ಹಿತಾ ನಾಯಕ್ ಮುಡಿಗೆ ಮಿಸ್‌ ಟೀನ್‌ ಇಂಡಿಯಾ ಕಿರೀಟ

7

ಹಿತಾ ನಾಯಕ್ ಮುಡಿಗೆ ಮಿಸ್‌ ಟೀನ್‌ ಇಂಡಿಯಾ ಕಿರೀಟ

Published:
Updated:
Deccan Herald

ಗಮಗಿಸುವ ವಿದ್ಯುತ್ ದೀಪಗಳ ಕಾಂತಿ, ನಯನ ಮನೋಹರಗೊಳಿಸುವ ಬೆಳಕಿನ ಸಂಯೋಜನೆ, ಹುಚ್ಚೆದ್ದು ಕುಣಿಯುವಂತೆ ಪ್ರೇರೇಪಿಸುವಂತಹ ಸಂಗೀತ ಆರ್ಭಟಿಸುತ್ತಿದ್ದಾಗ, ಇದ್ದಕ್ಕಿದ್ದಂತೆಯೇ ಕತ್ತಲೆ ಆವರಿಸಿತು, ಸ್ತಬ್ಧವಾಯಿತು.

ಏನು ನಡೆಯುತ್ತಿದೆ ಎಂದು ಊಹಿಸಿಕೊಳ್ಳುವಷ್ಟರಲ್ಲಿ, ಕಿನ್ನರಿಯರ ಲೋಕವೇ ಧರೆಗಿಳಿದು ಬಂದಂತೆ,  ರ‍್ಯಾಂಪ್‌ ಮೇಲೆ 22 ಚೆಲುವೆಯರು ಒಮ್ಮೆಗೇ ಪ್ರತ್ಯಕ್ಷವಾಗಿ ಹುಬ್ಬೇರುವಂತೆ ಮಾಡಿದರು.

ಭಾನುವಾರ ಸಂಜೆ ನಗರದಲ್ಲಿ ನಡೆದ ‘ಮಿಸ್‌ ಟೀನ್‌ ಇಂಡಿಯಾ’ ಸ್ಪರ್ಧೆಯಲ್ಲಿ ತಮ್ಮ ಅದೃಷ್ಟ ಪರೀಕ್ಷಿಸಿಕೊಳ್ಳಲು, ಬಣ್ಣ ಬಣ್ಣದ ಉಡುಗೆಗಳನ್ನು ತೊಟ್ಟು ಹೆಜ್ಜೆ ಹಾಕಿದ,  ಹದಿಹರೆಯದ ಚೆಲುವೆಯರನ್ನು ಸೆರೆಹಿಡಿಯಲು ಕ್ಯಾಮೆರಾಗಳ ಜತೆ ಪ್ರೇಕ್ಷಕರ ಕಣ್ಣುಗಳೂ ಪೈಪೋಟಿ ನೀಡುವಂತೆ ಅರಳಿದ್ದವು.

ಸ್ಪರ್ಧಿಗಳಲ್ಲಿ ಒಬ್ಬರಾದ 19ರ ಪ್ರಾಯದ ಹರಿಣಿ, ಮೊಗ್ಗು ಹೂವಾಗಿ ಅರಳುವಂತೆ ಕೈಗಳಲ್ಲೇ ಭಾವ ಪ್ರಕಟಿಸುತ್ತಾ ಡಿ.ಜೆ ನುಡಿಸಿದ ಸಂಗೀತಕ್ಕೆ ತಕ್ಕಂತೆ ಕುಣಿಯಲು ಆರಂಭಿಸಿದರು. ಅವರನ್ನೇ ಅನುಸರಿಸಿದ ಉಳಿದ ಚೆಲುವೆಯರು ಕೈಗಳನ್ನು ಹೂವಿನ ದಳಗಳಂತೆ ಅರಳಿಸುತ್ತಾ ಪ್ರೇಕ್ಷಕರಿಗೆ ಹಾಗೂ ತೀರ್ಪುಗಾರರಿಗೆ ನೃತ್ಯದೌತಣವನ್ನು ಬಡಿಸಿದರು. ಹಾಡು ನಿಲ್ಲುತ್ತಿದ್ದಂತೆಯೇ, ವೇದಿಕೆಯ ಹಿಂಬದಿಯೆಡೆಗೆ ನಡೆಯುತ್ತಿದ್ದ ಚೆಲುವೆಯರ ಸೌಂದರ್ಯದ ಗುಣಗಾನ ಮಾಡುತ್ತಾ, ನಿರೂಪಕರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಕಾರ್ಯಕ್ರಮ ಆರಂಭವಾಗುತ್ತಿದ್ದಂತೆ, ಕ್ರಮ ಸಂಖ್ಯೆ ಪ್ರಕಾರ, ಒಬ್ಬರ ನಂತರ ಒಬ್ಬರು ಆತ್ಮವಿಶ್ವಾಸದೊಂದಿಗೆ ಹೆಜ್ಜೆ ಹಾಕಿದರು. ಕಣ್ಣು ಅರಳಿಸುತ್ತಾ, ವೈಯ್ಯಾರ ತುಳುಕಿಸುತ್ತಾ ತೀರ್ಪುಗಾರರ ಮನ ಗೆಲ್ಲಲು ವಿವಿಧ ಭಂಗಿಗಳಲ್ಲಿ ನಿಂತು ತಮ್ಮ ಸೌಂದರ್ಯ ಸಿರಿಯನ್ನು ಪ್ರದರ್ಶಿಸಿದರು. ಹೆಜ್ಜೆ ಹಾಕಿದ್ದು ಮುಗಿಯುತ್ತಿದ್ದಂತೆಯೇ, ನಿರೂಪಕರು ಮೈಕ್ ನೀಡಿ ಪರಿಚಯಿಸಿಕೊಳ್ಳುವಂತೆ ಸೂಚಿಸಿದಾಗ, ಕೆಲವರು ಕವನಗಳನ್ನು ವಾಚಿಸಿ ಗಮನ ಸೆಳೆದರು. ಇನ್ನು ಕೆಲವರು ತಮ್ಮ ಪ್ರತಿಭೆಗಳ ಬಗ್ಗೆ ಮಾಹಿತಿ ನೀಡಿದರು. ಕೆಲವರಂತೂ, ಬೆನ್ನು ತಟ್ಟಿ ಪ್ರೋತ್ಸಾಹ ನೀಡುತ್ತಿರುವ ತಮ್ಮ ಪೋಷಕರನ್ನು ಸ್ಮರಿಸಿ ಖುಷಿ ಹಂಚಿಕೊಂಡರು. 

ದೆಹಲಿ, ಪುಣೆ, ಕೋಲ್ಕತ್ತ, ಚೆನ್ನೈ ಬೆಂಗಳೂರು ಸೇರಿದಂತೆ ದೇಶದ ವಿವಿಧ ನಗರಗಳ ಹದಿಹರೆಯದ ಚೆಲುವೆಯರು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

ಒಟ್ಟು ಐದು ವಿಭಾಗಗಳಲ್ಲಿ ಪ್ರಶಸ್ತಿ ನೀಡಲಾಯಿತು. ಬೆಂಗಳೂರಿನ 19 ವರ್ಷದ ಹಿತಾ ನಾಯಕ್ ‘ಮಿಸ್ ಟೀನ್‌ ಇಂಡಿಯಾ’ ಕಿರೀಟ ಮುಡಿಗೇರಿಸಿಕೊಂಡರು. ಮಿಸ್‌ ಟೀನ್ ಇಂಡಿಯಾ ಫ್ಯೂಚರಿಸ್ಟ್ ಕಿರೀಟ ಸೃಷ್ಟಿ ಸಮಂತ್ ಅವರಿಗೆ ಲಭಿಸಿತು. ಮಿಸ್‌ ಟೀನ್ ರೆಬೆಲ್ ಪ್ರಶಸ್ತಿ ಸೃಷ್ಟಿ ಸುರೇನ್ ಅವರ ಪಾಲಾಯಿತು. ಮಿಸ್ ಟೀನ್ ಇಂಡಿಯಾ ಕಿರೀಟ ಹರಿಣಿ ಮೋಹನ್ ನಾಯರ್ ಅವರಿಗೆ ಲಭಿಸಿತು. ಮಿಸ್ ಟೀನ್ ಗ್ರೀನ್ ಕಿರೀಟವನ್ನು ನೇಹಾ ದೀಕ್ಷಿತ್ ಮುಡಿಗೇರಿಸಿಕೊಂಡರು.

ಸ್ಪರ್ಧೆಯಲ್ಲಿ ಗೆದ್ದವರಿಗೆ ಕ್ಯಾಲೆಂಡರ್, ಮ್ಯಾಗಜಿನ್ ಶೂಟ್‌ಗಳಲ್ಲಿ ಭಾಗವಹಿಸುವ ಅವಕಾಶ ದೊರೆಯಿತು. ಒಂದು ವರ್ಷದವರೆಗೆ ವಿವಿಧ ಕಂಪನಿಗಳ ರಾಯಭಾರಿಗಳಾಗಿ ಒಪ್ಪಂದ ಮಾಡಿಕೊಂಡರು.

***
ಈ ವೇದಿಕೆಯು ಸಾಧಿಸುವ ಛಲವುಳ್ಳ ಹಲವರಿಗೆ ಅವಕಾಶ ಕಲ್ಪಿಸಿಕೊಡುತ್ತದೆ. ಫ್ಯಾಷನ್ ಲೋಕದಲ್ಲಿ ಮಹತ್ತರ ಸಾಧನೆ ಮಾಡಲು ನೆರವಾಗುತ್ತದೆ. ಸ್ಪರ್ಧೆಯಲ್ಲಿ ಭಾಗವಹಿಸಿದ ತರುಣಿಯರ ಭವಿಷ್ಯ ಉಜ್ವಲವಾಗಿರಲಿ.
ಅಮರ್ ಲಾಲ್ ಜಿ. ನಿಚಾನಿ, ಮಿಸ್‌ ಟೀನ್ ಇಂಡಿಯಾ ಸಂಸ್ಥಾಪಕ

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !