ಹಾಸ್ಯ ನಾಟಕಗಳ ಸರಣಿ ನೆಲಮಂಗಲದಲ್ಲಿ

7

ಹಾಸ್ಯ ನಾಟಕಗಳ ಸರಣಿ ನೆಲಮಂಗಲದಲ್ಲಿ

Published:
Updated:

ಸಾಲದ ಶೂಲದಲ್ಲಿ ಸಿಕ್ಕಿಕೊಂಡ ಕುಟುಂಬ, ಸಾಲ ತೀರಿಸಲು ಸಾಧ್ಯವಾಗದಿದ್ದರೆ ನಿನ್ನ ಮಗಳನ್ನೆ ಕೊಟ್ಟು ಮದುವೆ ಮಾಡು ಎಂದು ದುಂಬಾಲು ಬೀಳುವ ಶ್ರೀಮಂತ ಮುದುಕ(ಸಾಲ ಕೊಟ್ಟವ), ಮುದುಕನಿಗೆ ತಿಳಿಯದಂತೆ ತನ್ನ ಮನೆಯ ಕೆಲಸದಾಕೆಯನ್ನು ಮುಸುಕು ಹಾಕಿ ಮದುವೆ ಮಾಡಿಸಿ, ಸೋದರಳಿಯನ ನೆರವಿನಿಂದ ಸಾಲ ತೀರಿಸಿ ಮಗಳ ಮದುವೆ ಮಾಡುತ್ತಾರೆ.

ಪಟ್ಟಣದ ಜಂಜಾಟದಿಂದ ಬೇಸರಗೊಂಡ ಯುವಕ ತನ್ನ ಜಮೀನನ್ನು ಬಿಡಿಸಿಕೊಂಡು ವ್ಯವಸಾಯ ಮಾಡಲು ಹಳ್ಳಿಗೆ ಬಂದರೆ ಒತ್ತೆಇಟ್ಟಿದ್ದ ಜಮೀನನ್ನು ಕೊಡಲು ಸಾಧ್ಯವಿಲ್ಲ ಎನ್ನುವ ಜಮೀನ್ದಾರ. ಜಮೀನ್ದಾರನ ಮಗಳೊಂದಿಗೆ ಪ್ರೇಮಾಂಕುರವಾಗಿ, ಅವರ ಮನೆಯಲ್ಲಿದ್ದ ಕಿವುಡನ ಸಹಕಾರದಿಂದ ಜಮೀನು ಮತ್ತು ಮಗಳು ಇಬ್ಬರನ್ನೂ ಪಡೆಯುವ ಯುವಕ.

ಗೊಂದಲಕ್ಕೊಳಗಾಗಬೇಡಿ ಮೇಲಿನ ಎರಡೂ ದೃಶ್ಯಗಳಿರುವುದು ‘ಮುದುಕನ ಮದುವೆ’ ಮತ್ತು ‘ಕಿವುಡನ ಕಿತಾಪತಿ’ ಹಾಸ್ಯ ನಾಟಕಗಳಲ್ಲಿ. ಇದೇನಿದು ಗಂಭೀರವಾದ ದೃಶ್ಯಗಳನ್ನು ಹಾಸ್ಯ ಎನ್ನುತ್ತಿದ್ದಾರೆ ಎಂದುಕೊಳ್ಳಬೇಡಿ, ಈ ಗಂಭೀರ ವಿಷಯಗಳನ್ನು ಸಾಮಾಜಿಕ ಪ್ರಜ್ಞೆ ಮತ್ತು ಸಂದೇಶ ನೀಡುವ ಸದುದ್ದೇಶದಿಂದ ಹಾಸ್ಯದ ತಿರುಳಿನಲ್ಲಿ ವಿವರಿಸಿ, ಹೊಟ್ಟೆ ಹುಣ್ಣಾಗುವಷ್ಟು ನಗಿಸಿ ಕೊನೆಗೆ ಚಿಂತನೆಗೆ ದೂಡುವುದಾಗಿದೆ.

47 ವರ್ಷಗಳಿಂದ ರಾಜ್ಯಾದ್ಯಂತ ಸಂಚರಿಸಿ ಕ್ಯಾಂಪ್ ಹಾಕಿಕೊಂಡು ನಾಟಕಗಳನ್ನು ಪ್ರದರ್ಶನ ಮಾಡುತ್ತ ಬಂದಿರುವ ಚಿತ್ರದುರ್ಗದ ಕುಮಾರೇಶ್ವರ ನಾಟಕ ಸಂಘ ನೆಲಮಂಗಲ ಪಟ್ಟಣದ ಚಿಕ್ಕೆಲ್ಲಯ್ಯ ಸಮುದಾಯ ಭವನದ ಎದುರು ಕ್ಯಾಂಪ್ ಹೂಡಿದೆ. ಪ್ರಸ್ತುತ ಮುದುಕನ ಮದುವೆ, ಕಿವುಡನ ಕಿತಾಪತಿ, ಬಸ್‌ ಕಂಡಕ್ಟರ್‌, ಅಡುಗೆ ಭಟ್ಟ, ಅಗ್ರಿಮೆಂಟ್‌ ಅಳಿಯ, ಓಟು ಕೊಟ್ಟ ಏಟು, ನನ್ನ ಗಂಡ ಬಲು ಬಂಡ ನಾಟಕಗಳನ್ನು ಪ್ರದರ್ಶಿಸಲಾಗುತ್ತಿದೆ ಎಂದು ರಾಜ್ಯ ಪ್ರಶಸ್ತಿ ಪುರಸ್ಕೃತ ಕಂಪನಿ ಮಾಲಿಕ ಬಿ.ಕುಮಾರಸ್ವಾಮಿ ತಿಳಿಸಿದರು.

‘ಈ ಹಿಂದೆ ನಮ್ಮ ಕಂಪನಿ ವತಿಯಿಂದ ಮೂರು ನಾಲ್ಕು ತಂಡ ರಾಜ್ಯದ ವಿವಿಧೆಡೆ ಪ್ರದರ್ಶನ ನೀಡುತ್ತಿತ್ತು, ಪ್ರಸ್ತುತ ಜನರಲ್ಲಿ ಆಸಕ್ತಿ ಕಡಿಮೆ ಆಗಿರುವುದರಿಂದ 20 ಕಲಾವಿದರ ಒಂದೇ ತಂಡ ಕಾರ್ಯನಿರ್ವಹಿಸುತ್ತಿದೆ. ತಂಡದ ಸದಸ್ಯರಿಗೆ ಸಂಬಳ ನೀಡುವುದಕ್ಕೂ ಕಷ್ಟವಾಗಿದೆ ಎಂದು ಅಳಲು ತೋಡಿಕೊಂಡ ಅವರು ಪೌರಾಣಿಕ ನಾಟಕ ‘ದೇವಿ ಮಹಾತ್ಮೆ’ ಪ್ರದರ್ಶನವನ್ನೂ ನೀಡುತ್ತಿದ್ದು 30 ಕಲಾವಿದರ ಅಗತ್ಯವಿದೆ, 15, 20 ಪ್ರೇಕ್ಷಕರಿಗೂ ಪ್ರದರ್ಶನ ನೀಡುತ್ತಿದ್ದೇವೆ’ ಎಂದರು.

ಬಿ.ಕುಮಾರಸ್ವಾಮಿ ಅವರು ನಾಟಕ ಅಕಾಡೆಮಿ, ರಾಜ್ಯೋತ್ಸವ, ಸುಬ್ಬಯ್ಯ ನಾಯ್ಡು ಹಾಗು ಇನ್ನಿತರೆ ಪ್ರತಿಷ್ಠಿತ ಪ್ರಶಸ್ತಿಗಳೊಂದಿಗೆ ಪುರಸ್ಕೃತರಾಗಿದ್ದಾರೆ. ಮೈಸೂರಿನಲ್ಲಿ ಅಭಿಮಾನಿಗಳು ಸುತ್ತೂರು ಶ್ರೀಗಳು, ಆಸ್ಥಾನ ವಿದ್ವಾನ್‌ ದೇವೇಂದ್ರಪ್ಪ, ತರಾಸು ಅವರ ಸಮಕ್ಷಮದಲ್ಲಿ ಆನೆಯ ಮೇಲೆ ಮೆರವಣಿಗೆ ಮಾಡಿ ಪುರಸ್ಕರಿಸಿದ್ದು ಇವರ ಹೆಮ್ಮೆಯಾಗಿದೆ. ಹಾಸ್ಯ ನಟರಾದ ನರಸಿಂಹರಾಜು, ದಿನೇಶ್‌, ಸುಧೀರ್‌, ಉಮಾಶ್ರೀ ಮುಂತಾದವರು ಇವರ ಕಂಪನಿಯ ನಾಟಕಗಳಲ್ಲಿ ಪ್ರದರ್ಶನ ನೀಡಿದ್ದಾರೆ. 
 – ಮಹಾಂತೇಶ್‌ ನೆಗಳೂರ

ಹಾಸ್ಯ ನಾಟಕಗಳ ಸರಣಿ ಕಾರ್ಯಕ್ರಮ
ಸ್ಥಳ:  ಚಿಕ್ಕಲ್ಲಯ್ಯ ಸಮುದಾಯ ಭವನ, ನೆಲಮಂಗಲ
ಸಮಯ: 3.30ಕ್ಕೆ ಮತ್ತು ಸಂಜೆ 6.30

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !