ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಣಮಟ್ಟವೇ ನಾಟಕದ ಯಶಸ್ಸಿನ ಒಳಗುಟ್ಟು: ನಾಟಕಕಾರ ಜೇವರ್ಗಿ ರಾಜಣ್ಣ ಮಾತು

Last Updated 26 ಫೆಬ್ರುವರಿ 2022, 19:30 IST
ಅಕ್ಷರ ಗಾತ್ರ

ಟೈಲರಿಂಗ್ ಮಾಡುತ್ತಿದ್ದ ಜೇವರ್ಗಿ ರಾಜಣ್ಣ ಅವರು ನಾಟಕದ ಮೇಲಿನ ಆಸಕ್ತಿಯಿಂದ ವೃತ್ತಿರಂಗಭೂಮಿಗೆ ಬಂದವರು. ವಿಶ್ವಜ್ಯೋತಿ ಶ್ರೀ ಪಂಚಾಕ್ಷರ ನಾಟ್ಯ ಸಂಘದ ಮೂಲಕ ಕನ್ನಡ ವೃತ್ತಿ ರಂಗಭೂಮಿಯಲ್ಲಿ ಪಾರಮ್ಯ ಮೆರೆದಿರುವ ಅವರ ಕಾಯಕಕ್ಕೀಗ ಮೂರು ದಶಕಗಳ ಸಂಭ್ರಮ.

ನಟ, ನಾಟಕಕಾರ, ಕಂಪನಿ ಮಾಲೀಕ ಹೀಗೆ ಹಲವು ಪಾತ್ರಗಳನ್ನು ಸಮರ್ಥವಾಗಿ ನಿರ್ವಹಿಸುತ್ತಿರುವ ರಾಜಣ್ಣ ಅವರು ಕೊರೊನಾ ಕಾಲದಲ್ಲೂ ತಮ್ಮ ರಂಗನಂಟನ್ನು ಬಿಟ್ಟುಕೊಟ್ಟವರಲ್ಲ. ಸಾಂಕ್ರಾಮಿಕ ರೋಗದ ಹೊಡೆತಕ್ಕೆ ರಂಗಭೂಮಿಯೂ ಹೊರತಾಗಲಿಲ್ಲ. ಅದರ ನಡುವೆಯೇ ಈಚೆಗಷ್ಟೇ ಬಾಗಲಕೋಟೆ ಜಿಲ್ಲೆಯ ಬಾದಾಮಿಯ ಬನಶಂಕರಿ ಜಾತ್ರೆಯಲ್ಲಿ ಜೇವರ್ಗಿ ರಾಜಣ್ಣ ಅವರ ರಚನೆಯ ‘ಕುಡುಕ ಮಲ್ಯಾ ಸಿಡುಕ ಮಲ್ಲಿ’ ನೂರಕ್ಕೂ ಹೆಚ್ಚು ಪ್ರಯೋಗಗಳನ್ನು ಕಂಡು ಪ್ರೇಕ್ಷಕರ ಮನಗೆದ್ದಿದೆ. ಅಂತೆಯೇ ರಾಜಣ್ಣ ಅವರ ರಚನೆಯ ‘ಕುಂಟ ಕೋಣ ಮೂಕ ಜಾಣ’ ನಾಟಕ 16 ಸಾವಿರ ಪ್ರಯೋಗ ಮತ್ತು ‘ಶೆರೆ ಅಂಗಡಿ ಸಂಗವ್ವ’ ನಾಟಕ ಸಾವಿರಕ್ಕೂ ಅಧಿಕ ಪ್ರಯೋಗಗಳನ್ನು ಪ್ರದರ್ಶಿಸಿ ದಾಖಲೆ ಬರೆದಿವೆ. ವೃತ್ತಿರಂಗದ ಮೂರು ದಶಕಗಳ ನೋವು–ನಲಿವನ್ನು ಆಸ್ವಾದಿಸುತ್ತಲೇ ಬೆಳೆದ ಅವರ ಮನದಲ್ಲಿ ವೃತ್ತಿರಂಗಕ್ಕೆ ಕಾಯಕಲ್ಪ ಕಲ್ಪಿಸುವ ಅದಮ್ಯ ಉತ್ಸಾಹವಿದೆ.

80ರ ದಶಕಗಳ ದಿನಗಳನ್ನು ಮೆಲುಕು ಹಾಕುತ್ತಲೇ ವೃತ್ತಿರಂಗದ ವರ್ತಮಾನದ ಸವಾಲುಗಳನ್ನು ಎದುರಿಸುತ್ತಿರುವ ಅವರು ಹೊಸ ನಾಟಕಗಳನ್ನು ಪ್ರದರ್ಶಿಸುವಲ್ಲಿ ಹಿಂದೆ ಬಿದ್ದವರಲ್ಲ. ಇತ್ತೀಚೆಗಷ್ಟೇ ಅವರು ರಚಿಸಿದ ‘ಮಾತಾಡಿದ ಮೂಕ ದನ’ ನಾಟಕ ಪ್ರೇಕ್ಷಕರ ಮನಸೂರೆಗೊಳ್ಳುವಲ್ಲಿ ಯಶಸ್ಸು ಕಂಡಿದೆ. ‘ಕುಟುಂಬದ ಸದಸ್ಯರೇ ನಮ್ಮ ಕಂಪನಿಯಲ್ಲಿರುವ ಕಾರಣ ನನಗೆ ಹೊಸ ನಾಟಕ ಕೂಡಿಸುವಲ್ಲಿ ಅಷ್ಟಾಗಿ ತೊಂದರೆ ಕಾಣಿಸಲಿಲ್ಲ’ ಎನ್ನುವ ಅವರು ವೃತ್ತಿರಂಗದಲ್ಲಿ ದಿನೇದಿನೇ ಕಲಾವಿದರ ಕೊರತೆ ಆಗುತ್ತಿರುವ ಬಗ್ಗೆ ಬೇಸರ ವ್ಯಕ್ತಪಡಿಸುತ್ತಾರೆ. ‘ಕಲಾವಿದರ ತೀವ್ರ ಕೊರತೆಯಿಂದಾಗಿ ಹೊಸ ನಾಟಕಗಳ ಪ್ರದರ್ಶನ ಸಾಧ್ಯವಾಗುತ್ತಿಲ್ಲ. ಒಂದು ಕಾಲದಲ್ಲಿ ನಾನೇ ಬರೆದ ನಾಟಕಗಳಿಗೆ ಹಾಡುಗಳನ್ನೂ ಬರೆದೂ, ಸಂಗೀತ ನಿರ್ದೇಶಕರಿಂದ ರಾಗಸಂಯೋಜಿಸುತ್ತಿದ್ದೆವು. ಆದರೆ, ಆರ್ಥಿಕ ದುಃಸ್ಥಿತಿ, ಬದಲಾದ ಕಾಲಮಾನದಲ್ಲಿ ಕೆಲವು ನಾಟಕ ಕಂಪನಿಗಳು ಸಿನಿಮಾ ಹಾಡನ್ನು ಬಳಸಿಕೊಳ್ಳುತ್ತಿವೆ. ಕಲಾವಿದರ ಕೊರತೆಯೇ ಇದಕ್ಕೆ ಮುಖ್ಯ ಕಾರಣ’ ಎಂಬ ವಿಶ್ಲೇಷಣೆ ರಾಜಣ್ಣ ಅವರದ್ದು.

‘ಕಲಾವಿದರ ಕೊರತೆ ಇದ್ದಾಗ ಇರುವವರಿಂದಲೇ ನಾವು ಗುಣಮಟ್ಟದ ಅಭಿನಯವನ್ನು ನಿರೀಕ್ಷಿಸಲಾಗದು. ಎಷ್ಟೋ ಬಾರಿ ಹೊಸ ನಾಟಕ ಮಾಡ್ತೀವಿ, ರಿಹರ್ಸಲ್‌ಗೆ ಬನ್ನಿ ಅಂತ ಒತ್ತಾಯವನ್ನೂ ಮಾಡಲಾಗದು. ಹೊಸಬರಲ್ಲಿ ಬಹುತೇಕರು ಹಾಡು ಕಲಿಯಲು ಹಿಂಜರಿಯುತ್ತಾರೆ. ಅವರು ಸಿನಿಮಾ ಹಾಡುಗಳಿಗೆ ಹೆಜ್ಜೆ ಹಾಕಲು ಇಷ್ಟಪಡುತ್ತಾರೆ. ಇಂಥ ಸವಾಲುಗಳನ್ನು ಮೀರಿ ಹೊಸ ನಾಟಕ ಕೊಟ್ಟರೂ ಅದು ಗುಣಮಟ್ಟ ಇರದಿದ್ದರೆ ಪ್ರೇಕ್ಷಕ ತಿರಸ್ಕರಿಸುವುದು ಖಚಿತ. ಆತ ಕೊಟ್ಟ ಹಣಕ್ಕೆ ಮೋಸವಾಗದಂತೆ ಗುಣಮಟ್ಟದ ನಾಟಕ ಕೊಡುವುದು ಅಗತ್ಯ’ ಎನ್ನುವ ಪ್ರತಿಪಾದನೆ ಅವರದ್ದು.

ವಿಜ್ಞಾನ– ತಂತ್ರಜ್ಞಾನ ಮುಂಚೂಣಿಯಲ್ಲಿರುವ ಈ ದಿನಗಳಲ್ಲಿ ಟಿ.ವಿ, ಮೊಬೈಲ್ ಸಿನಿಮಾದಿಂದಾಗಿ ರಂಗಪ್ರಿಯರ ಸಂಖ್ಯೆ ಕಮ್ಮಿಯಾಗಿದೆಯೇ ಎನ್ನುವ ಪ್ರಶ್ನೆಗೆ, ರಾಜಣ್ಣ ಅವರು ನ್ಯೂಯಾರ್ಕ್ ರಂಗಮಂದಿರ ಮಾದರಿಯ ಉತ್ತರ ಮುಂದಿಡುತ್ತಾರೆ. ‘ನ್ಯೂಯಾರ್ಕ್‌ನ ರಂಗಮಂದಿರಗಳಲ್ಲಿ ಈಗಲೂ ಜನ ನಾಟಕ ನೋಡಲು ತಿಂಗಳುಗಟ್ಟಲೇ ಮುಂಚಿತವಾಗಿ ಟಿಕೆಟ್ ಕಾಯ್ದಿರಿಸುತ್ತಾರೆ. ಅಂದರೆ ಅಲ್ಲಿ ಗುಣಮಟ್ಟದ ನಾಟಕ ಇದೆ ಅಂತ ಅರ್ಥವಲ್ಲವೇ? ಟಿ.ವಿ, ಮೊಬೈಲ್, ಸಿನಿಮಾ ಕುರಿತ ಇರುವ ದೂರಿನಲ್ಲಿ ಶೇ 10ರಷ್ಟು ಹುರುಳಿರಬಹುದು. ಆದರೆ, ಸತ್ವಯುತವಾದ ನಾಟಕ ಕೊಟ್ಟರೆ ಪ್ರೇಕ್ಷಕರು ನೋಡುತ್ತಾರೆ ಎಂಬ ನಂಬಿಕೆ ನನ್ನದು. ಅದುವೇ ನಾಟಕವೊಂದರ ಯಶಸ್ಸಿನ ಗುಟ್ಟು’ ಎಂದು ದೃಢವಾಗಿ ನುಡಿಯತ್ತಾರೆ.

‘ವೃತ್ತಿರಂಗಭೂಮಿಯಲ್ಲಿ ಜನರು ಹಾಸ್ಯವನ್ನು ನಿರೀಕ್ಷಿಸುತ್ತಾರೆ. ಅದರಲ್ಲೂ ಹೊಲಸು ಪದ, ಡಬ್ಬಲ್ ಮೀನಿಂಗ್ ಕೊಟ್ಟರೆ ಜನ ನಾಟಕ ನೋಡುವುದಿಲ್ಲ. ರಾಜಹಾಸ್ಯದ ಜೊತೆಗೆ ಸಂದೇಶವೂ ಇರಬೇಕು. ರಾಜಹಾಸ್ಯ ಕೊಟ್ಟಲ್ಲಿ ಜನರ ಮನಸು ಗಲಿಬಿಲಿಯಾಗದು. ಅದು ಮಾನಸಿಕ ಆರೋಗ್ಯಕ್ಕೂ ಉತ್ತಮ. ಜನರಿಗೆ ನಾವೇನು ಕೊಡುತ್ತೇವೆ ಅನ್ನುವ ಬಗ್ಗೆ ಚಿಂತನೆ ಅಗತ್ಯ. ಪ್ರಚಲಿತ ವಿಷಯ, ಸಮಸ್ಯೆ ಆರಿಸಿಕೊಂಡರೆ ಜನರನ್ನು ಮುಟ್ಟಲು ಸಾಧ್ಯ. ಈಚೆಗಷ್ಟೇ ನಾನು ‘ಮಾತಾಡಿದ ಮೂಕ ದನ’ ಎನ್ನುವ ನಾಟಕ ಬರೆದೆ. ದುಶ್ಚಟಗಳ ದಾಸನಾದ ಗಂಡನಿದ್ದರೂ ಸ್ವಾವಲಂಬಿಯಾಗಿ ಬದುಕು ಕಟ್ಟಿಕೊಳ್ಳುವ ಹೆಂಡತಿಯ ಕಥೆ ಈ ನಾಟಕದ್ದು. ಅಂತೆಯೇ ಮತ್ತೊಂದು ನಾಟಕದಲ್ಲಿ ಪರಿಸರದ ಮಹತ್ವವನ್ನು ಹಾಸ್ಯದ ಮೂಲಕ ಜನರಿಗೆ ಮನವರಿಕೆ ಮಾಡಲು ಯತ್ನಿಸಿರುವೆ’ ಎಂದು ವರ್ತಮಾನಕ್ಕೆ ವೃತ್ತಿನಾಟಕವೊಂದು ಸ್ಪಂದಿಸುವ ಗುಣವನ್ನು ಬಿಚ್ಚಿಡುತ್ತಾರೆ ಅವರು.

‘ಸರ್ಕಾರದ ಲೆಕ್ಕದಲ್ಲಿ ಸುಮಾರು 25 ವೃತ್ತಿನಾಟಕ ಕಂಪನಿಗಳಿರಬಹುದು. ಅದರಲ್ಲಿ ಪೂರ್ಣಕಾಲಿಕವಾಗಿರುವ ಕಂಪನಿಗಳು ಅರ್ಧದಷ್ಟಿವೆ. ಉಳಿದವು ಅರೆಕಾಲಿಕ. ಈ ಕಂಪನಿಗಳಿಗೆ ಸರ್ಕಾರ ನೀಡುವ ಅನುದಾನವು ‘ರಾವಣನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ’ಯಂತಾಗಿದೆ. ಪೂರ್ಣಕಾಲಿಕ ನಾಟಕ ಕಂಪನಿಯೊಂದು ಸುಸಜ್ಜಿತವಾಗಿ ಒಂದು ಕ್ಯಾಂಪ್ ಮಾಡಬೇಕೆಂದರೆ ಕನಿಷ್ಠ ₹ 4 ಲಕ್ಷ ಬೇಕು. ದಿನವೊಂದಕ್ಕೆ ಕನಿಷ್ಠ ₹ 20 ಸಾವಿರ ಖರ್ಚಿರುತ್ತದೆ. ನಾಟಕ ಕಲೆಕ್ಷನ್ ಆಗಲಿ, ಬಿಡಲಿ, ಕಂಪನಿಯ ಕಲಾವಿದರಿಗೆ ತಿಂಗಳಿಗೆ ಇಷ್ಟು ಅಂತ ಸಂಬಳ ಕೊಡಲೇಬೇಕು. ಸರ್ಕಾರ ನೀಡುವ ಅನುದಾನವು ಕಂಪನಿಗಳಿಗೆ ಲಾಭ ತರುವಂತಿದ್ದರೆ ಇಷ್ಟೊತ್ತಿಗೆ ಹತ್ತಾರು ಪೂರ್ಣ ಕಂಪನಿಗಳು ಹುಟ್ಟಿಕೊಳ್ಳಬೇಕಿತ್ತು’ ಎಂಬ ಅರ್ಥವಿಶ್ಲೇಷಣೆ ಅವರದ್ದು.

ಅಗ್ನಿಶಾಮಕ ಇಲಾಖೆಯವರು ಯಕ್ಷಗಾನ ಪ್ರದರ್ಶನಕ್ಕೆ ನಿರಾಕ್ಷೇಪಣಾ ಪತ್ರ ನೀಡಲು ವಿಧಿಸುವ ಕಮ್ಮಿ ಮೊತ್ತ, ಕಂಪನಿ ನಾಟಕಗಳಿಗೇಕಿಲ್ಲ ಎಂದು ಪ್ರಶ್ನಿಸುವ ರಾಜಣ್ಣ, ಇಂಥ ತಾರತಮ್ಯಗಳು ನೀಗಬೇಕೆನ್ನುತ್ತಾರೆ. ಆಧುನಿಕತೆ ಒಡ್ಡುತ್ತಿರುವ ಸವಾಲು, ಕಲಾವಿದರ ಕೊರತೆಯಂಥ ಜಡ್ಡುಜಾಪತ್ರಿಯಿಂದ ವೃತ್ತಿರಂಗಭೂಮಿ ಚೇತರಿಸಿಕೊಳ್ಳಬೇಕಿದೆ ಎನ್ನುವ ಆಶಯ ಅವರದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT