ ಎಲ್ಲದಕ್ಕೂ ಸಿದ್ಧನಾಗುವ ಅಪ್ಪನಾಗಿ ರವಿಚಂದ್ರನ್‌ ಇಷ್ಟವಾಗುತ್ತಾರೆ. ಮೊದಲ ಸಿನಿಮಾದಲ್ಲಿ ನೇಹಾ ಶೆಟ್ಟಿ ಅಭಿನಯವೂ ಗಮನಾರ್ಹ. ಅರ್ಜುನ್‌ ಜನ್ಯ ಸಂಗೀತದ ಮಾಧುರ್ಯ ಮಳೆಯಷ್ಟೇ ಚೆಂದ. ಜೋಗದ ಗುಂಡಿಯನ್ನು ಮತ್ತೆ ಅಷ್ಟೇ ಸುಂದರವಾಗಿ  ತೋರಿಸಿರುವ ಛಾಯಾಗ್ರಾಹಕ ಕೃಷ್ಣ ಅವರ ಶ್ರಮ ಗಮನ ಸೆಳೆಯುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT