ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಗಸಜ್ಜಿಕೆ ಮೇಲೆ ಬೆಳೆ‌ದ ಪ್ರತಿಭೆ...

Last Updated 8 ನವೆಂಬರ್ 2018, 20:00 IST
ಅಕ್ಷರ ಗಾತ್ರ

ಸ‌ಣ್ಣ ವಯಸ್ಸಿನಲ್ಲಿ ಮಕ್ಕಳು ಜೂಟಾಟ, ಕಣ್ಣಾಮುಚ್ಚಾಲೆ ಆಡುತ್ತಿದ್ದರೆ,ರಾಜೇಶ್ ರಂಗ ಸಜ್ಜಿಕೆಯ ಮೇಲೆ ತನಗೇ ಅರಿವಿಲ್ಲದಂತೆ ಅಲ್ಲಿನ ಪ್ರಕಾರಗಳನ್ನು ಕಲಿಯುತ್ತ ಬಂದವರು. ಹಲವು ಹಿರಿಯರ ಗರಡಿಯಲ್ಲಿ ಪಳಗಿದ ಪ್ರತಿಫಲ ಈಗ ತಮ್ಮ ಚೊಚ್ಚಲ ನಾಟಕ ‘ಬಾದರಾಯಣ’ ನಿರ್ದೇಶಿಸುತ್ತಿದ್ದಾರೆ.

ಬೆಂಗಳೂರಿನ ಚಾಮರಾಜಪೇಟೆಯ ರಾಜೇಶ್‌, ಥಿಯೇಟರ್ ಕಾರ್ಯಾಗಾರ, ತಾಂತ್ರಿಕ ಕೆಲಸ, ರಂಗವಿನ್ಯಾಸ, ಮತ್ತು ಬೆಳಕಿನ ವಿನ್ಯಾಸ, ಭರತನಾಟ್ಯ, ನೃತ್ಯಪಟುಗಳ ರಂಗಪ್ರವೇಶ,ವಸ್ತ್ರವಿನ್ಯಾಸ, ಪ್ರಸಾದನ, ನೃತ್ಯ ಸಂಯೋಜನೆ, ನೃತ್ಯಾಂಕುರ ಪ್ರದರ್ಶನಗಳಿಗೆ ರಂಗವಿನ್ಯಾಸಕರಾಗಿದ್ದಾರೆ.

ನೀನಾಸಂನಲ್ಲಿ ರಂಗ ಶಿಕ್ಷಣ ಕೇಂದ್ರ ಪದವಿ ಪಡೆದು, ನೀನಾಸಂ ತಿರುಗಾಟ ‘ರೆಪೆರ್ಟರಿ’ಯಲ್ಲಿ ನಟನೆಯಲ್ಲಿ ಸೈ ಎನಿಸಿಕೊಂಡಿದ್ದಾರೆ. ಬೆಂಗಳೂರಿನ ರಂಗಶಂಕರದವರ ‘ಡೈರೆಕ್ಟರ್ ಪ್ರೊಗ್ರಾಮ್’ನಲ್ಲಿ ಭಾಗವಹಿಸಿರುವ ಅನುಭವವೂ ಅವರಿಗಿದೆ.

ಹೆಸರಾಂತ ರಂಗ ತಂಡಗಳಾದ ರಂಗಮಂಟಪ, ಮನೋರಂಗ, ಪ್ರಸಂಗ, ಸಿ.ಎಫ್.ಡಿ, ಮುಂಬೈ ಕರ್ನಾಟಕ ಸಂಘ, ನವೋದಯ ತಂಡಗಳ ಜೊತೆ ಸ್ಥಳೀಯ ಹಾಗೂ ಹೊರ ಊರುಗಳಲ್ಲಿನ ನಾಟಕೋತ್ಸವಗಳಲ್ಲಿಯೂ ಭಾಗವಹಿಸಿದ್ದಾರೆ.

ರಂಗಭೂಮಿಯನ್ನೇ ಪಾರ್ಟ್‌ ಟೈಂ ಉದ್ಯೋಗ ಮಾಡಿಕೊಂಡು ಬೆಳೆದಿರುವ ಅವರು ಸಿವಿಲ್ ಎಂಜಿನಿಯರಿಂಗ್ ಡಿಪ್ಲೊಮಾ ಪೂರ್ಣಗೊಳಿಸಿದ್ದಾರೆ. 2018ನೇ ಸಾಲಿನಲ್ಲಿ ನಡೆದ ಸಿಜಿಕೆ ರಾಷ್ಟ್ರೀಯ ರಂಗೋತ್ಸವದಲ್ಲಿ ಯುವ ರಂಗಕರ್ಮಿ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

‘ಚಿಕ್ಕವಯಸ್ಸಿನಿಂದಲೂ ಡಾನ್ಸ್ ಹಾಗೂ ಕ್ರಾಫ್ಟ್ (ವಿನ್ಯಾಸ) ಎಂದರೆ ಎಲ್ಲಿಲ್ಲದ ಹುಚ್ಚು. ಹೀಗೆ ಮುಂದುವರೆದು ಡಿಸೈನಿಂಗ್ ಕೆಲಸ ರಂಗಭೂಮಿಯನ್ನು ಪರಿಚಯಿಸಿತು’ ಎಂದು ನಡೆದು ಬಂದ ದಾರಿಯನ್ನು ನೆನಪಿಸಿಕೊಳ್ಳುತ್ತಾರೆ ರಾಜೇಶ್‌. ‘ಕೊರಿಯೋಗ್ರಾಫರ್ ಆಗಬೇಕಾದರೆ ನೃತ್ಯ ಮಾತ್ರವಲ್ಲದೆ ರಂಗಭೂಮಿಯ ಎಲ್ಲ ವಿಷಯ ಕಲಿಯಬೇಕು ಎಂಬ ಪ್ರಜ್ಞೆ ಶಾಲೆ ಮುಗಿದ ನಂತರ ಪಾರ್ಟ್ ಟೈಮ್ ಜಾಬ್ ನಂತೆ ರಂಗಭೂಮಿಯಲ್ಲಿ ಸೆಟ್, ಲೈಟ್, ನಟನೆ ಎಲ್ಲಾ ವಿಭಾಗದಲ್ಲಿ ತೊಡಗಿಸಿಕೊಳ್ಳುವಂತೆ ಮಾಡಿತು. ಇಂದು ಸಂಭಾವನೆ ಪಡೆಯುವ ರಂಗಕರ್ಮಿಯ ಹಂತಕ್ಕೆ’ ತಂದಿದೆ ಎನ್ನುತ್ತಾರೆ.

ಕನ್ನಡ ರಂಗಭೂಮಿ ಮಾತ್ರವಲ್ಲದೆ ಬೇರೆ ಭಾಷೆಯ ರಂಗಭೂಮಿಯಲ್ಲಿಯೂ ತಂತ್ರಜ್ಞನಾಗಿ, ನಟನಾಗಿ ಕೆಲಸ ಮಾಡಿದ ಅನುಭವವು ಇವರಿಗಿದೆ. ತರಬೇತಿ ಪಡೆದ ನೃತ್ಯ ಪಟುವಾಗಿರುವ ರಾಜೇಶ್‌ ಚೆನ್ನೈ ಕಲಾಕ್ಷೇತ್ರ ಶೈಲಿಯ ಭರತನಾಟ್ಯವನ್ನು ವಿದುಷಿ ದೀಪಾ ಭಟ್ ಅವರ ಮಾರ್ಗದರ್ಶನದಲ್ಲಿ ಅಭ್ಯಾಸ ಮಾಡಿದ್ದು, ಅವರ ನೃತ್ಯ ಶಾಲೆಯ ತಂಡದಲ್ಲಿ ನೃತ್ಯ ಪ್ರದರ್ಶನಗಳನ್ನೂ ನೀಡಿದ್ದಾರೆ.

ಪಾಶ್ಚಾತ್ಯ, ಫ್ರಿ ಸ್ಟೈಲ್, ಫೋಕ್ ಶೈಲಿ ನೃತ್ಯದಲ್ಲಿ ದಕ್ಷಿಣ ಭಾರತದಲ್ಲಿ ಸುಮಾರು 500ಕ್ಕೂ ಹೆಚ್ಚು ಪ್ರದರ್ಶನಗಳನ್ನು ನೀಡಿದ ಹೆಗ್ಗಳಿಕೆ ಇವರದು. ಇದಲ್ಲದೆ ಭರತನಾಟ್ಯ, ಸಮಕಾಲೀನ ನೃತ್ಯ ಸೇರಿದಂತೆ ಅನೇಕ ನೃತ್ಯಪಟುಗಳ ಹಾಗೂ ನೃತ್ಯ ಶಾಲೆಗಳ ವಿದ್ಯಾರ್ಥಿಗಳಿಗೆ ಅರಂಗೇಟ್ರಂ, ನೃತ್ಯಾ೦ಕುರ, ನೃತ್ಯ ಕೈಂಕರ್ಯ, ನೃತ್ಯ ನಾಟಕಗಳಿಗೆ ಬೆಳಕಿನ ವಿನ್ಯಾಸ ಹಾಗೂ ಸ್ಟೇಜ್ ಡಿಸೈನ್ ಮಾಡಿದ್ದು, ಪ್ರಸ್ತುತ ಅಟ್ಟಕ್ಕಳರಿ ಸೆಂಟರ್ ಫಾರ್ ಮೂವ್‌ಮೆಂಟ್ ಆರ್ಟ್ಸ್ ನೃತ್ಯ ಶಾಲೆಯಲ್ಲಿ ಸಮಕಾಲೀನ ನೃತ್ಯ ಡಿಪ್ಲೊಮಾ ಮಾಡುತ್ತಿದ್ದಾರೆ.

ಬಾದರಾಯಣ
ಮೂಲ ನಾಟಕ: ಬಗಲಾ ಚರಿತ್ ಮಾನಸ್
ನಾಟಕಕಾರ : ಬಾದಲ್ ಸರ್ಕಾರ್
ಅನುವಾದ ಸಹಾಯ : ಎಂ.ಸಿ. ಆನಂದ್

ಬಾಲ್ಯದಲ್ಲೇ ಪೋಷಕರನ್ನು ಕಳೆದುಕೊಂಡಿರುವ ಬಾದರಾಯಣ ಸುತ್ತಲೇ ನಾಟಕ ಸುತ್ತುತ್ತದೆ. ತನ್ನ ಸೋದರ ಮಾವನ ಮನೆಯಲ್ಲಿ ಬೆಳೆದು ಅವರ ಸಹಾಯದಿಂದ ವಿದ್ಯಾವಂತನಾಗುತ್ತಾನೆ. ಕೆಲಸ ಸಿಗದೆ ಅಲ್ಲಿ ಅವನು ಸೋದರಮಾವ ಹಾಗೂ ಸೋದರತ್ತೆಯಿಂದ ನಿರಂತರವಾಗಿ ಅವಮಾನವನ್ನು, ಕಷ್ಟವನ್ನು ಅನುಭವಿಸುತ್ತಾನೆ.

ಆತ್ಮಹತ್ಯೆ ಮಾಡಿಕೊಳ್ಳಬೇಕೆಂದು ಹೊರಟ ಬಾದರಾಯಣನಿಗೆ ಒಬ್ಬ ವೃದ್ಧ ಹಾಗೂ ಅವನ ಹತ್ತಿರವಿರುವ ಮಾಯಾ ಹೆಣ್ಣಿನ ಪರಿಚಯವಾಗಿ ಅವರ ಸಹಾಯದಿಂದ ಅವನು ತನ್ನನ್ನು ಹೇಗೆ ಕಂಡುಕೊಳ್ಳುತ್ತಾನೆ. ಅಂತಿಮವಾಗಿ ಅನ್ಯಾಯದ ವಿರುದ್ಧ ಸಮಸ್ಯೆಗಳ ವಿರುದ್ಧ ತಿರುಗಿ ನಿಲ್ಲುತ್ತಾನೆ. ಎಂಬುದರ ಬಗ್ಗೆ ಈ ನಾಟಕ ಇದೆ. ಒಮ್ಮೆ ಅವನು ಧೈರ್ಯ ಪಡೆ‌ದು, ಮಾಯಾ ಹೆಣ್ಣಿನ ಸಹಾಯವಿಲ್ಲದೆ ಸ್ವತಃ ತಾನೇ ಕಾರ್ಯನಿರ್ವಹಿಸಲು ನಿರ್ಧರಿಸುತ್ತಾನೆ. ಆತ್ಮವಿಶ್ವಾಸದ ಮೂಲಕ ಯಾವುದನ್ನಾದರೂ ಸಾಧಿಸಬಹುದು ಎಂಬುದು ಈ ನಾಟಕದ ಮೂಲ ಆಶಯ.

ಬಂಗಾಳಿ ನಾಟಕಕಾರ ಬಾದಲ್ ಸರ್ಕಾರ್ ಅವರ 'ಬಗಲಾ ಚರಿತ್ ಮಾನಸ್' ನಾಟಕ ಇದಾಗಿದ್ದು, ‘ಬಾದರಾಯಣ’ ಎಂದಾಗಿದೆ. ಪ್ರದರ್ಶನ ಇದೇ 17 ರಂದು ಸಂಜೆ 7 ಗಂಟೆಗೆ ಎನ್‌ಎಸ್‌ಡಿ ಸ್ಟುಡಿಯೊ ಥಿಯೇಟರ್, ಕಲಾಗ್ರಾಮ, ಮಲ್ಲತ್ತಳ್ಳಿಯಲ್ಲಿ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT